ಸೋಮವಾರ, ಮೇ 10, 2021
21 °C

ಪರಿಸರ ನಾಶದಿಂದ ಜಗತ್ತು ನಾಶ: ನ್ಯಾಯಾಧೀಶ ಕನ್ನೂರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಕ್ಷ್ಮೇಶ್ವರ: `ಪರಿಸರ ನಾಶದಿಂದ ವಿಶ್ವವೇ ನಾಶವಾಗಬಲ್ಲದು. ಕಾರಣ ಈಗಿನಿಂದಲೇ ಪರಿಸರ ಉಳಿಸುವ ನಿಟ್ಟಿನಲ್ಲಿ ಜಗತ್ತಿನ ಪ್ರತಿಯೊಬ್ಬ ಪ್ರಜೆಯೂ ಪ್ರಯತ್ನಿಸಬೇಕಾದ ಅಗತ್ಯ ಇದೆ' ಎಂದು ಪಟ್ಟಣದ ದಿವಾಣಿ ನ್ಯಾಯಾಲಯದ ನ್ಯಾಯಾಧೀಶ ವಿಜಯಕುಮಾರ ಕನ್ನೂರ ಹೇಳಿದರು.ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಸಹಾಯಕ ಸರ್ಕಾರಿ ಅಭಿಯೋಜಕರು ಲಕ್ಷ್ಮೇಶ್ವರ ಹಾಗೂ ಅರಣ್ಯ ಇಲಾಖೆ ಶಿರಹಟ್ಟಿ ಇವರ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಬುಧವಾರ ಸ್ಥಳೀಯ ಜೆಎಂಎಫ್‌ಸಿ ನ್ಯಾಯಾಲಯದ ಆವರಣದಲ್ಲಿ ಜರುಗಿದ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.`ಮನುಷ್ಯ ಸ್ವಾರ್ಥಿಯಾಗಿದ್ದು ನಿತ್ಯ ಪರಿಸರದ ಮೇಲೆ ದಾಳಿ ನಡೆಸುತ್ತಿದ್ದಾನೆ. ಹೀಗಾಗಿ ಜಗತ್ತಿನ ತಾಪಮಾನ ಹೆಚ್ಚಾಗಿದ್ದು ಆಮ್ಲ ಮಳೆ ಆಗುತ್ತಿದೆ. ಪರಿಸರ ಉಳಿಯಬೇಕಾದರೆ ಮಕ್ಕಳಲ್ಲಿ ಪರಿಸರ ರಕ್ಷಣೆ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ತಪ್ಪದೆ ನಡೆಯಬೇಕು. ತ್ಯಾಜ್ಯ ವಸ್ತುಗಳನ್ನು ನಿಗದಿತ ಸ್ಥಳಗಳಲ್ಲಿ ಹಾಕುವುದರ ಮೂಲಕ ಎಲ್ಲರೂ ಪರಿಸರ ಸಂರಕ್ಷಣೆಗೆ ಮುಂದಾಗಬೇಕು' ಎಂದರು.ವಲಯ ಅರಣ್ಯ ಅಧಿಕಾರಿ ಪಿ.ಸಿ. ಹಿರೇಮನಿ ಸರ್ಕಾರ ಅರಣ್ಯ ರಕ್ಷಣೆಗೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು ಅವುಗಳು ಸರಿಯಾಗಿ ಅನುಷ್ಠಾನ ಆಗಬೇಕಾದರೆ ಸಮುದಾಯದ ಸಹಕಾರ ಮುಖ್ಯ. ಈ ನಿಟ್ಟಿನಲ್ಲಿ ಸರ್ಕಾರ ಗ್ರಾಮ ಅರಣ್ಯ ರಕ್ಷಣಾ ಸಮಿತಿಗಳನ್ನು ನೇಮಿಸಿದ್ದು ಕೆಲವು ಕಡೆ ಇಂಥ ಸಮಿತಿಗಳು ಉತ್ತಮ ಕೆಲಸ ಮಾಡುತ್ತಿವೆ.1975ಕ್ಕಿಂತ ಪೂರ್ವದಲ್ಲಿ ಶಿರಹಟ್ಟಿ ತಾಲ್ಲೂಕಿನಲ್ಲಿ ಸಾಕಷ್ಟು ಅರಣ್ಯ ಇತ್ತು. ಆದರೆ ಇದೀಗ ಅರಣ್ಯ ಬಹಳಷ್ಟು ನಾಶವಾಗಿದೆ. ತಾಲ್ಲೂಕಿನಲ್ಲಿ ಒಟ್ಟು 15,000 ಹೆಕ್ಟೇರ್ ರಕ್ಷಿತ ಅರಣ್ಯ ಭೂಮಿ ಇದ್ದು, ಅದರಲ್ಲಿ ಮರ ಗಿಡ ಬೆಳೆಸಲಾಗುತ್ತಿದೆ' ಎಂದು ಹೇಳಿದರು.ಮರ ಬೆಳೆಸಿಕೊಳ್ಳುವವರಿಗಾಗಿ ಸಸಿ ಪಾಲನಾ ಕೇಂದ್ರ ಆರಂಭಿಸಲಾಗಿದ್ದು ಸದ್ಯ ಕೇಂದ್ರದಲ್ಲಿ ಕಾಡು ಬಾದಾಮಿ, ಹುಣಸೆ, ಬೇವು, ಹೊಂಗೆ, ಸಿಸು, ತೇಗದ ಸಸಿಗಳು ಇದ್ದು ಗಿಡ ಮರ ಬೆಳೆಸುವವರಿಗಾಗಿ ಸಸಿ ವಿತರಿಸಲಾಗುತ್ತಿದೆ. ಪರಿಸರ ದಿನಾಚರಣೆ ಕೇವಲ ಹೆಸರಿಗೆ ಮಾತ್ರ ಆಗದೆ ಪ್ರತಿ ನಿತ್ಯ ಪರಿಸರ ಉಳಿಸಲು ಹೋರಾಟ ಮಾಡಬೇಕಾಗಿದೆ ಎಂದರು.ಸಹಾಯಕ ಸರ್ಕಾರಿ ಅಭಿಯೋಜಕಿ ಗುರುಶಿದ್ದವ್ವ ಪಾಟೀಲ ಮಾತನಾಡಿದರು. ವಕೀಲರ ಸಂಘದ ಅಧ್ಯಕ್ಷ ವಿ.ಆರ್. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಪಿ.ಎಂ. ನಾವ್ಹಿ, ಕಾರ್ಯದರ್ಶಿ ವಿ.ಎಸ್. ಪಶುಪತಿಹಾಳ, ಹಿರಿಯ ವಕೀಲ ಆರ್.ಸಿ. ಪಾಟೀಲ, ಮಧ್ಯಸ್ಥಿಕೆ ಕೇಂದ್ರದ ಮಧ್ಯಸ್ಥಿಕೆದಾರ ಬಿ.ಎಸ್. ಬಾಳೇಶ್ವರಮಠ, ಉಚಿತ ಕಾನೂನು ಸಲಹೆಗಾರರಾದ ಎನ್.ಸಿ. ಅಮಾಸಿ ಮತ್ತಿತರರು ಹಾಜರಿದ್ದರು. ಬಿ.ಎನ್. ಸಂಶಿ ಸ್ವಾಗತಿಸಿದರು. ಮಹೇಶ ಹಾರೋಗೇರಿ ನಿರೂಪಿಸಿದರು. ಎನ್.ಸಿ. ಬೆಲ್ಲದ ವಂದಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.