ಸೋಮವಾರ, ಮೇ 25, 2020
27 °C

ನೇಪಾಳ: ಪ್ರಜಾಸತ್ತಾತ್ಮಕ ಸರ್ಕಾರ ರಚನೆಗೆ ಭಾರತ ಬದ್ಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಠ್ಮಂಡು (ಪಿಟಿಐ): ನೇಪಾಳದಲ್ಲಿ ಶಾಶ್ವತ ಸರ್ಕಾರ ರಚನೆ ಬಿಕ್ಕಟ್ಟು ಮುಂದುವರೆದಿರುವಂತೆಯೇ ಅಲ್ಲಿ ಶಾಶ್ವತ ಸರ್ಕಾರ ರಚನೆಗೆ ಉಸ್ತುವಾರಿ ಸರ್ಕಾರದ ನಾಯಕರು ಹಾಗೂ ವಿವಿಧ ರಾಜಕೀಯ ಪಕ್ಷಗಳ ಜತೆ ಪ್ರಜಾಸತ್ತಾತ್ಮಕ, ಸ್ಥಿರ ಮತ್ತು ಶಾಂತಿಯುತ ಸರ್ಕಾರ ಸ್ಥಾಪನೆ ಕುರಿತು ಮಾತುಕತೆಗೆ ಭಾರತ ಬದ್ಧವಾಗಿದೆ ಎಂದು ವಿದೇಶಾಂಗ ಕಾರ್ಯದರ್ಶಿ ನಿರುಪಮ ರಾವ್ ತಿಳಿಸಿದ್ದಾರೆ.ಮೂರು ದಿನಗಳ ಭೇಟಿಗಾಗಿ ನೇಪಾಳಕ್ಕೆ ಆಗಮಿಸಿರುವ ನಿರುಪಮಾ ರಾವ್ ಅವರು ನೇಪಾಳ ಅಧ್ಯಕ್ಷ ರಾಮಭರಣ್ ಯಾದವ್ ಮತ್ತು ಪ್ರಧಾನಿ ಮಾಧವ ಕುಮಾರ್ ನೇಪಾಳ್ ಅವರೊಂದಿಗೆ ಮಾತುಕತೆ ನಡೆಸಿದರು.ಮಾವೊವಾದಿ ಪಕ್ಷದ ಮುಖ್ಯಸ್ಥ ಪ್ರಚಂಡ ಸೇರಿದಂತೆ ಪ್ರಮುಖ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಬುಧವಾರ ಅವರು ಮಾತುಕತೆ ನಡೆಸಲಿದ್ದಾರೆ. ಇದಲ್ಲದೆ ಗುರುವಾರ ಉಪ ಪ್ರಧಾನಿ ಮತ್ತು ವಿದೇಶಾಂಗ ಸಚಿವೆ ಸುಜಾತ ಕೊಯಿರಾಲ ಅವರೊಂದಿಗೂ ಚರ್ಚೆ ನಡೆಸುವರು.ಮಾತುಕತೆ ಸಂದರ್ಭದಲ್ಲಿ ನಿರುಪಮಾ ರಾವ್ ಅವರು, ಪೂರ್ಣ ದ್ವಿಪಕ್ಷೀಯ ಸಂಬಂಧ ಮತ್ತು ಪರಸ್ಪರ ಹಿತಾಸಕ್ತಿಯನ್ನು ವೃದ್ಧಿಸುವ ಕ್ರಮಗಳ ಬಗ್ಗೆಯೂ ಪ್ರಸ್ತಾಪ ಮಾಡುವುದಾಗಿ ಇಲ್ಲಿಗೆ ಬಂದಿಳಿಯುತ್ತಿದ್ದಂತೆಯೇ ತಿಳಿಸಿದರು.ಜನವರಿ 21ರ ಒಳಗೆ ದೇಶದಲ್ಲಿ ರಾಷ್ಟ್ರೀಯ ಸರ್ಕಾರವೊಂದನ್ನು ರಚಿಸಲು ಸರ್ವಸಮ್ಮತವಾಗಿ ನಿರ್ಣಯ ಕೈಗೊಳ್ಳುವಂತೆ ರಾಜಕೀಯ ಪಕ್ಷಗಳ ಮುಖಂಡರನ್ನು ಅಧ್ಯಕ್ಷ ಯಾದವ್ ಅವರು ಕೋರಿರುವ ಬೆನ್ನಲ್ಲೇ ರಾವ್ ಅವರು ನೇಪಾಳಕ್ಕೆ ಭೇಟಿ ನೀಡಿರುವುದು ಮಹತ್ವ ಪಡೆದುಕೊಂಡಿದೆ.ಅಲ್ಲದೇ ಜನವರಿ 15ರ ಮಧ್ಯರಾತ್ರಿಯಿಂದಲೇ ವಿಶ್ವಸಂಸ್ಥೆ ನಿಯೋಗ ನೇಪಾಳದಿಂದ ನಿರ್ಗಮಿಸುವುದಾಗಿ ಹೇಳಿರುವ ತಕ್ಷಣ ನಿರುಪಮಾ ಅವರು ಭೇಟಿ ನೀಡಿರುವುದು ವಿಶೇಷವಾಗಿದೆ.ರಾವ್ ಅವರು ವಿದೇಶಾಂಗ ಇಲಾಖೆ ಜಂಟಿ ಕಾರ್ಯದರ್ಶಿ ಸತೀಶ್ ಮೇಹ್ತಾ ಅವರೊಂದಿಗೆ ಬಂದಿಳಿದ ತಕ್ಷಣ, ನೇಪಾಳ ಸರ್ಕಾರದ ವಿದೇಶಾಂಗ ಇಲಾಖೆ ಕಾರ್ಯದರ್ಶಿ ಮದನ್ ಕುಮಾರ್ ಭಟ್ಟಾರೈ ಅವರೊಂದಿಗೆ ಮಧ್ಯಾಹ್ನ ಮಾತುಕತೆ ನಡೆಸಿದರು.‘ನೇಪಾಳದ ಆಂತರಿಕ ವಿಚಾರ ಕುರಿತು ಪ್ರತಿಕ್ರಿಯೆ ನೀಡಲು ಬಂದಿಲ್ಲ’ ಎಂದು ಹೇಳಿದ ರಾವ್, ‘ನೇಪಾಳದ ಒಳಿತಿಗಾಗಿ ಭಾರತ ತನ್ನ ಕೈಲಾದ ಸಹಾಯ ನೀಡಲು ಸಿದ್ಧವಿದೆ’ ಎಂದರು.2009ರಲ್ಲಿ ಅಧಿಕಾರ ವಹಿಸಿಕೊಂಡ ನಂತರ ಮೂರನೇ ಬಾರಿಗೆ ನೇಪಾಳಕ್ಕೆ ಭೇಟಿ ನೀಡುತ್ತಿರುವ ರಾವ್, ಪ್ರಧಾನ ಮಂತ್ರಿ ಮತ್ತು ವಿದೇಶಾಂಗ ಸಚಿವರ ಶುಭಕಾಮನೆಗಳನ್ನು ನೇಪಾಳದ ಮುಖಂಡರಿಗೆ ತಿಳಿಸುವುದಾಗಿ ಹೇಳಿದರು. ಜತೆಗೆ ನೇಪಾಳದೊಂದಿಗೆ ಉನ್ನತ ಮಟ್ಟದಲ್ಲಿ ಸಂಬಂಧ ಹೊಂದಲು ಭಾರತ ಉತ್ಸುಕವಾಗಿದೆ ಎಂದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.