ಭಾನುವಾರ, ಮಾರ್ಚ್ 7, 2021
29 °C

ಪತ್ನಿಗೂ ಕ್ಯಾನ್ಸರ್ ಎಂದಿದ್ದ ಅಮೋಘಪ್ಪ!

ಎಂ.ಸಿ.ಮಂಜುನಾಥ್ Updated:

ಅಕ್ಷರ ಗಾತ್ರ : | |

ಪತ್ನಿಗೂ ಕ್ಯಾನ್ಸರ್ ಎಂದಿದ್ದ ಅಮೋಘಪ್ಪ!

ಬೆಂಗಳೂರು: ಎರಡು ವರ್ಷಗಳ ಹಿಂದೆ ಈತನ ದೊಡ್ಡಪ್ಪ ಕ್ಯಾನ್ಸರ್‌ನಿಂದ ಸಾವನ್ನಪ್ಪಿದರು. ಅವರಿಗೆ ಚಿಕಿತ್ಸೆ ಕೊಡಿಸಿದ್ದ ಬಿಲ್‌ಗಳನ್ನೆಲ್ಲ ಹೆಂಡತಿ ಹೆಸರಿಗೆ ಬದಲಾಯಿಸಿದ ಆರೋಪಿ, ಪತ್ನಿಗೇ ಕ್ಯಾನ್ಸರ್‌ ಇದೆ ಎಂಬಂತೆ ಅರ್ಜಿ ಸಲ್ಲಿಸಿ ‘ಸಿಎಂ ಪರಿಹಾರ ನಿಧಿ’ಯಿಂದ ₹ 70 ಸಾವಿರ ಕಬಳಿಸಿದ್ದಾನೆ!ಸಿಎಂ ಪರಿಹಾರ ನಿಧಿಗೆ ಕನ್ನ ಹಾಕುವ ಉದ್ದೇಶದಿಂದ ಬೇರೆ ಬೇರೆ ಹೆಸರಿನಲ್ಲಿ 150ಕ್ಕೂ ಹೆಚ್ಚು ಅರ್ಜಿಗಳನ್ನು ಸಲ್ಲಿಸಿ, ಸಿಐಡಿ ಪೊಲೀಸರಿಗೆ ಸಿಕ್ಕಿ ಬಿದ್ದಿರುವ ಅಮೋಘಪ್ಪ ಅಲಿಯಾಸ್ ತಿಪ್ಪಣ್ಣನ ವಂಚನೆ ಹಾದಿ ಮೊದಲುಗೊಂಡಿದ್ದು ಹೀಗೆ..‘ಜೇವರ್ಗಿ ಮೂಲದ ಅಮೋಘಪ್ಪ, ಓದಿರುವುದು ಎಸ್ಸೆಸ್ಸೆಲ್ಸಿ ಮಾತ್ರ. 2008ರಲ್ಲಿ ನಗರಕ್ಕೆ ಬರುವ ಈತ, ಪೀಣ್ಯದ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಾನೆ. ಬಳಿಕ ಗ್ರಾಮಕ್ಕೆ ಮರಳಿ ಫೈನಾನ್ಸ್ ವ್ಯವಹಾರದ ಮೂಲಕ ಹಲವರಿಗೆ ವಂಚಿಸುತ್ತಾನೆ’ ಎಂದು ಸಿಐಡಿ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.‘ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅಮೋಘಪ್ಪನ ದೊಡ್ಡಪ್ಪ 2014ರಲ್ಲಿ ಪ್ರಾಣ ಕಳೆದುಕೊಳ್ಳುತ್ತಾರೆ. ‘ವೈದ್ಯಕೀಯ ವೆಚ್ಚಗಳಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಆರ್ಥಿಕ ನೆರವು ಸಿಗುತ್ತದೆ’ ಎಂಬುದನ್ನು ಪರಿಚಿತರ ಮೂಲಕ ತಿಳಿದುಕೊಂಡ ಅಮೋಘಪ್ಪ, ದೊಡ್ಡಪ್ಪನಿಗೆ ಚಿಕಿತ್ಸೆ ಕೊಡಿಸಿದ್ದ ಎಲ್ಲ ಬಿಲ್‌ಗಳನ್ನೂ ಸಂಗ್ರಹಿಸಿಕೊಳ್ಳುತ್ತಾನೆ. ಅದರಲ್ಲಿದ್ದ ಹೆಸರು–ದಿನಾಂಕ ಮತ್ತಿತರ ವಿವರಗಳನ್ನು ತಿದ್ದಿ, ಪತ್ನಿಯೇ ಚಿಕಿತ್ಸೆ ಪಡೆಯುತ್ತಿರುವಂತೆ ಪರಿವರ್ತನೆ ಮಾಡುತ್ತಾನೆ.’‘ನಂತರ ಹೆಂಡತಿಯ ಚಿಕಿತ್ಸೆಗೆ ನೆರವು ಬೇಕೆಂದು ಅರ್ಜಿ ಸಿದ್ಧಪಡಿಸುತ್ತಾನೆ. ಅದಕ್ಕೆ ಶಾಸಕರೊಬ್ಬರ ಶಿಫಾರಸು ಪಡೆದು, ಸಿಎಂ ಪರಿಹಾರ ನಿಧಿ ಕಾರ್ಯಾಲಯಕ್ಕೆ ಸಲ್ಲಿಸುತ್ತಾನೆ. ಮೂರು ತಿಂಗಳ ಬಳಿಕ ಆತನ ಪತ್ನಿಯ ಖಾತೆಗೆ ಪರಿಹಾರದ ರೂಪದಲ್ಲಿ ₹70 ಸಾವಿರ ಸಂದಾಯವಾಗುತ್ತದೆ. ಇಷ್ಟು ಸುಲಭವಾಗಿ ಹಣ ಸಿಕ್ಕಿದ್ದರಿಂದ ಅತಿಯಾಸೆಗೆ ಬೀಳುವ ಅಮೋಘಪ್ಪ, ಅದನ್ನೇ ದಂಧೆಯನ್ನಾಗಿ ಮಾಡಿಕೊಳ್ಳುತ್ತಾನೆ.’ಬಿಲ್ ಕದಿಯುತ್ತಾನೆ: ‘ನಕಲಿ ಬಿಲ್‌ಗಳ ಸೃಷ್ಟಿಗಾಗಿ ಕಂಪ್ಯೂಟರ್ ಆಪರೇಟರ್‌ಗಳನ್ನು ಇಟ್ಟುಕೊಳ್ಳುವ ಅಮೋಘಪ್ಪ, ಜಾಲವನ್ನು ದೊಡ್ಡ ಮಟ್ಟದಲ್ಲಿ ವಿಸ್ತರಿಸಿಕೊಳ್ಳುತ್ತಾನೆ. ವಿವಿಧ ಆಸ್ಪತ್ರೆಗಳಿಂದ ಬಿಲ್‌ಗಳನ್ನು ಕದ್ದು, ನಕಲಿ ಫಲಾನುಭವಿಗಳನ್ನು ಸೃಷ್ಟಿ ಮಾಡುತ್ತಾನೆ. ಅದಕ್ಕೆ ಶಾಸಕರು, ಸಚಿವರ ಸಹಿ ಹಾಕಿಸಿ  ಪರಿಹಾರ ಬೇಕೆಂದು ಅರ್ಜಿ ಸಲ್ಲಿಸುತ್ತಾನೆ’ ಎಂದು ಮಾಹಿತಿ ನೀಡಿದರು.ವೈದ್ಯನಾದ ವಂಚಕ: ಸಲ್ಲಿಸಿದ ಅಷ್ಟೂ ಅರ್ಜಿಗಳಿಗೂ ಬೇರೆ ಬೇರೆ ವೈದ್ಯರ ಹೆಸರಿನಲ್ಲಿ ತಾನೇ ಸಹಿ ಮಾಡಿದ್ದ ಅಮೋಘಪ್ಪ, ಅರ್ಜಿದಾರರ ಹೆಬ್ಬೆಟ್ಟನ್ನೂ ಒತ್ತಿದ್ದ. ಅಕ್ರಮ ಬೆಳಕಿಗೆ ಬಂದು ತನಿಖೆ ಕೈಗೆತ್ತಿಕೊಂಡ ಸಿಐಡಿ ತಂಡ, ಅಮೋಘಪ್ಪ ಸೇರಿದಂತೆ ನಾಲ್ಕು ಮಂದಿಯನ್ನು ಬಂಧಿಸಿತು. ನಂತರ ವಿಚಾರಣೆಗೆ ಒಳಪಡಿಸಿದಾಗ ಈ ಎಲ್ಲ ರಹಸ್ಯಗಳನ್ನೂ ಆತ ಬಾಯ್ಬಿಟ್ಟಿದ್ದಾನೆ.ಮತ್ತೆ 50 ಪ್ರಕರಣ ವರ್ಗ: ‘ಈ ವಂಚನೆ ಸಂಬಂಧ ವಿವಿಧ ಠಾಣೆಗಳಲ್ಲಿ ದಾಖಲಾಗಿರುವ 54 ಪ್ರಕರಣಗಳನ್ನು ಸಿಐಡಿಯ ವಿಶೇಷ ತಂಡಗಳು ತನಿಖೆ ನಡೆಸುತ್ತಿವೆ. ಇದೀಗ ಇನ್ನು 50 ಪ್ರಕರಣಗಳು ಸಿಐಡಿಗೆ ವರ್ಗವಾಗಿವೆ. ಅಕ್ರಮದಲ್ಲಿ ಮುಖ್ಯಮಂತ್ರಿ ಸಚಿವಾಲಯದ ಕೆಲ ಸಿಬ್ಬಂದಿಯ ಪಾತ್ರವೂ ಇರುವುದು ಗೊತ್ತಾಗಿದೆ. ಮಂಗಳವಾರ (ಆ.16) ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಕಳುಹಿಸಲಾಗುವುದು’ ಎಂದು ಅಧಿಕಾರಿಗಳು ಹೇಳಿದರು.ಸಿ.ಎಂಗೆ  ಸಿಐಡಿ ಪತ್ರ

‘ಸಿ.ಎಂ ಪರಿಹಾರ ನಿಧಿಯಿಂದ ಮೂರು ವರ್ಷಗಳಲ್ಲಿ 60 ಸಾವಿರ ಫಲಾನುಭವಿಗಳಿಗೆ ಹಣ ಬಿಡುಗಡೆಯಾಗಿದೆ. ಎಲ್ಲರೂ ಅಸಲಿ ಬಿಲ್‌ಗಳನ್ನೇ ಕೊಟ್ಟು ಪರಿಹಾರ ಪಡೆದಿರುವುದಿಲ್ಲ. ಹೀಗಾಗಿ ಇನ್ನಾದರೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು’  ಎಂದು ಅಧಿಕಾರಿಗಳು    ಹೇಳಿದ್ದಾರೆ.

‘ಅರ್ಜಿದಾರರು ವೈದ್ಯಕೀಯ ಬಿಲ್‌ ಸಲ್ಲಿಸಿದಾಗ,  ಅದರಲ್ಲಿರುವ ವೈದ್ಯರ ಮೊಬೈಲ್ ಸಂಖ್ಯೆಗೆ ಸಿಬ್ಬಂದಿ ಒಮ್ಮೆ ಕರೆ ಮಾಡಬೇಕು. ‘ನಿಜವಾಗಿಯೂ ಚಿಕಿತ್ಸೆ ಪಡೆದಿದ್ದಾರೆ’ ಎಂಬುದನ್ನು ಖಚಿತಪಡಿಸಿಕೊಂಡ ನಂತರವಷ್ಟೇ ಪರಿಹಾರ ಬಿಡುಗಡೆ ಪ್ರಕ್ರಿಯೆ ಮುಂದುವರಿಸುವಂತೆ ಕಚೇರಿ ಸಿಬ್ಬಂದಿಗೆ ಸೂಚಿಸಬೇಕು ಎಂದು ಮುಖ್ಯಮಂತ್ರಿ ಅವರಿಗೆ ಪತ್ರ ಬರೆಯಲಾಗುವುದು’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.