ಗುರುವಾರ , ನವೆಂಬರ್ 14, 2019
22 °C

ಪರಿಷತ್ ಚುನಾವಣೆ ಗೊಂದಲದಲ್ಲಿ ಕಾಂಗ್ರೆಸ್

Published:
Updated:

ನವದೆಹಲಿ: ವಿಧಾನ ಪರಿಷತ್ತಿನ ಒಂದು ಸ್ಥಾನಕ್ಕೆ ಈ ತಿಂಗಳ 25ರಂದು ನಡೆಯಲಿರುವ ಚುನಾವಣೆಯಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸುವ ವಿಷಯದಲ್ಲಿ ಕಾಂಗ್ರೆಸ್ ಗೊಂದಲದಲ್ಲಿದೆ. ಬಿಜೆಪಿಯ ಡಾ. ವಿ.ಎಸ್.ಆಚಾರ್ಯ ನಿಧನದಿಂದ ಈ ಸ್ಥಾನ ಖಾಲಿಯಾಗಿದೆ.



ಚುನಾವಣೆಯಲ್ಲಿ ಅಕಸ್ಮಾತ್ ಅಡ್ಡಮತದಾನ ನಡೆದರೆ ತೀವ್ರ ಮುಜುಗರ ಅನುಭವಿಸಬೇಕಾಗುತ್ತದೆ ಎಂಬ ಉದ್ದೇಶದಿಂದ ರಾಜ್ಯ ಕಾಂಗ್ರೆಸ್ ಅಭ್ಯರ್ಥಿಯನ್ನು ಕಣಕ್ಕಿಳಿಸುವುದು ಬೇಡ ಎಂಬ ನಿಲುವು ಹೊಂದಿದೆ. ಕಳೆದ ತಿಂಗಳ ಪರಿಷತ್ ಚುನಾವಣೆಯಲ್ಲಿ ನಡೆದ ಅಡ್ಡ ಮತದಾನದಿಂದ  ಅಧಿಕೃತ ಅಭ್ಯರ್ಥಿ ಇಕ್ಬಾಲ್ ಅಹಮದ್ ಸರಡಗಿ ಸೋತ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನ ಆತ್ಮವಿಶ್ವಾಸ ಕುಗ್ಗಿದೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.



ದೆಹಲಿಯಲ್ಲಿ ಹಿರಿಯ ಕಾಂಗ್ರೆಸ್ ಮುಖಂಡರನ್ನು ಭೇಟಿ ಮಾಡಿದ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಾ. ಜಿ. ಪರಮೇಶ್ವರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಪರಿಷತ್ ಚುನಾವಣೆಯಲ್ಲಿ ಪಕ್ಷ ಗೆಲುವುದು ಅನುಮಾನವಿರುವುದರಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸುವುದು ಬೇಡ ಎಂಬ ಅಭಿಪ್ರಾಯ ನೀಡಿದ್ದಾರೆ ಎಂದು ಗೊತ್ತಾಗಿದೆ.



ವಿಧಾನಸಭೆಯಲ್ಲಿ ಕಾಂಗ್ರೆಸ್‌ನ 71 ಶಾಸಕರಿದ್ದಾರೆ. ಬಿಜೆಪಿಯ 122ಶಾಸಕರಿದ್ದಾರೆ. ಹೀಗಾಗಿ ಅಭ್ಯರ್ಥಿ ನಿಲ್ಲಿಸುವ ವಿಷಯದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ.



ಹಿಂದಿನ ಚುನಾವಣೆಯಲ್ಲಿ ನಡೆದಿರುವ ಅಡ್ಡ ಮತದಾನ ಕುರಿತು ವಿಚಾರಣೆ ನಡೆಸಲಾಗಿದೆ. ವರದಿ ಈಗ ವರಿಷ್ಠರ ಮುಂದಿದೆ. ವರದಿ ಮೇಲೆ ವರಿಷ್ಠರು ಕ್ರಮ ಕೈಗೊಳ್ಳಬೇಕಿದೆ. ರಾಷ್ಟ್ರಪತಿ ಚುನಾವಣೆ ಸಮಯದಲ್ಲಿ ಹೇಗೆ ಮತದಾನ ಮಾಡಬೇಕು ಎಂಬ ಕುರಿತು ಮಾಹಿತಿ ನೀಡಲು ಇದೇ 17ರಂದು ಬೆಂಗಳೂರಿನಲ್ಲಿ ಪಕ್ಷದ ಶಾಸಕರ ಸಭೆ ಕರೆಯಲಾಗಿದೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.

 

ಪ್ರತಿಕ್ರಿಯಿಸಿ (+)