ಶುಕ್ರವಾರ, ಜೂಲೈ 3, 2020
29 °C

ನೇತ್ರಾವತಿ ನಮ್ಮಹಕ್ಕು-ತಿರುವು ಸಲ್ಲದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನೇತ್ರಾವತಿ ನಮ್ಮಹಕ್ಕು-ತಿರುವು ಸಲ್ಲದು

ಮಂಗಳೂರು: ‘ಕರಾವಳಿಯ ಜೀವನಾಡಿ ನೇತ್ರಾವತಿ ನದಿ ನಮ್ಮ ಹಕ್ಕು. ಯಾವುದೇ ನದಿ ಆ ಜಲಾನಯನದ ಪ್ರದೇಶದ ಜನರ ಹಕ್ಕು. ಅದನ್ನು ತಿರುವಿಗೆ ಅವಕಾಶ ನೀಡುವುದಿಲ್ಲ’ ಎಂಬ ಅಭಿಪ್ರಾಯ ಮಂಗಳೂರಿನಲ್ಲಿ ಭಾನುವಾರ ನಡೆದ ಸಮಾಲೋ ಚನಾ ಸಭೆಯಲ್ಲಿ ವ್ಯಕ್ತವಾಯಿತು.ನೇತ್ರಾವತಿ ನದಿ ತಿರುವು ಯೋಜನೆ ವಿರೋಧಿಸಿ ನಗರದ ಹೋಟೆಲ್ ಸಭಾಂಗ ಣದಲ್ಲಿ ನಡೆದ ಸಮಾನಾಸಕ್ತರ ಸಮಾ ಲೋಚನಾ ಸಭೆಯಲ್ಲಿ ಒಕ್ಕೊರಲಿನಿಂದ ಯೋಜನೆಯನ್ನು ವಿರೋಧಿಸಿದರು.ಪರಿಸರವಾದಿ ಬಿ.ಸಿ.ರೋಡ್ ಸುಂದರ ರಾವ್ ಮಾತನಾಡಿ, ನೇತ್ರಾವತಿ ನದಿ ತಿರುವಿನ ಪರಮಶಿವಯ್ಯ ವರದಿ ನೆನೆಗುದಿಗೆ ಬಿದ್ದಿದೆ ಎಂದು ಹೇಳುವ ಹಾಗಿಲ್ಲ. ನೇತ್ರಾವತಿಯ ಪ್ರಮುಖ ಉಪನದಿ ಎತ್ತಿನಹೊಳೆ ನದಿಗೆ ತಿರುವಿಗೆ ರಾಜ್ಯ ಸರ್ಕಾರ 200 ಕೋಟಿ ರೂಪಾಯಿ ಮೀಸಲಿರಿಸಿದೆ. ಈ ಯೋಜನೆಯ ಸಾಧ್ಯತಾ ವರದಿ ತಯಾರಾಗಿದೆ. ಸದ್ದಿಲ್ಲದೆ ಯೋಜನೆಯ ಕಾರ್ಯ ನಡೆಯುತ್ತಿದೆ. ಈ ಹಂತದಲ್ಲೇ ಉಗ್ರ ಹೋರಾಟ ನಡೆಸಬೇಕಾಗಿದೆ ಎಂದು ಅವರು ಪ್ರತಿಪಾದಿಸಿದರು.ರಾಜಕಾರಣಿಗಳು ಎದುರಿನಲ್ಲಿ ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಾರೆ. ಸರ್ಕಾರದ ಹಂತದಲ್ಲಿ ಯೋಜನೆ ಅನುಷ್ಠಾನ ಆಗುತ್ತದೆ. ಅವರ ಪರೋಕ್ಷ ಬೆಂಬಲ ಇರುತ್ತದೆ ಎಂದು ಅವರು ಟೀಕಿಸಿದರು.ನೇತ್ರಾವತಿ ತಿರುವಿನಿಂದ ಪಶ್ಚಿಮ ಘಟ್ಟಕ್ಕೆ ಕುತ್ತು ಬರಲಿದೆ. ಒಂದು ಬಾರಿ ಹಾನಿಯಾದರೆ ಮತ್ತೆ ಹಿಂದಿನ ಸ್ಥಿತಿಗೆ ತರಲು ಸಾಧ್ಯವಾಗುವುದಿಲ್ಲ. ಎತ್ತಿನಹೊಳೆ ಯೋಜನೆ ಎಂದು ಜನರ ದಿಕ್ಕು ತಪ್ಪಿಸಲಾಗುತ್ತಿದೆ ಎಂದು ಅವರು ಆರೋಪಿಸಿದರು.ಸುರತ್ಕಲ್ ಎನ್‌ಐಟಿಕೆ ಪ್ರಾಧ್ಯಾಪಕ ಎಸ್.ಜಿ.ಮಯ್ಯ ಮಾತನಾಡಿ, ಜಾಗತಿಕ ತಾಪಮಾನ ಏರಿಕೆ ಪರಿಣಾಮ ಕರಾವಳಿಯಲ್ಲೂ ಸಾಕಷ್ಟು ತೊಂದರೆಗಳು ಉಂಟಾಗಿವೆ. ಕಾಲಕಾಲಕ್ಕೆ ಮಳೆ ಬರುವುದಿಲ್ಲ. ಒಂದು ವರ್ಷ ಮೇ 25ಕ್ಕೆ ಮುಂಗಾರು ಆರಂಭಗೊಂಡರೆ, ಮತ್ತೊಂದು ವರ್ಷ ಜೂನ್ 10ರ ವೇಳೆಗೆ ಮುಂಗಾರು ಶುರುವಾಗುತ್ತದೆ. ರೈತರು ನೀರಿನ ಕೊರತೆಯಿಂದ ಕೃಷಿ ಚಟುವಟಿಕೆ ಕಡಿಮೆ ಮಾಡಿದ್ದಾರೆ ಎಂದರು.ಪರಮಶಿವಯ್ಯ ಅವರಿಗೆ ಯೋಜನೆಯ ಬಗ್ಗೆ ಸ್ಪಷ್ಟತೆ ಇಲ್ಲ. ಒಂದು ಬಾರಿ ಕಾಲುವೆ ಮೂಲಕ, ಮತ್ತೊಮ್ಮೆ ಪಂಪ್ ಮೂಲಕ ನೀರು ಕೊಂಡು ಹೋಗುತ್ತೇವೆ ಎನ್ನುತ್ತಾರೆ. ಕುಡಿಯುವ ನೀರಿಗೆ, ನೀರಾವರಿಗೆ ಎಂಬ ಹೇಳಿಕೆ ನೀಡುತ್ತಾರೆ. ಕಾಲುವೆ ಮೂಲಕ ಕೋಲಾರದ ವರೆಗೆ ಕುಡಿಯುವ ನೀರು ಕೊಂಡು ಹೋಗಲು ಆಗುತ್ತದಾ ಎಂದು ಅವರು ಪ್ರಶ್ನಿಸಿದರು.ಮಾರ್ಚ್- ಏಪ್ರಿಲ್ ವೇಳೆಗೆ ಕರಾವಳಿಯಲ್ಲೇ ಕುಡಿಯುವ ನೀರಿನ ಸಮಸ್ಯೆ ಬಿಗಡಾಯಿಸುತ್ತದೆ. ನಾವೇ ಇಲ್ಲಿ ಸಾಕಷ್ಟು ಸಮಸ್ಯೆ ಎದುರಿಸುತ್ತಿರುವಾಗ ಬೇರೆ ಕಡೆಗೆ ನೀರು ಕೊಡುವುದು ಹೇಗೆ. ನಮ್ಮ ಸಮಸ್ಯೆ ಮೊದಲು ಬಗೆಹರಿಸಿ. ಒಂದು ಬಾರಿ ನದಿ ತಿರುವಿಗೆ ಅವಕಾಶ ಮಾಡಿಕೊಟ್ಟರೆ ಮತ್ತೆ ನಾವು ಮಾತನಾಡುವ ಹಕ್ಕು ಕಳೆದುಕೊಂಡು ಬಿಡುತ್ತೇವೆ ಎಂದು ಅವರು ಎಚ್ಚರಿಸಿದರು.ಸಾಮಾಜಿಕ ಕಾರ್ಯಕರ್ತೆ ರೀಟಾ ನೊರೊನ್ಹಾ ಮಾತನಾಡಿ, ಪಶ್ಚಿಮ ಘಟ್ಟದ ರಕ್ಷಣೆ ಸಮರ್ಪಕವಾಗಿ ಆಗದಿದ್ದರೆ ಪರಿಸರದ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತದೆ. ಇಲ್ಲಿಯ ಧಾರಣಾ ಶಕ್ತಿ ಅಧ್ಯಯನ ಮಾಡದೆ ಯಾವುದೇ ಬೃಹತ್ ಯೋಜನೆ, ನದಿ ತಿರುವು ಯೋಜನೆ ಜಾರಿಗೆ ತರಬಾರದು ಎಂದು ಒತ್ತಾಯಿಸಿದರು.ಮೀನುಗಾರರ ಮುಖಂಡ ವಾಸುದೇವ ಬೋಳೂರು ಮಾತನಾಡಿ, ನೇತ್ರಾವತಿ ನದಿ ತಿರುವಿನಿಂದ ಮೀನುಗಾರಿಕೆಗೆ ದೊಡ್ಡ ಹೊಡೆತ ಬೀಳಲಿದೆ. ಘಟ್ಟದಿಂದ ಇಳಿದು ಬರುವ ನೀರು ಬೆಚ್ಚಗೆ ಇರುತ್ತದೆ. ಮಳೆಗಾಲದಲ್ಲಿ ಮೀನುಗಳು ಸಂತತಿ ಹೆಚ್ಚಿಸಲು ಕರಾವಳಿಗೆ ಬರುತ್ತವೆ. ಜತೆಗೆ ಪಶ್ಚಿಮ ಘಟ್ಟದ ನೀರು ಮೀನುಗಳಿಗೆ ಆಹಾರ ಹೊತ್ತುಕೊಂಡು ಬರುತ್ತದೆ. ನದಿ ತಿರುವು ಮಾಡಿದರೆ ಮೀನು ಸಂತತಿ ವೃದ್ಧಿಯಾಗುವುದಿಲ್ಲ ಹಾಗೂ ಅವುಗಳಿಗೆ ಆಹಾರ ಇಲ್ಲದಂತೆ ಆಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.ಜೆಡಿಎಸ್ ಮುಖಂಡ ಎಂ.ಜಿ.ಹೆಗಡೆ ಮಾತನಾಡಿ, ಇದೊಂದು ಅತೀ ಬುದ್ಧಿವಂತರು ಹಾಗೂ ನಿರುದ್ಯೋಗಿಗಳು ತಮಗಾಗಿ ಸೃಷ್ಟಿ ಮಾಡಿಕೊಂಡಿರುವ ಯೋಜನೆ. ಸರ್ಕಾರದ ಖಜಾನೆ ಖಾಲಿ ಮಾಡುವ ಯೋಜನೆ. ಮಾಹಿತಿ ಹಕ್ಕು ಕಾಯ್ದೆಯಡಿ ಈ ಯೋಜನೆಗೆ ಎಷ್ಟು ಖರ್ಚು ಆಗಿದೆ, ಯೋಜನೆಯ ಈಗಿನ ಸ್ಥಿತಿಯ ಬಗ್ಗೆ ಮಾಹಿತಿ ಪಡೆಯಬೇಕು. ಬಳಿಕ ಹೋರಾಟದ ರೂಪರೇಷೆ ತಯಾರಿಸಬೇಕು ಎಂದು ಗಮನ ಸೆಳೆದರು.ಮಾಜಿ ಶಾಸಕ ವಿಜಯ ಕುಮಾರ ಶೆಟ್ಟಿ, ಮೀನುಗಾರರ ಮುಖಂಡ ಶರತ್ ಗುಡ್ಡೆಕೊಪ್ಲ, ರೈತ ಸಂಘದ ಜಿಲ್ಲಾ ಘಟಕ ಅಧ್ಯಕ್ಷ ರೋಹಿತಾಕ್ಷ ರೈ, ಸಾಮಾಜಿಕ ಕಾರ್ಯಕರ್ತ ಲೋಲಾಕ್ಷ, ರಕ್ಷಣಾ ವೇದಿಕೆಯ ಅಣ್ಣಯ್ಯ ಕುಲಾಲ್, ವರ್ತಕರ ಸಂಘದ ಅಲಿ ಹಸನ್, ರಶೀದ್ ಬೋಳಾರ್, ವಿ.ಜಿ.ಪಾಲ್, ಪಿ.ವಿ. ಮೋಹನ್ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.