ಬುಧವಾರ, ಮೇ 18, 2022
21 °C

ಪಕ್ಷೇತರರ ಅನರ್ಹತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಐವರು ಪಕ್ಷೇತರ ಶಾಸಕರನ್ನು ಅನರ್ಹಗೊಳಿಸಿದ ವಿಧಾನಸಭಾಧ್ಯಕ್ಷರ ತೀರ್ಪನ್ನು ರಾಜ್ಯದ ಹೈಕೋರ್ಟ್ ಎತ್ತಿ ಹಿಡಿಯುವ ಮೂಲಕ ಈ ಸಂಬಂಧದಲ್ಲಿ ಆಡಳಿತಾರೂಢ ಪಕ್ಷಕ್ಕೆ ಎದುರಾಗಬಹುದಾಗಿದ್ದ ಸಂಖ್ಯಾಬಲದ ಸಮಸ್ಯೆ ನಿವಾರಣೆಯಾಗಿದೆ. ಪಕ್ಷೇತರರಾಗಿ ಆಯ್ಕೆಯಾಗಿದ್ದ ಕಾರಣಕ್ಕೆ ತಮಗೆ ಪಕ್ಷಾಂತರ ನಿಷೇಧ ಕಾಯ್ದೆಯನ್ನು ಅನ್ವಯಿಸಲು ಆಗದು ಎಂಬ ಪಕ್ಷೇತರ ಸದಸ್ಯರ ವಾದವನ್ನು ಹೈಕೋರ್ಟ್ ಪುರಸ್ಕರಿಸಿಲ್ಲ.ಆಡಳಿತ ಪಕ್ಷಕ್ಕೆ ತಾಂತ್ರಿಕವಾಗಿ ಸೇರಿಕೊಳ್ಳದಿದ್ದರೂ ಆಡಳಿತ ಪಕ್ಷದ ಸದಸ್ಯರಂತೆ ಅಧಿಕಾರವನ್ನು ಅನುಭವಿಸಿ ಸರ್ಕಾರಕ್ಕೆ ಬಿಕ್ಕಟ್ಟು ಸೃಷ್ಟಿಸಿದ ಕಾರಣಕ್ಕೆ ಸದಸ್ಯತ್ವವನ್ನೇ ಕಳೆದುಕೊಳ್ಳಬೇಕಾಗಿ ಬಂದುದಕ್ಕೆ ಪಕ್ಷೇತರ ಸದಸ್ಯರು ಈಗ ಯಾರನ್ನೂ ಹೊಣೆ ಮಾಡಲಾಗದು. ಪಕ್ಷೇತರರಾಗಿ ಆಯ್ಕೆಯಾದ ಮಾತ್ರಕ್ಕೆ ರಾಜಕೀಯ ಪಕ್ಷಗಳು ಅನುಸರಿಸಬೇಕಿರುವ ಶಿಸ್ತನ್ನು ನಿರ್ಲಕ್ಷಿಸಿದರ ಪರಿಣಾಮ ಇದು. ಪ್ರಜಾಸತ್ತೆಯ ವ್ಯವಸ್ಥೆಯಲ್ಲಿ ಜನಪ್ರತಿನಿಧಿಗಳ ನಿಷ್ಠೆ ಏಕರೂಪದಲ್ಲಿರಬೇಕು ಎಂಬುದಕ್ಕೂ ಈ ಪ್ರಕರಣ ನಿದರ್ಶನವಾಗಿದೆ. ಯಾವುದೇ ಪಕ್ಷಕ್ಕೆ ಸೇರದಿದ್ದರೂ ಒಪ್ಪಿಕೊಂಡ ನಾಯಕತ್ವದ ವಿರುದ್ಧ ದನಿ ಎತ್ತುವುದು ಎಷ್ಟು ದುಬಾರಿ ಎಂಬ ಪಾಠವನ್ನು ಪಕ್ಷೇತರ ಸದಸ್ಯರು ಕಲಿತಂತಾಗಿದೆ. ರಾಜಕೀಯ ಬಿಕ್ಕಟ್ಟಿನ ಸಂದರ್ಭದಲ್ಲಿ ಸರ್ಕಾರವನ್ನು ಉಳಿಸಿಕೊಳ್ಳುವುದಕ್ಕೆ ಅಸ್ತಿತ್ವದಲ್ಲಿರುವ ಕಾಯ್ದೆಯನ್ನು ಹೇಗೆ ಬಳಸಿಕೊಳ್ಳಬಹುದೆಂಬುದಕ್ಕೂ ಈ ಪ್ರಕರಣ ಸಾಕ್ಷಿಯಾಗಿದೆ.ಪಕ್ಷೇತರರಾಗಿ ಆಯ್ಕೆಯಾದವರು ಯಾವುದೇ ಪಕ್ಷವನ್ನು ಸೇರಿದರೂ ತಕ್ಷಣವೇ ಅವರ ಸದಸ್ಯತ್ವ ರದ್ದಾಗುವ ಸಾಧ್ಯತೆ ಕಾಯ್ದೆಯಲ್ಲಿದ್ದರೂ ಈ ಪಕ್ಷೇತರರು ಬಿಜೆಪಿ ಸದಸ್ಯತ್ವ ಪಡೆದವರಂತೆ ಕಾಯ್ದೆಯನ್ನು ಅನ್ವಯಿಸಿ ತೀರ್ಮಾನ ಕೈಗೊಂಡಂತೆ ತೋರುತ್ತದೆ. ಈ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವ ನಿರ್ಧಾರವನ್ನು ಅನರ್ಹಗೊಂಡ ಪಕ್ಷೇತರ ಶಾಸಕರು ಈಗಾಗಲೇ ಪ್ರಕಟಿಸಿದ್ದಾರೆ. ಏನೇ ಇದ್ದರೂ ಪಕ್ಷಾಂತರ ನಿಷೇಧ ಕಾಯ್ದೆಯಲ್ಲಿಯೇ ಹೆಚ್ಚಿನ ಸಂದಿಗ್ಧತೆಗೆ ಆಸ್ಪದ ಇರುವಂತೆ ತೋರುತ್ತದೆ. ಅದನ್ನು ತಿದ್ದುಪಡಿ ಮಾಡುವ ಅಗತ್ಯವಿದೆ.ಸದಸ್ಯರನ್ನು ಅನರ್ಹಗೊಳಿಸುವ ಅಧಿಕಾರ ಸಭಾಧ್ಯಕ್ಷರಿಗೆ ನೀಡಿರುವುದರಿಂದ ಆ ಅಧಿಕಾರ ಸರಿಯಾಗಿ ಬಳಕೆಯಾದ ನಿದರ್ಶನಗಳು ಕಡಿಮೆ. ಮೂಲತಃ ರಾಜಕೀಯ ಪಕ್ಷಕ್ಕೆ ಸೇರಿದ ಸಭಾಧ್ಯಕ್ಷರು ತಮ್ಮ ಪೂರ್ವಾಶ್ರಮದ ನೆರಳಿನಿಂದ ತಪ್ಪಿಸಿಕೊಂಡು ವರ್ತಿಸುತ್ತಾರೆ ಎಂಬುದು ನಿಶ್ಚಿತವಿಲ್ಲ. ಜನಪ್ರತಿನಿಧಿಗಳನ್ನು ಅನರ್ಹಗೊಳಿಸುವ ಅಧಿಕಾರವನ್ನು ಸಭಾಧ್ಯಕ್ಷರ ಬದಲಿಗೆ ರಾಜ್ಯಪಾಲರಿಗೆ ಇಲ್ಲವೇ ಚುನಾವಣಾ ಆಯೋಗಕ್ಕೆ ವಹಿಸಬೇಕು ಎಂಬ ಸಲಹೆಗಳೂ ಬಂದಿವೆ. ರಾಜ್ಯಪಾಲರು ಕೂಡ ರಾಜಕೀಯ ಪಕ್ಷಗಳ ಹಿತಾಸಕ್ತಿ ಕಾಯ್ದುಕೊಳ್ಳುವವರಂತೆ ವರ್ತಿಸುವುದರಿಂದ ಈ ನಿಟ್ಟಿನಲ್ಲಿ ನಿಷ್ಪಕ್ಷಪಾತ ತೀರ್ಮಾನ ಅನುಮಾನಾಸ್ಪದ.ಆದ್ದರಿಂದ ಪಕ್ಷಾಂತರದ ಪ್ರಕರಣಗಳನ್ನು ಚುನಾವಣಾ ಆಯೋಗವೇ ವಿಚಾರಣೆ ನಡೆಸುವಂತೆ ಕಾಯ್ದೆಗೆ ತಿದ್ದುಪಡಿ ತರುವುದು ಸೂಕ್ತ. ಪಕ್ಷಾಂತರ ಎಂಬುದು ಪ್ರಜಾಸತ್ತೆಯಲ್ಲಿ ಪಿಡುಗು. ಅದನ್ನು ತಡೆಯುವುದಕ್ಕೆ ತಂದ ಪಕ್ಷಾಂತರ ನಿಷೇಧ ಕಾಯ್ದೆಯನ್ನೂ ಅಪಹಾಸ್ಯ ಮಾಡುವಂತೆ ‘ಆಪರೇಷನ್ ಕಮಲ’ದಂತಹ ದುಷ್ಕೃತ್ಯಗಳು ಅಧಿಕಾರ ಹಿಡಿಯುವ ಕಸರತ್ತಿನಲ್ಲಿ ನಡೆಯುತ್ತಿರುತ್ತವೆ. ಇಂಥ ಅನೈತಿಕ ರಾಜಕೀಯ ವಿಧ್ವಂಸಕ ಕೃತ್ಯಗಳನ್ನು ತಡೆಯುವುದಕ್ಕೆ ಬಲಿಷ್ಠವಾದ ಕಾಯ್ದೆಯನ್ನು ರೂಪಿಸಬೇಕಾದ ಅಗತ್ಯವನ್ನು ಕೇಂದ್ರ ಸರ್ಕಾರ ಮನಗಾಣಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.