ಶುಕ್ರವಾರ, ಜೂನ್ 18, 2021
28 °C

ನೋಡಬೇಕು ಚೀಲದೊಳಗನು...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನೋಡಬೇಕು ಚೀಲದೊಳಗನು...

ಟೊಳ್ಳು ಚೀಲದೊಳಗಿನ ಕೆಲಸಕ್ಕೆ ಬಾರದ ಕನ್ನಡಿ, ಹಣಿಗೆ, ಕಾಡಿಗೆ, ಪೌಡರು, ಕ್ಲಿಪ್ಪು, ಸೆಂಟುಗಳ ಮೂಲಕ ಹೆಣ್ಣಿನ ಬ್ರಹ್ಮಾಂಡದ ದರ್ಶನ ಮತ್ತು ಹೆಣ್ಣಿನ ಬ್ಯಾಗನ್ನು ವ್ಯಾನಿಟಿ ಮಾಡಿದ ಪುರುಷ ವ್ಯವಸ್ಥೆಯ ವ್ಯವಸ್ಥಿತ ಕ್ರಮವನ್ನು ಪ್ರಯೋಗ ಅನಾವರಣ ಮಾಡುವ ಪ್ರಯತ್ನ ಮಾಡಿರುವುದು ಸ್ತುತ್ಯರ್ಹ. ಆದ್ದರಿಂದ ವೈದೇಹಿಯರ `ನೋಡಬಾರದು ಚೀಲದೊಳಗನು~ವನ್ನು ಮಂಗಳಾರವರು `ನೋಡಬೇಕು ಚೀಲದೊಳಗನು~ ಎನ್ನುವಂತೆ ನಮ್ಮ ಮುಂದೆ ಬಿಚ್ಚಿಟ್ಟಿದ್ದಾರೆ.

ವಿಶ್ವಮಹಿಳಾದಿನದ ಅಂಗವಾಗಿ ಮಾರ್ಚ್ 8ರಂದು ರಂಗಶಂಕರದಲ್ಲಿ ಪ್ರದರ್ಶಿತವಾದ ಮಂಗಳ ಎನ್. ನಿರ್ದೇಶನದ ಪ್ರಯೋಗ `ವ್ಯಾನಿಟಿ ಬ್ಯಾಗ್~ ಹಲವು ಕಾರಣಗಳಿಗೆ ನೋಡುಗರೆಲ್ಲರ ಗಮನ ಸೆಳೆಯಿತು.

 

ಕನ್ನಡದ ಮುಖ್ಯ ಲೇಖಕಿಯಾದ ವೈದೇಹಿಯವರ `ನೋಡಬಾರದು ಚೀಲದೊಳಗನು~, `ಅಡುಗೆಮನೆ ಹುಡುಗಿ~, `ಗೆಳತಿಯ ಗುಟ್ಟು~, `ಅಮ್ಮನ ಸೀರೆ~ಯೇ ಮೊದಲಾದ 18 ಕವಿತೆಗಳನ್ನು ಪೋಣಿಸಿ ರಂಗರೂಪಕ್ಕಿಳಿಸಿದ ಪ್ರಯೋಗವಾಗಿತ್ತದು.

 

`ನೋಡಬಾರದು ಚೀಲದೊಳಗನು~ಕವಿತೆಯ ರೂಪಕವಾದ `ವ್ಯಾನಿಟಿಬ್ಯಾಗ~ನ್ನು ಪ್ರಯೋಗದ ಶೀರ್ಷಿಕೆಯಾಗಿ ಬಳಸಿಕೊಂಡಿದ್ದು ಔಚಿತ್ಯಪೂರ್ಣವಾಗಿತ್ತು.`ವ್ಯಾನಿಟಿ~ ಎಂಬ ಇಂಗ್ಲಿಷ್ ಪದದ ಅರ್ಥ ಜಂಭ, ಟೊಳ್ಳು, ಹುರುಳಿಲ್ಲದ, ನಿಷ್ಪ್ರಯೋಜಕ ಎಂದು. ವ್ಯಾನಿಟಿ ಬ್ಯಾಗ್ ಎಂದರೆ ಜಂಭದ ಚೀಲ, ಟೊಳ್ಳು ಚೀಲ, ಅಥವಾ ನಿಷ್ಪ್ರಯೋಜಕ ಚೀಲ.ಆಧುನಿಕ ಮಹಿಳೆಯ ಪರಿಕರವಾಗಿದ್ದ, ಈಗಲೂ ಆಗಿರುವ ಚೀಲವನ್ನು ವ್ಯವಸ್ಥಿತವಾಗಿ ವ್ಯಾನಿಟಿಯನ್ನಾಗಿ ಮಾಡಿದ ಪುರುಷ ಪರಿಭಾಷೆಯನ್ನು ಕವಿತೆ ಬೊಟ್ಟುಮಾಡಿ ತೋರುತ್ತದೆ.ಹಾಗೆಯೇ ಪ್ರಯೋಗವು ಕೂಡ ಇದೇ ರೂಪಕವನ್ನು ಹೊತ್ತು ಉಳಿದ ಕವಿತೆಗಳೊಂದಿಗೆ ಸಂವಾದ ನಡೆಸಿ ಟೊಳ್ಳುಚೀಲದೊಳಗಣ ಬ್ರಹ್ಮಾಂಡವನ್ನು ಅನಾವರಣಗೊಳಿಸಲು ಪ್ರಯತ್ನಿಸುತ್ತದೆ.ಇಡೀ ರಂಗಸ್ಥಳದ ಮಧ್ಯದಲ್ಲೇ ಆಳೆತ್ತರದ ವ್ಯಾನಿಟಿಬ್ಯಾಗಿನ ಪರಿಕರವು ಮತ್ತೆಮತ್ತೆ ಇದೇ ರೂಪಕದತ್ತ ಕಣ್ಣುಹಾಯಿಸುವಂತೆ ಮಾಡಿ ಪ್ರಯೋಗದ ಮುಖ್ಯ ಆಶಯವನ್ನು ಪ್ರಚುರಪಡಿಸಲು ನೆರವಾಗುತ್ತದೆ.ನಟರ ಸಮೂಹವು (ಬಹುತೇಕ ನಟಿಯರು) ಇದೇ ಬ್ಯಾಗಿನಿಂದ ಬಂದು ಹೋಗಿ ಮಾಡುವುದೂ ಕೂಡ ರಂಗತಂತ್ರದ ಹೊಸ ಸಾಧ್ಯತೆಯನ್ನು ಕಂಡರಿಸುತ್ತದೆ. ನಟಿಯರ ಸಮೂಹವು ಬಹಳ ಉತ್ಸುಕರಾಗಿ, ಮುಗ್ಧರಾಗಿ ಅಭಿನಯಿಸಿದ್ದು ಪ್ರಯೋಗದ ವಿಶೇಷತೆಯೆಂದೇ ಹೇಳಬೇಕು.ಅನೇಕ ವರ್ಷಗಳ ರಂಗಕರ್ಮದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವ ವೃತ್ತಿಪರ ಮಹಿಳಾ ನಿರ್ದೇಶಕರುಗಳಲ್ಲಿ ಮಂಗಳ ಮುಂಚೂಣಿಯಲ್ಲಿರುವವರು.ವಸ್ತ್ರವಿನ್ಯಾಸಕರೂ ಆಗಿರುವ ಅವರು ಪ್ರಸ್ತುತ ಪ್ರಯೋಗದ ವಸ್ತ್ರವಿನ್ಯಾಸವನ್ನೂ, ರಂಗಚಲನೆಗಳ ವಿನ್ಯಾಸವನ್ನು ನವಿರಾಗಿ ನಿರ್ವಹಿಸಿದ್ದಾರೆ. ಅದಕ್ಕೆ ಪೂರಕವಾದ ರಂಗವಿನ್ಯಾಸವನ್ನು ಅರುಣ ಸಾಗರ್ ಮಾಡಿಕೊಟ್ಟಿದ್ದಾರೆ. ಸಂಗೀತ ಗಜಾನನ ಟಿ. ನಾಯ್ಕ. ಒಟ್ಟಾರೆಯಾಗಿ ತಾಂತ್ರಿಕ ದೃಷ್ಟಿಯಿಂದ ಪ್ರಯೋಗವು ಆಕರ್ಷಕವಾಗಿ ಮೂಡಿಬಂದಿದೆ.ಆದರೆ ಸಮಸ್ಯೆ ಮತ್ತು ಸವಾಲು ಎದುರಾಗುವುದು ಕಾವ್ಯಕೃತಿಯೊಂದನ್ನು ರಂಗಕ್ಕೆ ಅಳವಡಿಸಿ ಅದನ್ನು ರಂಗಕೃತಿಯನ್ನಾಗಿ ಮಾಡುವಲ್ಲಿ. ಪ್ರಸ್ತುತ ಪ್ರಯೋಗವು ಈ ಸಮಸ್ಯೆ ಮತ್ತು ಸವಾಲಿಗೆ ಬಹಳ ಪ್ರಾಮಾಣಿಕವಾಗಿ ಮುಖಾಮುಖಿಯಾಗಿದೆ ಎಂದೆನಿಸುತ್ತದೆ.

 

ಕಾವ್ಯದ ಕರ್ಮಭೂಮಿಯೇ ಬೇರೆ, ನಟನೆಯ ಕರ್ಮಭೂಮಿಯೇ ಬೇರೆ. ಕಾವ್ಯದ ಮಾರ್ಗವು ತದ್ವತ್ ಅರ್ಥವನ್ನು ಮೀರಿದ ಒಂದು ಅಮೂರ್ತದಲ್ಲಿ ಅರ್ಥವನ್ನು ಧ್ವನಿಸುತ್ತಿರುತ್ತದೆ. ಆದರೆ ರಂಗಭೂಮಿಯಲ್ಲಿ ನಡೆಯುವ ಅನಿವಾರ್ಯ ನೇರಸಂವಹನದಲ್ಲಿ ಕಾವ್ಯದ ಧ್ವನ್ಯಾರ್ಥವು ವಾಚ್ಯವಾಗುವ ಅಪಾಯವನ್ನು ಮರೆಯುವಂತಿಲ್ಲ.ಹಾಗೆ ಕಾವ್ಯದ ವಿಶಾಲ ಅರ್ಥ, ಸಂಜ್ಞೆ, ಪರಿಕರಗಳು ರಂಗದ ಮೇಲಿನ ನಟರ ಕೈಯಲ್ಲಿ ಸಿಕ್ಕು ಬಹಳ ಸಂಕುಚಿತಗೊಂಡಿವೆ. ಪ್ರಾಯಶಃ ಅದಕ್ಕೆ ಆಯಾ ನಟರ ಅನುಭವದ ಕೊರತೆಯೂ ಕಾರಣವಾಗಿರಬಹುದು. ಹಲವು ಕಡೆ ಕಾವ್ಯದ ಸಾಲುಗಳು ಘೋಷಣೆಗಳಾಗಿಬಿಡುತ್ತವೆ.

 

ಕಥೆ, ನಾಟಕದೊಳಗಿನ ಪಾತ್ರವನ್ನು ರಂಗದಮೇಲೆ ತರುವುದಕ್ಕೂ ಕಾವ್ಯದೊಳಗಿನ ಪಾತ್ರವನ್ನು ರಂಗದ ಮೇಲೆ ತರುವುದಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಕಾವ್ಯವೇ ಅಮೂರ್ತವಾಗಿರುವಾಗ ಇನ್ನು ಕಾವ್ಯದೊಳಗಿನ ಪಾತ್ರಗಳಿನ್ನೆಷ್ಟು ಅಮೂರ್ತವಾಗಿರಬಹುದು! ಅಂತಹ ಪಾತ್ರಗಳನ್ನು ನಿಜಕ್ಕೂ ರಂಗಕ್ಕೆ ತರಬೇಕೆಂದರೆ ಯಾವ ಮಾರ್ಗದಲ್ಲಿ, ಅವರ ಅಭಿನಯ ಕ್ರಮ ಯಾವುದು ಎಂದು ಯೋಚಿಸಬೇಕಾಗುತ್ತದೆ. ಕಾವ್ಯದ ಭಾಷೆ ಒಂದಾಗಿ, ಅಭಿನಯ ಕ್ರಮ ಮತ್ತೊಂದಾದರೆ ಆಭಾಸವಾಗಬಹುದು.ಪ್ರಯೋಗದ ಲಯವಿನ್ಯಾಸವೇ ಮಂದಗತಿಯಲ್ಲಿರುವುದರಿಂದ ಪ್ರಾರಂಭದ ಹದಿನೈದಿಪ್ಪತ್ತು ನಿಮಿಷ ಪ್ರೇಕ್ಷಕರ ತಾಳ್ಮೆಗೆಡಿಸುತ್ತದೆ. ಆದರೆ ಕ್ರಮಕ್ರಮೇಣ ಚೇತೋಹಾರಿಯಾಗುವತ್ತ ಸಾಗುತ್ತದೆ. ಸಂಗೀತ ಹಲವು ಕಡೆ ತಾಕುತ್ತದೆ. ಮತ್ತೆ ಕೆಲವು ಕಡೆ ಘೋಷಣೆಯಾಗುತ್ತದೆ.ನೇರಸಂಗೀತ ಮತ್ತು ಮುದ್ರಿತ ಸಂಗೀತಗಳನ್ನು ಬಳಸುವಾಗ ಅವುಗಳ ಕೊಡುಕೊಳ್ಳುವಿಕೆಗಳ ಬಗ್ಗೆ ಎಚ್ಚರವಹಿಸಬೇಕಾಗುತ್ತದೆ. ಬೆಳಕಿನ ವಿನ್ಯಾಸ ಪ್ರಯೋಗಕ್ಕೆ ಪೂರಕವಾಗಿದ್ದು ಪ್ರಯೋಗದ ಚಿತ್ತಸ್ಥಿತಿಯನ್ನು ಉದ್ದೀಪನಗೊಳಿಸುವಲ್ಲಿ ನೆರವಾಗಿದೆ.ಈ ಎಲ್ಲ ವಿಷಯಗಳನ್ನು ಇನ್ನೊಮ್ಮೆ ಪರಿಶೀಲಿಸಿದಲ್ಲಿ ಇದು ಉತ್ತಮ ಪ್ರಯೋಗವಾಗುವಲ್ಲಿ ಎರಡು ಮಾತಿಲ್ಲ. ಇಷ್ಟಾಗಿಯೂ ಇದೊಂದು ಹೊಸ ಮತ್ತು ವಿಶಿಷ್ಟ ಪ್ರಯೋಗವಾಗಿದೆ. ಟೊಳ್ಳು ಚೀಲದೊಳಗಿನ ಕೆಲಸಕ್ಕೆ ಬಾರದ ಕನ್ನಡಿ, ಹಣಿಗೆ, ಕಾಡಿಗೆ, ಪೌಡರು, ಕ್ಲಿಪ್ಪು, ಸೆಂಟುಗಳ ಮೂಲಕ ಹೆಣ್ಣಿನ ಬ್ರಹ್ಮಾಂಡದ ದರ್ಶನ ಮತ್ತು ಹೆಣ್ಣಿನ ಬ್ಯಾಗನ್ನು ವ್ಯಾನಿಟಿ ಮಾಡಿದ ಪುರುಷ ವ್ಯವಸ್ಥೆಯ ವ್ಯವಸ್ಥಿತ ಕ್ರಮವನ್ನು ಪ್ರಯೋಗ ಅನಾವರಣ ಮಾಡುವ ಪ್ರಯತ್ನ ಮಾಡಿರುವುದು ಸ್ತುತ್ಯರ್ಹ.ಆದ್ದರಿಂದ ವೈದೇಹಿಯರ `ನೋಡಬಾರದು ಚೀಲದೊಳಗನು~ವನ್ನು ಮಂಗಳಾರವರು `ನೋಡಬೇಕು ಚೀಲದೊಳಗನು~ ಎನ್ನುವಂತೆ ನಮ್ಮ ಮುಂದೆ ಬಿಚ್ಚಿಟ್ಟಿದ್ದಾರೆ ಎಂದರೆ ತಪ್ಪಲ್ಲ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.