ಮಂಗಳವಾರ, ಮಾರ್ಚ್ 2, 2021
31 °C

ಪರಿಶಿಷ್ಟರ ಅನುದಾನ: ಅಧಿಕಾರಿಗಳ ವಿರುದ್ಧ ಮೊಕದ್ದಮೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪರಿಶಿಷ್ಟರ ಅನುದಾನ: ಅಧಿಕಾರಿಗಳ ವಿರುದ್ಧ ಮೊಕದ್ದಮೆ

ಮಡಿಕೇರಿ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸಮುದಾಯಗಳ ಆರ್ಥಿಕ, ಶೈಕ್ಷಣಿಕ ಮತ್ತಿತರ ಅಭಿವೃದ್ದಿಗೆ ಸರ್ಕಾರ ನಿಗದಿಪಡಿಸಿದ ಶೇ. 22.75ರಷ್ಟು ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಬೇಕು. ಅನುದಾನ ಸದ್ಬಳಕೆ ಮಾಡದೆ ಉದಾಸೀನ ತೋರುವ ಅಧಿಕಾರಿಗಳ ವಿರುದ್ಧ ಕೆಸಿಎಸ್‌ಆರ್ ನಿಯಮದಂತೆ ಕ್ರಿಮಿನಲ್ ಮೊಕ ದ್ದಮೆ ಹೂಡಲಾಗುವುದು ಎಂದು ಪ್ರಭಾರ ಜಿಲ್ಲಾಧಿಕಾರಿ ಕೆ.ಎಂ.ಚಂದ್ರೇಗೌಡ ಅವರು ಅಧಿಕಾರಿ ಗಳಿಗೆ ಎಚ್ಚರಿಕೆ ನೀಡಿದ್ದಾರೆ.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸಮುದಾಯಗಳ ದೌರ್ಜನ್ಯ ನಿಯಂತ್ರಣ ಹಾಗೂ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಸರ್ಕಾರ ಪ್ರತಿ ಇಲಾಖೆಗೂ ಬಜೆಟ್‌ನಲ್ಲಿ ಅನುದಾನ ಬಿಡುಗಡೆ ಮಾಡುತ್ತದೆ. ಬಿಡುಗಡೆ ಯಾದ ಅನುದಾನದಲ್ಲಿ ಶೇ. 18ರಷ್ಟು ಪರಿಶಿಷ್ಟ ಜಾತಿಗೆ ಮತ್ತು ಶೇ. 4.75ರಷ್ಟು ಹಣವನ್ನು ಪರಿಶಿಷ್ಟ ಪಂಗಡ ಸಮುದಾಯಗಳ ಅಭಿವೃದ್ಧಿಗಾಗಿ ವಿನಿಯೋಗಿಸಬೇಕು. ಸರ್ಕಾರ ನೀಡುವ ಸಂಪೂರ್ಣ ಅನುದಾನವನ್ನು ಬಳಸಿಕೊಳ್ಳಬೇಕು ಎಂದು ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.ಕೆಲವು ಇಲಾಖೆಗಳ ಅಧಿಕಾರಿಗಳು ಅನುದಾನ ವಿಲ್ಲ ಎಂದು ಹೇಳುವಂತಿಲ್ಲ. ತಮ್ಮ ಇಲಾಖೆಗೆ ಬಿಡುಗಡೆಯಾದ ಅನುದಾನದಲ್ಲಿ ಶೇ. 22.75 ರಷ್ಟು ಹಣವನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯಕ್ಕೆ ಮೀಸಲಿರಿಸಿ ಅರ್ಹ ಫಲಾನುಭವಿಗಳಿಗೆ ತಲುಪಿಸಬೇಕು ಎಂದು ಅವರು ಸೂಚನೆ ನೀಡಿದರು.ಸರ್ಕಾರ ಗ್ರಾಮ ಪಂಚಾಯಿತಿಗಳಿಗೆ ನೇರವಾಗಿ ಹಣ ಬಿಡುಗಡೆ ಮಾಡುತ್ತದೆ. ಗ್ರಾಮೀಣ ಪ್ರದೇಶದ ಪರಿಶಿಷ್ಟ ಜಾತಿ, ಪಂಗಡ ಸಮುದಾಯಗಳ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕಾಗಿ ನೆರವು, ಈ ಸಮುದಾಯಗಳ ಸಣ್ಣ ರೈತರಿಗೆ ಆರ್ಥಿಕ ಸಹಾಯ ಧನ ಮತ್ತಿತರ ಯೋಜನೆಗಳನ್ನು ಕೈಗೊಂಡು ಆರ್ಥಿಕವಾಗಿ ಸಬಲರಾಗುವಂತೆ ಮಾಡುವುದು ಮತ್ತು ಅವರನ್ನು ಸಾಮಾಜಿಕವಾಗಿ ಮುಖ್ಯವಾಹಿ ನಿಗೆ ತರುವ ಕೆಲಸವನ್ನು ಅಧಿಕಾರಿಗಳು ಮಾಡಬೇಕು ಎಂದು ಅವರು ತಿಳಿಸಿದರು.ಅಧಿಕಾರಿಗಳು ಅರ್ಜಿ ಆಹ್ವಾನಿಸಿ ಕಚೇರಿಯಲ್ಲಿ ಕುಳಿತರಷ್ಟೆ ಸಾಲದು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಎಷ್ಟೋ ಕುಟುಂಬಗಳು ಇನ್ನೂ ಸ್ವಂತ ಸೂರು ಇಲ್ಲದೆ ಬದುಕು ಸವೆಸುತ್ತಿವೆ. ಇಂತಹ ಕುಟುಂಬಗಳಿಗೆ ವಸತಿ ಕಲ್ಪಿಸಲು ಮುಂದಾಗಬೇಕು. ಅವರ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ನೆರವು ನೀಡುವ ಕೆಲಸ ಮಾಡಬೇಕು.

 

ಹಾಗೆಯೇ ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿಗಳು ಆಯಾ ಸ್ಥಳಗಳಿಗೆ ಖುದ್ದಾಗಿ ಭೇಟಿ ನೀಡಿ ಸರ್ಕಾರದ ಸೌಲಭ್ಯವನ್ನು ತಲುಪಿಸುವ ಕಾರ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಅವರು ಸಲಹೆ ಮಾಡಿದರು.ಸರ್ಕಾರದ ನಿರ್ದೇಶನದಂತೆ ಹಕ್ಕುಪತ್ರ ಮತ್ತಿತರ ಅಂಶಗಳ ಬಗ್ಗೆ ಕ್ರಮವಹಿಸಲಾಗುವುದು. ಮಡಿಕೇರಿ, ವಿರಾಜಪೇಟೆ, ಸೋಮವಾರಪೇಟೆ ತಾಲ್ಲೂಕು ಕೇಂದ್ರಗಳಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಲು ಸಂಬಂಧಪಟ್ಟ ವರಿಗೆ ಸೂಚನೆ ನೀಡಬೇಕು ಎಂದು ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸಮುದಾಯ ಗಳಿಗೆ ಜಾತಿ ಪ್ರಮಾಣ ಪತ್ರ ನೀಡುವಾಗ ಯಾವುದೇ ಕಾರಣಕ್ಕೂ ಸತಾಯಿಸಬಾರದು. ಜಾತಿ ಪ್ರಮಾಣ ಪತ್ರ ನೀಡುವಲ್ಲಿ ವಿಳಂಬ ಮಾಡುವ ಗ್ರಾಮ ಲೆಕ್ಕಿಗರು  ಹಾಗೂ ಕಂದಾಯ ನಿರೀಕ್ಷಕರ  ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸಮುದಾಯ ಗಳ ಹಿತರಕ್ಷಣೆ, ಸಮಿತಿ ಅಧ್ಯಕ್ಷರಾದ ಸುಬ್ಬಯ್ಯ, ಅವರು ಕಳೆದ 50 ವರ್ಷಗಳಿಂದ ಯಾವುದೇ ದಾಖಲೆ ಇಲ್ಲದೆ ಪರಿಶಿಷ್ಟ ಸಮುದಾಯದವರು ಮನೆ ನಿರ್ಮಿಸಿಕೊಂಡು ವಾಸ ಮಾಡುತ್ತಿದ್ದಾರೆ. ಇಂತಹ ಪರಿಶಿಷ್ಟ ಕುಟುಂಬಗಳಿಗೆ ಹಕ್ಕು ಪತ್ರ ನೀಡು ವಂತಾಗಬೇಕು. ಅಕ್ರಮ-ಸಕ್ರಮ ಯೋಜನೆಯಡಿ ಫಾರಂ ನಂ. 53ನ್ನು ಮುಂದುವರೆಸುವಂತೆ ಸರ್ಕಾರಕ್ಕೆ ಪತ್ರ ಬರೆಯಬೇಕು ಎಂದು ಸಭೆಯಲ್ಲಿ ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿದ ಚಂದ್ರೇಗೌಡ ಅವರು, ಸ್ವಂತ ನಿವೇಶನ ಇಲ್ಲದಿರುವ ಪರಿಶಿಷ್ಟ ಜಾತಿ ಮತ್ತು ಪಂಗಡದ ಕುಟುಂಬಗಳ ಪಟ್ಟಿ ಮಾಡಿ ವರದಿ ಸಲ್ಲಿಸುವಂತೆ ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಗಳಿಗೆ ಸೂಚನೆ ನೀಡಿದರು.ಸಮಿತಿ ಸದಸ್ಯರಾದ ಪಳನಿ ಪ್ರಕಾಶ್, ವೀರಭದ್ರಯ್ಯ, ಜಾಯ್ಸಿ ಮೇನೇಜಸ್ ಮತ್ತಿತರರು ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ, ಪಂಗಡದವರು ಅನುಭವಿಸುತ್ತಿರುವ ಸಮಸ್ಯೆಗಳು, ಶೈಕ್ಷಣಿಕ ಸೌಲಭ್ಯದ ಕೊರತೆಗಳು, ದಾಖಲೆ ಪಡೆಯಲು ಆಗುತ್ತಿರುವಂತಹ ವಿಳಂಬಗಳು, ಸಮುದಾಯದ ಸರ್ವತೋಮುಖ ಪ್ರಗತಿಗೆ ಆಗಬೇಕಾದ ಪ್ರಯತ್ನ ಗಳ ಕುರಿತು ಪ್ರಸ್ತಾಪಿಸಿ ಸಹಕರಿಸುವಂತೆ ಮನವಿ ಮಾಡಿದರು. ಪರಿಶಿಷ್ಟ ಜಾತಿ ಪಂಗಡದವರಿಗೆ ಆದ್ಯತೆ ಮೇರೆಗೆ ಹಕ್ಕು ಪತ್ರಗಳನ್ನು ನೀಡಬೇಕೆಂದು ಅವರು ಕೋರಿದರು.ಸಭೆಯಲ್ಲಿ ಜಿ.ಪಂ. ಮುಖ್ಯ ಯೋಜನಾಧಿಕಾರಿ ಸಿದ್ದಯ್ಯ, ತೋಟಗಾರಿಕಾ ಇಲಾಖೆ ಉಪನಿರ್ದೇಶಕ ರಾದ ಶಿವಮೂರ್ತಿ, ತಹಶೀಲ್ದಾರ್‌ಗಳು, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾ ಧಿಕಾರಿಗಳು, ಪಟ್ಟಣ ಪಂಚಾಯಿತಿ ಮುಖ್ಯಾಧಿ ಕಾರಿಗಳು, ತಾಲ್ಲೂಕು ಸಮಾಜ ಕಲ್ಯಾಣಾಧಿ ಕಾರಿಗಳು ಮತ್ತು ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.