ಶನಿವಾರ, ಮೇ 8, 2021
24 °C

ಪಂಚಮಿತ್ರ ಜನರ ಮಿತ್ರನಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಂಚಮಿತ್ರ ಜನರ ಮಿತ್ರನಲ್ಲ

ಗ್ರಾಮ ಪಂಚಾಯಿತಿಗಳಲ್ಲಿ ಈ ತನಕ ಆಯ್ಕೆಯಾಗಿರುವ ಅಧ್ಯಕ್ಷರು ಮತ್ತು ಸದಸ್ಯರ ವಿವರಗಳು ಎಲ್ಲಿವೆ ಎಂಬುದು ಯಾರಿಗೂ ಗೊತ್ತಿಲ್ಲ. ಜಿಲ್ಲಾ ಪಂಚಾಯಿತಿಗೆ ಹೋದರೆ ಅಲ್ಲಿ ತಾಲ್ಲೂಕು ಪಂಚಾಯಿತಿಯತ್ತ ಕೈತೋರುತ್ತಿದ್ದರು. ತಾಲ್ಲೂಕು ಪಂಚಾಯಿತಿಯಲ್ಲಿ ಚುನಾವಣಾ ಆಯೋಗದದತ್ತ ಬೆರಳು ತೋರು­ತ್ತಿದ್ದರು. ಚುನಾವಣಾ ಆಯೋಗದವರು ಜಿಲ್ಲಾ ಪಂಚಾಯಿತಿ­ಯಲ್ಲೇ ಇರುತ್ತದೆ ಎನ್ನುತ್ತಿದ್ದರು.ಕೊನೆಗೆ ಅನು­ದಾನವು ಹೇಗೆ ನೇರವಾಗಿ ಗ್ರಾಮಪಂಚಾಯಿತಿಗಳಿಗೆ ಹೋಗುತ್ತ­ದೆಯೋ ಹಾಗೆಯೇ ಆಯಾಯಾ ಗ್ರಾಮಪಂಚಾಯಿತಿಗಳಿಗೆ ಸಂಬಂಧಿಸಿದ ಮಾಹಿತಿಗಳು ಅಲ್ಲಲ್ಲೇ ಇರುತ್ತವೆ ಎಂದು ಅಧಿಕಾರಿಗಳು ಜಾರಿಕೊಳ್ಳುತ್ತಿದ್ದರು. ಇದರಿಂದ ಎಲ್ಲೋ ಒಂದು ಕಡೆ ಕೂತ ವ್ಯಕ್ತಿಗೆ ಎಲ್ಲಾ ಗ್ರಾಮಪಂಚಾಯಿತಿಗಳ ಸಮಗ್ರ ವಿವರಗಳು ದೊರೆಯುತ್ತಿರಲಿಲ್ಲ.ಗ್ರಾಮ ಪಂಚಾಯಿತಿಗೆ ಸಂಬಂಧಿಸಿದ ಎಲ್ಲಾ ವಿವರಗಳನ್ನು ಒದಗಿಸುವ ‘ಪಂಚಮಿತ್ರ’ ಎನ್ನುವ ಸರ್ಕಾರದ ವೆಬ್‌ಸೈಟ್ ಆರಂಭವಾದ ನಂತರ ಈ ಸಮಸ್ಯೆ ಇರ­ಲಾರದು ಎಂಬುದು ಎಲ್ಲರ ಭಾವನೆ. ಮಾತ್ರವಲ್ಲ ಪ್ರಪಂಚದ ಎಲ್ಲಿದ್ದರೂ ಕರ್ನಾ­ಟಕದ ಎಲ್ಲಾ ಗ್ರಾಮ ಪಂಚಾಯಿತಿಗಳ ವಿವರಗಳನ್ನು ತಿಳಿಯಬಹುದು ಎಂಬ ನಂಬಿ­ಕೆಯೂ ಇತ್ತು. ಒಮ್ಮೆ ‘ಪಂಚಮಿತ್ರ’ವೆಬ್‌ಸೈಟ್ ತೆರೆದು ನೋಡಿದರೆ ಈ ಭ್ರಮೆಗ­ಳೆಲ್ಲಾ ಕಳಚುತ್ತವೆ. ಇದರ ಬಹಳಷ್ಟು ವಿಭಾಗಗಳು ಮಾಹಿತಿ ಇಲ್ಲದೇ ಬಣಗುಡುತ್ತಿವೆ.ಮುಖ್ಯವಾಗಿ ಈ ವೆಬ್‌ತಾಣದಲ್ಲಿ ಎಲ್ಲೇ ಹುಡುಕಿದರೂ ಆರ್ಕೈವ್‌ಗಳಿಲ್ಲ ಇದು ಇದರ ಬಹು ದೊಡ್ಡ ಕೊರತೆ. ಹಿಂದಿನ ಸಾಲಿನ ಅಧ್ಯಕ್ಷರು ಯಾರಾಗಿದ್ದರು ಎಂಬ ಬಗ್ಗೆ ಮಾಹಿತಿ ಇಲ್ಲಿ ದಕ್ಕುವುದೇ ಇಲ್ಲ. ಸದ್ಯಕ್ಕೆ, ಗ್ರಾಮಪಂಚಾಯಿತಿಗಳ ಕೆಲಸಕಾರ್ಯ­ಗಳು, ಅವರ ಜವಾಬ್ಧಾರಿಗಳು, ಫಲಾನುಭವಿಗಳ ಪಟ್ಟಿ, ಟೆಂಡರುಗಳ ವಿವರ ಎಲ್ಲವೂ ಈ ವೆಬ್‌ತಾಣದಲ್ಲಿ ಲಭ್ಯ. ಆದರೆ, ಹಿಂದಿನ ಸಾಲಿಗೆ ಸಂಬಂಧಿಸಿದಂತೆ ಮಾಹಿತಿಯ ಕೊರತೆ ಇಲ್ಲಿ ಎದ್ದುಕಾಣುತ್ತದೆ.ಇನ್ನು ಕೆಲವು ಸದಸ್ಯರ ಭಾವಚಿತ್ರ ಇದ್ದರೆ ಮತ್ತೆ ಕೆಲವು ಸದಸ್ಯರ ಭಾವಚಿತ್ರಗಳಿಲ್ಲ. ಕೆಲವು ಸದಸ್ಯರ ಮೊಬೈಲ್ ಸಂಖ್ಯೆಗಳಿದ್ದರೆ ಮತ್ತೆ ಕೆಲವು ಸದಸ್ಯರ ಮೊಬೈಲ್ ಸಂಖ್ಯೆಗಳೇ ಇಲ್ಲ. ಬಹುತೇಕ ಗ್ರಾಮಪಂಚಾಯಿತಿಗಳ ಮಾಸಿಕ ಹಾಗೂ ವಾರ್ಷಿಕ ವರದಿಗಳು ಇನ್ನೂ ಈ ವೆಬ್‌ತಾಣದಲ್ಲಿ ಲಭ್ಯವಿಲ್ಲ. ಆದರೆ, ಅದರ ಲಿಂಕ್‌ಗಳು ಮಾತ್ರ ಕಾಣುತ್ತವೆ ಅಷ್ಟೆ. ಹೀಗೆ, ಇಲ್ಲೂ ಕೂಡ ಕೆಲವು ತೊಡಕುಗಳು ಮಾಹಿತಿ ಜಾಲಾಡುವವರಿಗೆ ಎದುರಾಗುತ್ತವೆ. ಕೆಲವೆಡೆ ಅರೆಬರೆ ಮಾಹಿತಿಗಳಷ್ಟೇ ಸಿಗುತ್ತವೆ.ಸಿಎಂ ಕ್ಷೇತ್ರದಲ್ಲೇ ಮಾಹಿತಿ ಇಲ್ಲ: ಬೇರೆ ಯಾವುದೋ ಗ್ರಾಮ­ಪಂಚಾಯಿತಿ ಬೇಡವೇ ಬೇಡ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿನಿಧಿಸುವ ವರುಣಾ ಕ್ಷೇತ್ರದ ವರುಣಾ ಗ್ರಾಮಪಂಚಾಯಿತಿ ಕುರಿತು ಪಂಚಮಿತ್ರ ವೆಬ್‌ತಾಣದಲ್ಲಿ ಇಣುಕಿದಾಗ ತೀರಾ ನಿರಾಸೆಯಾಗುತ್ತದೆ. ಅಭಿವೃದ್ದಿ ಕಾಮಗಾರಿಗಳ ವಿವರಗಳು ಇಲ್ಲಿ ಇಲ್ಲ. ವರುಣಾ ಗ್ರಾಮಪಂಚಾಯಿತಿ ಜನರ ಆರೋಗ್ಯಕ್ಕೆ ಸಂಬಂಧಿಸಿದ ಮಾಹಿ­ತಿಯೂ ಇಲ್ಲ. ‘ಈ ಆಯ್ಕೆಗೆ ಸಂಬಂಧಿಸಿದ ಮಾಹಿತಿ ಸದ್ಯಕ್ಕೆ ಲಭ್ಯ­ವಿಲ್ಲ’ ಎಂಬ ಬರಹ ಕೇವಲ ಆರೋಗ್ಯವನ್ನು ಮಾತ್ರವಲ್ಲ ಶಿಕ್ಷಣ, ಸಮಾಜಕಲ್ಯಾಣ, ವ್ಯವಸಾಯ, ವಸತಿಯೋಜನೆ ... ಹೀಗೆ ಬಹಳಷ್ಟು ಕ್ಷೇತ್ರ ಮಾಹಿತಿಗಳು ಇಲ್ಲಿ ಇಲ್ಲವೇ ಇಲ್ಲ.ಮಾಸಿಕ ವರದಿ, ವಾರ್ಷಿಕ ವರದಿಗಳು ಕೇವಲ ಲಿಂಕ್‌ಗಳಾಗಿ ಮಾತ್ರ ಉಳಿದಿವೆಯೇ ಹೊರತು, ಇವುಗಳಿಂದ ಯಾವುದೇ ಮಾಹಿತಿ ಹೊರಬರುವುದಿಲ್ಲ. ಸಿಎಂ ಪ್ರತಿನಿಧಿಸುವ ಕ್ಷೇತ್ರದ ಗ್ರಾಮ­ಪಂಚಾಯಿತಿಯ ಕಥೆ ಹೀಗಾದರೆ, ಇನ್ನು ಉಳಿದ ಗ್ರಾಮಪಂಚಾಯಿ­ತಿಯ ವಿವರಗಳನ್ನು ವೆಬ್‌ತಾಣದಲ್ಲಿ ಹುಡುಕು­ವುದು ಬೇಡ ಎಂದೇ ಹೇಳಬೇಕಾಗುತ್ತದೆ.ಕಾರಣಗಳೇನು?: ಅಚ್ಚುಕಟ್ಟಾದ ವೆಬ್‌ತಾಣವನ್ನು ರೂಪಿಸಲಾಗಿದ್ದರೂ ಅದು ಬಣಗುಡುವುದಕ್ಕೆ ಕಾರಣವಾದರೂ ಏನು  ಎಂಬ ಅಂಶಕ್ಕಾಗಿ ತಡಕಾಡಿದರೆ ಪ್ರಧಾನವಾಗಿ ಕಾಣುವುದು ಇಚ್ಛಾಶಕ್ತಿಯ ಕೊರತೆ. ಗ್ರಾಮಪಂಚಾಯಿತಿಯಲ್ಲಿ ಸಾಮಾನ್ಯವಾಗಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮಾಹಿತಿಯನ್ನು ಅಪ್‌ಲೋಡ್ ಮಾಡುವ ಕೆಲಸವನ್ನು ಕಂಪ್ಯೂಟರ್ ಆಪರೇಟರ್ ಮೇಲೆ ಹಾಕುತ್ತಾರೆ. ಇವರಿಗೆ ಕಂಪ್ಯೂಟರ್ ಆಪರೇಟಿಂಗ್ ಕೆಲಸ ದಕ್ಕುವುದೇ ಅಬ್ಬಬ್ಬಾ ಎಂದರೆ ದಿನದಲ್ಲಿ ಅರ್ಧ ದಿನ ಮಾತ್ರ!ಕೆಲವೊಮ್ಮೆ ಇಡೀ ದಿನ ಅವರು ಫ್ರೀ ಆಗೇ ಕಾಲಕಳೆಯ­ಬೇಕಾಗುತ್ತದೆ. ಕಾರಣ ಪವರ್ ಕಟ್. ಹೌದು. ಹಳ್ಳಿಗಳಲ್ಲಿ ಕೇವಲ ಬೇಸಿಗೆಯಲ್ಲಿ ಮಾತ್ರವಲ್ಲ ಮಳೆಗಾಲದಲ್ಲೂ ದಿನದ ಅರ್ಧದಿನ ವಿದ್ಯುತ್ ಇರುವುದೇ ಇಲ್ಲ. ಇದಕ್ಕಾಗೆ ಕೆಲವು ಗ್ರಾಮಪಂಚಾಯಿ­ತಿಗಳಿಗೆ ನೀಡಲಾಗಿರುವ ಬ್ಯಾಟರಿಗಳು ಸೂಕ್ತ ನಿರ್ವಹಣೆ ಇಲ್ಲದೇ ಕೆಟ್ಟು ಮೂಲೆ ಸೇರಿವೆ. ಹಾಗಾಗಿ, ಕಂಪ್ಯೂಟರ್ ಆಪರೇಟರ್‌ಗಳಿಗೆ ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುವ ಅವಕಾಶ ವಿದ್ಯುತ್ ಕಣ್ಣಾಮುಚ್ಚಾಲೆ ನಡುವೆ ಕೇವಲ ಕೆಲವೇ ಗಂಟೆಗಳು ಮಾತ್ರ–ಇವರು ಈ ಅವಧಿಯಲ್ಲಿ ಕಚೇರಿಯಲ್ಲಿದ್ದರೆ!ಈ ಕಂಪ್ಯೂಟರ್ ಬಳಸಿಯೇ ಕಚೇರಿಗೆ ಸಂಬಂಧಿಸಿದ ಪತ್ರ ವ್ಯವ­ಹಾರಗಳನ್ನೂ ನಡೆಸಬೇಕು. ಅದನ್ನು ಪ್ರಿಂಟ್ ತೆಗೆಯುವ ಕಾರ್ಯ­ಗಳನ್ನು ನಡೆಸುತ್ತಾರೆ. ಆದರೆ, ಮಾಹಿತಿ ಅಪ್‌ಲೋಡ್ ಕೆಲಸಕ್ಕೆ ಯಾವುದೇ ತುರ್ತು ಇಲ್ಲದೇ ಇರುವುದರಿಂದ ಇದರತ್ತ ಗಮನ ನೀಡುವುದಿಲ್ಲ. ಎಷ್ಟೋ ಗ್ರಾಮಪಂಚಾಯಿತಿಗಳಲ್ಲಿ ವೆಬ್‌ತಾಣಕ್ಕೆ ಅಪ್‌ಲೋಡ್ ಮಾಡುವ ತಾಂತ್ರಿಕ ಕೌಶಲ ಆಪರೇಟರ್‌ಗಳಿಗೆ ತಿಳಿದಿರುವುದಿಲ್ಲ. ಹೀಗಾಗಿ, ಅಪ್‌ಲೋಡ್ ಮಾಡುವ ಕೆಲಸಕ್ಕೆ ಪ್ರಾಥಮಿಕ ಹಂತದಲ್ಲೇ ಸಮಸ್ಯೆ ಇದೆ.ಇನ್ನು, ಇದನ್ನೆಲ್ಲಾ ಪರಿಶೀ­ಲಿಸುವ ಹೊಣೆ ಹೊತ್ತಿರುವ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಇದರತ್ತ ಗಮನವೀಯುವುದೇ ಇಲ್ಲ. ಎಷ್ಟೋ ಗ್ರಾಮಪಂಚಾ­ಯಿತಿಗಳ ಪಿಡಿಒಗಳು ಸ್ವತಃ ಅವರದೇ ಪಂಚಾಯಿತಿಯ ವಿವರ­ಗಳನ್ನು ಹುಡುಕುವುದಕ್ಕೆ ವೆಬ್‌ತಾಣದ ಬದಲಿಗೆ ಕಾಗದ ಪತ್ರಗಳನ್ನು ಅಥವಾ ಗಣಕದಲ್ಲಿನ ಫೈಲ್‌ ಅನ್ನೇ ವೀಕ್ಷಿಸುತ್ತಾರೆ !‘ಪಂಚಮಿತ್ರ’ ವೆಬ್‌ಸೈಟ್‌ನಲ್ಲಿರುವ ಮಾಹಿತಿಯ ಕುರಿತಂತೆ ಯಾವ ಹಿರಿಯ ಅಧಿಕಾರಿಯೂ ಯಾವತ್ತೂ ಪ್ರಶ್ನಿಸದೇ ಇರು­ವುದು ಮತ್ತೊಂದು ಸಮಸ್ಯೆ. ಕರ್ನಾಟಕ ಕಂದಾಯ ಇಲಾಖೆ ಭೂದಾಖಲೆಗಳನ್ನು ಕಂಪ್ಯೂಟರೀಕರಿಸಿದ ಸಂದರ್ಭದಲ್ಲಿ ಅದನ್ನು ತಾಲೂಕು ಮಟ್ಟದಿಂದ ರಾಜ್ಯ ಮಟ್ಟದ ತನಕ ವಿವಿಧ ಹಂತಗಳಲ್ಲಿ ಪರಿಶೀಲಿಸುವ ವ್ಯವಸ್ಥೆಯೊಂದನ್ನು ರೂಪಿಸಲಾಗಿತ್ತು. ಆದರೆ ‘ಪಂಚಮಿತ್ರ’ಕ್ಕೆ ಇಂಥ ಸೌಭಾಗ್ಯ ಇನ್ನೂ ದೊರೆತಿಲ್ಲ.ಎಷ್ಟರ ಮಟ್ಟಿಗೆಂದರೆ ಹೆಚ್ಚಿನ ತಾಲ್ಲೂಕು ಪಂಚಾಯಿತಿ ಕಾರ್ಯ­ನಿರ್ವಾ­ಹಕ ಅಧಿಕಾರಿಗಳು ಇದರ ಮೂಲಕ ಮಾಹಿತಿ ಪಡೆಯುವುದಿಲ್ಲ. ಜಿಲ್ಲಾಪಂಚಾಯಿತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೂ ಈ ಕುರಿತಂತೆ ಒಂದು ಬಗೆಯ ಅವಜ್ಞೆಯನ್ನೇ ಬೆಳೆಸಿಕೊಂಡಿದ್ದಾರೆ. ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಗಳಿಗೆ ಆಸಕ್ತಿ ಇದ್ದರಷ್ಟೇ ಇದರಲ್ಲಿ ಮಾಹಿತಿ ತುಂಬಿಕೊಳ್ಳುತ್ತದೆ. ಪಂಚಮಿತ್ರ ವೆಬ್‌ಸೈಟ್ ನೋಡುವುದಕ್ಕೆ ಮಾತ್ರ ಮನಮೋಹಕ­ವಾಗಿದೆ. ಆದರೆ, ಇದರಲ್ಲಿಯೂ ಅನೇಕ ತಪ್ಪುಗಳು ನುಸುಳಿವೆ.ಉದಾಹರಣಗೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿಗೆ ‘ತೀಥಅಹಳ್ಳಿ’ ಎಂದಿದೆ. ತಾಲ್ಲೂಕಿಗೆ ತಾಲೂಕಾ ಎಂದಿದೆ. ಭದ್ರಾವತಿಯ ಮಹಾಪ್ರಾಣವನ್ನೇ ಕಿತ್ತುಕೊಂಡು ‘ಬದ್ರಾವತಿ’ ಯನ್ನಾಗಿ ಪರಿವರ್ತಿಸಲಾಗಿದೆ. ತರಿಕೆರೆ ತಾರಿಕೇರಿ ಆಗಿದ್ದರೆ, ಮೂಡಿಗೆರೆ ಮೂಡಿಗೇರಿ ಆಗಿದೆ. ಹೀಗೆ ತಪ್ಪುಗಳನ್ನು ಹುಡುಕುತ್ತಾ ಹೋದರೆ ಇನ್ನಷ್ಟು ಮತ್ತಷ್ಟು ಸಿಗುತ್ತಲೇ ಇರುತ್ತವೆ.ಸರ್ಕಾರ ಮತ್ತು ಕಂಪ್ಯೂಟರೀಕೃತ ಆಡಳಿತದ ನಡುವಣ ಸಂಬಂಧ ವಿಚಿತ್ರವಾದುದು. ಅನೇಕ ಸಂದರ್ಭಗಳಲ್ಲಿ ಇದು ಆಡಳಿತ­ದಲ್ಲಿ ದಕ್ಷತೆಯನ್ನು ತರುವುದಕ್ಕೆ ಹೊರತಾದ ಉದ್ದೇಶಗಳಿಗೆ ಕಂಪ್ಯೂಟರೀಕರಣ ನಡೆದಿರುತ್ತದೆ. ನಿರ್ದಿಷ್ಟ ಕಂಪೆನಿಯ ಉತ್ಪನ್ನ­ಗಳನ್ನು ಖರೀದಿಸುವುದಕ್ಕೆ ಅಥವಾ ನಿರ್ದಿಷ್ಟ ಸೇವಾದಾತರಿಂದ ಸೇವೆ ಪಡೆಯುವುದಕ್ಕೆ ಇಲ್ಲವಾದರೆ ಕಂಪ್ಯೂಟರೀಕರಣದ ಪ್ರಕ್ರಿಯೆಯಲ್ಲಿ ನಾವು ಹಿಂದಿಲ್ಲ ಎಂದು ತೋರಿಸಿಕೊಳ್ಳುವು­ದಕ್ಕಾಗಿಯೂ ಕಂಪ್ಯೂಟರೀಕರಣ ಆರಂಭವಾಗಿಬಿಟ್ಟಿರುತ್ತದೆ.ಪಾರದರ್ಶಕತೆಯ ಸಮಸ್ಯೆ: ಪಂಚಾಯತ್ ರಾಜ್ ಸಂಸ್ಥೆಗಳ ಚಟುವಟಿಕೆಯಲ್ಲಿ ಪಾರದರ್ಶಕತೆಯನ್ನು ಕಾಯ್ದುಕೊಳ್ಳುವು­ದರಲ್ಲಿ ಜನರಿಗೆ ಮಾಹಿತಿಯನ್ನು ಒದಗಿಸುವ  ‘ಪಂಚಮಿತ್ರ’ ಮತ್ತು ಅಧಿಕಾರಿಗಳು ಬಳಸಬೇಕಾದ ‘ಪಂಚತಂತ್ರ’ತಂತ್ರಾಂಶಗಳು ಮೇಲ್ನೋ­­ಟಕ್ಕೆ ಪರಿಣಾಮಕಾರಿಯಾಗಿಯೇ ಕಾಣಿಸುತ್ತವೆ. ಪಂಚಾ­ಯಿತಿ ಮಟ್ಟದ ಅಧಿಕಾರಿಗಳು ಎಲ್ಲವನ್ನೂ ಇದೇ ತಂತ್ರಾಂಶ ಬಳಸಿ ಕೆಲಸ ಮಾಡಿದರೆ ಕೆಲಸದ ಶಿಸ್ತು ಮತ್ತು ಪಾರ­ದರ್ಶ­ಕತೆಗಳೆರಡನ್ನೂ ಒಟ್ಟೊಟ್ಟಿಗೇ ಸಾಧಿಸಬಹುದು. ಆದರೆ ಇದು ಯಾರಿಗೂ ಬೇಕಾಗಿಲ್ಲ. ಪಂಚಾಯಿತಿಗಳು ಹಣಕಾಸಿಗೆ ಸಂಬಂಧಿ­ಸಿದ ಅನೇಕ ವಿವರಗಳನ್ನು ‘ಪಂಚತಂತ್ರ’ವನ್ನು ಬಳಸಿಯೇ ಮಾಡ­ಬೇಕು. ಆದರೆ ಈ ಮಾಹಿತಿಗಳು ಜನರಿಗೆ ಲಭ್ಯವಾಗಬೇಕಾದರೆ ಅದೊಂದು ನಿರ್ದಿಷ್ಟ ಹಂತವನ್ನು ತಲುಪಬೇಕು.ಉದಾಹರಣೆಗೆ ಆಯಾ ತಿಂಗಳ ಹಣಕಾಸಿನ ವಿವರಗಳು ಸಾರ್ವಜನಿಕರಿಗೆ ಲಭ್ಯ­ವಾಗ­ಬೇಕಾದರೆ ಪಂಚಾಯಿತಿಗಳ ತಿಂಗಳ ಬ್ಯಾಂಕ್ ರಿಕನ್ಸೀಲಿ­ಯೇಷನ್ ಸ್ಟೇಟ್‌ಮೆಂಟ್ ಸಿದ್ಧಪಡಿಸಬೇಕು. ಒಮ್ಮೆ ಇದು ಸಿದ್ಧ­ವಾಯಿತೆಂದರೆ ಆ ತಿಂಗಳ ಲೆಕ್ಕಾಚಾರಗಳು ಮುಗಿದಂತೆ. ಅದರಲ್ಲಿ ಮತ್ತೆ ಯಾವುದೇ ರೀತಿಯ ತಿದ್ದುಪಡಿ ಸಾಧ್ಯವಿಲ್ಲ.ಹೀಗೆ ಲೆಕ್ಕಾಚಾರವನ್ನು ಮುಗಿಸುವುದು ಯಾವ ಕಾರ್ಯ­ನಿರ್ವಾಹಕ ಅಧಿಕಾರಿಗಳಿಗೂ ಇಷ್ಟವಿಲ್ಲ. ಹಾಗೆಯೇ ಕೆಲ ಸಂದರ್ಭ­ಗಳಲ್ಲಿ ಪಂಚಾಯಿತಿ ಸದಸ್ಯರಿಗೂ ಇಷ್ಟವಾಗುವುದಿಲ್ಲ ಎಂಬುದು ಅನೇಕ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಅಳಲು. ಹೀಗಾಗಿ ಎಲ್ಲವನ್ನೂ ವರ್ಷದ ಕೊನೆಯಲ್ಲಿ ತುಂಬಿಸುವ ಕೆಲಸ ನಡೆಯು­ತ್ತದೆ. ಅನೇಕ ಅನುದಾನಗಳು ಪಂಚಾಯಿತಿ ತಲುಪುವ ಹೊತ್ತಿಗೂ ತಿಂಗಳುಗಳು ಉರುಳುವುದರಿಂದ ಆ ಲೆಕ್ಕಾಚಾರವನ್ನು ಸರಿಪಡಿಸಿ­ಕೊಳ್ಳುವುದಕ್ಕೆ ಇದೆಲ್ಲಾ ಅಗತ್ಯ ಎಂಬ ಭಾವ ಗ್ರಾಮ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಮಟ್ಟದ ಅಧಿಕಾರಿಗಳಲ್ಲಿದೆ.ರಾಜ್ಯದ ಬಹುತೇಕ ಪಂಚಾಯಿತಿಗಳಲ್ಲಿ ಡೇಟಾ ಎಂಟ್ರಿ ಆಪ­ರೇಟರ್ ಕೆಲಸ ಮಾಡುವುದಕ್ಕಾಗಿ ನೇಮಕಗೊಂಡಿರುವ ಎಲ್ಲರೂ ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುವವರು. ಮೊದಲಿಗೆ ಇವರನ್ನು ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ವಿವರಗಳನ್ನು ಕಂಪ್ಯೂಟರಿಗೆ ಊಡಿಸುವುದಕ್ಕಾಗಿ ನೇಮಿಸಲಾಗಿತ್ತು. ಈಗ ಅವರಿಗೇ ಇಡೀ ಗ್ರಾಮ ಪಂಚಾಯಿತಿಯ ವ್ಯವಹಾರಗಳನ್ನು ಕಂಪ್ಯೂಟರಿಗೆ ಊಡಿಸುವ ಕೆಲಸವನ್ನೂ ಒಪ್ಪಿಸಲಾಗಿದೆ.ಇವರಿಗೆ ದೊರೆಯುವ ಸಂಬಳ ಐದು ಸಾವಿರ ರೂಪಾಯಿಗಳಿಗಿಂತ ಕಡಿಮೆ ಇದೆ. ಈ ಕೆಲಸವನ್ನು ಗುತ್ತಿಗೆಗೆ ಪಡೆದಿರುವ ಸಂಸ್ಥೆಗಳು ಸರ್ಕಾರದಿಂದ ಪಡೆಯುವ ಹಣ ಇನ್ನೂ ಹೆಚ್ಚಿದ್ದರೂ ಅದು ಇವರ ಬಳಿಗೆ ಬರುವ ಹೊತ್ತಿಗೆ ಮೂರು ಸಾವಿರದ ಆಸುಪಾಸಿಗೆ ಸೀಮಿತಗೊಳ್ಳುತ್ತದೆ. ಇನ್ನು ಈ ಕುರಿತು ಪಿಡಿಒಗಳನ್ನು ಕೇಳಿದರೆ ಅವರು ಎಲ್ಲದ್ದಕ್ಕೂ ವಿದ್ಯುತ್ ಅಭಾವ ಹಾಗೂ ಇಂಟರ್‌ನೆಟ್ ಮಂದಗತಿಯ ಮೇಲಾ­ಕುತ್ತಾರೆ.ವಿದ್ಯುತ್ ಸರಿಯಾಗಿ ಇರುವುದೇ ಇಲ್ಲ. ಇದ್ದಾಗ ಇಂಟರ್‌ನೆಟ್ ಕೈಕೊಡುತ್ತದೆ. ಇಲ್ಲವೇ ನಿಧಾನಗತಿಯಾಗುತ್ತದೆ. ಹಾಗಾಗಿ, ಅಪ್‌ಲೋಡ್ ಮಾಡಲು ಆಗುವುದಿಲ್ಲ ಎಂದು ಜಾರಿಕೊಳ್ಳುತ್ತಾರೆ. ಇಂಟರ್‌ನೆಟ್ ನಿಧಾನಗತಿ ಕೆಲವೊಮ್ಮೆ ನಿಜವಿರಬಹುದು. ಗ್ರಾಮಾಂತರ ಪ್ರದೇಶಗಳಲ್ಲಿ ರಸ್ತೆ ಅಗೆದು ಇಂಟರ್‌ನೆಟ್ ಕೇಬಲ್‌ಗೆ ಧಕ್ಕೆಯಾದಾಗ ಎರಡು ಮೂರು ದಿನವಾದರೂ ಅದು ಸರಿಯಾಗದೇ ಇರಬಹುದು. ಆದರೆ, ಪಿಡಿಒಗಳು ಕೊಂಚವಾದರೂ ಇದರ ಕುರಿತು ಆಸ್ಥೆ ವಹಿಸಿದರೆ ಸರಿಹೋದ ಮೇಲಾದರೂ ಮಾಹಿತಿಗಳನ್ನು ತುಂಬಬಹುದು. ಅದರಲ್ಲೂ ಮಾಸಿಕ ವರದಿಗೆ ತಿಂಗಳೊಂದಕ್ಕೆ ಹತ್ತು ನಿಮಿಷವಾದರೆ ಸಾಕು.ವಾರ್ಷಿಕ ವರದಿಗೆ ವರ್ಷವೊಂದಕ್ಕೆ ಹತ್ತು ನಿಮಿಷವಾದರೆ ಸಾಕು. ವಿದ್ಯುತ್ ಹಾಗೂ ಇಂಟರ್‌ನೆಟ್ ಸಂಪರ್ಕದ ಸಮಸ್ಯೆ ಆಂಶಿಕವಾಗಿದ್ದರೂ ಮುಖ್ಯವಾಗಿ ಕಂಡು ಬರುವುದು ಇಚ್ಛಾಶಕ್ತಿಯ ಕೊರತೆ. ಇದರ ಜತೆಗೆ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡು­ತ್ತಿರುವ ಈ ಉದ್ಯೋಗಿಗಳ ಮೇಲೆ ಗ್ರಾಮ ಪಂಚಾಯಿತಿಗಳಿಗೆ ದೊಡ್ಡ ನಿಯಂತ್ರಣವೂ ಇರುವುದಿಲ್ಲ. ತಮ್ಮ ಉದ್ಯೋಗ ಎಂದೆಂದಿಗೂ ಕಾಯಂ ಆಗುವುದಿಲ್ಲ ಎಂದು ತಿಳಿದ ಮೇಲೆ ಇವರು ಕೆಲಸ ಮಾಡುವ ಉತ್ಸಾಹವನ್ನೇ ಕಳೆದುಕೊಂಡಿದ್ದಾರೆ ಎಂದು ಹೆಸರು ಬಹಿರಂಗ ಪಡಿಸಲು ಇಚ್ಛಿಸದ ಪಂಚಾಯತ್ ಅಭಿವೃದ್ಧಿ ಅಧಿಕಾರಿಯೊಬ್ಬರು ಹೇಳುತ್ತಾರೆ.

ಅಪಾಯಕಾರಿ ತಾಣ!

ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿಗಳ ಮಟ್ಟದಲ್ಲಿ ಲೆಕ್ಕಪತ್ರಗಳನ್ನು ಇಡುವುದಕ್ಕಾಗಿಯೇ https://accountingonline.gov.in/ (PRIA Soft) ಎಂಬ ಜಾಲ ತಾಣವಿದೆ. ಇದು ರಾಷ್ಟ್ರಮಟ್ಟದಲ್ಲಿ ಕಾರ್ಯನಿರ್ವಹಿ­ಸುತ್ತದೆ. ಇದಕ್ಕಾಗಿ ಪಂಚಾಯಿತಿಯ ವಿವಿಧ ಮಟ್ಟದ ಅಧಿಕಾರಿಗಳಿಗೆ ತರಬೇತಿಗಳನ್ನೂ ನೀಡಲಾಗಿದೆ.ಕರ್ನಾಟಕದಲ್ಲಿ ಇದು ಬಳಕೆಯಾಗುತ್ತಿರುವುದಕ್ಕೆ ಯಾವುದೇ ಸಾಕ್ಷ್ಯಗಳು ದೊರೆಯುವುದಿಲ್ಲ. 2014ರ ಫೆಬ್ರವರಿಯಲ್ಲಿ ಪಂಚಾಯತ್ ರಾಜ್ ಇಲಾಖೆ ನೀಡಿರುವ ಮಾಹಿತಿಯಂತೆ ಈ ತಂತ್ರಾಂಶವನ್ನು ಕರ್ನಾಟಕದಲ್ಲಿ ಅಳವಡಿಸುವುದಕ್ಕೆ ಅಗತ್ಯವಿದೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇದನ್ನು ಈಗಿರುವ ‘ಪಂಚಮಿತ್ರ’ ಮತ್ತು ‘ಪಂಚತಂತ್ರ’ದೊಂದಿಗೆ ಜೋಡಿಸುವುದಕ್ಕೆ ಸಂಬಂಧಿಸಿದ ಕೆಲಸಗಳು ನಡೆಯುತ್ತಿವೆಯಂತೆ.

ಈಗಾಗಲೇ ಹಲವಾರು ರಾಜ್ಯಗಳು ‘ಪ್ರಿಯ ಸಾಫ್ಟ್’ಬಳಸುತ್ತಿವೆ. ಅವುಗಳ ಹಣಕಾಸು ವಿವರಗಳು ಜಾಲತಾಣದಲ್ಲಿ ಲಭ್ಯವೂ ಇವೆ.  ಈ ವೆಬ್‌ಸೈಟನ್ನು ತೆರೆಯುವುದಕ್ಕೇ ಜನರು ಭಯಬೀಳುವಂತಹ ಸ್ಥಿತಿ ಇದೆ. ಯಾವುದೇ ಬ್ರೌಸರ್‌ನಲ್ಲಿ ಇದನ್ನು ತೆರೆದರೂ ಇದೊಂದು ಅಪಾಯಕಾರಿ ವೆಬ್‌ಸೈಟ್ ಎಂಬ ಸಂದೇಶ ಬರುತ್ತದೆ. ಅಂದರೆ ವೆಬ್‌ಸೈಟ್‌ನ ವಿಶ್ವಾಸಾರ್ಹತೆಯನ್ನು ಖಾತರಿ ಪಡಿಸುವ ಪ್ರಮಾಣ ಪತ್ರದಲ್ಲಿಯೇ ಯಾವುದೋ ಸಮಸ್ಯೆ ಇದೆ. ನ್ಯಾಷನಲ್ ಇನ್ಫಾರ್ಮೆಟಿಕ್ಸ್ ಸೆಂಟರ್ ಇತ್ತೀಚೆಗಷ್ಟೇ ಈ ಬಗೆಯ ಪ್ರಮಾಣ ಪತ್ರಗಳ ವಿಷಯದಲ್ಲಿ ಮಾಡಿಕೊಂಡ ಅನಾಹುತದ ಪರಿಣಾಮ ಇದು ಎನಿಸುತ್ತದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.