ಶನಿವಾರ, ಮೇ 21, 2022
23 °C

ಪರೀಕ್ಷೆ ದೇಹ ಸಿದ್ಧವಾಗಿದೆಯೇ?

ಡಾ. ಶೋಭಾ ಜಿ Updated:

ಅಕ್ಷರ ಗಾತ್ರ : | |

ಮಾರ್ಚ್ ತಿಂಗಳು ಬಂದರೆ ಸಾಕು ಸೆಕೆಗಾಲ ಪ್ರಾರಂಭವಾಗುತ್ತದೆ. ಇದರ ಜೊತೆಗೆ ಶುರುವಾಗುವ ಮತ್ತೊಂದು ಧಗೆ ಎಂದರೆ `ಪರೀಕ್ಷೆ'. ಅದರಲ್ಲೂ ಪರೀಕ್ಷೆ ಬರೆಯುತ್ತಿರುವ ಮಕ್ಕಳು ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಇದ್ದರೆ, ಅವರಲ್ಲೂ ಪಿಯುಸಿ (ಸೈನ್ಸ್) ಅಥವಾ ಇತರ ಬೋರ್ಡ್ ಪರೀಕ್ಷೆಗಳನ್ನು ಬರೆಯುವವರು ಇದ್ದಾಗಲಂತೂ ಮನೆಯ ವಾತಾವರಣವೇ ಬದಲಾಗಿ ಬಿಡುತ್ತದೆ. ಪೋಷಕರ ದಿನಚರಿಯಲ್ಲಿ, ಜೀವನಶೈಲಿಯಲ್ಲಿ ಬದಲಾವಣೆಗಳಾಗುತ್ತವೆ.ಕೆಲವು ಕುಟುಂಬಗಳಲ್ಲಿ ಮಕ್ಕಳ ಓದಿನ ಸಲುವಾಗಿ ಟಿ.ವಿ. ಚಾನಲ್‌ಗಳು ಕಡಿತಗೊಂಡಿರುತ್ತವೆ. ಮನರಂಜನೆ, ಹೊರಗಿನ ತಿರುಗಾಟಗಳೂ ಸ್ಥಗಿತಗೊಂಡಿರುತ್ತವೆ. ಒಟ್ಟಿನಲ್ಲಿ ನಮ್ಮ ಮಕ್ಕಳು ಚೆನ್ನಾಗಿ ಓದಿ ಒಳ್ಳೆಯ ಅಂಕಗಳನ್ನು ಪಡೆಯಬೇಕೆಂಬ ಆಕಾಂಕ್ಷೆಯಲ್ಲಿ ಎಲ್ಲ ರೀತಿಯ ಸಿದ್ಧತೆಗಳು, ಕೆಲವೊಮ್ಮೆ ಅತಿ ಎನಿಸುವಷ್ಟು ನಡೆದಿರುತ್ತವೆ.ಬಾಹ್ಯ ಪರಿಸರದಲ್ಲಿ ಇಷ್ಟೆಲ್ಲಾ ಬದಲಾವಣೆ ಮಾಡಿಕೊಂಡು, ಮಕ್ಕಳ ಮೇಲೆ ಹಿಡಿತ ಸಾಧಿಸಿ ಉತ್ತಮ ಫಲಿತಾಂಶಕ್ಕಾಗಿ ಹಾತೊರೆಯುವ ಪೋಷಕರು `ಆಂತರಿಕ ಪರಿಸರ'ದ ಮೇಲೂ ಅಷ್ಟೇ ಕಾಳಜಿ ವಹಿಸುವರೇ? ಪರೀಕ್ಷೆಯಲ್ಲಿ ಚೆನ್ನಾಗಿ ಬರೆದು ಉತ್ತಮ ಸಾಧನೆ ಮಾಡಲು ಓದು, ಅಭ್ಯಾಸ ಎಷ್ಟು ಮುಖ್ಯವೋ, ಮಕ್ಕಳ ವೆುದುಳಿನ ಕ್ಷಮತೆಯೂ ಕಲಿಕೆಗೆ ಅಷ್ಟೇ ಮುಖ್ಯ. ಇದರ ಬಗ್ಗೆ ಪೋಷಕರು ಎಷ್ಟು ಕಾಳಜಿ ವಹಿಸುತ್ತಾರೆ? ರಾತ್ರಿ ಇಡೀ ಎಚ್ಚರದಿಂದಿದ್ದು ಆಗಾಗ್ಗೆ ಕಾಫಿ, ಟೀ ಸೇವಿಸುತ್ತಾ ಅಭ್ಯಾಸ ನಡೆಸುವ ವಿದ್ಯಾರ್ಥಿಗಳ ಈ ಅಭ್ಯಾಸಗಳು ಕಲಿಕೆಗೆ ಪೂರಕವೇ?ಓದು, ಅಂಕ, ಟ್ಯೂಶನ್‌ಗಾಗಿ ಸಾವಿರಾರು ರೂಪಾಯಿ ತೆತ್ತು, ಹಗಲೂ ರಾತ್ರಿ ಶ್ರಮ ವಹಿಸಿ ಓದಿದ ನಂತರವೂ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗದಿದ್ದಾಗ ಮಕ್ಕಳನ್ನು ಅವಹೇಳನ ಮಾಡುವುದಕ್ಕೆ ಮೊದಲು, ಅವರ ಕಲಿಕೆಗೆ ಪೂರಕವಾದ ಆಹಾರದ ಅಭ್ಯಾಸಗಳನ್ನು ನಮ್ಮ ಮಕ್ಕಳಿಗೆ ಮಾಡಿಸಿದ್ದೇವೆಯೇ ಎಂಬುದನ್ನು ಪ್ರತಿ ಪಾಲಕರೂ ಕೇಳಿಕೊಳ್ಳಬೇಕು.ಖಂಡಿತಾ ಬದುಕಿನಲ್ಲಿ ಅಂಕಗಳೇ ಪ್ರಮುಖವಲ್ಲ, ಪರೀಕ್ಷೆಗಳೇ ಬದುಕಿನ ಗುರಿ ಅಲ್ಲ.  ಮಾರ್ಕ್ಸ್, ಮಾರ್ಕ್ಸ್ ಎಂದು ನಾವು `ಮಾರ್ಕ್ಸ್‌ವಾದಿಗಳು'  ಆಗಬೇಕಾಗಿಲ್ಲ. ಆದರೆ ಪರಿಶ್ರಮಕ್ಕೆ ತಕ್ಕ ಫಲ ಸಿಗಬೇಕಾದರೆ ಆಹಾರ ಎಷ್ಟು ಮುಖ್ಯ ಎಂಬುದನ್ನು ಅರಿಯಬೇಕು. ಅದರಲ್ಲೂ ವಿಶೇಷವಾಗಿ ವೆುದುಳಿನ ಆರೋಗ್ಯ ಸ್ಥಿತಿ, ಅದಕ್ಕೆ ಸಿಗುವ ಪೋಷಕಾಂಶಗಳು ವಿದ್ಯಾರ್ಥಿಯ ಓದಿಗೆ, ಸಾಧನೆಗೆ ಪೂರಕವಾಗುತ್ತವೆ, ಹಿಮ್ಮೇಳವಾಗುತ್ತವೆ.ಆದರೆ ಬಹಳಷ್ಟು ನಿರ್ಲಕ್ಷ್ಯ ಹಾಗೂ ಶೋಷಣೆಗೆ ಒಳಗಾಗುವುದು ಇದೇ ದೇಹ ಹಾಗೂ ಮೆದುಳು. ವಿಶೇಷವಾಗಿ ಪರೀಕ್ಷೆಗಳ ಕಾಲದಲ್ಲಿ ಈ ದೌರ್ಜನ್ಯ, ದುರ್ಬಳಕೆ ಇನ್ನೂ ಹೆಚ್ಚು.  ನಿದ್ದೆಗೆಟ್ಟು ಓದುವುದರ ಜೊತೆಗೆ ಊಟ ತಿಂಡಿ ವರ್ಜಿಸುವುದು ಅಥವಾ ಸಿಕ್ಕಿದ್ದನ್ನು ತಿನ್ನುವುದು ದೇಹದ ಮೇಲೆ ತೋರುವ ದೌರ್ಜನ್ಯವಲ್ಲವೇ?ಮೆದುಳಿಗೆ ಏನೆಲ್ಲ ಬೇಕು?

ಸುಮಾರು 1.4 ಕೆ.ಜಿ ತೂಗುವ ಮಾನವನ ಮೆದುಳಿನಲ್ಲಿ ಸರಿಸುಮಾರು ನೂರು ಶತಕೋಟಿ ನರಕೋಶಗಳು, ಅಂದರೆ ನ್ಯೂರಾನ್‌ಗಳು ಇರುತ್ತವೆ. ಹುಟ್ಟಿನಿಂದಲೇ ಈ ಕೋಟಿಗಟ್ಟಲೆ ನ್ಯೂರಾನ್‌ಗಳನ್ನು ಪಡೆದುಕೊಂಡೇ ಮಗು ಹುಟ್ಟಿರುತ್ತದೆ.ಪ್ರತಿ ಹೊಸ ವಿಷಯವನ್ನು ಮಗು ಅರಿತುಕೊಂಡಾಗಲೂ, ಅದರಿಂದ ಕಲಿತ ಮಾಹಿತಿ ನ್ಯೂರಾನ್‌ಗಳಲ್ಲಿ ದಾಖಲಾಗುತ್ತದೆ. ಪ್ರತಿ ನ್ಯೂರಾನ್ ಇತರ ನ್ಯೂರಾನ್‌ಗಳೊಡನೆ ಹಲವಾರು ಸಂಪರ್ಕಗಳನ್ನು ಬೆಳೆಸಿಕೊಳ್ಳುತ್ತದೆ. ಹೀಗೆ ಸಹಸ್ರಾರು ಸಂಖ್ಯೆಯಲ್ಲಿ ಜಟಿಲ ಸಂಪರ್ಕ ಜಾಲವನ್ನು ನ್ಯೂರಾನ್‌ಗಳು ಬೆಳೆಸಿಕೊಳ್ಳುತ್ತವೆ. ನೆನಪಿನ ಶಕ್ತಿಯ ಬೆಳವಣಿಗೆಗೆ ನ್ಯೂರಾನ್‌ಗಳ ಬೆಳವಣಿಗೆ ಹಾಗೂ ಸಂಪರ್ಕ ಜಾಲ ಅತಿ ಮುಖ್ಯ.ಒಂದು ನ್ಯೂರಾನ್ ಅಥವಾ ಮೆದುಳಿನ ನರಕೋಶದಿಂದ ಮತ್ತೊಂದು ನ್ಯೂರಾನ್‌ಗೆ ನಡೆಯುವ ಸಂವಹನವೇ ಕಲಿಕೆಗೆ ಆಧಾರ. ಹೊಸ ಮಾಹಿತಿಯನ್ನು ತನ್ನಲ್ಲಿ ಅಡಗಿಸಿಕೊಳ್ಳುವ ನ್ಯೂರಾನ್‌ಗಳ ಹಾಗೂ ನರಮಂಡಲದ ಈ ಸಂವಹನದ ಸಂಕೀರ್ಣ ಕ್ರಿಯೆಗೆ ನೂರಕ್ಕೂ ಹೆಚ್ಚಿನ ನರವಾಹಕಗಳೆಂಬ (Neuro transmitters)  ರಾಸಾಯನಿಕ ವಸ್ತುಗಳು ಅವಶ್ಯಕ.ಈ ನರವಾಹಕಗಳ ಮುಖೇನ ರಾಸಾಯನಿಕ ಹಾಗೂ ವಿದ್ಯುತ್ ಚಟುವಟಿಕೆಗಳು ವೆುದುಳಿನಲ್ಲಿ ನಡೆಯುತ್ತಲೇ ಇರುತ್ತವೆ. ಈ ಎಲ್ಲ ಕ್ರಿಯೆಗಳಿಗೆ ಅವಶ್ಯಕವಾಗಿರುವ ನೂರಾರು ನ್ಯೂರೋಟ್ರಾನ್ಸ್‌ಮಿಟರ್‌ಗಳನ್ನು ನಮ್ಮ ಮೆದುಳು ಉತ್ಪಾದಿಸುತ್ತದೆ. ಈ ಉತ್ಪಾದನೆಗೆ ಬೇಕಾದ ಕಚ್ಛಾ ಸಾಮಗ್ರಿ ಮೆದುಳಿಗೆ ಪೂರೈಕೆಯಾಗುವುದು ನಾವು ಸೇವಿಸುವ ಆಹಾರದಿಂದ! ಆಹಾರದಲ್ಲಿರುವ ಉತ್ತಮ ಶರ್ಕರ ಪಿಷ್ಟ, ಪ್ರೊಟೀನ್ಸ್, ಕೊಬ್ಬು, ನೀರು, ಸೂಕ್ಷ್ಮ ಆಹಾರಾಂಶಗಳಾದ ಜೀವಸತ್ವ, ಖನಿಜಗಳು ಎಲ್ಲವೂ ಮೆದುಳಿಗೆ ಅವಶ್ಯಕ. ಪೂರಕ ಆಹಾರ

ಶರ್ಕರ ಪಿಷ್ಟ:
ಮೆದುಳಿನ ಕ್ರಿಯೆಗೆ ಶಕ್ತಿ ಬಹು ಮುಖ್ಯ. ಶಕ್ತಿಯ ಮುಖ್ಯ ಇಂಧನ ಕಾರ್ಬೋಹೈಡ್ರೇಟ್ಸ್ ಅಥವಾ ಶರ್ಕರ ಪಿಷ್ಟ. ದೈಹಿಕವಾಗಿ ದಣಿದಾಗ ಮೊದಲು ನೀಡುವುದೇ ಗ್ಲೂಕೋಸ್ ಅಥವಾ ಸಕ್ಕರೆ. ಅದೇ ರೀತಿ ನರಕೋಶಗಳ ಕ್ರಿಯೆಗೆ, ಹಸಿವಿಗೆ ತಕ್ಷಣ ಬೇಕಾಗಿರುವುದು ಗ್ಲೂಕೋಸ್. ಆದರೆ ಇದೇ ಸಕ್ಕರೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದಾಗ, ಹೆಚ್ಚು ಶಕ್ತಿ ಬಿಡುಗಡೆ ಆಗುತ್ತದೆ ಹಾಗೂ ರಕ್ತದಲ್ಲಿ ಸಕ್ಕರೆಯ ಪ್ರಮಾಣ ದಿಢೀರನೆ ಏರುತ್ತದೆ.ರಕ್ತದಲ್ಲಿ ಏರಿದ ಸಕ್ಕರೆಯ ಪ್ರಮಾಣವನ್ನು ತಗ್ಗಿಸಲು ಮೇದೋಜೀರಕ ಗ್ರಂಥಿ (Pancreas) ಕೂಡಲೇ ಹೆಚ್ಚಿನ ಇನ್ಸುಲಿನ್ ಅನ್ನು ಉತ್ಪತ್ತಿ ಮಾಡುತ್ತದೆ. ಇದರಿಂದ ರಕ್ತದಲ್ಲಿ ಸಕ್ಕರೆಯ ಅಂಶ ದಿಢೀರನೆ ಇಳಿಯುತ್ತದೆ. ಸಕ್ಕರೆಯ ಈ ಹಟಾತ್ ಇಳಿತದೊಂದಿಗೆ, ಏರಿದ್ದ ಶಕ್ತಿ ಮತ್ತು ಹುಮ್ಮಸ್ಸು ಸಹ ಇಳಿಮುಖವಾಗುತ್ತದೆ. ಮಂಪರುತನ, ನಿದ್ದೆ, ಮರೆವು, ತಲೆನೋವು, ಏಕಾಗ್ರತೆಯ ಸಮಸ್ಯೆ ಉಂಟಾಗುತ್ತದೆ. ಹೀಗಾಗಿ ಏಕಾಏಕಿ ಅಧಿಕ ಸಕ್ಕರೆ ಸೇವನೆ ಒಳ್ಳೆಯದಲ್ಲ.ಈ ರೀತಿಯ ಅಧಿಕ ಸಕ್ಕರೆ ಅಥವಾ ಕಾರ್ಬೋಹೈಡ್ರೇಟ್ಸ್‌ಗಳ ಸೇವನೆ ಯಾವಾಗ ಹಾಗೂ ಹೇಗೆ ಆಗುತ್ತದೆ?

ಸಂಸ್ಕರಿಸಿದ ಸಕ್ಕರೆಯನ್ನು (Refined sugar)ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದಾಗ ರಕ್ತದಲ್ಲಿ ಸಕ್ಕರೆಯ ಏರಿಳಿತಗಳು ಉಂಟಾಗುತ್ತವೆ.ಅಂದರೆ ವಿದ್ಯಾರ್ಥಿಗಳು  ಬಾಯಾರಿಕೆಗೆ ಮೃದು ಪಾನೀಯಗಳು, ನಿದ್ರೆಯನ್ನು ದೂರ ಇಡಲು ಅತಿಯಾದ ಕಾಫಿ, ಟೀ, ಉಲ್ಲಾಸದಿಂದ ಇರಲು ಸಿಹಿ ತಿನಿಸುಗಳು, ಕೇಕ್, ಪೇಸ್ಟ್ರಿಗಳನ್ನು ಹೆಚ್ಚಾಗಿ ತಿಂದಾಗ, ಅವುಗಳಲ್ಲಿರುವ ಸಂಸ್ಕರಿಸಿದ ಸಕ್ಕರೆ ಗ್ಲೂಕೋಸ್ ಆಗಿ ಅತಿ ಶೀಘ್ರವಾಗಿ ಪರಿವರ್ತನೆಗೊಂಡು, ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ಏರಿಸುತ್ತವೆ.ತಕ್ಷಣದ ಶಕ್ತಿಯನ್ನು ನೀಡಿ, ನಿದ್ರೆ, ಮಂಪರುತನವನ್ನು ದೂರ ಮಾಡಿ ಅಲ್ಪಕಾಲದ ಚೈತನ್ಯವನ್ನು ನೀಡುತ್ತವೆ. ಆದರೆ ರಕ್ತದಲ್ಲಿ ಏರಿದ ಸಕ್ಕರೆಯ ಮಟ್ಟವನ್ನು ಸಹಜತೆಗೆ ತರಲು ಅಧಿಕ ಇನ್ಸುಲಿನ್ ಬಿಡುಗಡೆ ಆಗುತ್ತಿದ್ದಂತೆ ರಕ್ತದಲ್ಲಿ ಸಕ್ಕರೆಯ ಮಟ್ಟ ತಗ್ಗಿ, ಮೆದುಳಿಗೆ ಹರಿಯುವ ರಕ್ತ, ಗ್ಲೂಕೋಸ್, ಆಮ್ಲಜನಕ ಕಡಿಮೆಯಾಗಿ ವ್ಯಕ್ತಿಯಲ್ಲಿ ಮಂಪರು, ನಿಶ್ಶಕ್ತಿ, ಗೊಂದಲ, ಮರೆವು ಉಂಟಾಗುತ್ತದೆ.ನಿದ್ದೆಯನ್ನು ತಡೆಯಲು ಮೇಲೆ ತಿಳಿಸಿದ ಸಿಹಿ ಪಾನೀಯ, ಸಂಸ್ಕರಿಸಿದ ಆಹಾರಗಳನ್ನು ಸೇವಿಸುವ, ಪರೀಕ್ಷೆಗೆ ಹೊರಡುವ ಮುನ್ನ ಅಧಿಕ ಸಕ್ಕರೆಯ ಅಂಶವನ್ನು ಸೇವಿಸುವ ವಿದ್ಯಾರ್ಥಿಗಳಲ್ಲಿ ಈ ಏರಿಳಿತಗಳಿಂದ ಮೆದುಳಿನ ಕಾರ್ಯಕ್ಕೆ ಎಷ್ಟು ಅಡಚಣೆಯಾಗಬಹುದು ಊಹಿಸಿ.ಹಾಗಾದರೆ ವಿದ್ಯಾರ್ಥಿಗಳು ಮಾಡಬೇಕಾದ್ದೇನು? ಪರೀಕ್ಷೆಗೆ ಓದುವ ಹಾಗೂ ಪರೀಕ್ಷೆಗೆ ಹೊರಡುವ ವಿದ್ಯಾರ್ಥಿಗಳು ಸಂಕೀರ್ಣ ಅಂದರೆ Complex ಕಾರ್ಬೋಹೈಡ್ರೇಟ್ಸ್‌ಗಳನ್ನು ಒಳಗೊಂಡಂತಹ ಆಹಾರ, ಅಂದರೆ ಇಡಿಯಾದ ಧಾನ್ಯಗಳಿಂದ ತಯಾರಾದಂತಹ, ನಾರಿನ ಅಂಶದಿಂದ ಕೂಡಿರುವಂತಹ ಆಹಾರವನ್ನು ಸೇವಿಸುವುದು ಅವಶ್ಯಕ. ಅದರಲ್ಲಿನ ನಾರಿನ ಅಂಶ ಆ ಆಹಾರದಲ್ಲಿನ ಸಕ್ಕರೆ ಅಥವಾ ಕಾರ್ಬೋಹೈಡ್ರೇಟ್ ಅಂಶವು ನಿಧಾನವಾಗಿ ರಕ್ತಗತವಾಗುವಂತೆ ಮಾಡುತ್ತದೆ.ಇದರಿಂದ ಶಕ್ತಿ ನಿಧಾನವಾಗಿ ಹಾಗೂ ದೀರ್ಘಕಾಲದವರೆಗೆ ಬಿಡುಗಡೆ ಆಗುತ್ತಿರುತ್ತದೆ. ಹೀಗಾಗಿ ಯೋಚನಾ ಶಕ್ತಿಗೆ, ವಿಷಯ ಗ್ರಹಿಕೆಗೆ, ವಿಷಯ ಮಂಡನೆಗೆ ವೆುದುಳಿಗೆ ಅವಶ್ಯಕವಾದ ಇಂಧನ ಅಥವಾ ಶಕ್ತಿ ದೀರ್ಘಕಾಲದವರೆಗೆ ಲಭ್ಯವಾಗುತ್ತಾ ಬರುತ್ತದೆ. ಸಕ್ಕರೆಯ ದಿಢೀರ್ ಏರಿಳಿತ ಹಾಗೂ ಅದರಿಂದ ಉಂಟಾಗುವ ವ್ಯತ್ಯಯಗಳನ್ನು ಇದು ತಡೆಯುತ್ತದೆ. ಅಲ್ಲದೆ ಇಡಿಯಾದ ಧಾನ್ಯಗಳ ಹೊಟ್ಟಿನ ಭಾಗದಲ್ಲಿರುವ ವಿಟಮಿನ್  ಬಿ  ಅಂಶಗಳು ಮೆದುಳಿಗೆ ಮತ್ತಷ್ಟು ಸಹಾಯ ಮಾಡುತ್ತವೆ.ಅಂದರೆ ಇಡಿಯಾದ ಹಣ್ಣುಗಳು, ಇಡಿಯಾದ ಧಾನ್ಯಗಳಿಂದ ತಯಾರಾದ ರೊಟ್ಟಿ, ಚಪಾತಿ, ಉಪ್ಪಿಟ್ಟು, ದೋಸೆ, ತರಕಾರಿ ಇತ್ಯಾದಿಗಳು ನಿಮಗೆ ಬೇಕು. ಇವು ನೂಡಲ್ಸ್, ಬರ್ಗರ್‌ಗಳಿಗಿಂತ ಅಧಿಕ ಪಾಲು ಉತ್ತಮ! ಇನ್ನು ತಂಪು ಪಾನೀಯಗಳು, ಅಧಿಕ ಕಾಫಿ, ಟೀ ನಿಮಗೆ ಒಳಿತಿಗಿಂತ ಕೆಡುಕು ಮಾಡುವುದೇ ಹೆಚ್ಚು. ಆದ್ದರಿಂದ ಸಂಸ್ಕರಿಸಿದ ಸಕ್ಕರೆ ತಿನಿಸುಗಳಿಂದ ಆದಷ್ಟು ದೂರ ಇರಿ.ಕೊಬ್ಬು ಅಥವಾ ಮೇದಸ್ಸು: ಮೆದುಳಿನ ಘನ ಭಾಗದ ಶೇಕಡಾ 60 ಭಾಗ ಕೊಬ್ಬಿನಿಂದ ಕೂಡಿರುತ್ತದೆ. ಇದು ವೆುದುಳಿನ ಕ್ರಿಯೆಗೆ ಅವಶ್ಯಕವಾದ ಶಕ್ತಿಯನ್ನು ಪೂರೈಸುತ್ತದೆ ಹಾಗೂ ಮಾಹಿತಿ ರವಾನೆ, ಮಾಹಿತಿ ಸ್ವೀಕಾರದ ಅನೇಕ ಕಾರ್ಯಗಳಲ್ಲಿ ಭಾಗಿಯಾಗುತ್ತದೆ. ಮೆದುಳಿನ ಉತ್ತಮ ಕಾರ್ಯನಿರ್ವಹಣೆಗೆ ಸಸ್ಯಜನ್ಯದ ಎಣ್ಣೆ, ಒಮೇಗಾ- 3, ಮೇದಾಮ್ಲಗಳು ಅತಿ ಅವಶ್ಯಕ. ಎಣ್ಣೆ ಕಾಳುಗಳು, ಮೀನು ವೆುದುಳಿನ ಕಾರ್ಯಕ್ಕೆ ಅವಶ್ಯಕ. ಇನ್ನು ಸ್ಯಾಚುರೇಟೆಡ್ ಕೊಬ್ಬು (Saturated fats), ಟ್ರಾನ್ಸ್‌ಫ್ಯಾಟ್‌ಗಳನ್ನೊಳಗೊಂಡ ಆಹಾರ ಮೆದುಳಿನ ಆರೋಗ್ಯಕ್ಕೆ ಹಾನಿಕರ.ಜಿಗುಟಾದ ಸ್ಯಾಚುರೇಟೆಡ್ ಫ್ಯಾಟ್ ಹಾಗೂ ಟ್ರಾನ್ಸ್ ಫ್ಯಾಟ್‌ಗಳು ನ್ಯೂರಾನ್‌ಗಳ ಸಂವಹನ ಕ್ರಿಯೆಗೆ ಪ್ರತಿಕೂಲ ವಾತಾವರಣವನ್ನು ಸೃಷ್ಟಿಸುತ್ತವೆ, ಮೆದುಳಿಗೆ ಪೂರೈಕೆ ಆಗಬೇಕಾದ ಆಮ್ಲಜನಕದ ಪ್ರಮಾಣವನ್ನು ತಗ್ಗಿಸುತ್ತವೆ.ಟ್ರಾನ್ಸ್‌ಫ್ಯಾಟ್ ಹಾಗೂ ಸ್ಯಾಚುರೇಟೆಡ್ ಫ್ಯಾಟ್‌ಗಳಿಂದ ಕೂಡಿದ ಪಿಜ್ಜಾ, ಬರ್ಗರ್, ಕೇಕ್ ಇತ್ಯಾದಿಗಳನ್ನು ದಿನನಿತ್ಯ ತಿನ್ನುವ, ಅದರಲ್ಲೂ ಮೆದುಳಿನಲ್ಲಿ ಹೆಚ್ಚಿನ ಕ್ರಿಯೆ ನಡೆಯುವ ಓದು, ಬರೆಯುವ, ಪರೀಕ್ಷೆಗೆ ತಯಾರಿ ನಡೆಸುವ ಸಂದರ್ಭದಲ್ಲಿ ಈ ರೀತಿಯ ಆಹಾರ ಸೇವನೆ ವಿದ್ಯಾರ್ಥಿಗಳಿಗೆ ಎಷ್ಟು ಸಮಂಜಸ?ಪ್ರೊಟೀನ್ಸ್: ಮೆದುಳಿನ ಜೀವಕೋಶಗಳಾದ ನ್ಯೂರಾನ್‌ಗಳಿಗೆ, ನ್ಯೂರೋ ಟ್ರಾನ್ಸ್ ಮಿಟರ್‌ಗಳ ತಯಾರಿಕೆಗೆ ಅವಶ್ಯಕವಾದ ಅಮೈನೋ ಆಮ್ಲಗಳು ಪೂರೈಕೆಯಾಗುವುದೇ ಪ್ರೊಟೀನ್‌ಗಳಿಂದ. ಮೆದುಳಿನ ಕಾರ್ಯಕ್ಕೆ ಹಸಿಯಾದ, ಮೊಳಕೆ ಬರಿಸಿದ ಕಾಳುಗಳು, ಬಾದಾಮಿ, ಕಡಲೆಬೀಜಗಳು ಪೂರಕ.ಹುರಿದ, ಕರಿದ ಬೀಜಗಳಿಗಿಂತ ನೆನೆಸಿದ ಬೀಜಗಳು ಉತ್ತಮ. ಹಾಗೆಯೇ ಕಡಿಮೆ ಎಣ್ಣೆಯಲ್ಲಿ ತಯಾರಾದ ಮೀನು, ಮೊಟ್ಟೆ ಆರೋಗ್ಯಕರ. ಉತ್ತಮ ಪ್ರೊಟೀನ್ ಅನ್ನು ಒಳಗೊಂಡಿರುವ ಮತ್ತೊಂದು ಅವಶ್ಯಕ ಆಹಾರ ಪದಾರ್ಥ ಹಾಲು. ಅದರಲ್ಲಿರುವ `ಟ್ರಿಪ್ಟೋಫ್ಯಾನ್' ಎಂಬ ಅಮೈನೋ ಆಮ್ಲ ಮನಸ್ಸಿನ ಒತ್ತಡ ಕಡಿಮೆ ಮಾಡಲು ಸಹಕರಿಸುತ್ತದಲ್ಲದೆ ಆಹ್ಲಾದ ಉಂಟು ಮಾಡುತ್ತದೆ.ಆದ್ದರಿಂದ ಹಾಲು, ಬಾದಾಮಿ ಹಾಲು, ತಾಜಾ ಹಣ್ಣಿನ ಮಿಲ್ಕ್ ಶೇಕ್‌ಗಳು ವಿದ್ಯಾರ್ಥಿಗಳಿಗೆ ಅತ್ಯುತ್ತಮ. ಮೊಸರು, ಮಜ್ಜಿಗೆಗಳು ಸಹ ವೆುದುಳಿಗೆ ಉತ್ತಮ ಪ್ರೊಟೀನ್ ನೀಡುತ್ತವೆ.ಸೂಕ್ಷ್ಮ ಆಹಾರಾಂಶಗಳು (Micro Nutrients)

ಮೆದುಳಿನ ಆರೋಗ್ಯಕ್ಕೆ ಅತ್ಯಗತ್ಯವಾಗಿ ಬೇಕಾಗಿರುವ ಇನ್ನಿತರ ಅಂಶಗಳೆಂದರೆ ಸೂಕ್ಷ್ಮ ಆಹಾರಾಂಶಗಳು. ಹೆಸರೇ ಹೇಳುವಂತೆ ಈ ಪೋಷಕಾಂಶಗಳು `ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು' ಎಂಬಂತೆ ಅತಿ ಕಡಿಮೆ ಪ್ರಮಾಣದಲ್ಲಿ ವೆುದುಳಿಗೆ ಅವಶ್ಯಕವಾದರೂ ಬಹಳ ಮುಖ್ಯವಾದವು. ಹಲವಾರು ವಿಟಮಿನ್‌ಗಳಾದ ಎ, ಬಿ, ಡಿ ಇತ್ಯಾದಿ  ಹಾಗೂ ಕಬ್ಬಿಣ, ಸುಣ್ಣ, ಸತುವಿನಂತಹ ಖನಿಜಗಳು ಈ ಮೈಕ್ರೋನ್ಯೂಟ್ರಿಯಂಟ್ ಗುಂಪಿನಲ್ಲಿ ಬರುತ್ತವೆ.ಸೆರೋಟೋನಿನ್ ಎಂಬ, ಮೆದುಳಿಗೆ ಅವಶ್ಯಕವಾದ ಅತಿ ಮುಖ್ಯ ನ್ಯೂರೋ ಟ್ರಾನ್ಸ್‌ಮಿಟರ್‌ನ ತಯಾರಿಕೆಗೆ ಬಿ ವಿಟಮಿನ್ ಅವಶ್ಯಕ. ಹಾಗೆಯೇ ಏಕಾಗ್ರತೆ, ಕೇಂದ್ರೀಕೃತ ಚಿಂತನೆಗೆ ಅವಶ್ಯಕವಾದ ಇತರ ನ್ಯೂರೋ ಟ್ರಾನ್ಸ್‌ಮಿಟರ್‌ಗಳ ತಯಾರಿಕೆಗೂ ಬಿ ವಿಟಮಿನ್ ಅವಶ್ಯಕ.ಬಿ ವಿಟಮಿನ್‌ಗಳು ಇಡಿಯಾದ ಧಾನ್ಯಗಳಲ್ಲಿ, ಹೊಟ್ಟು ತೆಗೆಯದ, ಪಾಲಿಶ್ ಮಾಡದ ಧಾನ್ಯಗಳಲ್ಲಿ ಸಿಗುತ್ತವೆ. ಆದ್ದರಿಂದ ಸಂಪೂರ್ಣವಾಗಿ ಹೊಟ್ಟು ತೆಗೆದ, ಸಂಸ್ಕರಿಸಿದ ಪದಾರ್ಥಗಳಿಂದ ತಯಾರಾದ ಆಹಾರಗಳಿಗಿಂತ ಸಂಸ್ಕರಿಸದ ಆಹಾರಗಳು ವಿದ್ಯಾರ್ಥಿ ಸ್ನೇಹಿಗಳು.ಇನ್ನು ಮತ್ತೊಂದು ಸೂಕ್ಷ್ಮ ಪೋಷಕಾಂಶ ಎಂದರೆ ಕಬ್ಬಿಣ. ಏಕಾಗ್ರತೆಗೆ, ಮೆದುಳಿಗೆ ಸಮರ್ಪಕವಾಗಿ ರಕ್ತ ಹಾಗೂ ಆಮ್ಲಜನಕ ಪೂರೈಕೆಯಾಗಬೇಕಾದರೆ ಆಹಾರದಲ್ಲಿ ಕಬ್ಬಿಣದ ಅಂಶ ಬಹು ಮುಖ್ಯ. ಹಸಿರು ಸೊಪ್ಪು, ತರಕಾರಿಗಳು, ಖರ್ಜೂರ, ದ್ರಾಕ್ಷಿಗಳಂತಹ ಒಣ ಹಣ್ಣುಗಳು ಪರೀಕ್ಷೆ ವೇಳೆಯಲ್ಲಿ ನಿಮ್ಮ ಸಂಗಾತಿಯಾಗಲಿ.ದಿನನಿತ್ಯದ ಆಹಾರದಲ್ಲಿ ದಂಟಿನ ಸೊಪ್ಪು, ಪಾಲಕ್, ಮೆಂತ್ಯೆ ಬಳಸಿ. ಕಬ್ಬಿಣದ ಕೊರತೆಯಿಂದ ಬರುವ ಅನೀಮಿಯಾ, ಅನೀಮಿಯಾದಿಂದ ಉಂಟಾಗುವ ಬೌದ್ಧಿಕ ಕ್ರಿಯೆಯ ಹಿನ್ನಡೆಯಿಂದ ದೂರವಿರಿ. ನೆನಪಿಡಿ, ಅತಿಯಾದ ಕಾಫಿ, ಟೀ, ತಂಪು ಪಾನೀಯಗಳು ದೇಹವು ಕಬ್ಬಿಣ ಹೀರಿಕೊಳ್ಳಲು ತಡೆಯುಂಟು ಮಾಡುತ್ತವೆ. ಬದಲಿಗೆ ವಿಟಮಿನ್ ಸಿ ಯುಕ್ತ ಆಹಾರಗಳಾದ ನಿಂಬೆಯ ಜ್ಯೂಸ್, ಸೀಬೆ ಹಣ್ಣು, ಬೆಟ್ಟದ ನೆಲ್ಲಿಕಾಯಿ, ಕಿತ್ತಳೆಗಳು ಕಬ್ಬಿಣದ ಹೀರಿಕೆಗೆ ಸಹಾಯ ಮಾಡುತ್ತವೆ.ಹೀಗೇ ಮತ್ತೊಂದು ಅವಶ್ಯಕ ಮೈಕ್ರೋನ್ಯೂಟ್ರಿಯೆಂಟ್ ಎಂದರೆ Zinc ಅಥವಾ ಸತು. ನೆನಪಿನ ಶಕ್ತಿಗೆ, ಹೊಸ ವಿಷಯದ ಕಲಿಕೆಗೆ, ಆಲೋಚನಾ ಶಕ್ತಿಗೆ ಸತು ಮೆದುಳಿಗೆ ಅವಶ್ಯಕ. ಕಾಳುಗಳಲ್ಲಿ, ಎಣ್ಣೆ ಬೀಜಗಳಲ್ಲಿ ಸತು ನಮಗೆ ಲಭ್ಯ.ಹಾಲಿನಲ್ಲಿ, ಮೊಸರಿನಲ್ಲಿ, ರಾಗಿಯಲ್ಲಿ ನಮಗೆ ಸಿಗುವ Calcium ಅಥವಾ ಸುಣ್ಣ, ಮೆದುಳಿನಲ್ಲಿ ನಡೆಯುವ ವಿದ್ಯುತ್ ಚಟುವಟಿಕೆಗೆ ಅತ್ಯವಶ್ಯಕ. ವೆುದುಳಿನಲ್ಲಿರುವ ಹಾನಿಕಾರಕ ಅಂಶಗಳನ್ನು ತೆಗೆದು ಹಾಕಿ, ಮೆದುಳನ್ನು ಸ್ವಚ್ಛ ಮಾಡಲೂ ಸುಣ್ಣ ಸಹಕಾರಿ. ಸುಣ್ಣದ ಹೀರಿಕೆಗೂ ಕೆಫೀನ್‌ಯುಕ್ತ ಕಾಫಿ, ಟೀ, ತಂಪು ಪಾನೀಯಗಳು, Antacidಗಳು ಹಾಗೂ ಮದ್ಯ ಶುದ್ಧ ವೈರಿ.ಇವುಗಳೆಲ್ಲದರ ಜೊತೆಗೆ ಆ್ಯಂಟಿ ಆಕ್ಸಿಡೆಂಟ್ಸ್‌ಗಳನ್ನು (Antioxidants) ಒಳಗೊಂಡ ತಾಜಾ ಹಣ್ಣು, ತರಕಾರಿಗಳು ವೆುದುಳಿನ ಕ್ರಿಯೆಗೆ ಪೂರಕ.  ಪ್ರತಿ ಹಣ್ಣಿನಲ್ಲಿರುವ ನೈಸರ್ಗಿಕ ಬಣ್ಣವೂ ವೆುದುಳಿನ ನರಕೋಶಗಳ ಜೋಡಣೆಗೆ, ರಕ್ಷಣಾ ಕ್ರಿಯೆಗೆ, ಅನವಶ್ಯಕ ವಿಷ ವಸ್ತುಗಳ ಹೊರ ಹಾಕುವಿಕೆಗೆ ಅವಶ್ಯಕ. ಸಿದ್ಧ ಜ್ಯೂಸ್ ಪ್ಯಾಕ್‌ಗೆ ಕೈ ಹಾಕುವ ಮುನ್ನ ಒಮ್ಮೆ ತರಕಾರಿ- ಹಣ್ಣಿನ ಮಾರುಕಟ್ಟೆ ಕಡೆಗೆ ಗಮನ ಹರಿಸಿ. ಕಲ್ಲಂಗಡಿ, ಕಿತ್ತಳೆ, ಕ್ಯಾರೆಟ್, ಟೊಮೆಟೊಗಳು ವಿದ್ಯಾರ್ಥಿಗಳನ್ನು ಹೆಚ್ಚು ಚೂಟಿ ಮಾಡಬಲ್ಲವು.ಕಡೆಯದಾಗಿ ಒಂದು ಕಿವಿ ಮಾತು: ಬೌದ್ಧಿಕ ಸಾಧನೆಗೆ ಶಾಲಾ ಕಾಲೇಜು, ಓದು ಎಷ್ಟು ಮುಖ್ಯವೋ ಆಹಾರವೂ ಅಷ್ಟೇ ಅಥವಾ ಅದಕ್ಕಿಂತ ಹೆಚ್ಚು ಮುಖ್ಯ. ಹೀಗಾಗಿ ನಿಮ್ಮ ಮೆದುಳಿನ ಆರೋಗ್ಯಕ್ಕಾಗಿ ಉತ್ತಮ ಆಹಾರವನ್ನು ಸೇವಿಸಲಾರಿರಾ?ನೀರು:

ಮೆದುಳಿನ ಸಮರ್ಪಕವಾದ ಕ್ರಿಯೆಗೆ ನೀರು ಅತಿ ಅವಶ್ಯಕ. ಸಹಜವಾದ ನ್ಯೂರೋ ಟ್ರಾನ್ಸ್‌ಮಿಶನ್ ಕ್ರಿಯೆಗೆ, ಮೆದುಳಿನ ಒಳಚರ್ಮದ (membrane)ಸಹಜ ಕಾರ್ಯಗಳಿಗೆ ನೀರು ಬಹು ಮುಖ್ಯ. ವಿದ್ಯಾರ್ಥಿಗಳಿಗೆ ಪರೀಕ್ಷಾ ವೇಳೆಯಲ್ಲಿ ಅತಿ ಅವಶ್ಯಕವಾದ ವೇಗದ ಚಿಂತನೆಗೆ, ವಿಷಯದ ಮರುಕಳಿಕೆಗೆ ದೇಹ ಹಾಗೂ ವೆುದುಳಿನಲ್ಲಿ ನೀರಿನ ಸಮರ್ಪಕ ಪ್ರಮಾಣ ಬಹು ಮುಖ್ಯ.ಪರೀಕ್ಷೆ ವೇಳೆಯಲ್ಲಿ ಸಮರ್ಪಕವಾಗಿ ನೀರನ್ನು ಕುಡಿಯುವ ವಿದ್ಯಾರ್ಥಿಗಳಲ್ಲಿ ಪರೀಕ್ಷಾ ಸಮಯದಲ್ಲಿ ಉಂಟಾಗುವ ಮರೆವು, ಆತಂಕ, ನೆನಪಿನ ಶಕ್ತಿ ಕುಂದುವಿಕೆ ಸಮಸ್ಯೆಗಳು ಹೆಚ್ಚಾಗಿ ಕಂಡುಬರುವುದಿಲ್ಲ ಎಂಬುದನ್ನು ಸಂಶೋಧನೆಗಳು ಖಚಿತಪಡಿಸಿವೆ.ಬಾಯಾರಿಕೆ ಎಂದು ಗುರುತಿಸುವ ವೇಳೆಗಾಗಲೇ ನಮ್ಮ ದೇಹದಲ್ಲಿ ಶೇಕಡಾ 10ರಷ್ಟು ನಿರ್ಜಲತೆ ಹಾಗೂ ಬೌದ್ಧಿಕ ಸಾಮರ್ಥ್ಯದಲ್ಲಿ ಶೇಕಡಾ 10ರಷ್ಟು ಇಳಿಮುಖ ಆಗಿರುತ್ತದೆ. ಹಾಗಾದರೆ ಈಗ ಹೇಳಿ, ಓದುವ ವಿದ್ಯಾರ್ಥಿಗಳ ಪಕ್ಕದಲ್ಲಿ ನೀರಿನ ಬಾಟಲಿ ಮುಖ್ಯವೋ ಅಥವಾ ಚಹಾ, ಕಾಫಿ, ಕೂಲ್ ಡ್ರಿಂಕ್ಸ್‌ಗಳೋ? ಇನ್ನು ಪರೀಕ್ಷಾ ಕೊಠಡಿಯೊಳಗೆ ಹೋಗುವಾಗ ನೀರಿನ ಬಾಟಲಿ ತೆಗೆದುಕೊಂಡು ಹೋಗುವುದನ್ನು ಹಾಗೂ ಮಧ್ಯ ಮಧ್ಯ ನೀರು ಗುಟುಕರಿಸುವುದನ್ನು ವಿದ್ಯಾರ್ಥಿಗಳಾದವರು ಅಭ್ಯಾಸ ಮಾಡಿಕೊಳ್ಳಬೇಕು.ಮನೆಯಲ್ಲೇ ತಯಾರಿಸಿ

ಕಾರ್ಬೊಹೈಡ್ರೇಟ್ಸ್, ಪ್ರೊಟೀನ್ಸ್, ಫ್ಯಾಟ್ಸ್, ವಿಟಮಿನ್ಸ್ ಹಾಗೂ ಖನಿಜಗಳಿಂದ ಕೂಡಿದ ಸಮತೋಲನ ಆಹಾರವನ್ನು ಮನೆಯಲ್ಲಿ ತಯಾರಿಸಿ ಮಕ್ಕಳಿಗೆ ನೀಡಿ. ಇಡಿಯಾದ ಧಾನ್ಯಗಳು, ಕಾಳುಗಳಿಂದ ತಯಾರಾದ ಆಹಾರ- ಮುದ್ದೆ, ಗೋಧಿ, ಚಪಾತಿ, ರೊಟ್ಟಿ, ಅನ್ನ ಸೇವಿಸಿ. ಮೈದಾ, ಸಂಸ್ಕರಿಸಿದ ಧಾನ್ಯಗಳಿಂದ  ದೂರ ಇರಿ.ಹೆಚ್ಚಿನ ತಾಜಾ ತರಕಾರಿ, ಹಣ್ಣುಗಳನ್ನು ಸಲಾಡ್‌ಗಳ ರೂಪದಲ್ಲಿ ಅಥವಾ ಹಾಗೆಯೇ ಉಪಯೋಗಿಸಿ. ಮೊಳಕೆ ಬರಿಸಿದ ಕಾಳುಗಳು, ನೆನೆಸಿಟ್ಟ ಮೂರು ನಾಲ್ಕು ಬಾದಾಮಿಯ ನಿತ್ಯ ಸೇವನೆ ಒಳ್ಳೆಯದು.ಸಮರ್ಪಕವಾಗಿ ನೀರಿನ ಸೇವನೆ ಅತಿ ಅವಶ್ಯಕ. ಓದುವಾಗಲಂತೂ ನೀರಿನ ಪೂರೈಕೆ ಬಹು ಮುಖ್ಯ. ಹೆಚ್ಚು ಬಾರಿ ವಿಸರ್ಜನೆಗೆ ಹೋಗಬೇಕಾಗುತ್ತದೆ ಎಂದು ನೀರನ್ನು ಸರಿಯಾಗಿ ಕುಡಿಯದಿರುವ ವಿದ್ಯಾರ್ಥಿಗಳು ಇತ್ತ ಗಮನ ಹರಿಸಬೇಕು.ಪರೀಕ್ಷೆಯ ದಿನ ಹಾಗೂ ಪ್ರತಿನಿತ್ಯವೂ ಬೆಳಗಿನ ಉಪಾಹಾರವನ್ನು ತಪ್ಪಿಸದಿರಿ. ಉಪಾಹಾರಕ್ಕೆ ಧಾನ್ಯಗಳಿಂದ ತಯಾರಾದ ಸಂಕೀರ್ಣ ಕಾರ್ಬೋಹೈಡ್ರೇಟ್, ಉತ್ತಮ ಪ್ರೊಟೀನ್ ಹಾಗೂ ವಿಟಮಿನ್‌ಗಳು ಅವಶ್ಯಕ.

ಕಾಫಿ, ಜ್ಯೂಸ್ ಅಥವಾ ಬ್ರೆಡ್- ಜಾಮ್‌ಗಳಷ್ಟೇ ಉತ್ತಮ ಉಪಾಹಾರ ಆಗುವುದಿಲ್ಲ.ಪ್ರೊಟೀನ್, ಕಾರ್ಬೋಹೈಡ್ರೇಟ್ ಒಳಗೊಂಡ ರೊಟ್ಟಿ/ ಚಪಾತಿ/ ಇಡ್ಲಿ/ ಸಾಂಬಾರ್/ ಪಲ್ಯ, ಒಂದು ಲೋಟ ಹಾಲು ಜೊತೆಗೆ ಒಂದು ಹಣ್ಣಿದ್ದರೆ ಅದು ಉತ್ತಮ ಫಲಾಹಾರ ಎನಿಸಿಕೊಳ್ಳುತ್ತದೆ. ಯೋಚನಾ ಶಕ್ತಿಗೆ, ಆಲೋಚನೆಗೆ ಪೂರಕವಾಗುತ್ತದೆ. ದೀರ್ಘಕಾಲಿಕ ಶಕ್ತಿಯನ್ನು ನೀಡಿ, ಆಲಸ್ಯ, ಮಂಪರನ್ನು ದೂರ ಇರಿಸುತ್ತದೆ. ಕಿತ್ತಳೆ, ಬೆಟ್ಟದ ನೆಲ್ಲಿಕಾಯಿ, ನಿಂಬೆಹಣ್ಣು ಇತ್ಯಾದಿ ರಸ, ಎಳನೀರು, ಮಜ್ಜಿಗೆ, ಮಿಲ್ಕ್‌ಶೇಕ್‌ಗಳನ್ನು ಮಕ್ಕಳಿಗೆ ನೀಡಿ. ಇವುಗಳ ತಯಾರಿಕೆಗೆ ಸ್ವಲ್ಪ ಶ್ರಮ ವಹಿಸಿದರೂ ಕಾಫಿ, ಟೀ, ಕೂಲ್‌ಡ್ರಿಂಕ್ಸ್‌ಗಳನ್ನು ಕುಡಿದು ಅನಾರೋಗ್ಯ ಪಡೆಯುವುದು ತಪ್ಪುತ್ತದೆ. ಅಷ್ಟೇ ಅಲ್ಲ ವಿದ್ಯಾರ್ಥಿಗಳಲ್ಲಿ ಚುರುಕುತನ ಮೂಡುತ್ತದೆ.ಆರೋಗ್ಯಕರ ಆಹಾರವೆಂದರೆ ದುಬಾರಿಯೇ ಆಗಬೇಕಾದ್ದಿಲ್ಲ. ಬೆಲೆಯಲ್ಲಿ ಕಡಿಮೆ ಇದ್ದರೂ ಆರೋಗ್ಯಕರವಾಗಿರುವ ರಾಗಿ, ಸ್ಥಳೀಯವಾಗಿ ದೊರೆಯುವ ಬೇಳೆ ಕಾಳುಗಳು, ಹಿತ್ತಲಲ್ಲಿ ಬೆಳೆಯುವ ಹಸಿರು ಸೊಪ್ಪು, ತರಕಾರಿಗಳು, ಗ್ರಾಮೀಣ ಆಹಾರಗಳು ಆಧುನಿಕ ಆಹಾರಗಳಿಗಿಂತ ಉತ್ತಮ ಎನಿಸಿಕೊಳ್ಳಬಲ್ಲವು.ಇನ್ನು ಉತ್ತೇಜನ, ಧೈರ್ಯ, ವಿಶ್ರಾಂತಿ, ವಿರಾಮ, ಮನರಂಜನೆ, ಆಟಗಳೂ ವಿದ್ಯಾರ್ಥಿಗಳಿಗೆ ಬೇಕು. ಇವುಗಳಿಗೂ ಪೋಷಕರ ಸಹಕಾರ ಇರಲಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.