ಗುರುವಾರ , ಜೂನ್ 24, 2021
21 °C
ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಅಧಿಕಾರಿಗೆ ತಾ.ಪಂ. ಅಧ್ಯಕ್ಷರ ಸೂಚನೆ

ಪಡಿತರ ಚೀಟಿ ವಿತರಣೆಗೆ ವಾರದ ಗಡುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ‘ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಪಡಿತರ ಚೀಟಿ ವಿತರಣೆಯನ್ನು ಮಾರ್ಚ್‌ 10ರ ಒಳಗಾಗಿ ಮುಗಿಸಬೇಕು’ ಎಂದು ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಜಿ.ಎಂ.ರುದ್ರಗೌಡ ಆಹಾರ ಮತ್ತು ನಾಗರಿಕ ಪೂರೈಕೆ ಅಧಿಕಾರಿಗೆ ಸೂಚಿಸಿದರು.

ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಸೋಮವಾರ ನಡೆದ ಮಾಸಿಕ ಕೆಡಿಪಿ ಹಾಗೂ ಸಾಮಾನ್ಯ ಸಭೆಯ ಅಧ್ಯಕ್ಷ ವಹಿಸಿ ಅವರು ಮಾತನಾಡಿದರು.ವಿವಿಧ ಗ್ರಾಮಗಳಿಂದ ಪಡಿತರ ಚೀಟಿ ವಿತರಣೆ ಆಗದಿರುವ ಬಗ್ಗೆ ದೂರುಗಳು ಬಂದಿವೆ. ಕೂಡಲೇ ಕ್ರಮ ಕೈಗೊಳ್ಳಬೇಕು. ಚೀಟಿ ವಿತರಣೆ ವಿಳಂಬಕ್ಕೆ ಕಾರಣ ಏನು ಎಂಬುದನ್ನು ಸ್ಪಷ್ಟಪಡಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಅಧಿಕಾರಿ ನಬಿಸಾಬ್‌ ಪ್ರತಿಕ್ರಿಯಿಸಿ, ತಾಲ್ಲೂಕಿನಲ್ಲಿ ಈಗಾಗಲೇ 3 ಸಾವಿರ ಪಡಿತರ ಚೀಟಿ ವಿತರಣೆ ಮಾಡಲಾಗಿದೆ. ಫೆಬ್ರುವರಿ 28ರ ಒಳಗೆ ವಿತರಣಾ ಕಾರ್ಯ ಮುಗಿಸುವಂತೆ ಸರ್ಕಾರ ಆದೇಶಿಸಿತ್ತು. ಆದರೆ, ತಾಂತ್ರಿಕ ಲೋಪದೋಷದಿಂದ ವಿತರಣೆ ಸ್ಥಗಿತ ಮಾಡಲಾಗಿತ್ತು. ಮತ್ತೆ ವಿತರಣಾ ಕಾರ್ಯ ಆರಂಭಿಸಲಾಗಿದ್ದು, ಚುನಾವಣೆ ನೀತಿಸಂಹಿತೆ ಜಾರಿ ಆಗುವುದರೊಳಗೆ ವಿತರಣೆ ಮಾಡಲಾಗುವುದು ಎಂದು ಸಭೆಗೆ ಮಾಹಿತಿ ನೀಡಿದರು.ಇಒ ಎಲ್‌.ಎಸ್‌.ಪ್ರಭುದೇವ್‌ ಮಾತನಾಡಿ, ನಾಳೆಯಿಂದಲೇ ಸಿದ್ಧಗೊಂಡಿರುವ 4 ಸಾವಿರ ಪಡಿತರ ಚೀಟಿ ವಿತರಣೆಗೆ ಕ್ರಮ ಕೈಗೊಳ್ಳಬೇಕು. ಗ್ರಾಮ ಪಂಚಾಯ್ತಿ ಅಧಿಕಾರಿಗಳಿಗೂ ಈ ಬಗ್ಗೆ ಸೂಚಿಸಲಾಗುವುದು ಎಂದು ಮಾಹಿತಿ ನೀಡಿದ ಅವರು, ಬೇಸಿಗೆ

ಕಾಲ ಬರುತ್ತಿರುವ ಹಿನ್ನೆಲೆಯಲ್ಲಿ ತಾಲ್ಲೂಕಿನ 43 ಅಂಗನವಾಡಿಗಳಲ್ಲಿ ಸಣ್ಣಪುಟ್ಟ ದುರಸ್ತಿ ಕಾರ್ಯ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.ಅರ್ಜಿ ಗೊಂದಲ: ಪಶು ಸಂಗೋಪನಾ ಇಲಾಖೆ ಅಡಿ ನೀಡುವ ‘ಮೇವು ಕತ್ತರಿಸುವ ಯಂತ್ರ’ಕ್ಕೆ ಅರ್ಜಿ ಹಾಕಿದವರಿಗೆ ಮಾಹಿತಿ ನೀಡದೇ ಹರಾಜು ನಡೆಸಲಾಗಿದೆ ಎಂದು ತಾಲ್ಲೂಕು ಪಂಚಾಯ್ತಿ ಸದಸ್ಯ ರೇವಣಸಿದ್ದಪ್ಪ ಆರೋಪಿಸಿದರು.ಅದಕ್ಕೆ ಪಶುಸಂಗೋಪನ ಇಲಾಖೆ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿ, ತಾಲ್ಲೂಕಿಗೆ 21 ಮೋವು ಕತ್ತರಿಸುವ ಯಂತ್ರದ ಬೇಡಿಕೆ ಇತ್ತು. 12 ಮಾತ್ರ ಪೂರೈಕೆ ಆಗಿವೆ. ಜಿಲ್ಲಾಧಿಕಾರಿ ನೇತೃತ್ವದಲ್ಲಿ ಆಯ್ಕೆ ಮಾಡುವಂತೆ ಸರ್ಕಾರ ಸ್ಪಷ್ಟವಾದ ಆದೇಶ ನೀಡಿದೆ. ಅದರಂತೆ ಆಯ್ಕೆ ಕಾರ್ಯ ಮಾಡಲಾಗಿದೆ ಎಂದರು.ಬಳಿಕ ಇಒ ಪ್ರಭುದೇವ್‌ ಪ್ರತಿಕ್ರಿಯಿಸಿ, ಲಾಟರಿ ಆಯ್ಕೆ ದಿನಾಂಕವನ್ನು ಎರಡು ದಿನ ಮೊದಲೇ ತಿಳಿಸಬೇಕು. ಜತೆಗೆ, ಮಾಧ್ಯಮಗಳಿಗೆ ಪ್ರಕಟಣೆ ನೀಡಬೇಕು ಎಂದು ಸೂಚಿಸಿದರು.ಬಗೆಹರಿಯದ ಎಸ್‌ಡಿಎಂಸಿ ಗೊಂದಲ: ದೊಡ್ಡಬಾತಿ ಸಂಯುಕ್ತ ಪ್ರೌಢಶಾಲೆಯ ಎಸ್‌ಡಿಎಂಸಿಯನ್ನು ಮೀಸಲಾತಿಗೆ ಅನುಗುಣವಾಗಿ ರಚಿಸಿಲ್ಲ. ಈ ಬಗ್ಗೆ ಮೂರು ಸಭೆಗಳಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗೆ ಮಾಹಿತಿ ನೀಡಿದ್ದೇನೆ ಎಂದು ರೇವಣಸಿದ್ದಪ್ಪ ಹೇಳಿದರು.

ಅದಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜಪ್ಪ ಪ್ರತಿಕ್ರಿಯಿಸಿ, ಸದ್ಯ ದೊಡ್ಡಬಾತಿ ಶಾಲೆಯಲ್ಲಿ ಎಸ್‌ಡಿಎಂಸಿ ಅಸ್ತಿತ್ವದಲ್ಲಿ ಇಲ್ಲ. ಮೀಸಲಾತಿಯಂತೆ ಎಸ್‌ಡಿಎಂಸಿ ರಚನೆ ಆಗಿಲ್ಲ. ಅದಕ್ಕೆ ಕಾರಣ ಕೇಳಿ ಜನವರಿಯಲ್ಲಿಯೇ ಶಾಲಾ ಮುಖ್ಯಶಿಕ್ಷಕರಿಗೆ ನೋಟಿಸ್‌ ಜಾರಿ ಮಾಡಲಾಗಿತ್ತು. ಅದಕ್ಕೆ ಅವರು ಪದಾಧಿಕಾರಿಗಳ ಪಟ್ಟಿ ಮಾತ್ರ ಕಳುಹಿಸಿದ್ದರು. ಮತ್ತೊಮ್ಮೆ ನೋಟಿಸ್‌ ನೀಡಲಾಗಿದೆ. ಆ ಸಮಿತಿಗೆ ಈಗ ಯಾವುದೇ ಅಧಿಕಾರ ಇಲ್ಲ ಎಂದು ಸ್ಪಷ್ಟಪಡಿಸಿದರು.ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಇದೇ ತಿಂಗಳ 28ರಿಂದ ಪ್ರಾರಂಭಗೊಂಡು, ಏಪ್ರಿಲ್‌ 10ರ ತನಕ ನಡೆಯಲಿವೆ. ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಹರೀಶ್ವರ್‌ ಮಾತನಾಡಿ, ತಾಲ್ಲೂಕಿನಲ್ಲಿ ಇದುವರೆಗೂ ಮಲೇರಿಯಾ ಪ್ರಕರಣ ಪತ್ತೆಯಾಗಿಲ್ಲ. ಪೋಲಿಯೊ ಹನಿ ಹಾಕುವಲ್ಲಿ ಶೇ 100ರಷ್ಟು ಸಾಧನೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.ಕಾಲಹರಣದ ಚರ್ಚೆ; ಸಭೆಯೂ ವಿಳಂಬ

ಲೋಕಸಭೆ ಚುನಾವಣೆ ಘೋಷಣೆ ಆಗುವ ಹಿನ್ನೆಲೆಯಲ್ಲಿ ಸೋಮವಾರ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಮಾಸಿಕ ಕೆಡಿಪಿ ಹಾಗೂ ಸಾಮಾನ್ಯ ಸಭೆಯನ್ನು ಒಟ್ಟಿಗೆ ನಡೆಸಲಾಯಿತು. ಆದರೆ, ಎರಡು ಸಭೆಗಳು ಒಟ್ಟಿಗೆ ನಡೆದರೂ ಯಾವುದೇ ಪ್ರಮುಖ ನಿರ್ಧಾರಗಳು, ಚರ್ಚೆಗಳು ಆಗಲಿಲ್ಲ. ಅಧಿಕಾರಿಗಳು ಅಂಕಿಸಂಖ್ಯೆ ಓದಿದರು. ಎಲ್ಲವೂ ಪ್ರಗತಿಯಲ್ಲಿವೇ... ಗುರಿ ಸಾಧನೆ ಆಗಿದೆ... ಅನುದಾನ ಬಂದಿದೆ... ಹಂಚಿಕೆ ಆಗಿದೆ... ಇದೇ ವಿಷಯಕ್ಕೆ ಮಾತ್ರ ಸಭೆ ಸೀಮಿತವಾಯಿತು.

ಮಾಧ್ಯಮಗಳಿಗೆ ಬೆಳಿಗ್ಗೆ 10ಕ್ಕೆ ಸಭೆ ಆರಂಭ ಎಂದು ತಿಳಿಸಲಾಗಿತ್ತು. 10ಕ್ಕೆ ಮಾಧ್ಯಮ ಪ್ರತಿನಿಧಿಗಳನ್ನು ಬಿಟ್ಟರೆ ಬೇರೆ ಯಾವ ಅಧಿಕಾರಿಗಳೂ ಸಭಾಂಗಣದತ್ತ ಸುಳಿಯಲಿಲ್ಲ. ಅರ್ಧ ಗಂಟೆ ಬಿಟ್ಟು ಕೆಲವು ಅಧಿಕಾರಿಗಳು ಬಂದರು. ಅವರೂ ಸದಸ್ಯರಿಗಾಗಿ ಕಾಯುವ ಸ್ಥಿತಿ ಬಂತು. ಕೊನೆಗೆ 11.45ಕ್ಕೆ ಸಭೆ ಆರಂಭವಾಯಿತು. ಬೇಕೊ ಬೇಡವೊ ಎಂಬಂತೆ ಚರ್ಚೆಗಳು ನಡೆದವು! ಅಂಕಿಸಂಖ್ಯೆ ನೀಡಿ ಅಧಿಕಾರಿಗಳೂ ಮನೆಯತ್ತ ಹೊರಡುತ್ತಿದ್ದ ದೃಶ್ಯವೂ ಕಂಡುಬಂತು. ಮಹಿಳಾ ಸದಸ್ಯರು ಎಂದಿನಂತೆ ಮೌನಕ್ಕೆ ಶರಣಾದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.