ಸೋಮವಾರ, ಮಾರ್ಚ್ 8, 2021
18 °C

ಪತ್ರಕರ್ತರಿಗೆ ಜೈಲು: ಕೇಜ್ರಿವಾಲ್‌ ಧಮಕಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪತ್ರಕರ್ತರಿಗೆ ಜೈಲು: ಕೇಜ್ರಿವಾಲ್‌ ಧಮಕಿ

ನವದೆಹಲಿ (ಪಿಟಿಐ, ಐಎಎನ್‌ಎಸ್): ದೇಶದ ಎಲ್ಲ ಮಾಧ್ಯಮಗಳು ‘ಮಾರಾಟ­ವಾಗಿವೆ’ ಎಂದು ಗಂಭೀರ ಆರೋಪ ಮಾಡಿರುವ ಆಮ್‌ ಆದ್ಮಿ ಪಕ್ಷದ (ಎಎಪಿ) ಮುಖಂಡ ಅರವಿಂದ ಕೇಜ್ರಿವಾಲ್‌, ಒಂದು ವೇಳೆ ಎಎಪಿ ಅಧಿಕಾರಕ್ಕೆ ಬಂದರೆ ಇದನ್ನು ತನಿಖೆಗೆ ಒಳಪಡಿಸಿ ಮಾಧ್ಯಮ ಮಂದಿ­ಯನ್ನು ಜೈಲಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದಾರೆ.‘ಎಲ್ಲಾ ಮಾಧ್ಯಮಗಳು ಮಾರಾಟ­ಗೊಂಡಿವೆ. ಇದೊಂದು ಬಹುದೊಡ್ಡ ಪಿತೂರಿ. ದೊಡ್ಡ ರಾಜಕೀಯ ವಿವಾದ. ನಮ್ಮ ಸರ್ಕಾರ ರಚನೆ­ಯಾದರೆ, ಈ ಬಗ್ಗೆ ತನಿಖೆ ನಡೆಸಿ ಮಾಧ್ಯಮದವ­ರೊಂದಿಗೆ ಎಲ್ಲರನ್ನೂ ಜೈಲಿಗೆ ಕಳುಹಿಸ­ಲಾಗುವುದು’ ಎಂದು ತಮ್ಮ ರಕ್ಷಣೆಗೆ ಭದ್ರತಾ ಸಿಬ್ಬಂದಿ ನಿಯೋಜಿಸಿರುವು­ದನ್ನು ಕೇಂದ್ರೀಕರಿಸಿ ಸುದ್ದಿ ಪ್ರಸಾರ ಮಾಡುತ್ತಿರುವ ಮಾಧ್ಯಮಗಳ ವಿರುದ್ಧ ಕೇಜ್ರಿವಾಲ್‌ ಹರಿಹಾಯ್ದಿದ್ದಾರೆ.ಮೋದಿ ಪರ ಪ್ರಚಾರ: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರಿಗೆ ಪ್ರಚಾರ ನೀಡುವುದ­ಕ್ಕಾಗಿ ಟಿವಿ ಚಾನೆಲ್‌ಗಳಿಗೆ ‘ಭಾರಿ ಮೊತ್ತ’ ನೀಡಲಾಗಿದೆ ಎಂದು ಹೇಳುವ ಮೂಲಕ ಅವರು ಹೊಸ ವಿವಾದವನ್ನೂ ಹುಟ್ಟುಹಾಕಿದ್ದಾರೆ.‘ಒಂದು ವರ್ಷದಿಂದ, ಮೋದಿ ಅಲ್ಲಿದ್ದಾರೆ, ಇಲ್ಲಿದ್ದಾರೆ ಎಂಬುದನ್ನು ನಾವು ಕೇಳುತ್ತಲೇ ಇದ್ದೇವೆ. ಸ್ವತಃ ಮೋದಿ ಕೂಡ ಇದೇ ರೀತಿ ಹೇಳುತ್ತಿ­ದ್ದಾರೆ. ‘ರಾಮರಾಜ್ಯ’ ಬಂತು ಹಾಗೂ ಭ್ರಷ್ಟಾಚಾರ ನಿರ್ಮೂಲನೆ ಆಯಿತು ಎಂದೂ ಕೆಲವು ಚಾನೆಲ್‌ಗಳು ಹೇಳು­ತ್ತಿವೆ. ಅವುಗಳು ಯಾಕೆ ಈ ರೀತಿ ಮಾಡುತ್ತಿವೆ? ಯಾಕೆಂದರೆ, ಮೋದಿ ಅವರಿಗೆ ಇಂತಹ ಪ್ರಚಾರ ಕೊಡಲು ಈ ಚಾನೆಲ್‌ಗಳಿಗೆ ದುಡ್ಡು ನೀಡಲಾಗಿದೆ’ ಎಂದು ಕೇಜ್ರಿವಾಲ್‌ ಆರೋಪಿಸಿದ್ದಾರೆ.ಪಕ್ಷಕ್ಕೆ ದೇಣಿಗೆ ಸಂಗ್ರಹಿಸುವ ಉದ್ದೇಶದಿಂದ ಗುರುವಾರ ರಾತ್ರಿ ನಾಗ್ಪುರದ ಟುಲಿ ಇಂಟರ್‌ ನ್ಯಾಷನಲ್ ಹೋಟೆಲ್‌ನಲ್ಲಿ ಅರವಿಂದ ಕೇಜ್ರಿವಾಲ್  ಜತೆ ಸಾರ್ವಜನಿಕರಿಗೆ  ಖಾಸಗಿ ಭೋಜನ ಕೂಟ ಆಯೋಜಿಸಲಾಗಿತ್ತು.  ಒಂದು ಊಟಕ್ಕೆ ₨  10 ಸಾವಿರ   ನಿಗದಿ ಮಾಡಲಾಗಿದ್ದ ಈ ಖಾಸಗಿ ಕಾರ್ಯಕ್ರಮಲ್ಲಿ ಕೇಜ್ರಿವಾಲ್ ಅವರು ಮಾತನಾಡಿದ  ವಿಡಿಯೊ ತುಣುಕು ಶುಕ್ರವಾರ  ಬಹಿರಂಗಗೊಂಡಿದೆ.10 ವರ್ಷಗಳ ಅವಧಿಯಲ್ಲಿ ಗುಜರಾತ್‌­ನಲ್ಲಿ 800 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ, ಯಾವುದೇ ಚಾನೆಲ್‌ ಇದನ್ನು ತೋರಿಸಿಲ್ಲ. ರೈತರು ಕಂಪೆನಿಯೊಂದಕ್ಕೆ ಕೇವಲ ಒಂದು ರೂಪಾಯಿಗೆ ತಮ್ಮ ಆಸ್ತಿಯನ್ನು ಮಾರಿದ್ದಾರೆ. ಆಗಲೂ ಯಾವ ಚಾನೆಲ್‌ ಕೂಡ ಇದನ್ನು ವರದಿ ಮಾಡಿಲ್ಲ’ ಎಂದು  ದೂರಿದ್ದಾರೆ.ಆದರೆ, ಮಾಧ್ಯಮಗಳ ವಿರುದ್ಧ ಕಿಡಿಕಾರಿದ್ದ ವಿಡಿಯೊ ಎಲ್ಲೆಡೆ ಪ್ರಸಾರ­ವಾಗಿ ರಾಜಕೀಯ ಪಕ್ಷಗಳು ಮತ್ತು ಮಾಧ್ಯಮಗಳಿಂದ ಟೀಕೆ ಕೇಳಿ ಬರುತ್ತಿದ್ದಂತೆ   ಮಾಧ್ಯಮಗಳ ವಿರುದ್ಧ ತಾವು ಮಾಡಿ­ರುವ ಆರೋಪಗಳನ್ನು ಕೇಜ್ರಿ­ವಾಲ್‌ ಅಲ್ಲಗಳೆದಿದ್ದಾರೆ.‘ನಾನು ಆ ರೀತಿ ಹೇಳಿಯೇ ಇಲ್ಲ. ನಾನು ಏನೂ ಹೇಳಿಲ್ಲ. ನಿಮ್ಮನ್ನು (ಮಾಧ್ಯಮ) ನಾನು ಯಾಕೆ ಬಯ್ಯಲಿ’ ಎಂದು ಅವರು ಸಮಜಾಯಿಷಿ ನೀಡಿದ್ದಾರೆ.

‘ಸಂವಿಧಾನದ ಚೌಕಟ್ಟಿನೊಳಗಿರುವೆ’

ಪುಣೆ (ಪಿಟಿಐ): ಎಎಪಿಯು ದೇಶದ ಸಂವಿಧಾನದ ಚೌಕಟ್ಟಿನೊಳಗೆ ಕಾರ್ಯ­ನಿರ್ವಹಿಸಲು ಬದ್ಧವಾಗಿದೆ ಎಂದು ಪಕ್ಷದ ಮುಖಂಡ ಅರವಿಂದ ಕೇಜ್ರಿವಾಲ್‌ ಅವರು ಶುಕ್ರವಾರ ಹೇಳಿದ್ದಾರೆ.

‘ಅರಾಜಕತಾವಾದಿ’ ಎಂಬ ಟೀಕೆಗೆ ಮತ್ತು ಪಕ್ಷದಲ್ಲಿನ ಸೈದ್ಧಾಂತಿಕ ಭಿನ್ನಾಭಿ­ಪ್ರಾಯ ಹಾಗೂ ಒಗ್ಗಟ್ಟಿನ ಕೊರತೆಯ ಬಗ್ಗೆ ಪ್ರತಿಕ್ರಿಯಿಸಿರುವ ಕೇಜ್ರಿ­ವಾಲ್‌, ‘ನಮ್ಮ ನಡುವೆ ಭಿನ್ನ ಸಿದ್ಧಾಂತ ಪಾಲಿಸುವ ವ್ಯಕ್ತಿಗಳು ಇರಬಹುದು. ಆದರೆ ನಾವು ಭಾರತದ ಸಂವಿಧಾನದ ಚೌಕಟ್ಟಿಗೆ ಬದ್ಧವಾ­ಗಿದ್ದೇವೆ’ ಎಂದು ಹೇಳಿದ್ದಾರೆ.‘ನಾನು ಗಾಂಧೀಜಿ ಅವರಿಂದ ಪ್ರಭಾವಿತ­ನಾಗಿದ್ದೇನೆ. ಮಾನವತಾವಾದ  ಪ್ರತಿಪಾದಿಸುತ್ತೇನೆ. ರಾಜಕೀಯ ಭ್ರಷ್ಟಾಚಾರದಲ್ಲಿ ನಲುಗಿರುವ ವ್ಯವಸ್ಥೆಯನ್ನು ಬದಲಾಯಿಸು­ವುದನ್ನು ಇಚ್ಛಿಸುತ್ತೇವೆ’ ಎಂದು ಮರಾಠಿ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಕೇಜ್ರಿವಾಲ್‌ ಹೇಳಿದ್ದಾರೆ.

ಬೇಜವಾಬ್ದಾರಿ ಹೇಳಿಕೆ

ನವದೆಹಲಿ (ಪಿಟಿಐ): ಮಾಧ್ಯಮಗಳ ಬಗ್ಗೆ ಅರವಿಂದ ಕೇಜ್ರಿವಾಲ್‌ ನೀಡಿರುವ ಹೇಳಿಕೆಯನ್ನು  ಬ್ರಾಡ್‌ಕಾಸ್ಟ್‌ ಎಡಿಟರ್ಸ್ ಅಸೋಸಿಯೇಷನ್‌ (ಬಿಇಎ) ಖಂಡಿ­ಸಿದ್ದು, ಇದೊಂದು ಬೇಜವಾ­ಬ್ದಾರಿ ಹೇಳಿಕೆ ಎಂದು  ಬಣ್ಣಿಸಿದೆ.

ಇಂತಹ ‘ಅಸ್ಪಷ್ಟ ಮತ್ತು ಸಾರಾಸ­ಗಟಾದ’ ಆರೋಪ­ಗಳು ಮಾಧ್ಯಮದ ವಿಶ್ವಾಸಾರ್ಹತೆ­ ದುರ್ಬಲ­ಗೊಳಿ­ಸುವ ಯತ್ನವಾಗಿದೆ ಎಂದೂ ಒಕ್ಕೂಟ ಹೇಳಿದೆ.ಅನ್ಯಾಯಕ್ಕೆ ಒಳಗಾದ ಯಾವುದೇ ವ್ಯಕ್ತಿ ಮಾಧ್ಯಮಗಳ ಸ್ವಯಂ ನಿಯಂತ್ರಣ ಸಂಸ್ಥೆಗಳನ್ನು ಸಂಪರ್ಕಿಸಿ ನಿರ್ದಿಷ್ಟ ದೂರು ಮತ್ತು ದಾಖಲೆ­ಗಳನ್ನು ಸಲ್ಲಿಸಬೇಕು ಎಂದೂ ಅದು ಹೇಳಿದೆ. ‘ಬಿಇಎ ಕೇಜ್ರಿವಾಲ್‌ ಅವರ ಬೇಜವಾ­­ಬ್ದಾರಿ ಹೇಳಿಕೆಯನ್ನು ಖಂಡಿಸುತ್ತದೆ. ದೇಶದ ವಿದ್ಯುನ್ಮಾನ ಮಾಧ್ಯಮ ನ್ಯಾಯಸಮ್ಮತ ಹಾಗೂ ವಸ್ತುನಿಷ್ಠ­ವಾಗಿ ತನ್ನ ಜವಾಬ್ದಾರಿ ನಿರ್ವಹಿಸುತ್ತಿದೆ ಎಂಬು­ದಾಗಿ ಒಕ್ಕೂಟ ಭಾವಿಸುತ್ತದೆ’ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.ಪತ್ರಕರ್ತರೊಂದಿಗೆ ಜಟಾಪಟಿ

ನವದೆಹಲಿ (ಪಿಟಿಐ): ಮಾಧ್ಯಮದ ಕುರಿತಾಗಿ ಕೇಜ್ರಿ­ವಾಲ್‌ ನೀಡಿದ್ದ ಹೇಳಿಕೆಯನ್ನು ಸುದ್ದಿ ವಾಹಿನಿ­ಗಳು ಪ್ರಸಾರ ಮಾಡಿದ ನಂತರ ಎಎಪಿ ಮುಖಂಡರು ಶುಕ್ರವಾರ ಇಲ್ಲಿ ಕರೆದಿದ್ದ ಪತ್ರಿಕಾ­ಗೋಷ್ಠಿ­­ಯು ಪಕ್ಷದ ಮುಖಂಡರು ಹಾಗೂ ಪತ್ರ­ಕರ್ತರ ನಡುವಣ ಜಟಾಪಟಿಗೆ ಸಾಕ್ಷಿಯಾಯಿತು.

ನಾಗ್ಪುರದಲ್ಲಿ ಗುರುವಾರ ರಾತ್ರಿ ಕೇಜ್ರಿವಾಲ್ ಅವರು ಮಾಧ್ಯಮದ ಬಗ್ಗೆ ನೀಡಿದ್ದ ಹೇಳಿಕೆಯನ್ನು ಎಎಪಿ ಮುಖಂಡರು ಪತ್ರಿಕಾಗೋಷ್ಠಿಯಲ್ಲಿ ಬಲವಾಗಿ ಸಮರ್ಥಿಸಿಕೊಂಡರು.ಸುದ್ದಿಗೋಷ್ಠಿ ಆರಂಭವಾಗುತ್ತಿ­ದ್ದಂತೆಯೇ ಎಎಪಿ ಮುಖಂಡರು ಮತ್ತು ಮಾಜಿ ಪತ್ರಕರ್ತರಾದ ಸಂಜಯ್‌ ಸಿಂಗ್‌, ಅಶುತೋಷ್‌ ಮತ್ತು ಆಶಿಶ್‌ ಖೇತಾನ್‌ ಅವರಿಗೆ ಪತ್ರಕರ್ತರು ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಕೇಳಿದರು. ಜೊತೆಗೆ, ಎಲ್ಲಾ ಮಾಧ್ಯಮಗಳು ಮಾರಾಟವಾಗಿವೆ ಎಂಬ ಆರೋಪಕ್ಕೆ ಸಾಕ್ಷ್ಯಗಳನ್ನು ಒದಗಿಸುವಂತೆಯೂ ಒತ್ತಾಯಿಸಿದರು.ಎಲ್ಲೆ ಮೀರುತ್ತಿದ್ದಾರೆ

ಕೇಜ್ರಿವಾಲ್‌ ಅವರ ವಾಗ್ದಾಳಿಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ದಿ ಎಡಿಟರ್ಸ್‌ ಗಿಲ್ಡ್ ಆಫ್‌ ಇಂಡಿಯಾ, ಮಾಧ್ಯಮ­ಗಳನ್ನು ಗುರಿ ಯಾಗಿಟ್ಟು ಕೊಂಡು ನಿರಂತರ ವಾಗ್ದಾಳಿ ನಡೆಸು ತ್ತಿರುವ ಕೇಜ್ರಿವಾಲ್, ಪ್ರಜಾಪ್ರಭುತ್ವದ ಎಲ್ಲೆ­ಗಳನ್ನು ಮೀರುತ್ತಿದ್ದಾರೆ ಎಂದು ತಿರುಗೇಟು ನೀಡಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.