ಶನಿವಾರ, ಜೂನ್ 12, 2021
24 °C

ಪರೂಲ್ ಕನ್ನಡ ಪ್ಯಾರ್!

ಅಮಿತ್ ಎಂ.ಎಸ್. Updated:

ಅಕ್ಷರ ಗಾತ್ರ : | |

ಪರೂಲ್ ಕನ್ನಡ ಪ್ಯಾರ್!

`ಪ್ಯಾರ್‌ಗೆ ಆಗ್ಬುಟ್ಟೈತೆ...~ ಎಂದು ಕೋಮಲ್ ಜೊತೆ ಹಾಡಿ ಕುಣಿದ ಮುಂಬೈ ಬೆಡಗಿ ಪರೂಲ್‌ಗೆ ಆ ಒಂದು ಹಾಡಿನಿಂದಾಗಿಯೇ ಅದೃಷ್ಟ ಖುಲಾಯಿಸಿದೆ. `ಗೋವಿಂದಾಯ ನಮಃ~ ಚಿತ್ರ ಬಿಡುಗಡೆಗೂ ಮುನ್ನವೇ ಅವಕಾಶಗಳು ಪರೂಲ್‌ರನ್ನು ಹುಡುಕಿಕೊಂಡು ಬರುತ್ತಿವೆ.ಇದರಿಂದ ಪುಳಕಿತಗೊಂಡಿರುವ ಪರೂಲ್‌ಗೆ ಕನ್ನಡ ಚಿತ್ರರಂಗದ ಮೇಲೂ ಪ್ಯಾರ್‌ಗೆ ಆಗ್ಬಿಟ್ಟಿದೆ. ಸದ್ಯಕ್ಕೆ ಕನ್ನಡದಲ್ಲೇ ತಳವೂರುವ ಸೂಚನೆಯನ್ನೂ ನೀಡಿದ್ದಾರೆ.

`ಕೆ.ಮಂಜುರಂತಹ ನಿರ್ಮಾಪಕರಿಂದ ಚಿತ್ರದಲ್ಲಿ ನಟಿಸಲು ಆಹ್ವಾನ ಬಂದಿವೆ.ಹೀಗೆ ಬಂದ ಅವಕಾಶಗಳಲ್ಲಿ ಕೆಲವು ಚಿತ್ರಗಳಿಗೆ `ಓಕೆ~ ಎಂದಿದ್ದೇನೆ. ಆದರೆ ಯಾವುದನ್ನೂ ಇನ್ನೂ ಸಂಪೂರ್ಣವಾಗಿ ಒಪ್ಪಿಕೊಂಡಿಲ್ಲ~ ಎನ್ನುವ ಪರೂಲ್ `ಸಿನಿಮಾ ರಂಜನೆ~ಯೊಂದಿಗೆ ಒಂದಷ್ಟು ಮಾತುಗಳನ್ನು ಬಿಚ್ಚಿಟ್ಟರು.ಪರೂಲ್ ಕನ್ನಡಕ್ಕೆ ಬಂದಿದ್ದು ಆಕಸ್ಮಿಕವಾಗಿ. `ಗೋವಿಂದಾಯ ನಮಃ~ ಚಿತ್ರದ ಮಮ್ತಾಜ್ ಪಾತ್ರಕ್ಕಾಗಿ ಮುಂಬೈನ ಹೋಟೆಲ್ ಒಂದರಲ್ಲಿ ಚಿತ್ರತಂಡ ಆಡಿಷನ್ ನಡೆಸುತ್ತಿತ್ತು.ಸುಮಾರು 200 ನಟಿಯರು ಬಂದಿದ್ದರೂ ಯಾರೂ ಆಯ್ಕೆಯಾಗಲಿಲ್ಲ. ಸ್ನೇಹಿತರೊಬ್ಬರನ್ನು ಭೇಟಿ ಮಾಡಲು ಅದೇ ಹೋಟೆಲ್‌ಗೆ ಹೋಗಿದ್ದ ಪರೂಲ್‌ರನ್ನು ನೋಡಿದ ಚಿತ್ರತಂಡದವರು `ಕನ್ನಡದಲ್ಲಿ ನಟಿಸುತ್ತೀರಾ~ ಎಂದು ಕೇಳಿದರು. ಕಥೆ ಕೇಳಿದ ಬಳಿಕ ಪರೂಲ್ ಕೂಡಲೇ ಒಪ್ಪಿಕೊಂಡರಂತೆ.ಮಾಧುರಿ ದೀಕ್ಷಿತ್‌ರ ಅಪ್ಪಟ ಅಭಿಮಾನಿಯಾದ ಪರೂಲ್‌ಗೆ ಅವರಂತೆ ಆಗಬೇಕೆಂಬ ಕನಸು. ಇದಕ್ಕೆ ಮನೆಯಲ್ಲಿ ಪ್ರೋತ್ಸಾಹವೂ ಸಿಕ್ಕಿತು. ವೃತ್ತಿಯಲ್ಲಿ ಇಂಟೀರಿಯರ್ ಡಿಸೈನರ್ ಆಗಿರುವ ಅವರು ಹಲವು ಖ್ಯಾತ ನಟರ ಮನೆಗಳಿಗೆ ಆಂತರಿಕ ಸೌಂದರ್ಯ ನೀಡುವ ಕೆಲಸವನ್ನೂ ಮಾಡಿದ್ದಾರೆ.ಡ್ಯಾನ್ಸ್ ಮತ್ತು ಕಾಮಿಡಿಯ ಅನೇಕ ರಿಯಾಲಿಟಿ ಷೋಗಳಲ್ಲಿ ಭಾಗವಹಿಸಿದ್ದ ಪರೂಲ್ ಮಲಯಾಳಂ `ಕೃತ್ಯಂ~, `ಕ್ರೇಜಿ ಬಾಯ್ಸ~ ಚಿತ್ರಗಳಲ್ಲಿ ಮತ್ತು ತಮಿಳಿನಲ್ಲಿ ಧನುಷ್ ಜೊತೆ `ಡ್ರೀಮ್ಸ~ ಚಿತ್ರದಲ್ಲಿ ನಟಿಸಿದ್ದಾರೆ.

 

ಈಗ ತೆಲುಗಿನ ಎರಡು ಚಿತ್ರಗಳು ಕೈಯಲ್ಲಿದ್ದರೆ, ಮಲಯಾಳಂನ ಸೂಪರ್ ಹಿಟ್ ಚಿತ್ರ `ಟ್ರಾಫಿಕ್~ನ ಹಿಂದಿ ಅವತರಣಿಕೆಯಲ್ಲಿ ಸಹ ಪರೂಲ್ ನಟಿಸುತ್ತಿದ್ದಾರೆ.

 

`ಕನ್ನಡ ಸ್ವಲ್ಪ ಸ್ವಲ್ಪ ಬರ್ತದೆ~ ಎನ್ನುವ ಪರೂಲ್ ಸುದೀಪ್ ಮತ್ತು ರಮ್ಯಾರ ಅಭಿಮಾನಿ ಕೂಡ. ಯೋಗರಾಜ್ ಭಟ್, ಗುರುಪ್ರಸಾದ್‌ರಂತಹ ನಿರ್ದೇಶಕರ ಚಿತ್ರಗಳಲ್ಲಿ ನಟಿಸುವುದು ಅವರ ಬಯಕೆ. "ಚಿತ್ರದಲ್ಲಿ ಭಾಷೆ ಉರ್ದು ಮಿಶ್ರಿತವಾಗಿರುವುದರಿಂದ ನಟನೆ ಕಷ್ಟವಾಗಲಿಲ್ಲ. ಕನ್ನಡ ಸುಲಭದ ಭಾಷೆ ಎನ್ನುವ ಆಕೆಗೆ ಕನ್ನಡ ಕಲಿತು, ಸ್ವತಃ ಡಬ್ಬಿಂಗ್ ಮಾಡುವ ಆಸೆಯೂ ಇದೆ.`ಗೋವಿಂದಾಯ ನಮಃ~ ಚಿತ್ರದಲ್ಲಿ ಪರೂಲ್‌ಗೆ ಬಡತನದಲ್ಲಿರುವ ಮುಸ್ಲಿಂ ಕುಟುಂಬದ ಯುವತಿಯ ಪಾತ್ರ. ಕಷ್ಟಕಾಲದಲ್ಲಿ ತಂದೆಗೆ ಸಹಾಯ ಮಾಡುವ ವ್ಯಕ್ತಿಯ ಮೇಲೆ ಆಕೆಗೆ ಸಹಜವಾಗಿಯೇ ಪ್ರೀತಿ ಮೂಡುತ್ತದೆ.ಇದು ಪಕ್ಕಾ ಕಾಮಿಡಿ ಚಿತ್ರವಲ್ಲ. ಬದಲಾಗಿ ಸಾಂದರ್ಭಿಕ ಹಾಸ್ಯ ಬೆರೆತ ಚಿತ್ರವಷ್ಟೆ. ಇಲ್ಲಿ ಪ್ರೀತಿ, ಎಮೋಷನ್, ಫೈಟ್ ಎಲ್ಲವೂ ಇದೆ. ನಾಲ್ವರು ನಾಯಕಿರಿದ್ದರೂ ತಮ್ಮ ಪಾತ್ರಕ್ಕೆ ಹೆಚ್ಚಿನ ಮಹತ್ವವಿದೆ ಎಂಬ ಖುಷಿ ಅವರದು.ಆರಂಭದಲ್ಲಿ ಬೆಂಗಳೂರಿನಲ್ಲಿ ಹೇಗೆ ಇರುವುದು ಎಂದು ಹೆದರಿಕೊಂಡಿದ್ದ ಅವರಿಗೆ ಉದ್ಯಾನ ನಗರಿ ಮುಂಬೈನಂತೆಯೇ ಆತ್ಮೀಯ ಎನಿಸಿದೆಯಂತೆ. ಚಿತ್ರೀಕರಣದ ಕ್ಷಣಗಳಂತೂ ಸದಾ ಮೆಲುಕು ಹಾಕುವಂತಹುದು ಎನ್ನುವ ಅವರು, ಪ್ಯಾರ್‌ಗೆ ಆಗ್ಬುಟ್ಟೈತೆ ಹಾಡಿನ ಚಿತ್ರೀಕರಣದ ಸಂದರ್ಭವನ್ನು ನೆನೆಸಿಕೊಂಡರು. ಅವರು ಹಾಡಿನಲ್ಲಿ ತಟ್ಟೆಯಲ್ಲಿದ್ದ ಚಿಕನ್ ಅನ್ನು ದೂರ ತಳ್ಳುವ ಸನ್ನಿವೇಶವಿದೆ.ಆದರೆ ಅಪ್ಪಟ ಸಸ್ಯಾಹಾರಿಯಾಗಿರುವ ಅವರಿಗೆ ಅದನ್ನು ಮುಟ್ಟುವುದಿರಲಿ ನೋಡಲೂ ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಆ ತಟ್ಟೆಯಲ್ಲಿ ನಕಲಿ ಚಿಕನ್ ಅನ್ನು ಇರಿಸಲಾಯಿತಂತೆ. ಬಿಜಾಪುರದಲ್ಲಿ ಚಿತ್ರೀಕರಣ ನೋಡಲು ಬಂದಿದ್ದ ಜನರೂ ಹಾಡನ್ನು ಗುನುಗುತ್ತಿದ್ದದ್ದು ಕೇಳಿ ಅದು ಹಿಟ್ ಆಗುತ್ತದೆ ಎಂಬ ಅನಿಸಿಕೆ ಅವರಲ್ಲಿ ಮೂಡಿತ್ತಂತೆ.ಈ ಹಾಡಿನಲ್ಲಿ ನಟಿಸಿದ್ದ ಮಾತ್ರಕ್ಕೆ ನಾನು ಕರ್ನಾಟಕದಲ್ಲಿ ಜನಪ್ರಿಯಳಾದೆ ಎಂಬ ಸಂತಸ ಅವರದು. ಇದೇ ರೀತಿ ಚಿತ್ರವೂ ಗೆಲ್ಲುತ್ತದೆ. ನನಗೆ ಒಳ್ಳೆ ಬ್ರೇಕ್ ನೀಡುತ್ತದೆ ಎಂದು ಆತ್ಮವಿಶ್ವಾಸದಿಂದ ನುಡಿಯುವ ಪರೂಲ್‌ಗೆ ಇನ್ನೆರಡು ವರ್ಷ ಕನ್ನಡಲ್ಲೇ ನಟಿಸುವಷ್ಟು ಅವಕಾಶಗಳು ಬಂದಿವೆಯಂತೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.