ಶನಿವಾರ, ಮೇ 8, 2021
26 °C

ಪತ್ನಿ ಕೊಲೆಗೆ ಯತ್ನ: ದರ್ಶನ್‌ಗೆ ಜಾಮೀನು ನಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪತ್ನಿಯನ್ನು ಕೊಲೆ ಮಾಡಲು ಯತ್ನಿಸಿದ ಆರೋಪದ ಮೇಲೆ ಬಂಧಿತರಾಗಿರುವ ನಟ ದರ್ಶನ್ ತೂಗುದೀಪ ಅವರಿಗೆ ನಗರದ ಸೆಷನ್ಸ್ ನ್ಯಾಯಾಲಯ ಮಂಗಳವಾರ ಜಾಮೀನು ನಿರಾಕರಿಸಿದೆ.ಇದೊಂದು ಕೊಲೆ ಯತ್ನದ ಗಂಭೀರ ಪ್ರಕರಣವಾಗಿದೆ. ಆರೋಪಿ ದರ್ಶನ್ ಅವರು ಸಿಗರೇಟ್‌ನಿಂದ ಪತ್ನಿಗೆ ಸುಡುವ ಮೂಲಕ ಅಮಾನವೀಯತೆ ಪ್ರದರ್ಶಿಸಿದ್ದಾರೆ. ಅಲ್ಲದೆ ಅವರು ಪ್ರಭಾವಿ ವ್ಯಕ್ತಿಯಾಗಿರುವುದರಿಂದ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ. ಪ್ರಕರಣ ತನಿಖೆಯ ಹಂತದಲ್ಲಿರುವ ಕಾರಣ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ನ್ಯಾಯಾಧೀಶ ಆರ್.ಬಿ.ಬೂದಿಹಾಳ್ ಅವರು ಆದೇಶದಲ್ಲಿ ತಿಳಿಸಿದ್ದಾರೆ.`ದರ್ಶನ್, ಪತ್ನಿ ವಿಜಯಲಕ್ಷ್ಮಿ ಅವರಿಗೆ ಚಪ್ಪಲಿಯಿಂದ ಹೊಡೆದು ಸಿಗರೇಟ್‌ನಿಂದ ಸುಟ್ಟಿದ್ದಾರೆ. ಅಲ್ಲದೇ ಮೂರು ವರ್ಷದ ಮಗನನ್ನೂ ಕತ್ತು ಹಿಡಿದು ಮೇಲಕ್ಕೆ ಎತ್ತಿ ಕೊಲೆ ಮಾಡಲೆತ್ನಿಸಿ ಮೃಗೀಯ ವರ್ತನೆ ತೋರಿದ್ದಾರೆ.

 

ತೆರೆಯ ಮೇಲೆ ಆದರ್ಶ ಪ್ರದರ್ಶಿಸುವ ಪಾತ್ರಗಳನ್ನು ಮಾಡುವ ಅವರನ್ನು ಅಭಿಮಾನಿಗಳು ಅನುಕರಿಸುತ್ತಾರೆ. ಅವರು ಪತ್ನಿಯ ಮೇಲೆ ಹಲ್ಲೆ ನಡೆಸಿದ ರೀತಿ ಜನರ ಮೇಲೆ ಪರಿಣಾಮ ಬೀರುತ್ತದೆ. ಪ್ರಭಾವಿ ವ್ಯಕ್ತಿಯಾಗಿರುವ ಆರೋಪಿಯು ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇರುತ್ತದೆ.ಆದ್ದರಿಂದ ಯಾವುದೇ ಕಾರಣಕ್ಕೂ ಜಾಮೀನು ನೀಡಬಾರದು~ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ಶಾಂತಿನಾಥ್ ಚಿಂತಾಮಣಿ ಅಗಸಿಮನಿ ಅವರು ಸೋಮವಾರ ಸುದೀರ್ಘ ವಾದ ಮಂಡಿಸಿದ್ದರು.`ಚಲನಚಿತ್ರಗಳಲ್ಲಿ ಅಬಲೆಯರನ್ನು ರಕ್ಷಿಸಿ ದುಷ್ಟರ ವಿರುದ್ಧ ಹೋರಾಡುವ ನಟ ನಿಜ ಜೀವನದಲ್ಲಿ ಅಂತಹ ಗುಣಗಳನ್ನು ಅಳವಡಿಸಿಕೊಂಡಿಲ್ಲ ಎಂದು ಈ ಪ್ರಕರಣವನ್ನು ಗಮನಿಸಿದರೆ ಗೊತ್ತಾಗುತ್ತದೆ. ಈ ಅಂಶಗಳನ್ನು ಪ್ರಮುಖವಾಗಿಸಿ ನಾನು ವಾದ ಮಂಡಿಸಿದ್ದೆ. ನ್ಯಾಯಾಧೀಶರ ಆದೇಶ ತೃಪ್ತಿ ತಂದಿದೆ~ ಎಂದು ಅಗಸಿಮನಿ `ಪ್ರಜಾವಾಣಿ~ಗೆ ತಿಳಿಸಿದರು.`ಜಾಮೀನು ಕೋರಿ ಹೈಕೋರ್ಟ್‌ಗೆ ಬುಧವಾರ ಮೇಲ್ಮನವಿ ಸಲ್ಲಿಸಲಾಗುತ್ತದೆ. ಇಡೀ ಪ್ರಕರಣವನ್ನು ರದ್ಧು ಮಾಡುವಂತೆಯೂ ಅರ್ಜಿ ಸಲ್ಲಿಸಲಾಗುತ್ತದೆ~ ಎಂದು ದರ್ಶನ್ ಪರ ವಕೀಲ ವೆಂಕಟರೆಡ್ಡಿ ಅವರು ಹೇಳಿದ್ದಾರೆ.ಪತ್ನಿಯನ್ನು ಕಾರಿನಲ್ಲಿ ಕರೆದೊಯ್ದು ಹಲ್ಲೆ ನಡೆಸಿ ಕೊಲೆ ಮಾಡಲು ಯತ್ನಿಸಿದ ಆರೋಪದ ಮೇಲೆ ದರ್ಶನ್ ಅವರನ್ನು ವಿಜಯನಗರ ಪೊಲೀಸರು ಸೆ. 9ರಂದು ಬಂಧಿಸಿದ್ದರು. ದರ್ಶನ್ ಜಾಮೀನು ಕೋರಿ 1ನೇ ಎಸಿಎಂಎಂ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

 

ಆದರೆ ಜಾಮೀನು ನೀಡದಂತೆ ಹಿರಿಯ ಸಹಾಯಕ ಪಬ್ಲಿಕ್ ಪ್ರಾಸಿಕ್ಯೂಟರ್ ಜಿ.ಎಚ್.ಅಮೃತ್‌ಕುಮಾರ್ ಮಂಡಿಸಿದ್ದ ವಾದವನ್ನು ಪುರಸ್ಕರಿಸಿದ್ದ ನ್ಯಾಯಾಧೀಶ ವೆಂಕಟೇಶ್ ಆರ್ ಹುಲಗಿ ಅವರು ಜಾಮೀನು ಅರ್ಜಿ ವಜಾ ಮಾಡಿದ್ದರು. `ಸಮಾಜಕ್ಕೆ ಮಾದರಿ ಆಗಿರಬೇಕಿದ್ದ ದರ್ಶನ್ ಅವರು ಪತ್ನಿ ಮತ್ತು ಮಗುವಿನ ಪಾಲಿಗೆ ಖಳನಾಯಕ ಆಗಿದ್ದಾರೆ~ ಎಂಬ ಅಂಶವನ್ನು ನ್ಯಾಯಾಧೀಶರು ಆದೇಶದಲ್ಲಿ ಉಲ್ಲೇಖಿಸಿದ್ದರು.ಆಸ್ಪತ್ರೆಯಲ್ಲೇ ಹನ್ನೆರಡು ದಿನ


ದರ್ಶನ್ ಅವರ ಆರೋಗ್ಯ ಸುಧಾರಿಸಿದ್ದರೂ ಅವರನ್ನು ಜೈಲಿಗೆ ಕರೆದೊಯ್ಯಲು ಪರಪ್ಪನಅಗ್ರಹಾರ ಕೇಂದ್ರ ಕಾರಾಗೃಹ ಅಧಿಕಾರಿಗಳು ನ್ಯಾಯಾಲಯದ ಅನುಮತಿ ಕೋರಿದ್ದಾರೆ. `ಆಸ್ತಮ ಪೀಡಿತರಾಗಿರುವ ದರ್ಶನ್ ಅವರ ಆರೋಗ್ಯ ಸುಧಾರಿಸಿದೆ. ಅವರನ್ನು ಜೈಲಿಗೆ ಕರೆದೊಯ್ದು ಕಾರಾಗೃಹ ವೈದ್ಯರೇ ಚಿಕಿತ್ಸೆ ಮುಂದುವರಿಸಬಹುದು~ ಎಂದು ರಾಜೀವ್‌ಗಾಂಧಿ ಎದೆ ರೋಗಗಳ ಆಸ್ಪತ್ರೆ ನಿರ್ದೇಶಕ ಡಾ.ಶಶಿಧರ ಬುಗ್ಗಿ ಅವರು ಸೆ.10ರಂದೇ ಹೇಳಿಕೆ ಕೊಟ್ಟಿದ್ದರು.ಅಲ್ಲದೇ ದರ್ಶನ್ ಅವರ ಆರೋಗ್ಯ ಸುಧಾರಿಸಿರುವುದರ ಬಗ್ಗೆ ಬುಗ್ಗಿ ಅವರು ವೈದ್ಯಕೀಯ ಪ್ರಮಾಣ ಪತ್ರವನ್ನು ಸಹ ಕಾರಾಗೃಹ ಅಧಿಕಾರಿಗಳಿಗೆ ಸಲ್ಲಿಸಿದ್ದರು. ಈ ವೈದ್ಯಕೀಯ ಪ್ರಮಾಣ ಪತ್ರವನ್ನು ಆಧರಿಸಿ ದರ್ಶನ್ ಅವರನ್ನು ಜೈಲಿಗೆ ಕರೆದೊಯ್ಯುವ ಬಗ್ಗೆ ಕಾರಾಗೃಹ ಅಧಿಕಾರಿಗಳು ಸ್ವಂತ ನಿರ್ಧಾರ ಕೈಗೊಳ್ಳಬಹುದಿತ್ತು. ಆದರೆ ಹಾಗೆ ಮಾಡದ ಅಧಿಕಾರಿಗಳು ನಗರದ ಒಂದನೇ ಎಸಿಎಂಎಂ ನ್ಯಾಯಾಲಯದ ಅನುಮತಿ ಕೋರಿದ್ದಾರೆ.`ಜೈಲು ಮ್ಯಾನ್ಯುಯಲ್ ಪ್ರಕಾರ ಕಾರಾಗೃಹದ ಮುಖ್ಯ ಅಧೀಕ್ಷಕರೇ ಸ್ವಂತ ನಿರ್ಧಾರ ಕೈಗೊಂಡು ದರ್ಶನ್ ಅವರನ್ನು ಜೈಲಿಗೆ ಕರೆದೊಯ್ಯಬಹುದಿತ್ತು. ಆದರೆ ದರ್ಶನ್ ಅವರನ್ನು ಜೈಲಿಗೆ ಕರೆದೊಯ್ಯುವ ಪ್ರಕ್ರಿಯೆಯಲ್ಲಿ ವಿಳಂಬ ಮಾಡುವ ಉದ್ದೇಶದಿಂದ ಅಧಿಕಾರಿಗಳು ನ್ಯಾಯಾಲಯದ ಅನುಮತಿ ಕೋರಿದ್ದಾರೆ~ ಎಂದು ಹಿರಿಯ ವಕೀಲರೊಬ್ಬರು `ಪ್ರಜಾವಾಣಿ~ಗೆ ತಿಳಿಸಿದರು.`ಸೆ.9ರಂದು ದರ್ಶನ್ ಅವರನ್ನು ಆಸ್ಪತ್ರೆಗೆ ದಾಖಲಿಸುವ ಬಗ್ಗೆ ಮುಖ್ಯ ಅಧೀಕ್ಷಕರು ನ್ಯಾಯಾಲಯದ ಅನುಮತಿ ಪಡೆಯದೆ ಸ್ವಂತ ನಿರ್ಧಾರ ಕೈಗೊಂಡಿದ್ದರು. ಆಗ ನ್ಯಾಯಾಲಯದ ಅನುಮತಿಯ ಪ್ರಶ್ನೆ ಉದ್ಭವಿಸಿರಲಿಲ್ಲವೇ~  ಎಂದು ಅವರು ಪ್ರಶ್ನಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.