ಮಂಗಳವಾರ, ಮಾರ್ಚ್ 9, 2021
31 °C

ನೋಡ ಬನ್ನಿ ನಮ್ಮ ನಿರ್ಮಲ ಜಿಲ್ಲೆ

ಎಂ.ಜಿ.ಬಾಲಕೃಷ್ಣ Updated:

ಅಕ್ಷರ ಗಾತ್ರ : | |

ನೋಡ ಬನ್ನಿ ನಮ್ಮ ನಿರ್ಮಲ ಜಿಲ್ಲೆ

ಬಯಲು ಶೌಚಾಲಯ ಪದ್ಧತಿಯನ್ನು ನಿರ್ಮೂಲ ಮಾಡುವ ಸಲುವಾಗಿ 2005ರಲ್ಲಿ ಜಾರಿಗೆ ಬಂದ ನಿರ್ಮಲ ಗ್ರಾಮ ಯೋಜನೆಯನ್ನು ರಾಜ್ಯದಲ್ಲಿ ಸಮರ್ಪಕವಾಗಿ ಜಾರಿಗೆ ತಂದ ಏಕೈಕ ಜಿಲ್ಲೆ ದಕ್ಷಿಣ ಕನ್ನಡ. ಈ ಯೋಜನೆಗಾಗಿ ತೆಗೆದಿರಿಸಲಾದ ಹಣವನ್ನು ಬೇರೆ ಉದ್ದೇಶಕ್ಕೆ ಬಳಸದೇ ಇದ್ದದ್ದು ಮತ್ತು ಪ್ರತಿ ವರ್ಷ ಒಬ್ಬೊಬ್ಬ ನೋಡಲ್ ಅಧಿಕಾರಿಯನ್ನು ಯೋಜನೆ ಜಾರಿಗಾಗಿಯೇ ನಿಯೋಜಿಸಿದ್ದರ ಫಲವಾಗಿ ಐದೇ ವರ್ಷದಲ್ಲಿ ಇದು ಬಯಲು ಶೌಚಾಲಯ ಮುಕ್ತ ಜಿಲ್ಲೆಯಾಗಿ ಹೊರಹೊಮ್ಮಿದೆ.

ಎಲ್ಲಾ 203 ಗ್ರಾಮ ಪಂಚಾಯಿತಿಗಳು ಮತ್ತು 5 ತಾಲ್ಲೂಕು ಪಂಚಾಯಿತಿಗಳು ನಿರ್ಮಲ ಗ್ರಾಮ ಪ್ರಶಸ್ತಿಗೆ ಪಾತ್ರವಾದ ಹಿನ್ನೆಲೆಯಲ್ಲಿ 2009-10ನೇ ಸಾಲಿನ ರಾಷ್ಟ್ರ ಮಟ್ಟದ `ಜಿಲ್ಲಾ ನಿರ್ಮಲ ಗ್ರಾಮ~ ಪ್ರಶಸ್ತಿ ಲಭಿಸಿದೆ. ರಾಜ್ಯದ ಬೇರೆ ಯಾವ ಜಿಲ್ಲೆಯೂ ಈ ಸಾಧನೆ ಮಾಡಿಲ್ಲ. ಅಷ್ಟೇ ಏಕೆ ಈ ಮೊದಲು ದಕ್ಷಿಣ ಕನ್ನಡ ಜಿಲ್ಲೆಯ ಒಂದು ಭಾಗವೇ ಆಗಿದ್ದ ಉಡುಪಿ ಜಿಲ್ಲೆಗೂ ಈ ಸಾಧನೆ ಸಾಧ್ಯವಾಗಿಲ್ಲ. ಸಿಕ್ಕಿಂನ 6, ಕೇರಳದ ಕಾಸರಗೋಡು ಸಹಿತ 7 ಜಿಲ್ಲೆಗಳನ್ನು ಬಿಟ್ಟರೆ ದೇಶದಲ್ಲಿ ಇಂತಹ ಸಾಧನೆ ಮಾಡಿದ 14ನೇ ಜಿಲ್ಲೆ ಎಂಬ ಖ್ಯಾತಿಗೆ ದಕ್ಷಿಣ ಕನ್ನಡ ಪಾತ್ರವಾಗಿದೆ.

ಜಿಲ್ಲೆಯಲ್ಲಿ ಶೇ 98ರಷ್ಟು ಮನೆಗಳಿಗೆ ಶೌಚಾಲಯಗಳಿವೆ. ಬಹುತೇಕ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲೂ ಸಮುದಾಯ ಶೌಚಾಲಯಗಳಿವೆ. ಜತೆಗೆ ಇಲ್ಲೆಲ್ಲ ನೀರಿನ ಸೌಲಭ್ಯವೂ ಇದೆ. ಅರಣ್ಯ ಪ್ರದೇಶದ ಕೆಲವು ಕಾನೂನು ತೊಡಕುಗಳಿಂದಾಗಿ ಕೆಲವು ಮನೆಗಳಿಗೆ ಶೌಚಾಲಯ ನಿರ್ಮಿಸಿಕೊಳ್ಳುವುದು ಸಾಧ್ಯವಾಗಿಲ್ಲ. ಗ್ರಾಮಾಂತರ ಪ್ರದೇಶಗಳಲ್ಲಿ ಎಲ್ಲಾ ಮನೆಗಳಲ್ಲೂ ಶೌಚಾಲಯ ನಿರ್ಮಾಣವಾಗಲು ಮುಖ್ಯ ಕಾರಣ ಪ್ರತಿ ಗ್ರಾಮ ಪಂಚಾಯಿತಿಯೂ ಅಳವಡಿಸಿರುವ ಸ್ಚಚ್ಛತಾ ನೀತಿ. ಈ ನೀತಿಯ ಪ್ರಕಾರ, ಶೌಚಾಲಯಕ್ಕೆ ಅವಕಾಶ ಕಲ್ಪಿಸದ ಮನೆಗಳ ನಿರ್ಮಾಣಕ್ಕೆ ಗ್ರಾಮ ಪಂಚಾಯಿತಿಯಿಂದ ಅನುಮತಿ ಸಿಗುವುದಿಲ್ಲ. ಈ ನೀತಿಯನ್ನು ಎಲ್ಲಾ ಗ್ರಾಮ ಪಂಚಾಯಿತಿಗಳೂ ಕಟ್ಟುನಿಟ್ಟಾಗಿ ಪಾಲಿಸುತ್ತಿವೆ. ನಿರ್ಮಲ ಗ್ರಾಮ ಪ್ರಶಸ್ತಿಯ ರೂಪದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಪ್ರತಿ ಗ್ರಾಮ ಪಂಚಾಯಿತಿಗೆ ತಲಾ 2 ಲಕ್ಷ ರೂಪಾಯಿಯಿಂದ 5 ಲಕ್ಷ ರೂಪಾಯಿವರೆಗೆ ನಗದು ಲಭಿಸಿದೆ. ಈ ಮೊತ್ತವನ್ನು  ಸಾರ್ವಜನಿಕ ಶೌಚಾಲಯಗಳ ನಿರ್ಮಾಣಕ್ಕೇ ವಿನಿಯೋಗಿಸಿದ್ದು ಸಹ ಜಿಲ್ಲೆಯ ವಿಶೇಷ.

ಹೆಚ್ಚಿನ ಎಲ್ಲಾ ಶಾಲೆಗಳಲ್ಲಿ, ಅಂಗನವಾಡಿಗಳಲ್ಲಿ ಶೌಚಾಲಯ ಮತ್ತು ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಇದೀಗ ಗುಂಡ್ಯದಿಂದ ಮಂಗಳೂರಿನವರೆಗೆ ಹೆದ್ದಾರಿ ಬದಿಗಳಲ್ಲಿ ಅಲ್ಲಲ್ಲಿ ಹಾಗೂ ಧರ್ಮಸ್ಥಳ, ಸುಬ್ರಹ್ಮಣ್ಯದಂತಹ ಕ್ಷೇತ್ರಗಳಿಗೆ ತೆರಳುವ ರಸ್ತೆ ಬದಿಗಳಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಿಸುವ ಯೋಜನೆ ಸಿದ್ಧವಾಗಿದೆ. ಕಟ್ಟಡ ಕಾರ್ಮಿಕರು, ಅಲೆಮಾರಿ ಕುಟುಂಬಗಳು ಈಗಲೂ ಬಯಲು ಶೌಚಾಲಯ ಬಳಸುತ್ತಿರುವುದಕ್ಕೆ ಜಿಲ್ಲೆಯೂ ಹೊರತಾಗಿಲ್ಲ. ಆದರೆ ಅದೆಲ್ಲ ತಾತ್ಕಾಲಿಕ ಎಂಬ ನೆಲೆಗಟ್ಟಿನಿಂದ ನೋಡಿದಾಗ, ಜಿಲ್ಲೆ ಬಹುತೇಕ ಮಟ್ಟಿಗೆ ಬಯಲು ಶೌಚಾಲಯದಿಂದ ಮುಕ್ತವಾಗಿದೆ ಎಂದು ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿಗಳು ಎದೆ ತಟ್ಟಿ ಹೇಳುತ್ತಿವೆ.

 

ಯಶಸ್ಸಿನ ದಾರಿಯಲ್ಲಿ ಸಿಕ್ಕಿಂ, ಕೇರಳ

ದೇಶದ ಮೊತ್ತ ಮೊದಲ `ಸಂಪೂರ್ಣ ಬಯಲು ಶೌಚ ಮುಕ್ತ~ ರಾಜ್ಯ ಎಂಬ ಹೆಗ್ಗಳಿಕೆಗೆ ಸದ್ಯದಲ್ಲೇ ಸಿಕ್ಕಿಂ ಪಾತ್ರವಾಗಲಿದೆ. ಅದರ ಬೆನ್ನಲ್ಲೇ ಕೇರಳ ಮತ್ತು ಈಶಾನ್ಯ ರಾಜ್ಯಗಳಾದ ಮಣಿಪುರ, ಮಿಜೊರಾಂ, ತ್ರಿಪುರಾಗೂ ಈ ಸ್ಥಾನ ಲಭ್ಯವಾಗಲಿದೆ.

ಸಂಪೂರ್ಣ ನೈರ್ಮಲ್ಯ ಸೌಲಭ್ಯಗಳಿಗಾಗಿ 1999ರಲ್ಲೇ ನಿರ್ಮಲ್ ಭಾರತ್ ಅಭಿಯಾನ್ (ಎನ್‌ಬಿಎ) ಯೋಜನೆ ಅಸ್ತಿತ್ವಕ್ಕೆ ಬಂದಿದೆಯಾದರೂ ಇನ್ನೂ ನಿಗದಿತ ಗುರಿ ಮುಟ್ಟಲು ಅದಕ್ಕೆ ಸಾಧ್ಯವಾಗಿಲ್ಲ. ಪ್ರಸ್ತುತ ದೇಶದ ಶೇ 60ರಷ್ಟು ಜನ ಶೌಚ ಕ್ರಿಯೆಗಳಿಗೆ ಬಯಲನ್ನೇ ಆಶ್ರಯಿಸಿದ್ದಾರೆ. ದೇಶದಾದ್ಯಂತ ಇರುವ 2.40 ಲಕ್ಷ ಗ್ರಾಮ ಪಂಚಾಯಿತಿಗಳಲ್ಲಿ ಶೌಚಾಲಯ ಸೌಲಭ್ಯ ಹೊಂದಿರುವ ಕೇವಲ ಶೇ 10ರಷ್ಟು `ನಿರ್ಮಲ ಗ್ರಾಮ ಪಂಚಾಯಿತಿ~ಗಳಿವೆ.

ಆದರೆ ಕೇಂದ್ರ ಸರ್ಕಾರ ಮಾತ್ರ ಇನ್ನು 10 ವರ್ಷಗಳಲ್ಲಿ ಸಂಪೂರ್ಣ ಬಯಲು ಶೌಚ ಮುಕ್ತ ಭಾರತ ಕಟ್ಟುವ ಕನಸು ಕಾಣುತ್ತಿದೆ. ನಿರ್ಮಲ್ ಭಾರತ್ ಅಭಿಯಾನಕ್ಕಾಗಿ ಪ್ರಸಕ್ತ ಹಣಕಾಸು ವರ್ಷ (2012- 13) 3500 ಕೋಟಿ ರೂಪಾಯಿ ವ್ಯಯವಾಗಲಿದೆ. 12ನೇ ಪಂಚವಾರ್ಷಿಕ ಯೋಜನೆಯಲ್ಲಿ (2012- 13ರಿಂದ 2016- 17) 35 ಸಾವಿರ ಕೋಟಿ ರೂಪಾಯಿಯನ್ನು ನಿಗದಿ ಮಾಡಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.