ಶನಿವಾರ, ಏಪ್ರಿಲ್ 17, 2021
31 °C

ಪತ್ರಕರ್ತನ ಬಂಧನ ಜನತಂತ್ರಕ್ಕೆ ಆಘಾತಕಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: `ಹೋಂ ಸ್ಟೇ ದಾಳಿಯನ್ನು ಬೆಳಕಿಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ ಪತ್ರಕರ್ತ ನವೀನ್ ಸೂರಿಂಜೆ ವಿರುದ್ಧ ಪ್ರಕರಣ ದಾಖಲಿಸಿದ ಕ್ರಮ ಪ್ರಜಾಪ್ರಭುತ್ವದಲ್ಲಿ ಆಘಾತಕಾರಿ ಬೆಳವಣಿಗೆ~ ಎಂದು ಕರಾವಳಿ ಸೌಹಾರ್ದ ಸಂಘರ್ಷ ಸಮಿತಿ ಅಧ್ಯಕ್ಷ ಬಿ.ರಮಾನಾಥ ರೈ ಅಭಿಪ್ರಾಯಪಟ್ಟರು.ಸೂರಿಂಜೆ ವಿರುದ್ಧ ಪ್ರಕರಣ ದಾಖಲಿಸಿ ಅವರನ್ನು ಬಂಧಿಸಿದ ಕ್ರಮವನ್ನು ಖಂಡಿಸಿ, ಕರಾವಳಿ ಸೌಹಾರ್ದ ಸಂಘರ್ಷ ಸಮಿತಿ ಆಶ್ರಯದಲ್ಲಿ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.`ದಾಳಿಯನ್ನು ಬೆಳಕಿಗೆ ತಂದಿದ್ದನ್ನು ಸಕಾರಾತ್ಮಕವಾಗಿ ಸ್ವೀಕರಿಸಿ, ಇದಕ್ಕೆ ಕಾರಣರಾದ ಪತ್ರಕರ್ತರನ್ನು ಅಭಿನಂದಿಸುವುದನ್ನು ಬಿಟ್ಟು ಪೊಲೀಸರು ಅವರ ವಿರುದ್ಧ ಪ್ರಕರಣ ದಾಖಲಿಸಿದ್ದು ದುರದೃಷ್ಟಕರ. ಈ ಸ್ಥಿತಿ ನಾಳೆ ಇತರರಿಗೂ ಬರಬಹುದು. ಈ ಸಂಗತಿಯನ್ನು ಜನತೆ ಗಂಭೀರವಾಗಿ ಪರಿಗಣಿಸಬೇಕು~ ಎಂದರು.ಸಿಪಿಎಂ ಮುಖಂಡ ಬಿ.ಮಾಧವ ಮಾತನಾಡಿ, `ಪೊಲೀಸರು ಕಾನೂನನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಹೋಂ ಸ್ಟೇ ದಾಳಿಯನ್ನು ಜಗತ್ತಿಗೆ ತೋರಿಸಿಕೊಟ್ಟ ಪತ್ರಕರ್ತನ ವಿರುದ್ಧ ಡಕಾಯಿತಿ ಆರೋಪ ಹೊರಿಸಿದ್ದಾರೆ. ಇದರಿಂದ ರಾಜ್ಯದಲ್ಲಿರುವುದು ಪ್ರಜಾಪ್ರಭುತ್ವವೋ, ಫ್ಯಾಸಿಸ್ಟ್ ಸರ್ಕಾರವೋ ಎಂಬ ಸಂದೇಹ ಉಂಟಾಗುತ್ತಿದೆ~ ಎಂದು ಕಳವಳ ವ್ಯಕ್ತಪಡಿಸಿದರು. ಸುಳ್ಳು ಮೊಕದ್ದಮೆ ಹೂಡಿದ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅವರು ಆಗ್ರಹಿಸಿದರು.ಜೆಡಿಎಸ್ ಮುಖಂಡ ಎಂ.ಜಿ.ಹೆಗಡೆ ಮಾತನಾಡಿ, `ಸರ್ಕಾರ ಮಾನಸಿಕ ಸ್ಥಿಮಿತ ಕಳೆದುಕೊಂಡಿದೆ. ಅಧಿಕಾರ ಹಾಗೂ ಹಣ ಎರಡನ್ನೂ ಕಳೆದುಕೊಳ್ಳುವ ಸ್ಥಿತಿಯಲ್ಲಿರುವ ಬಿಜೆಪಿ ಮತ್ತು ಸಂಘ ಪರಿವಾರ ಮೈಪರಚಿಕೊಳ್ಳುವ ಹೀನಾಯ ಸ್ಥಿತಿಗೆ ತಲುಪಿದೆ. ಕೋಮುಗಲಭೆಯ ಅಪರಾಧಿಗಳ ಮೇಲಿನ ಮೊಕದ್ದಮೆಗಳನ್ನು ಹಿಂಪಡೆಯುವ ಸರ್ಕಾರ ಪತ್ರಕರ್ತರ ಮೇಲೆ ಸುಳ್ಳು ಪ್ರಕರಣ ದಾಖಲಿಸಿ ಜೈಲಿಗಟ್ಟುತ್ತಿರುವುದು ವಿಪರ್ಯಾಸ~ ಎಂದರು.`ಪತ್ರಕರ್ತರು ಪೊಲೀಸ್ ಮಾಹಿತಿದಾರರೇ? ಮಾಹಿತಿ ನೀಡಿಲ್ಲ ಎಂಬ ಕಾರಣಕ್ಕೆ ಅವರನ್ನು ಜೈಲಿಗಟ್ಟುವುದು ಎಷ್ಟು ಸರಿ? ಜಿಲ್ಲೆಯಲ್ಲಿ ರಾಜಾರೋಷವಾಗಿ ನಡೆಯುತ್ತಿರುವ `ಅನೈತಿಕ ಪೊಲೀಸ್‌ಗಿರಿ~ಯನ್ನು ಶಾಶ್ವತವಾಗಿ ತಡೆಗಟ್ಟಲು ಯಾವ ಕ್ರಮ ಕೈಗೊಂಡಿದ್ದೀರಿ?~ ಎಂದು ಪೊಲೀಸ್ ಅಧಿಕಾರಿಗಳನ್ನು ಪ್ರಶ್ನಿಸಿದ ಅವರು `ಅನೈತಿಕ ಪೊಲೀಸ್‌ಗಿರಿಗೆ ಮಾನ್ಯತೆ ನೀಡುವಿರಾದರೆ, ಪೊಲೀಸರು ಸಮವಸ್ತ್ರ ಕಳಚಿಟ್ಟು ಬಜರಂಗದಳದವರನ್ನೇ ಠಾಣೆಯಲ್ಲಿ ಕೂರಿಸಲಿ~ ಎಂದು ವ್ಯಂಗ್ಯವಾಡಿದರು.ಸಿಪಿಐ ಮುಖಂಡ ಪಿ.ಸಂಜೀವ ಮಾತನಾಡಿ, `ಸತ್ಯ ಹೇಳಲು ಹೊರಟವರನ್ನು ಜೈಲಿಗಟ್ಟಿದರೆ ಜಿಲ್ಲೆಯ ಜನತೆ ಪೊಲೀಸ್ ವ್ಯವಸ್ಥೆ ಮೇಲಿನ ಗೌರವ ಕಳೆದುಕೊಳ್ಳಲಿದೆ~ ಎಂದರು.`ಘಟನೆಯ ಬಗ್ಗೆ ವಿಧಾನ ಸಭೆಯಲ್ಲಿ ಧ್ವನಿ ಎತ್ತುತ್ತೇವೆ~ ಎಂದು ಶಾಸಕ ಯು.ಟಿ.ಖಾದರ್ ತಿಳಿಸಿದರು.ಮೇಯರ್ ಗುಲ್ಜಾರ್‌ಬಾನು, ಸಾಹಿತಿ ಸಾರಾ ಅಬೂಬಕ್ಕರ್, ಪಾಲಿಕೆ ಸದಸ್ಯರಾದ ಜಯಂತಿ, ಅಪ್ಪಿ, ಹೋರಾಟಗಾರ್ತಿ ರೀಟಾ ನೊರೋನ್ಹ, ಜೆಡಿಎಸ್ ಮುಖಂಡರಾದ ಶಶಿಧರ ಶೆಟ್ಟಿ, ಸುಶೀಲ್ ನೊರೋನ್ಹ, ಯಾದವ ಶೆಟ್ಟಿ, ಮುನೀರ್ ಕಾಟಿಪಳ್ಳ, ಪಿ.ವಿ.ಮೋಹನ್, ಸುಧೀರ್ ಟಿ.ಕೆ., ಜೆ.ಆರ್.ಲೋಬೊ, ಅಶ್ರಫ್, ಕೃಪಾ ಆಳ್ವ ಮತ್ತಿತರರಿದ್ದರು.ಸೂರಿಂಜೆಗೆ ಸಾರ್ವಜನಿಕ ಅಭಿನಂದನೆ: `ಜೈಲಿಗಟ್ಟಿದ ಮಾತ್ರಕ್ಕೆ ಪತ್ರಕರ್ತರ ಸ್ಥೈರ್ಯ ಕುಗ್ಗುವುದಿಲ್ಲ. ನವೀನ್ ಸೂರಿಂಜೆ ಅವರು ಜೈಲಿನಿಂದ ಬಿಡುಗಡೆಯಾಗಿ ಹೊರಬಂದ ದಿನವೇ ಅವರಿಗೆ ಸಾರ್ವಜನಿಕ ಅಭಿನಂದನೆ ಹಮ್ಮಿಕೊಳ್ಳಲಾಗುವುದು~ ಎಂದು ಎಂ.ಜಿ.ಹೆಗಡೆ ಘೋಷಿಸಿದರು.`ಕೋಮು ಸಾಮರಸ್ಯ ಕೆಡಿಸುವ ಹುನ್ನಾರ~:
`ಆರಾಧನಾಲಯಗಳ ಬಳಿ ಪ್ರಾಣಿಯ ರುಂಡಗಳನ್ನಿಡುವ ಮೂಲಕ ಜಿಲ್ಲೆಯಲ್ಲಿ ಕೋಮು ಸಾಮರಸ್ಯಕ್ಕೆ ಧಕ್ಕೆ ತರುವ ಬೆಳವಣಿಗೆ ಕಳೆದೆರಡು ದಿನಗಳಿಂದ ಅಲ್ಲಲ್ಲಿ ನಡೆಯುತ್ತಿದೆ. ಪೊಲೀಸ್ ಇಲಾಖೆ ಇಂತಹ ಕೃತ್ಯಗಳನ್ನು ಹತ್ತಿಕ್ಕಬೇಕು~ ಎಂದು ರಮಾನಾಥ ರೈ ಒತ್ತಾಯಿಸಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.