ಶನಿವಾರ, ಮೇ 8, 2021
19 °C

ನ್ಯಾಯಾಂಗ: ರೂ 170 ಕೋಟಿ ಕಾಮಗಾರಿ ಪ್ರಗತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ನ್ಯಾಯಾಂಗಕ್ಕೆ ಸಂಬಂಧಿಸಿದಂತೆ ರಾಜ್ಯದಾದ್ಯಂತ 170 ಕೋಟಿ ರೂಪಾಯಿ ಮೊತ್ತದ ಕಾಮಗಾರಿಗಳು ಪ್ರಗತಿಯಲ್ಲಿವೆ~ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಎಸ್.ಸುರೇಶ್‌ಕುಮಾರ್ ತಿಳಿಸಿದರು.ವಕೀಲರ ಸಂಘವು ನಗರದ ಸಿಟಿ ಸಿವಿಲ್ ಕೋರ್ಟ್‌ನಲ್ಲಿ ಶುಕ್ರವಾರ ಏರ್ಪಡಿಸಿದ್ದ, ಮೂರನೇ ಹಂತದ ಕಟ್ಟಡ ಕಾಮಗಾರಿಯ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಅವರು, `ವಕೀಲರ ಸಂಘವು ಇಟ್ಟ ಬೇಡಿಕೆಗಳನ್ನು ಹಂತ-ಹಂತವಾಗಿ ಈಡೇರಿಸಲಾಗುವುದು. ಈ ಕಟ್ಟಡ ನಿರ್ಮಾಣಕ್ಕೆ ರೂ 3 ಕೋಟಿ ಬಿಡುಗಡೆ ಮಾಡಲಾಗಿದೆ.ಹೆಬ್ಬಾಳದಲ್ಲಿ ಹೈಕೋರ್ಟ್ ನ್ಯಾಯಮೂರ್ತಿಗಳಿಗಾಗಿ ಕಟ್ಟಿಸಲಾಗುತ್ತಿರುವ 13 ಮನೆಗಳಲ್ಲಿ ಕೆಲವು ಪೂರ್ಣಗೊಂಡಿದ್ದು, ಒಂದನ್ನು ಹಸ್ತಾಂತರಿಸಲಾಗಿದೆ. 8 ಮನೆಗಳನ್ನು ಡಿಸೆಂಬರ್ ವೇಳೆಗೆ, ಉಳಿದ ಮನೆಗಳನ್ನು ಮಾರ್ಚ್-ಏಪ್ರಿಲ್‌ನಲ್ಲಿ ಹಸ್ತಾಂತರಿಸಲಾಗುವುದು~ ಎಂದರು.`ಮೇಯೊಹಾಲ್ ಪಕ್ಕದ ಯುಟಿಲಿಟಿ ಕಟ್ಟಡ ಸಮುಚ್ಚಯದಲ್ಲಿ ಎರಡು ವಿಭಾಗಗಳನ್ನು ಕೋರ್ಟ್ ಕೆಲಸಗಳಿಗೆ ನೀಡುವಂತೆ ಬಿಬಿಎಂಪಿಗೆ ಕೇಳಲಾಗಿದೆ. ಡಬಲ್ ರಸ್ತೆಯಲ್ಲಿರುವ ನ್ಯಾಯದೇಗುಲ ಕೌಟುಂಬಿಕ ನ್ಯಾಯಾಲಯದ ಬಳಿ ಎರಡೂವರೆ ಎಕರೆ ಪ್ರದೇಶವನ್ನು ನ್ಯಾಯಾಂಗ ಸಂಬಂಧಿ ಉದ್ದೇಶಗಳಿಗಾಗಿ ಬಳಸಿಕೊಳ್ಳಲಾಗುವುದು.ಕಂದಾಯ ಭವನದಲ್ಲಿ ಕರ್ನಾಟಕ ಆಡಳಿತ ನ್ಯಾಯಮಂಡಳಿ (ಕೆಎಟಿ) ಮತ್ತು ಕೇಂದ್ರ ಆಡಳಿಯ ನ್ಯಾಯಮಂಡಳಿ (ಸಿಎಟಿ)ಯ ಘಟಕಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ. ಕಟ್ಟಡಗಳ ಪ್ರಗತಿ ಪರಿಶೀಲನೆ ಸಂಬಂಧ ವಿವಿಧ ಜಿಲ್ಲೆಗಳ ಅಧಿಕಾರಿಗಳೊಂದಿಗೆ ವಿಡಿಯೊ ಕಾನ್ಫರೆನ್ಸ್ ನಡೆಸಲಾಗುತ್ತಿದೆ~ ಎಂದರು.`ಯುವಿಸಿಇ ಕಾಲೇಜಿನ ಹಾಸ್ಟೆಲ್‌ನ ಹಳೆಯ ಕಟ್ಟಡವನ್ನು ವಕೀಲರ ಕಚೇರಿಗಳಿಗಾಗಿ ಬಳಸಿಕೊಳ್ಳುವ ಕುರಿತಂತೆ ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಗಳೊಂದಿಗೆ ಮಾತುಕತೆ ನಡೆಸಲಾಗಿದೆ. ಹೆಸರಘಟ್ಟ ಹೋಬಳಿಯ ಅರಕೆರೆ ಗ್ರಾಮದಲ್ಲಿ ಗ್ರಾಮೀಣ ಪ್ರದೇಶದ ವಕೀಲರಿಗೆ ಉಳಿದುಕೊಳ್ಳಲು ಅತಿಥಿ ಗೃಹ, ಹಾಸ್ಟೆಲ್ ಮತ್ತು ಸಭೆ ಸಮಾರಂಭ ನಡೆಸಲು ಸಮುದಾಯ ಭವನವನ್ನು ನಿರ್ಮಿಸುವ ಸಂಘದ ಸಲಹೆಯನ್ನು ಪರಿಶೀಲನೆ ನಡೆಸುವೆ~ ಎಂದು ಸಚಿವ ಸುರೇಶ್‌ಕುಮಾರ್ ಭರವಸೆ ನೀಡಿದರು. ನಂತರ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರು ಸಂಘದ ಸದಸ್ಯರಿಗೆ ಕಳುಹಿಸಿದ ಸಂದೇಶವನ್ನು ಅವರು ಓದಿದರು.ರಾಜ್ಯ ಅಡ್ವೊಕೇಟ್ ಜನರಲ್ ಬಿ.ವಿ.ಆಚಾರ್ಯ ಮಾತನಾಡಿ, `ಭಯೋತ್ಪಾದಕರ ದೃಷ್ಟಿ ಇದೀಗ ಹೈಕೋರ್ಟ್‌ಗಳ ಮೇಲೆ ಬಿದ್ದಿದ್ದು, ಸಹಜವಾಗಿ ರಾಜ್ಯದ ಹೈಕೋರ್ಟ್ ಆವರಣದಲ್ಲೂ ಬಿಗಿಭದ್ರತೆ ಹೆಚ್ಚಿಸಲಾಗಿದೆ. ಈ ಭದ್ರತೆ ವಕೀಲರು ಮತ್ತು ಕಕ್ಷಿದಾರರಿಗಾಗಿ ಮಾಡಲಾಗಿದೆ.ಆದ್ದರಿಂದ ತಪಾಸಣೆ ಸಂದರ್ಭದಲ್ಲಿ ಭದ್ರತಾ ಸಿಬ್ಬಂದಿಯೊಂದಿಗೆ ಸಹಕರಿಸಬೇಕು. ಈ ಬಗ್ಗೆ ಮೇಲ್ವಿಚಾರಣೆ ನಡೆಸಲು ಹೈಕೋರ್ಟ್ ನ್ಯಾಯಮೂರ್ತಿಗಳು, ವಕೀಲರು, ಸರ್ಕಾರ ಮತ್ತು ಪೊಲೀಸ್ ಇಲಾಖೆಯ ಪ್ರತಿನಿಧಿಗಳನ್ನು ಒಳಗೊಂಡ ಸಮಿತಿಯೊಂದನ್ನು ನೇಮಕ ಮಾಡಬೇಕು~ ಎಂದರು.ಇದಕ್ಕೂ ಮುನ್ನ ಸಂಘದ ಅಧ್ಯಕ್ಷ ಅಧ್ಯಕ್ಷ ಕೆ.ಎನ್.ಪುಟ್ಟೇಗೌಡ, `ವೃತ್ತಿನಿರತ ಯುವ ವಕೀಲರಿಗೆ ಸರ್ಕಾರ ನೀಡುತ್ತಿರುವ ಎರಡು ಸಾವಿರ ರೂಪಾಯಿ ಸಹಾಯಧನ ಕಳೆದ ಒಂಬತ್ತು ತಿಂಗಳಿಂದ ಬಂದಿರಲಿಲ್ಲ. ಈಗಷ್ಟೇ ರೂ 2 ಕೋಟಿ ರೂಪಾಯಿ ಬಿಡುಗಡೆಯಾಗಿದೆ. ಆಯಾ ವಕೀಲರ ಬ್ಯಾಂಕ್ ಖಾತೆಗಳಿಗೆ ಸಂದಾಯವಾಗಿದೆ. ಆದರೆ ಈ ಹಣ ಪ್ರತಿ ತಿಂಗಳು ದೊರಕುವಂತಾಗಬೇಕು~ ಎಂದು ಮನವಿ ಮಾಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.