ಮಂಗಳವಾರ, ಜನವರಿ 21, 2020
28 °C

ಪಟ್ಟಾಭಿಷೇಕದ ಸ್ಮರಣೆ; ಮರುಕಳಿಸಿದ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚನ್ನಮ್ಮನ ಕಿತ್ತೂರು: ಸ್ಥಳೀಯ ರಾಜ­ಗುರು ಸಂಸ್ಥಾನ ಕಲ್ಮಠದ ಪಟ್ಟಾಧಿ­ಕಾರಿಯಾಗಿ ನಾಲ್ಕು ಸಂವತ್ಸರಗಳನ್ನು ಯಶಸ್ವಿಯಾಗಿ ಪೂರೈಸಿದ ‘ಕಾಯಕ ಯೋಗಿ’ ಮಡಿವಾಳ ರಾಜ­ಯೋಗೀಂದ್ರ ಸ್ವಾಮೀಜಿ ಅವರನ್ನು ಬುಧವಾರ ನಡೆದ ವರ್ಣರಂಜಿತ ಕಾರ್ಯಕ್ರಮದಲ್ಲಿ ಸದ್ಭಕ್ತ ವೃಂದ­ದವರು ಸತ್ಕರಿಸಿ ಸಂತಸಪಟ್ಟರು.ಕಲ್ಮಠದ ಸಭಾಭವನದಲ್ಲಿ ನಡೆದ ಆತ್ಮೀಯ ಸಮಾರಂಭದಲ್ಲಿ ನಾಲ್ಕು ವರ್ಷಗಳ ಹಿಂದಿನ ಪಟ್ಟಾಧಿಕಾರ ಮಹೋತ್ಸ­ವದ ಗತವೈಭವವನ್ನು ಕಾರ್ಯಕ್ರಮದಲ್ಲಿ ಮೆಲುಕು ಹಾಕಿದ ಹರ­–­ಗುರು–ಚರಮೂರ್ತಿಗಳು, ಸ್ವಾಮೀಜಿ ಮಾಡುತ್ತಿರುವ ರಚನಾತ್ಮಕ ಹಾಗೂ ಸಮಾಜಮುಖಿ ಕಾರ್ಯ­ಗಳನ್ನು ಕೊಂಡಾಡಿದರು.ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ರಾಯನಾಳದ ಮಹಾಂತ ಸ್ವಾಮೀಜಿ, ‘ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಅವರು ಬರೀ ಮಾತನಾಡು­ವವರಲ್ಲ. ಕಾರ್ಯ ಮಾಡಿ ತೋರಿಸುವ ಸ್ವಾಮೀಜಿ ಅವರಾಗಿದ್ದಾರೆ’ ಎಂದು ಬಣ್ಣಿಸಿದರು. ‘ಗುರುವಾಗಿ, ತಂದೆ–ತಾಯಿಯಾಗಿ ಸಮಾಜವನ್ನು ವಾತ್ಸಲ್ಯದಿಂದ ಅಪ್ಪಿ­ಕೊಳ್ಳುವ ಗುಣಗಳು ಸ್ವಾಮೀಜಿ­ಯಲ್ಲಿರಬೇಕು. ಅಂದಾಗ ಮಾತ್ರ ಸಮಾಜವೂ ಅವರನ್ನು ಅಪ್ಪಿಕೊಳ್ಳು­ತ್ತದೆ.

ಇಂಥ ಮನೆಯ ಮಕ್ಕಳನ್ನು ಅಪ್ಪಿಕೊಳ್ಳುವ ಕಕ್ಕುಲತೆ ತೋರುತ್ತಿ­ರುವ ಮಡಿವಾಳ ಸ್ವಾಮೀಜಿ ಅವರ ಭಕ್ತರು ತಮ್ಮ ಆನಂದಕ್ಕಾಗಿ ಈ ಕಾರ್ಯಕ್ರಮ ಆಯೋಜಿಸಿದ್ದು ಶ್ಲಾಘನೀ­ಯ­­ವಾದದ್ದು’ ಎಂದು ಅವರು ಅಭಿಪ್ರಾಯಪಟ್ಟರು. ಕಿತ್ತೂರು ನಾಡ ವಿದ್ಯಾವರ್ಧಕ ಸಂಘದ ಕಾರ್ಯಾಧ್ಯಕ್ಷ ಜಗದೀಶ ವಸ್ತ್ರದ  ಮಾತನಾಡಿ, ‘ರಾಜಗುರು ಸಂಸ್ಥಾನ ಕಲ್ಮಠಕ್ಕೆ ಆಗಮಿಸಿರುವ ಶ್ರೀಗಳು ನಾಲ್ಕು ವರ್ಷಗಳಲ್ಲಿ ಅಮೋಘ­ವೆನ್ನುವ ರೀತಿಯಲ್ಲಿ ಕಾರ್ಯಗಳನ್ನು ಮಾಡಿದ್ದಾರೆ. ಬಿ.ಇಡಿ, ಐಟಿಐ ತರಬೇತಿ ಕೇಂದ್ರಗಳನ್ನು ತೆರೆಯುವ ಮಹತ್ವಾಕಾಂಕ್ಷೆ ಈ ಶಿಕ್ಷಣ ಸಂಸ್ಥೆಗೆ ಇದ್ದು, ಶ್ರೀಗಳ ಆಶೀರ್ವಾದ­ದಿಂದ ಇವು ಸಹ ನೆರವೇರಲಿವೆ’ ಎಂದರು.ಕನಸಿಗೆ ಕೈಗೂಡಿಸಿ:

‘ಇಲ್ಲಿಯ ಜನರ ಭಕ್ತಿ ಮತ್ತು ಪ್ರೀತಿ ದೊಡ್ಡದು. ರಾಜಕಾರಣಿೆಗಳಂತೆ ಹಾರ, ತುರಾಯಿಗಳಲ್ಲಿ ಅಮೂಲ್ಯ ಸಮಯ ಕಳೆದುಹೋಗಬಾರದು. ಈ ಸನ್ಮಾನಗಳು ಬೇಡವಾಗಿದ್ದವು. ಇವು ಅಹಂಕಾರ ತರುತ್ತವೆ. ಕುಗ್ಗಿಸುವ ಕೆಲಸ ಮಾಡುತ್ತವೆ’ ಎಂದು ಸನ್ಮಾನದಿಂದ ಸಂಕೋಚಪಟ್ಟುಕೊಂಡ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ  ನುಡಿದರು.‘ಕಿತ್ತೂರಿಗೆ ಇತಿಹಾಸ ಮತ್ತು ಪರಂಪರೆ­ಯಿದೆ. ಸ್ಮಾರಕ ಸಂರಕ್ಷಣೆ, ಇತಿಹಾಸ ಸಂಶೋಧನೆ ಕುರಿತು ಪ್ರಕ­ಟಣೆ ಸೇರಿದಂತೆ ಅನೇಕ ಸಮಾಜ­ಮುಖಿ ಕೆಲಸ ಮಾಡುವ ಕನಸು ನನ್ನದಾಗಿದೆ. ಇದಕ್ಕೆ ಎಲ್ಲರೂ ಕೈಜೋಡಿಸಬೇಕು. ಇದೇ ನನಗೆ ಮಾಡುವ ದೊಡ್ಡ ಸತ್ಕಾರವಾಗಿರುತ್ತದೆ’ ಎಂದು ಸ್ವಾಮೀಜಿ ಆಶಿಸಿದರು.ಶೇಗುಣಸಿಯ ಮಹಾಂತ ದೇವರು,  ಆನಂದ ದೇವರು, ತೇರದಾಳದ ಗುರು­ದೇವರು, ಕಿತ್ತೂರು ನಾಡ ವಿದ್ಯಾ­ವರ್ಧಕ ಸಂಘದ ಉಪಾಧ್ಯಕ್ಷ ಚಂದ್ರ­ಶೇಖರ ದಳವಾಯಿ, ರಾಜಗುರು ಸೈನ್ಯದ ಕಾರ್ಯಕರ್ತರು ಕಾರ್ಯ­ಕ್ರಮದಲ್ಲಿ ಭಾಗವಹಿಸಿದ್ದರು. ಈಶ್ವರ ಗಡಿಬಿಡಿ ಮತ್ತು ಸರ್ಕಾರಿ ಬಾಲಕಿಯರ ಪ್ರೌಢಶಾಲೆ ವಿದ್ಯಾರ್ಥಿ­ನಿಯರು ಪ್ರಾರ್ಥನೆ ಗೀತೆ ಹಾಡಿದರು.

ಮಹಾಬಳೇಶ್ವರ ಸಾಬಣ್ಣವರ ತಬಲಾ ಸಾಥ್‌ ನೀಡಿದರು. ಕಿನಾವಿವ ಸಂಘದ ಗೌರವ ಕಾರ್ಯದರ್ಶಿ ಆರ್‌. ವೈ. ಪರವಣ್ಣವರ ಸ್ವಾಗತಿಸಿದರು.  ಭೈರನಟ್ಟಿಯ ಶಿವಯೋಗಿ ದೇವರು ವಂದಿಸಿದರು. ಪ್ರಾರಂಭದಲ್ಲಿ ಅಗಲಿದ ಮೈಸೂರು ದೊರೆ ಶ್ರೀಕಂಠದತ್ತ ಒಡೆಯರ್‌ ನಿಧನಕ್ಕೆ ನಿಮಿಷದ ಮೌನ ಆಚರಿಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಪ್ರತಿಕ್ರಿಯಿಸಿ (+)