ಭಾನುವಾರ, ಜನವರಿ 26, 2020
20 °C

ನೋಕಿಯ 701 ಕೊಟ್ಟ ಹಣಕ್ಕೆ ಮೋಸ ಇಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಈ ಸಲ ನಾವು ನೋಕಿಯ 701 ಫೋನ್ ಕಡೆಗೆ ಸ್ವಲ್ಪ ಗಮನ ಕೊಡೋಣ. ಇದನ್ನು ನೋಕಿಯಾದವರು ಸ್ಮಾರ್ಟ್‌ಫೋನ್ ವಿಭಾಗದಲ್ಲಿ ಸೇರಿಸಿದ್ದಾರೆ. ಹೌದು, ಇದು ಸ್ಮಾರ್ಟ್‌ಫೋನ್‌ಗಳು ಮಾಡುವ ಎಲ್ಲ ಕೆಲಸಗಳನ್ನು ಮಾಡಬಲ್ಲುದು.ಆದರೆ ಇದರ ಕಾರ್ಯಾಚರಣೆಯ ವ್ಯವಸ್ಥೆ ಸಿಂಬಿಯನ್ ಬೆಲ್ಲೆ ಆಗಿದೆ. ಹೆಚ್ಚಿನ ವಿಮರ್ಶಕರು ಸಿಂಬಿಯನ್ ಕಾರ್ಯಾಚರಣ ವ್ಯವಸ್ಥೆಯನ್ನು ಸ್ಮಾರ್ಟ್‌ಫೋನ್ ಕಾರ್ಯಾಚರಣ ವ್ಯವಸ್ಥೆ ಎಂದು ಲೆಕ್ಕಕ್ಕೆ ತೆಗೆದುಕೊಳ್ಳುತ್ತಿಲ್ಲ.ನೋಕಿಯಾದವರು ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ದಯನೀಯವಾಗಿ ಸೋಲುಕಂಡಿರುವುದೂ ಇದಕ್ಕೆ ಕಾರಣವಾಗಿರಬಹುದು. ಅದೆಲ್ಲ ಒತ್ತಟ್ಟಿಗಿರಲಿ. ಈ ಫೋನ್ ಹೇಗಿದೆ ನೋಡೋಣ.ಇದರಲ್ಲಿಯ ಕೆಲವು ಪ್ರಮುಖ ಗುಣವೈಶಿಷ್ಟ್ಯಗಳು:  1ಗಿಗಾಹರ್ಟ್ಝ್ ಪ್ರೋಸೇಸರ್, 512 ಎಂಬಿ ಮೆಮೊರಿ, ಸ್ಪರ್ಶ ಪರದೆ, 8 ಮೆಗಾಪಿಕ್ಸೆಲ್ ಕ್ಯಾಮರ, ವೈಫೈ, ಬ್ಲೂಟೂತ್, ಜಿಪಿಎಸ್, ಜಿಪಿಆರ್‌ಎಸ್, 3ಜಿ, 8 ಗಿಗಾಬೈಟ್ ಸಂಗ್ರಹ ಶಕ್ತಿ, ಎನ್‌ಎಫ್‌ಸಿ, ಎಫ್‌ಎಂ ರೇಡಿಯೋ, ಇತ್ಯಾದಿ. ಇದರ ಪರದೆ 640  360 ಪಿಕ್ಸೆಲ್ ರೆಸೊಲೂಶನ್ ಒಳಗೊಂಡಿದೆ.ಇದು ಹೈಡೆಫಿನಿಶನ್ ವೀಡಿಯೋ ತೋರಿಸಬಲ್ಲುದು ಮಾತ್ರವಲ್ಲ ರೆಕಾರ್ಡಿಂಗ್ ಕೂಡ ಮಾಡಬಲ್ಲುದು. ಈ ಎಲ್ಲ ಸವಲತ್ತುಗಳು ಇರುವ ಇದರ ಬೆಲೆ ಸುಮಾರು 20 ಸಾವಿರ ರೂ. ಅದರೆ ಬಹುತೇಕ ಜಾಲತಾಣಗಳಲ್ಲಿ ಇದರ ಬೆಲೆ ರೂ. 17,500.ಬಹುಶಃ ಮಧ್ಯಮ ಬೆಲೆಯ ಫೋನ್‌ಗಳಲ್ಲಿ (ಅಂದರೆ ರೂ.20 ಸಾವಿರಕ್ಕಿಂತ ಕಡಿಮೆ ಬೆಲೆಯ ಫೋನ್‌ಗಳಲ್ಲಿ) ಎನ್‌ಎಫ್‌ಸಿ ತಂತ್ರಜ್ಞಾನ (ಬಾಕ್ಸ್ ನೋಡಿ) ಇರುವ ಫೋನ್‌ಗಳಲ್ಲಿ ಇದು ಗಮನಾರ್ಹವಾದುದು.ಈ ಸಮೀಪ ಕ್ಷೇತ್ರ ಸಂವಹನ ತಂತ್ರಜ್ಞಾನವು ಪೂರ್ತಿ ಪ್ರಮಾಣದಲ್ಲಿ ಬಳಕೆಗೆ ಬರಬೇಕಷ್ಟೆ. ಬಳಕೆಗೆ ಬಂದಾಗ ಇದು ಒಂದು ಅದ್ಭುತ ಸೌಕರ್ಯವಾಗುತ್ತದೆ. ಈ ಸವಲತ್ತು ಇರುವ ಎರಡು ಫೋನ್‌ಗಳ ಮಧ್ಯೆ ಈ ತಂತ್ರಜ್ಞಾನ ಬಳಸಿ ಚಿತ್ರ, ಸಂಗೀತ, ವಿಳಾಸ, ಇತ್ಯಾದಿಗಳನ್ನು ಹಂಚಿಕೊಳ್ಳಬಹುದು.ಈ ಫೋನ್ ಇದೇ ಬೆಲೆಯ ಇತರೆ ಫೋನ್‌ಗಳಿಗಿಂತ ಹೆಚ್ಚು ಪ್ರಖರವಾದ ಪರದೆಯನ್ನು ಒಳಗೊಂಡಿದೆ. ಇದು ಸಿಂಬಿಯನ್ ಕಾರ್ಯಾಚರಣ ವ್ಯವಸ್ಥೆಯನ್ನು ಹೊದಿದೆ. ಆದುದರಿಂದ ಇದಕ್ಕೆ ಆಂಡ್ರೋಯಿಡ್‌ಗೆ ದೊರಕುವಷ್ಟು ತಂತ್ರಾಂಶಗಳು (ಆ್ಯಪ್‌ಗಳು) ದೊರೆಯುವುದಿಲ್ಲ.ಇದು ಜಿಪಿಎಸ್ ತಂತ್ರಜ್ಞಾನವನ್ನು ಒಳಗೊಂಡಿದೆ. ಅಂದರೆ ಉಪಗ್ರಹಗಳ ಜೊತೆ ಸಂಪರ್ಕ ಹೊಂದಿ ತಾನು ಇರುವ ಸ್ಥಳದ ನಿಖರವಾದ ಅಕ್ಷಾಂಶ ರೇಖಾಂಶಗಳನ್ನು ತೋರಿಸುತ್ತದೆ. ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಪ್ರಯಾಣ ಮಾಡಲು ಇದು ಸಹಾಯ ಮಾಡುತ್ತದೆ.ರಸ್ತೆ ಬದಿಯಲ್ಲಿ ಕಾರು ನಿಲ್ಲಿಸಿ ದಾರಿ ವಿಚಾರಿಸಬೇಕಾಗಿಲ್ಲ. ಗಮ್ಯ ಸ್ಥಾನದ ವಿಳಾಸ ಅಥವಾ ಅಕ್ಷಾಂಶ ರೇಖಾಂಶ ನೀಡಿದರೆ ಸಾಕು. ತಾನು ಈಗಿರುವ ಸ್ಥಾನದಿಂದ ಅಲ್ಲಿಗೆ ಹೋಗುವ ರಸ್ತೆಯನ್ನು ಅದು ತೋರಿಸುತ್ತದೆ. ಇದು ಕೇವಲ ಈ ಫೋನಿನ ವೈಶಿಷ್ಟ್ಯವೇನಲ್ಲ. ಇದು ಜಿಪಿಎಸ್ ಇರುವ ಎಲ್ಲ ಫೋನ್‌ಗಳಲ್ಲಿರುವ ಸವಲತ್ತಾಗಿದೆ.ಈ ಫೋನಿನಲ್ಲಿ ಇನ್ನೊಂದು ವಿಶೇಷ ಸವಲತ್ತಿದೆ. ಅದು ಎಫ್‌ಎಂ ಪ್ರೇಷಕ (ಟ್ರಾನ್ಸ್‌ಮಿಟರ್). ಅಂದರೆ ಸಂಗೀತವನ್ನು ಇದು ಇತರೆ ಎಫ್‌ಎಂ ಗ್ರಾಹಕಗಳಿಗೆ (ಅಂದರೆ ಎಫ್‌ಎಂ ರೇಡಿಯೋಗಳಿಗೆ) ಪ್ರಸಾರ ಮಾಡಬಲ್ಲುದು.

 

ಫೋನಿನಲ್ಲಿ  ನಿಮಗಿಷ್ಟವಾದ ಸಂಗೀತವನ್ನು ಹಾಕಿಕೊಂಡು ಅದನ್ನು ಪ್ರಸಾರ ಮಾಡಿ ಮನೆಯ ಅಥವಾ ಕಾರಿನ ಎಫ್‌ಎಂ ರೇಡಿಯೋದಲ್ಲಿ ಅದನ್ನು ಟ್ಯೂನ್ ಮಾಡಿಕೊಂಡು ಆಲಿಸಬಹುದು. ಅಷ್ಟೇ ಅಲ್ಲ, ಇನ್ನೂ ಹಲವು ಮಂದಿ ಸಂಗೀತವನ್ನು ತಮ್ಮ ಎಫ್‌ಎಂ ರೇಡಿಯೋ ಮೂಲಕ ಆಲಿಸಬಹುದು. ಆದರೆ ಅವರು ಫೋನಿನಿಂದ 50 ಅಡಿ ಅಳತೆಯ ಒಳಗೆ ಇರತಕ್ಕದ್ದು.ಇದರಲ್ಲಿ ಅಕ್ಸೆಲೆರೋಮೀಟರ್ ಅಳವಡಿಸಲಾಗಿದೆ. ಇದು ಫೋನ್ ಯಾವ ಕೋನದಲ್ಲಿದೆ, ಯಾವ ದಿಕ್ಕಿಗೆ ಚಲಿಸುತ್ತದೆ ಎಂದೆಲ್ಲ ಗಮನಿಸುತ್ತಿರುತ್ತದೆ. ಫೋನ್ ತಿರುಗಿಸಿದಾಗ ಪರದೆಯೂ ಅದರಂತೆ ತಿರುಗುತ್ತದೆ.ಈ ತಂತ್ರಜ್ಞಾನವನ್ನು ಬಳಸಿ ಆಡುವ ಕಾರು ಓಟದ ಸ್ಪರ್ಧೆಯ ಆಟ ಯುವಜನತೆಯಲ್ಲಿ ತುಂಬ ಜನಪ್ರಿಯ. ಡೊಳ್ಳುಹೊಟ್ಟೆಯವರು ಬೊಜ್ಜು ಕರಗಿಸಲು ಎಷ್ಟು ಹೆಜ್ಜೆ ನಡೆದಿದ್ದೇವೆ ಎಂದು ಲೆಕ್ಕ ಹಾಕುವ ತಂತ್ರಾಂಶನ್ನು ಬಳಸಬಹುದು. ಅದೂ ಅಕ್ಸೆಲೆರೋಮಿಟರ್ ಅನ್ನು ಬಳಸುತ್ತದೆ.ಇದರಲ್ಲಿ ಟಿವಿ ಔಟ್ ಕಿಂಡಿ ಇದೆ. ಅದಕ್ಕೆ ಸೂಕ್ತ ಕೇಬಲ್ ಲಗತ್ತಿಸಿ ಫೋನಿನಲ್ಲಿ ಮೂಡುವ ಚಲನಚಿತ್ರವನ್ನು ಮನೆಯ ಟಿವಿ ಪರದೆಯಲ್ಲಿ ವೀಕ್ಷಿಸಬಹುದು. ಹೈಡೆಫಿನಿಶನ್ ವೀಡಿಯೋ ಸವಲತ್ತಿರುವುದರಿಂದ ಉತ್ತಮ ಗುಣಮಟ್ಟದ ಸಿನಿಮಾ ವೀಕ್ಷಣೆ ಮನೆಯ ಟಿವಿ ಪರದೆಯಲ್ಲೆೀ ನಡೆಸಬಹುದು.ಟಿವಿ ಕೂಡ ಹೈಡೆಫಿನಿಶನ್ ಮಾದರಿಯದಾದರೆ ಇನ್ನೂ ಒಳ್ಳೆಯದು. ಒಟ್ಟಿನಲ್ಲಿ ಹೇಳುವುದಾದರೆ ನೀವು ಕೊಡುವ ಹಣಕ್ಕೆ ನಿಮಗೆ ವಾಪಾಸು ದೊರೆಯುವ ಸವಲತ್ತುಗಳು ಅಧಿಕ. ಇಷ್ಟೆಲ್ಲ ಸವಲತ್ತಿರುವ ಇತರೆ ಸ್ಮಾರ್ಟ್‌ಫೋನ್‌ಗಳಿಗೆ ಕನಿಷ್ಠ ರೂ. 30 ಸಾವಿರ ಬೆಲೆಯಿದೆ. ಆದುದರಿಂದ ಜಾಲತಾಣಗಳು ಈ ಫೋನನನ್ನು best value for money ಎಂದು ದಾಖಲಿಸಿವೆ.ಅಂದಹಾಗೆ ನೀವು ಈ ಫೋನ್ ಬಳಸಿ ಕರೆ ಕೂಡ ಮಾಡಬಹುದು!

ಪ್ರತಿಕ್ರಿಯಿಸಿ (+)