ಶುಕ್ರವಾರ, ಮೇ 14, 2021
21 °C

ಪಡಿತರ ಅಂಗಡಿಗೆ ಶೀಘ್ರ ಎಲೆಕ್ಟ್ರಾನಿಕ್ ಯಂತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಸನ: `ಎಲ್ಲ ಪಡಿತರ ಅಂಗಡಿಗಳಲ್ಲಿ ಒಂದು ತಿಂಗಳೊಳಗೆ ಕಡ್ಡಾಯವಾಗಿ ಎಲೆಕ್ಟ್ರಾನಿಕ್ ಯಂತ್ರ ಅಳವಡಿಸಬೇಕು~ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಡಿ. ಚಂದ್ರೇಗೌಡ ಸೂಚನೆ ನೀಡಿದರು.ಮಂಗಳವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಕರ್ನಾಟಕ ಆಹಾರ ಮತ್ತು ನಾಗರಿಕ ಸಬರಾಜು ಇಲಾಖೆ ಪ್ರಗತಿ ಪರಿಶೀಲನೆ ಮಾಡುತ್ತ ಈ ಸೂಚನೆ ನೀಡಿದರು.`ಖಾಸಗಿ ವ್ಯಾಪಾರಿಗಳಿಗೂ ಎಲೆಕ್ಟ್ರಾನಿಕ್ ತ್ರಾಸನ್ನು ಕಡ್ಡಾಯಗೊಳಿಸಿರುವಾಗ ಸರ್ಕಾರಿ ಇಲಾಖೆಯೇ ಹಳೆಯ ಕಾಲದ ತ್ರಾಸು ಬಳಸುವುದು ಎಷ್ಟು ಸರಿ ? ಎಂದು ಪ್ರಶ್ನಿಸಿದ ಚಂದ್ರೇಗೌಡ ತಿಂಗಳೊಳಗೆ ಎಲೆಕ್ಟ್ರಾನಿಕ್ ತ್ರಾಸು ಅಳವಡಿಸಿ ಆ ಬಗ್ಗೆ ವರದಿ ನೀಡಬೇಕು. ಮುಂದಿನ ಸಭೆಯೊಳಗೆ ಶೇ 100 ಪ್ರಗತಿ ಆಗಿರಬೇಕು ಎಂದು ಸೂಚಿಸಿದರು.ಎಲೆಕ್ಟ್ರಾನಿಕ್  ತ್ರಾಸೊಂದಕ್ಕೆ 40ಸಾವಿರ ರೂಪಾಯಿ ಬೆಲೆ ಇರುವುದರಿಂದ ಅಂಗಡಿಯವರಿಗೆ ಸ್ವಲ್ಪ ಕಾಲಾವಕಾಶ ನೀಡಬೇಕು ಎಂದು ಇಲಾಖೆ ಉಪನಿರ್ದೇಶಕ ಶಿವಣ್ಣ ಮನವಿ ಮಾಡಿಕೊಂಡಿದ್ದು ಅಧ್ಯಕ್ಷ ಹಾಗೂ ಸಭೆಯಲ್ಲಿ ಹಾಜರಿದ್ದ ಸದಸ್ಯ ಸತ್ಯನಾರಾಯಣ ಅವರಲ್ಲಿ ಅಚ್ಚರಿ ಉಂಟುಮಾಡಿತು. `ಎಷ್ಟು ತ್ರಾಸು ಬೇಕು ಎಂದು ಹೇಳಿ ತಲಾ ನಾಲ್ಕೂವರೆಯಿಂದ ಐದು ಸಾವಿರ ರೂಪಾಯಿಯಂತೆ ಸರಬರಾಜು ಮಾಡುತ್ತೇವೆ~ ಎಂದರು. ಇದಕ್ಕೆ ಸ್ಪಷ್ಟನೆ ನೀಡಿದ ಅಧಿಕಾರಿ ನಾವು ಒಂದು ಟನ್ ತೂಗಬಲ್ಲಂಥ ತ್ರಾಸನ್ನು ತರಿಸಲು ಸೂಚಿಸಿದ್ದೇವೆ~ ಎಂದರು. ಪಡಿತರ ಅಂಗಡಿಗಳಲ್ಲಿ ಗರಿಷ್ಠ ಎಂದರೆ 25 ಕಿಲೋ ತೂಕ ಮಾಡುತ್ತಾರೆ. ಅದಕ್ಕೆ ಸಣ್ಣ ತ್ರಾಸು ಸಾಕಾಗುತ್ತದೆ. ಕೂಡಲೇ ತರಿಸಿ ಎಂದು ಸೂಚನೆ ನೀಡಿದರು.ವರ್ಷದಲ್ಲಿ ಒಂದೆರಡು ತಿಂಗಳಲ್ಲಿ ಗ್ರಾಮೀಣ ಪ್ರದೇಶದ ಫಲಾನುಭವಿಗಳಿಗೆ ಸಕ್ಕರೆ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸುತ್ತ, ನಗರದವರಿಗೆ ಸಕ್ಕರೆ ಕೊಡುತ್ತೀರಿ, ಗ್ರಾಮೀಣ ಜನರಿಗೇಕೆ ಕೊಡುತ್ತಿಲ್ಲ ಎಂದು ಪ್ರಶ್ನಿಸಿದರು. ಫ್ಯಾಕ್ಟರಿಗಳಿಂದ ಸಕ್ಕರೆ ಎತ್ತುವಳಿಯಲ್ಲಿ ಕೆಲವೊಮ್ಮೆ ತೊಂದರೆಯಾಗಿ ಹೀಗಾಗುತ್ತದೆ ಎಂದು ಅಧಿಕಾರಿ ತಿಳಿಸಿದರು. ಸಾಕಷ್ಟು ಮುಂಚಿತವಾಗಿ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು. ನ್ಯಾಯಬೆಲೆ ಅಂಗಡಿಗಳ ಮುಂದೆ ಫಲಾನುಭವಿಗಳಿಗೆ ನೀಡುವ ವಸ್ತು, ಅದರ ಬೆಲೆ ಹಾಗೂ ಇತರ ಮಾಹಿತಿಗಳನ್ನುಳ್ಳ ಫಲಕ ಹಾಕಬೇಕು. ಅನೇಕ ತಾಲ್ಲೂಕುಗಳಿಗೆ ಫುಡ್ ಇನ್‌ಸ್ಪೆಕ್ಟರ್‌ಗಳು ಭೇಟಿ ನೀಡುತ್ತಿಲ್ಲ. ಅಂಥವರ ವಿರುದ್ಧ ಕ್ರಮ ಕೈಗೊಳ್ಳಿ ಎಂದೂ ಅವರು ಸೂಚಿಸಿದರು.ಅರ್ಹರಿಗೆ ಸಾಲ ನೀಡಿ


ಸಹಕಾರ ಇಲಾಖೆ ಪ್ರಸಕ್ತ ಸಾಲಿನಲ್ಲಿ ಬೆಳೆ ಸಾಲ ನೀಡುವಲ್ಲಿ ಕೇವಲ ಶೇ 59ರಷ್ಟು ಸಾಧನೆ ಮಾಡಿದೆ. ಇದು ಸರಿಯಲ್ಲ. ರೈತರಿಗೆ ಸಕಾಲದಲ್ಲಿ ಸಾಲ ಸಿಕ್ಕರೆ ಮಾತ್ರ ಹಣಸದ್ಬಳಕೆಯಾಗುತ್ತದೆ. ಡಿಸಿಸಿ ಬ್ಯಾಂಕ್  ಮೊದಲು ಈ ದಿಕ್ಕಿನಲ್ಲಿ ಚಿಂತನೆ ಮಾಡಬೇಕು ಎಂದು ಅಧ್ಯಕ್ಷರು ಸೂಚಿಸಿದರು.ಬೆಳೆ ಸಾಲದಲ್ಲಿ ಕನಿಷ್ಠ ಶೇ 70ರಷ್ಟಾದರೂ ಸಾಧನೆ ಆಗಬೇಕಿತ್ತು. ಆ ನಿಟ್ಟಿನಲ್ಲಿ ಇಲಾಖೆ ಹಿಂದುಳಿದಿದೆ. ಹೊಸ ಸ್ತ್ರೀಶಕ್ತಿ ಸಂಘಗಳಿಗೂ ನಿಗದಿತ ಪ್ರಮಾಣದಲ್ಲಿ ಸಾಲನೀಡುತ್ತಿಲ್ಲ ಎಂದು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಆಕ್ಷೇಪ ವ್ಯಕ್ತಪಡಿಸಿದರು.ಶೇ.1ರ ಬಡ್ಡಿ ದರದಲ್ಲಿ ಈ ವರೆಗೆ 55.36 ಕೋಟಿ ರೂಪಾಯಿ ಸಾಲ ಹಾಗೂ ಹೊಸ ಸ್ವಸಹಾಯ ಸಂಘಗಳಿಗೆ  8.51 ಕೋಟಿ ರೂಪಾಯಿ ಸಾಲ ನೀಡಿದ್ದೇವೆ ಎಂದು ಅಧಿಕಾರಿ ತಿಳಿಸಿದರು. ಆದರೆ ಸಂಘಗಳು 5 ರಿಂದ 6 ಲಕ್ಷ ಸಾಲ ಕೇಳಿದರೆ ಬ್ಯಾಂಕ್‌ಗಳು ಕೇವಲ 2.5ಲಕ್ಷ ನೀಡುತ್ತವೆ. ಇದರಿಂದ ಸಂಘ ಯಾವುದೇ ಚಟುವಟಿಕೆ ಆರಂಭಿಸಲಾಗುವುದಿಲ್ಲ. ಮೊದಲು ಅಗತ್ಯವಿರುವಷ್ಟು ಸಾಲ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರಲ್ಲದೆ ಈ ಬಗ್ಗೆ ಡಿಸಿಸಿ ಬ್ಯಾಂಕ್‌ಗೆ ಪತ್ರ ಬರೆಯಲು ಸಭೆ ತೀರ್ಮಾನಿಸಿತು. ಭೂ ಅಭಿವೃದ್ಧಿ ಯೋಜನೆ , ಕಾಡಾದವರು ತಮ್ಮ ಯೋಜನೆಗಳ ಬಗ್ಗೆ ಸರಿಯಾಗಿ ಪ್ರಚಾರ ಮಾಡಿ ಜನರಿಗೆ ಮಾಹಿತಿ ನೀಡಿದಿರುವುದಕ್ಕೆ ಅಧ್ಯಕ್ಷರು ಆಕ್ಷೇಪ ವ್ಯಕ್ತಪಡಿಸಿದರು.ಸಮಗ್ರ ಮಾಹಿತಿ ಕೊಡಲು ಸೂಚನೆ

ಪ್ರವಾಸೋದ್ಯಮ ಇಲಾಖೆ ಸಭೆಗೆ ಪೂರ್ಣ ಮಾಹಿತಿ ನೀಡುತ್ತಿಲ್ಲ. ಕಳೆದ ಸಭೆಯಲ್ಲಿ ಕೆಲವು ಮಾಹಿತಿ ಕೇಳಿದ್ದರೂ ಈ ಬಾರಿಯೂ ಅದನ್ನು ನೀಡಿಲ್ಲ ಎಂದು ಚಂದ್ರೇಗೌಡ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ಬೇಲೂರು ಪ್ರವಾಸೀ ಮಂದಿರದ ಕಾಮಗಾರಿ ಯಾವ ಹಂತದಲ್ಲಿದೆ ? ಬೇಲೂರು ಸೇವಸ್ಥಾನದ ಸಮೀಪ 9 ಕೋಟಿ ರೂಪಾಯಿ ಕೊಟ್ಟು ಖರೀದಿಸಿದ್ದ ಜಮೀನಿನ ಮುಂದಿನ ಕ್ರಮವೇನು ? ಮುಂತಾದ ವಿವರಗಳೆಲ್ಲಿ ಎಂದು ಅಧಿಕಾರಿಯನ್ನು ಪ್ರಶ್ನಿಸಿದರು.ಪ್ರವಾಸಿ ಮಂದಿರದ ಕಾಮಗಾರಿ ಶೇ 99 ಪೂರ್ಣಗೊಂಡಿದ್ದು, ಅಕ್ಟೋಬರ್ 15ರಂದು ಉದ್ಘಾಟನೆ ಮಾಡುವ ಯೋಚನೆ ಇದೆ. ಭೂಮಿಗೆ ಸಂಬಂಧಿಸಿದಂತೆ ಕೆಲವು ಸಣ್ಣಪುಟ್ಟ ಅಡಚಣೆಗಳಿದ್ದು ಶೀಘ್ರದಲ್ಲೇ ಅದನ್ನು ಪರಿಹರಿಸಿ ಸಮಗ್ರ ಯೋಜನೆ ರೂಪಿಸಿ ಕಳುಹಿಸುತ್ತೇವೆ~ ಎಂದು ಅಧಿಕಾರಿ ತಿಳಿಸಿದರು.ಚೆಸ್ಕ್ ಜತೆ ಚರ್ಚೆ

ಕುಡಿಯುವ ನೀರಿಗಾಗಿ ಕೊಳವೆ ತೋಡಿಸಿದ್ದ ಕೊಳವೆ ಬಾವಿಗಳಿಗೆ ನಾಲ್ಕು ವರ್ಷ ಕಳೆದರೂ ವಿದ್ಯುತ್ ಸಂಪರ್ಕ ಕಲ್ಪಿಸದಿರುವ ಬಗ್ಗೆ ಚೆಸ್ಕ್  ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳಲಾಯಿತು. ದೇವರಾಜ ಅರಸು ಹಿಂದುಳಿದ ವರ್ಗಗಳ ಮತ್ತು ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮ ಹಾಗೂ ಅಂಬೇಡ್ಕರ್ ಅಭಿವೃದ್ಧಿ ನಿಗಮಗಳು ವಿವಿಧ ಯೋಜನೆಗಳಡಿ ಕೊಳವೆ ಬಾವಿಗಳನ್ನು ಕೊರೆಸಿದ್ದರೂ ಜನರಿಗೆ ಉಪಯೋಗಕ್ಕೆ ಬಾರದಂತಾಗಿದೆ. 2007-08ನೇ ಸಾಲಿನಲ್ಲಿ ಕೊರೆಯಿಸಿದ್ದ ಬಾವಿಗಳಿಗೆ ಇನ್ನೂ ಸಂಪರ್ಕ ನೀಡಿಲ್ಲ. ಒಟ್ಟು ಸುಮಾರು 500ಕ್ಕೂ ಹೆಚ್ಚು ಕೊಳವೆ ಬಾವಿಗಳಿಗೆ ಸಂಪರ್ಕ ನೀಡಬೇಕಾಗಿದೆ. ಮುಂದಿನ ಸಭೆಗೆ ಬರುವ ಮೊದಲು 2007-08ನೇ ಸಾಲಿನಲ್ಲಿ ಕೊರೆಯಿಸಿದ್ದ ಎಲ್ಲ ಬಾವಿಗಳಿಗೆ ಸಂಪರ್ಕ ಕೊಟ್ಟಿರಬೇಕು ಎಂದು ಗಡುವು ನೀಡಿದರು.ವಿವಿಧ ಇಲಾಖೆಗಳು ಶೂನ್ಯ ಅಭಿವೃದ್ಧಿ ದಾಖಲಿಸಿದ್ದು ಆಯಾ ಇಲಾಖೆ ಅಧಿಕಾರಿಗಳ ವಿರುದ್ಧ ಅಧ್ಯಕ್ಷರು ಕಿಡಿಕಾರಿದರು. ಕಾಟಾಚಾರಕ್ಕೆ ಸಭೆಗೆ ಬರುವುದಾದರೆ ಯಾರೂ ಬರುವುದೇ ಬೇಡ. ಸಭೆಯಲ್ಲಿ ನಿರ್ಣಯ ಕೈಗೊಂಡರೆ ಮುಂದಿನ ಸಭೆಯೊಳಗೆ ಆ ಬಗ್ಗೆ ಏನಾದರೂ ಕ್ರಮ ಕೈಗೊಂಡಿರಬೇಕು. ಹಳೆಯ ದಾಖಲೆಗಳನ್ನೇ ಇಟ್ಟುಕೊಂಡು ಕಣ್ಣಿಗೆ ಮಣ್ಣೆರಚುವ ಪ್ರಯತ್ನ ಮಾಡಬೇಡಿ ಎಂದು ಅವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.ಜಿ.ಪಂ. ಉಪಾಧ್ಯಕ್ಷೆ ಪಾರ್ವತಮ್ಮ ನಂಜುಂಡಾಚಾರ್, ಜಿ.ಪಂ. ಸದಸ್ಯ ಎಂ.ಕೆ. ದ್ಯಾವಯ್ಯ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿದ್ದರು.ಆಧುನಿಕ ಯಂತ್ರ ನೀಡಿ


ಸಮಾಜ ಕಲ್ಯಾಣ ಇಲಾಖೆ ವಿವಿಧ ಯೋಜನೆಗಳಡಿ ಫಲಾನುಭವಿಗಳಿಗೆ ಹಳೆಯ ಕಾಲದ ಹೊಲಿಗೆ ಯಂತ್ರಗಳನ್ನೇ ನೀಡುತ್ತಿದ್ದು, ಅದರ ಬದಲು ಫಲಾನುಭವಿಗಳ ಸಂಖ್ಯೆ ಒಂದೆರಡು ಕಡಿಮೆ ಮಾಡಿಯಾದರೂ ಅತ್ಯಾಧುನಿಕ `ಫ್ಯಾಶನ್ ಮೇಕರ್~ ಯಂತ್ರಗಳನ್ನೇ ನೀಡಬೇಕು ಎಂದು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅಂಜನ್ ಕುಮಾರ್ ಸೂಚಿಸಿದರು.ಇಲಾಖೆಗೆ ಈಗಾಗಲೇ ಶೇ.50ರಷ್ಟು ಅನುದಾನ ಬಿಡುಗಡೆ ಮಾಡಿದ್ದರೂ ಕೆಲವು ಯೋಜನೆಗಳಲ್ಲಿ ಅಭಿವೃದ್ಧಿ ಶೂನ್ಯವಾಗಿ ರುವುದಕ್ಕೆ ಅಧ್ಯಕ್ಷರು ಆಕ್ಷೇಪ ವ್ಯಕ್ತಪಡಿಸಿದರು.ಬೇಲೂರು ಸೇರಿದಂತೆ ಎಲ್ಲ ಹಾಸ್ಟೆಲ್‌ಗಳಲ್ಲಿ ವಾರ್ಡನ್‌ಗಳು ಮನಸೋ ಇಚ್ಛೆ ವರ್ತಿಸುತ್ತಿದ್ದು ನಿಯಮ ಮೀರುವ ವಾರ್ಡನ್‌ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ, ನಿಮ್ಮಿಂದ ಸಾಧ್ಯವಾಗದಿದ್ದರೆ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗೆ ದೂರು ನೀಡಿ  ಎಂದು ಅಧ್ಯಕ್ಷ ಬಿ.ಡಿ. ಚಂದ್ರೇಗೌಡ ಅಧಿಕಾರಿ ಕಾಂತಯ್ಯ ಅವರಿಗೆ ಸೂಚನೆ ನೀಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.