ಮಂಗಳವಾರ, ಮೇ 18, 2021
28 °C

ಪರರ ಕಣ್ಣೀರೊರೆಸಿ ಸಂತೋಷ ಕಂಡವರು!

- ಪೃಥ್ವಿರಾಜ ಎಂ.ಎಚ್ Updated:

ಅಕ್ಷರ ಗಾತ್ರ : | |

ಚಾವಿ ರಾಜಾವತ್

ಗ್ರಾಮಗಳನ್ನು ಅಭಿವೃದ್ಧಿಪಡಿಸುವ ಗುರಿಯೊಂದಿಗೆ ನಗರ ತೊರೆದು ಹಳ್ಳಿಗೆ ಬಂದು ಜನರ ವಿಶ್ವಾಸ ಗಳಿಸಿ ತನ್ನೂರಿನ ಪಂಚಾಯ್ತಿ ಅಧ್ಯಕ್ಷೆಯಾಗುವ ಮೂಲಕ ವಿಶ್ವದ ಗಮನ ಸೆಳೆದವರು ರಾಜಸ್ಥಾನದ ಚಾವಿ ರಾಜಾವತ್.ಎಂಬಿಎ ಪದವಿ ಪಡೆದ ಕೂಡಲೇ  ಕಾರ್ಲ್‌ಸನ್ ಗ್ರೂಪ್ ಆಫ್ ಹೋಟೆಲ್‌ನಲ್ಲಿ ಮಾನವ ಸಂಪನ್ಮೂಲ ಅಧಿಕಾರಿಯಾಗಿ ಚಾವಿ ಕೆಲಸಕ್ಕೆ ಸೇರುತ್ತಾರೆ. ನಂತರ ಟೈಮ್ಸ ಆಫ್ ಇಂಡಿಯಾ,  ಏರ್‌ಟೆಲ್ ಕಂಪೆನಿಯಲ್ಲಿ ಉನ್ನತ ಅಧಿಕಾರಿಯಾಗಿ ನಾಲ್ಕೈದು ವರ್ಷ ಕೆಲಸ ಮಾಡುತ್ತಾರೆ.ಆದರೆ ಚಾವಿಗೆ ಕಾರ್ಪೊರೇಟ್ ಸಂಸ್ಥೆಗಳಲ್ಲಿನ ಕೆಲಸ ಬೇಸರ ತರಿಸುತ್ತದೆ. ಸಂಬಂಧಗಳೇ ಗೌಣವಾಗಿರುವ ನಗರದಲ್ಲಿನ ಒತ್ತಡದ ಬದುಕು  ಜುಗುಪ್ಸೆ ತರುತ್ತದೆ.ಇಲ್ಲೇ ಇದ್ದು ಸಮುದಾಯದಿಂದ  ದೂರವುಳಿಯುವುದಕ್ಕಿಂತ ಹುಟ್ಟೂರಿಗೆ ಮರಳಿ ಅಲ್ಲಿ ತನ್ನ ಕೈಲಾದ ಸೇವೆ ಮಾಡಿದರಾಯಿತು ಎಂದು ನಿರ್ಧರಿಸಿ, ಕೈ ತುಂಬಾ ಸಂಬಳ ಕೊಡುವ ಕಂಪೆನಿಗೆ ರಾಜೀನಾಮೆ ನೀಡಿ ಚಾವಿ ಹಳ್ಳಿಗೆ ಮರಳುತ್ತಾರೆ.ಗುರಿಯ ಬೆನ್ನತ್ತಿ ಮರಳಿದ ಚಾವಿ ತನ್ನ ಹುಟ್ಟೂರು ಸೋಡಾದ ಗ್ರಾಮ ಪಂಚಾಯ್ತಿ ಅಧ್ಯಕ್ಷೆಯಾಗಿ ಆ ಗ್ರಾಮದ ಸಂಪೂರ್ಣ ಚಿತ್ರಣವನ್ನೇ ಬದಲಿಸುತ್ತಾರೆ. ಸರ್ಕಾರದ ಸವಲತ್ತುಗಳನ್ನು ಸದ್ಬಳಕೆ ಮಾಡಿಕೊಂಡು ಸೋಡಾ ಗ್ರಾಮವನ್ನು  ಅಭಿವೃದ್ಧಿ ಮಾಡುತ್ತಾರೆ.ಚಾವಿಯ ಈ ಸಾಧನೆಯನ್ನು ಗುರುತಿಸಿ ವಿಶ್ವಸಂಸ್ಥೆ ಮತ್ತು ಭಾರತ ಸರ್ಕಾರ ಸನ್ಮಾನಿಸಿವೆ. 32ರ ಹರೆಯದ ಚಾವಿ ಯಾವುದೇ ರಾಜಕೀಯ ಪಕ್ಷಕ್ಕೂ ಸೇರದೆ ಸದ್ದಿಲ್ಲದೆ ಗ್ರಾಮೀಣಾಭಿವೃದ್ಧಿ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಹಾಗೇ  ಎಂಬಿಎ ಪದವಿ ಪಡೆದ ಮೊಟ್ಟಮೊದಲ ಗ್ರಾಮಪಂಚಾಯ್ತಿ ಅಧ್ಯಕ್ಷೆ ಎಂಬ ಹೆಗ್ಗಳಿಕೆ ಚಾವಿ ಅವರದ್ದು.ಆಗಾ ಸೈಯದ್ ಮೆಹದಿ

ಜಮ್ಮು ಕಾಶ್ಮೀರದ ಯುವ ಸಚಿವ ಆಗಾ ಸೈಯದ್ ಶಾಂತಿಯ ಪರಿಪಾಲಕ. ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಸಚಿವ ಸಂಪುಟದಲ್ಲಿ ಪಶುಸಂಗೋಪನೆ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾಗಿ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಾಶ್ಮೀರದ ಪ್ರತ್ಯೇಕತಾವಾದಿಗಳ ಕುಟುಂಬದಿಂದ ಬಂದವರಾಗಿದ್ದರೂ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಟ್ಟು ರಾಜಕೀಯಕ್ಕೆ ಪ್ರವೇಶ ಮಾಡಿದ್ದಾರೆ. 34 ವರ್ಷದ ಆಗಾ ಸೈಯದ್  ತಮಗೆ ನೀಡಿರುವ ಭದ್ರತೆಯನ್ನು ತಿರಸ್ಕರಿಸಿ ಪ್ರತ್ಯೇಕತಾವಾದಿಗಳ ವಿರೋಧವನ್ನು ಲೆಕ್ಕಿಸದೇ ರಾಜ್ಯದೆಲ್ಲೆಡೆ ಪ್ರವಾಸ ಮಾಡುತ್ತಾ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದ್ದಾರೆ.ಕಾಶ್ಮೀರ ಸಮಸ್ಯೆಗೆ ಅಭಿವೃದ್ಧಿಯೇ ಉತ್ತರವಾಗಬೇಕು ಮತ್ತು ನಾವು ಈಗಿರುವ ವ್ಯವಸ್ಥೆಗೆ ಹೊಂದಿಕೊಂಡು ಹೋಗಬೇಕು ಎಂದು ಯುವ ಜನರಲ್ಲಿ ಜಾಗೃತಿ ಮೂಡಿಸುವ ಕಾಯಕದಲ್ಲೂ ಆಗಾ ಸೈಯದ್ ನಿರತರಾಗಿದ್ದಾರೆ.ದಕ್ಷಿಣ ಕಾಶ್ಮೀರದ ಬುದ್ಗಾಂ ವಿಧಾನಸಭಾ ಕ್ಷೇತ್ರದಿಂದ ಸತತವಾಗಿ ಎರಡನೇ ಬಾರಿಗೆ ಶಾಸಕರಾಗಿ  ಆಯ್ಕೆಯಾಗಿದ್ದಾರೆ. ಕಾಶ್ಮೀರದಲ್ಲಿ ಶಾಶ್ವತವಾಗಿ ಶಾಂತಿ ನೆಲೆಸಬೇಕಾದರೆ ಮೊದಲು ಕಾಶ್ಮೀರ ಅಭಿವೃದ್ಧಿ ಹೊಂದಬೇಕು. ಅಭಿವೃದ್ಧಿಗೆ ಸರ್ಕಾರದ ಸಂಪೂರ್ಣ ಸಹಕಾರವಿದ್ದಾಗಲೂ ಪ್ರತ್ಯೇಕತೆಯ ಮಾತೇಕೆ ಎಂದು ಆಗಾ ಸೈಯದ್ ಪ್ರತ್ಯೇಕತೆಯ ಬಗ್ಗೆ ಕಿಡಿಕಾರುತ್ತಾರೆ.ವಿಶ್ವಸಂಸ್ಥೆಯ ಶಾಂತಿಪಾಲನಾ ಸಮಿತಿಯ ಅತಿಥಿ ಸದಸ್ಯರಾಗಿರುವ ಆಗಾ ಸೈಯದ್ ಗಲಭೆಗ್ರಸ್ಥ ಮುಸ್ಲಿಂ ದೇಶಗಳಿಗೆ ತೆರಳಿ ಯುವಕರಲ್ಲಿ ಶಾಂತಿಪಾಲನೆ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.ಅಖಿಲ್ ಗೊಗೊಯ್

ಅಸ್ಸೋಂನ 33 ವರ್ಷದ ಅಖಿಲ್ ಗೊಗೊಯ್ ಅವರದ್ದು ಭ್ರಷ್ಟಾಚಾರ ವಿರುದ್ಧದ ಹೋರಾಟ.

ಕೃಷಿಕ್ ಮುಕ್ತಿ ಸಂಗ್ರಾಮ ಸಮಿತಿಯನ್ನು ಸ್ಥಾಪಿಸಿಕೊಂಡು ಅಸ್ಸೋಂನಲ್ಲಿ ಪರಿಸರ ಹಾನಿ ಮತ್ತು ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುತ್ತಿದ್ದಾರೆ.ಇಂಗ್ಲಿಷ್ ಪದವಿ ಪಡೆದಿರುವ ಅಖಿಲ್ ಕಾಲೇಜು ದಿನಗಳಲ್ಲೇ ನಕ್ಸಲರೊಂದಿಗೆ ಸಂಬಂಧ ಹೊಂದಿದ್ದರು. 1995ರಲ್ಲಿ ಅಲ್ಲಿಂದ ಹೊರ ಬಂದು ಸಾಮಾಜಿಕ ಕಾರ್ಯಕರ್ತನಾಗಿ ತಮ್ಮನ್ನು ಅರ್ಪಿಸಿಕೊಂಡರು.  ಸರಳ ಜೀವನ ನಡೆಸುತ್ತಿರುವ ಅಖಿಲ್ ಅಸ್ಸೋಂ ಸರ್ಕಾರದ ನೂರಾರು ಹಗರಣಗಳನ್ನು ಬಯಲಿಗೆಳೆಯುವ ಮೂಲಕ ದೇಶದ ಗಮನ ಸೆಳೆದಿದ್ದಾರೆ.ಅಣೆಕಟ್ಟೆಗಳನ್ನು ಕಟ್ಟುವಾಗ ನಡೆದಿದೆ ಎನ್ನಲಾಗಿರುವ ನೂರಾರು ಕೋಟಿ ರೂಪಾಯಿಯ ಹಲವು ಹಗರಣಗಳನ್ನು ಅಖಿಲ್ ಬಯಲಿಗೆಳೆಯುವ ಮೂಲಕ ಅಸ್ಸೋಂ ಸರ್ಕಾರದ ಕೆಂಗಣ್ಣಿಗೂ ಗುರಿಯಾಗಿದ್ದರು. ಅಣೆಕಟ್ಟೆ ಹಗರಣಗಳು ಮಾತ್ರವಲ್ಲದೆ ಸರ್ಕಾರದ ವಿವಿಧ ಯೋಜನೆಗಳಲ್ಲಿ ನಡೆದಿರುವ ಅವ್ಯವಹಾರಗಳನ್ನು ಬಹಿರಂಗ ಪಡಿಸಿದ್ದಾರೆ. ಇದರಿಂದ ಕ್ರೋಧಗೊಂಡ ಸರ್ಕಾರ ಅಖಿಲ್‌ನನ್ನು ನಕ್ಸಲ್ ಎಂದು ಹಣೆಪಟ್ಟಿ ಕಟ್ಟಿ ಜೈಲಿಗೆ ಹಾಕುವ ಸಂಚು ರೂಪಿಸಿತು ಆದರೆ ಇದು ಫಲಕಾರಿಯಾಗಲಿಲ್ಲ.`ನಾನು ಮಾರ್ಕ್ಸ್‌ವಾದಿ, ಸಾಮಾಜಿಕ ನ್ಯಾಯ ನನ್ನ ಮುಖ್ಯ ಉದ್ದೇಶ, ಆದರೆ  ನಾನು ಮಾವೋವಾದಿಯಲ್ಲ' ಎಂದು ಅಖಿಲ್ ಹೇಳುತ್ತಾರೆ.ಅಸ್ಸೋಂ ರಾಜ್ಯದ ಅಭಿವೃದ್ಧಿಯೇ ನನ್ನ ಗುರಿ. ಸರ್ಕಾರಗಳ ಅವ್ಯವಹಾರ ಮತ್ತು ಭ್ರಷ್ಟಾಚಾರಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದೇ  ನಮ್ಮ ಸಮಿತಿಯ ಮುಖ್ಯ ಉದ್ದೇಶ' ಎನ್ನುತ್ತಾರೆ ಅಖಿಲ್.ಇರ್ಫಾನ್ ಆಲಂ

ಬಿಹಾರದ ರಿಕ್ಷಾ ಚಾಲಕರ ಬಂಧು ಎಂದೇ ಇರ್ಫಾನ್ ಆಲಂ ಖ್ಯಾತ. 29ರ ಹರೆಯದ ಇರ್ಫಾನ್ ಆಲಂ ಅಹಮದಾಬಾದ್‌ನ ಪ್ರತಿಷ್ಠಿತ ಐಐಟಿಯಲ್ಲಿ ಎಂಬಿಎ ಪದವಿ ಪಡೆದಿದ್ದಾರೆ. ಉತ್ತಮ ಅಂಕ ಪಡೆದಿದ್ದ ಅವರಿಗೆ ಯಾವುದಾದರೊಂದು ಕಾರ್ಪೊರೇಟ್ ಕಂಪೆನಿಯಲ್ಲಿ ಕೆಲಸ ಗಿಟ್ಟಿಸಿಕೊಳ್ಳುವುದು ಸುಲಭದ ಮಾತಾಗಿತ್ತು.ಆದರೆ ಇರ್ಫಾನ್ ತುಡಿತ ಕಷ್ಟ ಜೀವಿಗಳಾದ ರಿಕ್ಷಾ ಚಾಲಕರ ಮೇಲಿತ್ತು. ಗಿರಾಕಿಗಳು ಸಿಕ್ಕರೆ ಮಾತ್ರ ಅವರಿಗೆ ಅನ್ನಕ್ಕೆ ಮಾರ್ಗ, ಇಲ್ಲವಾದಲ್ಲಿ  ತಣ್ಣೀರು ಬಟ್ಟೆಯೇ ಗತಿ ಎಂಬುದನ್ನು ಇರ್ಫಾನ್ ಮನಗಂಡಿದ್ದರು.  ರಿಕ್ಷಾ ಚಾಲಕರಿಗೆ ಗಿರಾಕಿಗಳು ಸಿಗದಿದ್ದರೂ ಅವರ ಹೊಟ್ಟೆ ತುಂಬಬೇಕು, ಇದಕ್ಕಾಗಿ  ಪರ್ಯಾಯ ಅನ್ನದ ಮಾರ್ಗವನ್ನು ಅವರಿಗೆ ಹುಡುಕಿಕೊಡಬೇಕು ಎಂದು ಇರ್ಫಾನ್ ಯೋಚಿಸಿದರು.ಈ ಹಂತದಲ್ಲಿ ರೂಪಗೊಂಡ್ದ್ದಿದೇ ಸಾಮ್ನಾ ಫೌಂಡೇಷನ್. ಇದರಡಿಯಲ್ಲಿ ಸುಮಾರು 50 ಸಾವಿರ ರಿಕ್ಷಾ ಚಾಲಕರನ್ನು ನೋಂದಾಯಿಸಿ ಕೊಂಡರು. ಅವರಿಗೆ  ರಿಕ್ಷಾದಲ್ಲಿ ಸಂಗೀತ ಸಾಧನಗಳು, ದಿನ ಪತ್ರಿಕೆಗಳು, ವೃತ್ತ ಪತ್ರಿಕೆಗಳು, ಸುಗಂಧ ದ್ರವ್ಯಗಳು ಸೇರಿದಂತೆ ಮತ್ತಿತ್ತರ ವಸ್ತುಗಳನ್ನು ಮಾರಾಟ ಮಾಡಲು ಅವಕಾಶ ಕಲ್ಪಿಸಿದರು. ಮತ್ತೆ ಕೆಲವು ಕಂಪೆನಿಗಳ ಜಾಹೀರಾತನ್ನು ಪ್ರದರ್ಶನ ಮಾಡುವ ಗುತ್ತಿಗೆಯನ್ನು ಸಾವಿರಾರು ರಿಕ್ಷಾಗಳಿಗೆ ಕೊಡಿಸಿದರು. ಇದರಿಂದ ರಿಕ್ಷಾ ಚಾಲಕರಿಗೆ ಗಿರಾಕಿಗಳು ಸಿಗದಿದ್ದರೂ ಅವರಿಗೆ ಬೇರೊಂದು ರೂಪದಲ್ಲಿ ಆದಾಯ ಬರುವಂತೆ ಮಾಡಿದ್ದು ಇರ್ಫಾನ್ ಆಲಂ. ಅದರಿಂದಲೇ ಅವರನ್ನು ಬಿಹಾರದ ರಿಕ್ಷಾವಾಲಾಗಳ ಬಂಧು ಎಂದೇ ಕರೆಯುತ್ತಾರೆ.ತಮ್ಮ ಫೌಂಡೇಷನ್ ಮೂಲಕ ದುರ್ಬಲ ವರ್ಗದ ಜನತೆಗೆ ವ್ಯಾಪಾರಕ್ಕಾಗಿ  ಸಾಲ ಸೌಲಭ್ಯದ ಯೋಜನೆಯನ್ನು ಕಲ್ಪಿಸಿದ್ದಾರೆ. ಮಹಿಳಾ ಸ್ವಸಹಾಯ ಗುಂಪುಗಳಿಗೂ ಸಾಲ ನೀಡುತ್ತಿದ್ದಾರೆ.  ಇರ್ಫಾನ್ ಆಲಂ ಸಾಧನೆಗೆ ವಿಶ್ವ ಹಣಕಾಸು ಸಂಸ್ಥೆ `ಯುವ ವಾಣಿಜ್ಯೋದ್ಯಮಿ' ಎಂಬ  ಪ್ರಶಸ್ತಿ ನೀಡಿ ಗೌರವಿಸಿದೆ ಹಾಗೂ ದೇಶದ  ದೊಡ್ಡ ದೊಡ್ಡ  ಕಾರ್ಪೊರೇಟ್ ಕಂಪೆನಿಗಳು ಅಲಾಂ ಅವರನ್ನು ಸನ್ಮಾನಿಸಿವೆ .

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.