ಶನಿವಾರ, ಮೇ 8, 2021
25 °C
ಜಯದೇವ ಆಸ್ಪತ್ರೆ ಬಳಿ `ನಮ್ಮ ಮೆಟ್ರೊ' ಎರಡನೇ ಹಂತ

`ಪಥ ಬದಲಾವಣೆ ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:  `ಜಯದೇವ ಹೃದ್ರೋಗ ಆಸ್ಪತ್ರೆಯ ಬಳಿ `ನಮ್ಮ ಮೆಟ್ರೊ' ಪಥ ಬದಲಾವಣೆ ಮಾಡಿರುವುದು ಮತ್ತು ಆಸ್ಪತ್ರೆ ಒಳ ಆವರಣದಲ್ಲಿ ನಿರ್ಮಿಸಲು ಉದ್ದೇಶಿಸಿದ್ದ ನಿಲ್ದಾಣವನ್ನು ಹೊರ ಭಾಗಕ್ಕೆ ಸ್ಥಳಾಂತರಿಸಿರುವುದು ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿದೆ' ಎಂದು ನಗರದ ಸುಹಾಸ್ ಸುರೇಂದ್ರ ಎಂಬುವರು ಬೆಂಗಳೂರು ಮೆಟ್ರೊ ರೈಲು ನಿಗಮಕ್ಕೆ (ಬಿಎಂಆರ್‌ಸಿಎಲ್) ಪತ್ರ ಬರೆದಿದ್ದಾರೆ.`ಆಸ್ಪತ್ರೆಯ ಆವರಣದೊಳಗೆ ನಿಲ್ದಾಣ ನಿರ್ಮಿಸುವುದು ಆರ್ಥಿಕವಾಗಿ ಹಾಗೂ ತಾಂತ್ರಿಕವಾಗಿ ಯೋಗ್ಯವಾದುದು. ಇಲ್ಲಿ ನಿಲ್ದಾಣ ಇರುವುದು ಸಾರ್ವಜನಿಕ ಹಿತಾಸಕ್ತಿಗೆ ಪೂರಕ. ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ನಿಲ್ದಾಣವನ್ನು ಸ್ಥಳಾಂತರ ಮಾಡಲಾಗಿದೆ.ಇದಕ್ಕಾಗಿ ಭೂಮಿ ಹಾಗೂ ಕಟ್ಟಡಗಳನ್ನು ವಶಪಡಿಸಿಕೊಳ್ಳಬೇಕಿದೆ. ಇದರಿಂದ ಯೋಜನೆಯ ವೆಚ್ಚವೂ ಹೆಚ್ಚಲಿದೆ. ಖಾಸಗಿ ಹಿತಾಸಕ್ತಿಗೆ ಮಣಿದು ಈ ಬದಲಾವಣೆ ಮಾಡಲಾಗಿದೆ' ಎಂದು ಅವರು ಪತ್ರದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.`ಹೃದಯ ಆಸ್ಪತ್ರೆ ಎಂಬ ಕಾರಣಕ್ಕೆ ಪಥ ಬದಲಾವಣೆ ಮಾಡಲಾಗಿದೆ ಎಂಬ ಸಮಜಾಯಿಷಿ ನೀಡಲಾಗುತ್ತಿದೆ. ಆದರೆ, ವೈಟ್‌ಫೀಲ್ಡ್ ಸಮೀಪದ ವೈದೇಹಿ ವೈದ್ಯಕೀಯ ಆಸ್ಪತ್ರೆಯ ಬಳಿ ಮೆಟ್ರೊ ನಿಲ್ದಾಣ ಸ್ಥಾಪಿಸಲು ಉದ್ದೇಶಿಸಲಾಗಿದೆ. ಈ ಆಸ್ಪತ್ರೆ ಕೂಡಾ ಹೃದಯ ಸಂಬಂಧಿ ಕಾಯಿಲೆಗಳಿಗೆ ಚಿಕಿತ್ಸೆ ನೀಡುತ್ತಿದೆ. ಇದಲ್ಲದೆ ಖಾಸಗಿ ಆಸ್ತಿಯನ್ನು ವಶಕ್ಕೆ ತೆಗೆದುಕೊಳ್ಳುವಾಗ ಖರ್ಚು ಹೆಚ್ಚು. ಆಸ್ಪತ್ರೆಯ ಸರ್ಕಾರಿ ಆಸ್ತಿ ವಶಪಡಿಸಿಕೊಳ್ಳಲು ಹೆಚ್ಚು ವೆಚ್ಚ ಆಗುವುದಿಲ್ಲ. ಈ ನಿಟ್ಟಿನಲ್ಲಿ ಮೊದಲು ಉದ್ದೇಶಿಸಿದ್ದ ಮಾದರಿಯಲ್ಲೇ ನಿಲ್ದಾಣ ನಿರ್ಮಿಸಬೇಕು' ಎಂದು ಅವರು ಆಗ್ರಹಿಸಿದ್ದಾರೆ.ಈ ಪತ್ರದ ಪ್ರತಿಯನ್ನು ಕೇಂದ್ರ ಹಣಕಾಸು ಇಲಾಖೆ, ಮುಖ್ಯಮಂತ್ರಿ, ನಗರಾಭಿವೃದ್ಧಿ ಇಲಾಖೆ ಸೇರಿದಂತೆ 17 ಮಂದಿಗೆ ಕಳುಹಿಸಲಾಗಿದೆ.

ವೈದೇಹಿ ಬಳಿ ನಿಲ್ದಾಣ ಇಲ್ಲ; ಸ್ಪಷ್ಟನೆ

`ವೈದೇಹಿ ಆಸ್ಪತ್ರೆಯ ಆವರಣದೊಳಗೆ ಯಾವುದೇ ನಿಲ್ದಾಣ ಸ್ಥಾಪಿಸುತ್ತಿಲ್ಲ. ಸಮೀಪದಲ್ಲಿ ನಿರ್ಮಿಸಲು ಉದ್ದೇಶಿಸಿರುವ ನಿಲ್ದಾಣ ಆಸ್ಪತ್ರೆಯಿಂದ 500 ಮೀಟರ್ ದೂರದಲ್ಲಿದೆ. ಇದರಿಂದ ಆಸ್ಪತ್ರೆ ಸೇರಿದಂತೆ ಯಾರಿಗೂ ತೊಂದರೆಯಾಗುವುದಿಲ್ಲ' ಎಂದು ನಿಗಮದ ಎರಡನೇ ಹಂತದ ಯೋಜನೆಯ ಮುಖ್ಯ ಎಂಜಿನಿಯರ್ ಕೆ.ಆರ್.ಮಹದೇವಸ್ವಾಮಿ ಸ್ಪಷ್ಟಪಡಿಸಿದ್ದಾರೆ.ಸುರೇಂದ್ರ ಅವರಿಗೆ ನೀಡಿರುವ ಪ್ರತಿಕ್ರಿಯೆಯಲ್ಲಿ, `ಜಯದೇವ ಆಸ್ಪತ್ರೆಯ ಹೊರಭಾಗದಲ್ಲಿ ನಿಲ್ದಾಣ ನಿರ್ಮಾಣ ಮಾಡುವುದರಿಂದ ಸಂಚಾರ ದಟ್ಟಣೆ ಹೆಚ್ಚಾಗುವುದಿಲ್ಲ. ನಿಲ್ದಾಣ ಜಯದೇವ ವೃತ್ತದ ಬಳಿ ನಿರ್ಮಾಣವಾಗಲಿದ್ದು, ಅಂಡರ್‌ಪಾಸ್ ಹಾಗೂ ಮೇಲ್ಸೇತುವೆಯಿಂದ ಸಾಕಷ್ಟು ದೂರದಲ್ಲಿ ಇರಲಿದೆ. ಇಂಟರ್‌ಚೇಂಜ್ ನಿಲ್ದಾಣ ಆಗಿರುವುದರಿಂದ ಆಸ್ಪತ್ರೆಯ ಜಾಗದಲ್ಲಿ ನಿಲ್ದಾಣ ನಿರ್ಮಾಣ ಮಾಡುವುದರಿಂದ ಪ್ರಯಾಣಿಕರಿಗೂ ತೊಂದರೆ ಜಾಸ್ತಿ' ಎಂದು ಹೇಳಿದ್ದಾರೆ.`ಜಯದೇವ ಆಸ್ಪತ್ರೆಯ ಹೊರಭಾಗದಲ್ಲಿ ನಿಲ್ದಾಣ ಸ್ಥಾಪಿಸಲು ರಾಜ್ಯ ಸರ್ಕಾರದ ಉನ್ನತಾಧಿಕಾರ ಸಮಿತಿ ಒಪ್ಪಿಗೆ ಸೂಚಿಸಿದೆ. ಇಲ್ಲಿ ಮೆಟ್ರೊ ಕಾರಿಡಾರ್‌ಗೆ ಖಾಸಗಿ ಜಮೀನಷ್ಟೇ ಅಲ್ಲ; ಸರ್ಕಾರದ ಜಮೀನನ್ನೂ  ಪಡೆದುಕೊಳ್ಳಲಾಗುವುದು' ಎಂದು ಅವರು ತಿಳಿಸಿದ್ದಾರೆ.

`ಎಲ್ಲ ಸಾಧಕ ಬಾಧಕಗಳನ್ನು ಗಣನೆಗೆ ತೆಗೆದುಕೊಂಡು ಇಂಟರ್‌ಚೇಂಜ್ ನಿಲ್ದಾಣವನ್ನು ಸ್ಥಳಾಂತರ ಮಾಡಲು ನಿರ್ಧರಿಸಲಾಗಿದೆ. ಇದನ್ನು ಡೇರಿ ವೃತ್ತದ ಬಳಿ ಇರುವ ಸರ್ಕಾರಿ ಜಾಗದಲ್ಲಿ ನಿರ್ಮಿಸುವುದು ಸಹ ಕಾರ್ಯಸಾಧು ಅಲ್ಲ' ಎಂದು ಅವರು ಹೇಳಿದ್ದಾರೆ.

ಸಂತ್ರಸ್ತರಿಂದ ಇಂದು ಸಚಿವರಿಗೆ ಅಹವಾಲು

ಬೆಂಗಳೂರು: ನಗರದ ಜಯದೇವ ವೃತ್ತದ ಬಳಿ `ನಮ್ಮ ಮೆಟ್ರೊ' ಎರಡನೇ ಹಂತದ ಯೋಜನೆಯ ಪಥ ಬದಲಾವಣೆಯಿಂದ ಸಮಸ್ಯೆಗೆ ಸಿಲುಕಿರುವ ಸ್ಥಳೀಯ ನಿವಾಸಿಗಳು ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ ಅವರನ್ನು ಬುಧವಾರ ಭೇಟಿ ಮಾಡಿ ಅಹವಾಲು ಸಲ್ಲಿಸಲು ನಿರ್ಧರಿಸಿದ್ದಾರೆ. ಸಚಿವರ ಭೇಟಿಗೆ ಸ್ಥಳೀಯರು ಮಂಗಳವಾರ ಮಾಡಿದ ಪ್ರಯತ್ನ ಫಲ ನೀಡಲಿಲ್ಲ.`ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ'ಯ ಹಿತದೃಷ್ಟಿಯಿಂದ `ನಮ್ಮ ಮೆಟ್ರೊ' ಎರಡನೇ ಹಂತದ ಎರಡು ಮಾರ್ಗಗಳ ಪಥವನ್ನು ಬದಲಾಯಿಸಲು ಮತ್ತು ಸಂಸ್ಥೆಯ ಒಳ ಆವರಣದಲ್ಲಿ ನಿರ್ಮಿಸಲು ಉದ್ದೇಶಿಸಿದ್ದ ನಿಲ್ದಾಣವನ್ನು ಹೊರ ಭಾಗಕ್ಕೆ ಸ್ಥಳಾಂತರಿಸಲು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್.ವಿ.ರಂಗನಾಥ್ ನೇತೃತ್ವದ ಉನ್ನತಾಧಿಕಾರ ಸಮಿತಿ (ಎಚ್‌ಪಿಸಿ) ಸಭೆಯಲ್ಲಿ ತೀರ್ಮಾನಿಸಲಾಗಿತ್ತು.`ಆಸ್ಪತ್ರೆಯ ಒಳಭಾಗದಲ್ಲಿ ನಿಲ್ದಾಣ ಸ್ಥಾಪನೆ ಮಾಡುವುದರಿಂದ ಆಸ್ಪತ್ರೆಯ ಹೃದಯಭಾಗಕ್ಕೆ ಕತ್ತರಿ ಹಾಕಿದಂತೆ ಆಗುತ್ತದೆ. ನಿಲ್ದಾಣವನ್ನು ಸ್ಥಳಾಂತರ ಮಾಡಬೇಕು' ಎಂದು ಆಸ್ಪತ್ರೆಯ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಎಚ್‌ಪಿಸಿ ಪಥ ಸ್ಥಳಾಂತರಕ್ಕೆ ಒಪ್ಪಿಗೆ ನೀಡಿತ್ತು. `ಕಾಮಗಾರಿ ಸ್ಥಳಾಂತರ ಮಾಡುವುದರಿಂದ 98 ಕಟ್ಟಡಗಳು ನೆಲಸಮ ಆಗಲಿವೆ. ಈ ನಿಟ್ಟಿನಲ್ಲಿ ಯಾರಿಗೂ ತೊಂದರೆಯಾಗದಂತೆ ಎತ್ತರಿಸಿದ ಮಾರ್ಗದ ಬದಲು ಸುರಂಗ ಮಾರ್ಗ ನಿರ್ಮಿಸಬೇಕು' ಎಂದು `ಜಯದೇವ ಇಂಟರ್‌ಚೇಂಜ್ ಮೆಟ್ರೊ ವಿಕ್ಟಿಮ್ಸ ಫೋರಂ' ಪದಾಧಿಕಾರಿಗಳು ಒತ್ತಾಯಿಸಿದ್ದರು.ಈ ನಡುವೆ, ಸಂಘಟನೆಯ ಪದಾಧಿಕಾರಿಗಳು ರಾಜ್ಯ ಸರ್ಕಾರ ಮುಖ್ಯ ಕಾರ್ಯದರ್ಶಿ ಎಸ್.ವಿ. ರಂಗನಾಥ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವರಿಗೂ ಕರೆ ಮಾಡಿ ಸಮಸ್ಯೆಯನ್ನು ತಿಳಿಸಿದ್ದರು. `ಪಥ ಬದಲಾವಣೆಯ ಬಗ್ಗೆ ಆಗಿರುವ ಸಮಸ್ಯೆಗಳ ಬಗ್ಗೆ ಅಹವಾಲುಗಳು ಬಂದಿವೆ. ಈ ಬಗ್ಗೆ ಪರಿಶೀಲಿಸಲಾಗುವುದು. ಇದೇ 15ರಂದು ಮೆಟ್ರೊ ಅಧಿಕಾರಿಗಳ ಸಭೆ ಕರೆಯಲಾಗಿದೆ ಎಂಬ ಭರವಸೆಯನ್ನು ಸಚಿವರು ನೀಡಿದ್ದಾರೆ' ಎಂದು ಫೋರಂನ ಸಂಚಾಲಕ ಕೆ. ರಮೇಶ್ ತಿಳಿಸಿದರು.`ಇಲ್ಲಿನ ನಿವಾಸಿಗಳು ಎದುರಿಸುವ ಸಮಸ್ಯೆಗಳ ಬಗ್ಗೆ ಸರ್ಕಾರ ಗಮನ ಸೆಳೆಯಲಾಗಿದೆ. ಸಚಿವರಿಗೂ ಸಮಸ್ಯೆಯ ಅರಿವಾಗಿದೆ. 15ರ ಸಭೆಯಲ್ಲಿ ನಮ್ಮ ಪರವಾಗಿ ನಿರ್ಧಾರ ಹೊರಹೊಮ್ಮುವ ವಿಶ್ವಾಸ ಇದೆ. 15ರ ವರೆಗೆ ಕಾದು ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು' ಎಂದು ಅವರು ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.