ಶನಿವಾರ, ಮೇ 8, 2021
27 °C

ನೈಜ ಸೌಂದರ್ಯ ಕಳೆದುಕೊಳ್ಳುತ್ತಿರುವ ಬೆಂಗಳೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಬೆಂಗಳೂರಿಗೆ 1970ರಲ್ಲಿ ಮೊದಲ ಬಾರಿಗೆ ಭೇಟಿ ನೀಡಿದಾಗ ಇಲ್ಲಿನ ಹಸಿರು ಕಂಡು ಅಪಾರ ಸಂತಸ ಉಂಟಾಗಿತ್ತು. ಆಗ ನಗರ ಸುಂದರವಾಗಿತ್ತು. ಶಾಂತಿ, ನೆಮ್ಮದಿಯಿಂದ ಕೂಡಿದ ನಗರ ಆಗಿತ್ತು. ಎರಡು ವರ್ಷಗಳ ಹಿಂದೆ ಭೇಟಿ ನೀಡಿದಾಗ ವೇದನೆಯಾಗಿತ್ತು. ಇಲ್ಲಿನ ಹಸಿರು ಮಾಯವಾಗಿತ್ತು. ನಗರದ ನೈಜ ಸೌಂದರ್ಯ ಮರೆಯಾಗಿತ್ತು~ ಎಂದು ಪ್ರಸಿದ್ಧ ವಾಸ್ತುಶಿಲ್ಪಿ ಪ್ರೊ. ಬಾಲಕೃಷ್ಣ ವಿ. ದೋಶಿ ಬೇಸರ ವ್ಯಕ್ತಪಡಿಸಿದರು.ನಗರದ ಆರ್‌ವಿ ವಾಸ್ತುಶಿಲ್ಪ ಕಾಲೇಜು, ಆಧುನಿಕ ಕಲೆಗಳ ರಾಷ್ಟ್ರೀಯ ಸಂಗ್ರಹಾಲಯ ಹಾಗೂ ನಗರ ವಿನ್ಯಾಸದ ಐಯುಡಿಐ ಶಿಕ್ಷಣ ಸಂಸ್ಥೆಯ ಆಶ್ರಯದಲ್ಲಿ ಇಲ್ಲಿನ ಆಧುನಿಕ ಕಲೆಗಳ ರಾಷ್ಟ್ರೀಯ ಸಂಗ್ರಹಾಲಯದಲ್ಲಿ ಶನಿವಾರ ನಡೆದ `ಪಾಥ್ಸ್ ಅನ್‌ಚಾರ್ಟೆಡ್~ ಆತ್ಮಚರಿತ್ರೆ ಬಿಡುಗಡೆ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.`ಮಹಾತ್ಮ ಗಾಂಧೀಜಿ ಅವರು ಗ್ರಾಮ ಸ್ವರಾಜ್ಯ ಹಾಗೂ ಸ್ವಾವಲಂಬನೆಯನ್ನು ಪ್ರತಿಪಾದಿಸಿದ್ದರು. ಆದರೆ ಈಗ ಆಗುತ್ತಿರುವುದೇ ಬೇರೆ. ನಗರವನ್ನು ನೈಜವಾಗಿ ಬೆಳೆಯಲು ಬಿಡುತ್ತಿಲ್ಲ. ಈಗಲೂ ತಡವಾಗಿಲ್ಲ. ಅವಲಂಬನೆ ಪ್ರವೃತ್ತಿ ಜಾಸ್ತಿ ಆಗಿದೆ. ಕೇಂದ್ರೀಕೃತ ವ್ಯವಸ್ಥೆಯಿಂದ ವಿಕೇಂದ್ರೀಕೃತ ವ್ಯವಸ್ಥೆ ಕಡೆಗೆ ಸಾಗಬೇಕಿದೆ~ ಎಂದು ಅವರು ಅಭಿಪ್ರಾಯಪಟ್ಟರು.`ಜೀವನ ಪಯಣದಲ್ಲಿ ನಮಗೆ ಗೊತ್ತಿಲ್ಲದ ವಿಷಯ ನವ ವಿಚಾರಗಳ ಶೋಧಕ್ಕೆ ಕಾರಣವಾಗುತ್ತದೆ. ಶೋಧ ಬದುಕಿನ ಭಾಗವಾಗಬೇಕು. ಪರಂಪರೆಯತ್ತ ಗಮನ ಹರಿಸಿ ಮುಂದುವರಿಯಬೇಕು. ಜೀವನದ ಅನುಭವಗಳನ್ನು ಆತ್ಮಚರಿತ್ರೆಯಲ್ಲಿ ಅಕ್ಷರರೂಪಕ್ಕೆ ಇಳಿಸಲಾಗಿದೆ~ ಎಂದು ಅವರು ಬಹಿರಂಗಪಡಿಸಿದರು.ಹಿರಿಯ ನಟಿ ಅರುಂಧತಿ ನಾಗ್ ಮಾತನಾಡಿ, `ನಗರದಲ್ಲಿ ಬೃಹತ್ ಕಟ್ಟಡಗಳ ನಿರ್ಮಾಣಕ್ಕೆ ದೊಡ್ಡ ಮೊತ್ತದ ಹೂಡಿಕೆ ಮಾಡಲಾಗುತ್ತಿದೆ. ಆದರೆ ದೇಶದಲ್ಲಿ ರಂಗ ಚಟುವಟಿಕೆಗಳನ್ನು ನಡೆಸಲು ಆಗುವಂತಹ ಸೀಮಿತ ಕಟ್ಟಡಗಳು ಇವೆ. ದೊಡ್ಡ ಕಟ್ಟಡಗಳನ್ನು ಸಾರ್ವಜನಿಕ ಚಟುವಟಿಕೆಗಳಿಗೆ ದಿನದ ಸ್ವಲ್ಪ ಕಾಲ ಮೀಸಲಿರಿಸುವ ವ್ಯವಸ್ಥೆ ಆಗಬೇಕು. ಆಗ ಜನರಿಗೆ ಉಪಕಾರ ಆಗುತ್ತದೆ~ ಎಂದು ಪ್ರತಿಪಾದಿಸಿದರು.ಹಿರಿಯ ನಟ ಸುರೇಶ್ ಹೆಬ್ಳೀಕರ್ ಮಾತನಾಡಿ, `ನಗರಗಳಲ್ಲಿ ತಾಪಮಾನ ಏರಿಕೆಯಾಗುತ್ತಿದೆ. ಶುದ್ಧ ಕುಡಿಯುವ ನೀರು ಸಿಗದ ಸ್ಥಿತಿ ಇದೆ. ಅಭಿವೃದ್ಧಿ ಹೆಸರಿನಲ್ಲಿ ಶೇ 70ಕ್ಕೂ ಅಧಿಕ ಹಸಿರು ನಾಶವಾಗಿದೆ. ಭಾರತದ ಭವಿಷ್ಯ ಸಣ್ಣ ನಗರಗಳಲ್ಲಿ ಇದೆ ಹೊರತು ಮಹಾನಗರಗಳಲ್ಲಿ ಅಲ್ಲ ಎಂಬುದನ್ನು ನಾವು ಅರಿತುಕೊಳ್ಳಬೇಕು. ಸಣ್ಣ ನಗರಗಳ ನಿರ್ವಹಣೆಯೂ ಸುಲಭ~ ಎಂದರು.ಆರ್‌ವಿಎಸ್‌ಎ ಕಾಲೇಜಿನ ಪ್ರಾಂಶುಪಾಲ ಡಾ.ಕೆ.ಎಸ್. ಅನಂತಕೃಷ್ಣ ಮಾತನಾಡಿ, ಪ್ರೊ. ಬಾಲಕೃಷ್ಣ ದೋಶಿ ಅವರು ವಾಸ್ತುಶಿಲ್ಪ ಕ್ಷೇತ್ರದ ಭೀಷ್ಮಾಚಾರ್ಯ.ಅವರ ಆತ್ಮಚರಿತ್ರೆ ವಾಸ್ತುಶಿಲ್ಪ ಕ್ಷೇತ್ರದ ಬಗ್ಗೆ ಒಳನೋಟಗಳನ್ನು ಒಳಗೊಂಡಿದೆ~ ಎಂದರು.

ಸಿಎನ್‌ಟಿ ಆರ್ಕಿಟೆಕ್ಟ್‌ನ ನಿರ್ದೇಶಕ ಪ್ರೇಮ್ ಚಂದಾವರ್ಕರ್ ಮಾತನಾಡಿ, `ಬಾಲಕೃಷ್ಣ ದೋಶಿ ಅವರ ಜೀವನೋತ್ಸಾಹ ಅಪೂರ್ವವಾದುದು. ಅವರು ಅಪರಿಚಿತವಾಗಿಯೇ ಉಳಿಯಲು ಯತ್ನಿಸಿದರು. ನಮ್ಮ ಕರ್ತವ್ಯ ಮಾಡಿದರೆ ಯಶಸ್ಸು ಬೆನ್ನ ಹಿಂದೆ ಬರುತ್ತದೆ ಎಂಬುದಕ್ಕೆ ದೋಶಿ ಅವರೇ ಸಾಕ್ಷಿ~ ಎಂದು ಬಣ್ಣಿಸಿದರು.

ವಾಸ್ತುಶಿಲ್ಪಿ ಬೃಂದಾ ಶಾಸ್ತ್ರಿ, ಯುವ ಉದ್ಯಮಿ ಅಜಯ್ ರಾಮಚಂದ್ರನ್ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.