ಬುಧವಾರ, ಮೇ 18, 2022
27 °C

ಪಾಂಡವರ ಪುಂಡಿ ಪಲ್ಯ!

ಆನಂದತೀರ್ಥ ಪ್ಯಾಟಿ Updated:

ಅಕ್ಷರ ಗಾತ್ರ : | |

`ಪಾಂಡವರು ವನವಾಸದಲ್ಲಿ ಇದ್ದಾಗ ಈ ಭಾಗಕ್ಕೆ ಬಂದಿದ್ದರು. ಅವರಿಗೆ ಅಡುಗೆ ಮಾಡಲು ದ್ರೌಪತಿ ಬಳಸಿದ್ದು ಈ ಪಲ್ಯ. ಹೀಗಾಗಿ ಇದಕ್ಕೆ ಪಾಂಡವರ ಪುಂಡಿಪಲ್ಯ ಅಂತಾರೆ...~ ಹೀಗಂತ ಹೇಳಿದ್ದು, ಗೊಟ್ಟಂಗೊಟ್ಟದ ನಿವಾಸಿ ಮಡಿವಾಳಯ್ಯ.ಅದು ಏನೇ ಇರಲಿ; ಈ ಪಲ್ಯೆ ವಿವರಗಳು ಕುತೂಹಲಕರ. ಗುಲ್ಬರ್ಗ ಜಿಲ್ಲೆ ಚಿಂಚೋಳಿ ತಾಲ್ಲೂಕಿನಲ್ಲಿರುವ ಕೊಂಚಾವರಂ ಕಾಡಿನಲ್ಲಿ ಈ ಸಸ್ಯ ಹೇರಳವಾಗಿ ಸಿಗುತ್ತದೆ. ಅದೂ ವರ್ಷದ ಕೆಲವು ನಿರ್ದಿಷ್ಟ ತಿಂಗಳಲ್ಲಿ ಮಾತ್ರ.ಹುಳಿ ರುಚಿಯುಳ್ಳ ಈ ಸಸ್ಯದ ಎಲೆಗಳನ್ನು ಸಾಂಬರ್ ಅಥವಾ ಬೇಳೆ ಪಲ್ಯಕ್ಕೆ (ತೊವ್ವೆಗೆ) ಬಳಸುತ್ತಾರೆ. ಇದು ಬಳ್ಳಿ; ಅಕ್ಕಪಕ್ಕದ ಗಿಡಗಳನ್ನು ತಬ್ಬಿಕೊಂಡು ಮೇಲೇರುತ್ತದೆ. ಕಾಡಿನಲ್ಲಿ ಸಹಜವಾಗಿ ಬೆಳೆಯುವ ಈ ಸಸ್ಯ, ಆಷಾಢದಿಂದ ಕಾರ್ತಿಕ ಮಾಸದವರೆಗೆ (ಜುಲೈನಿಂದ ನವೆಂಬರ್ ತಿಂಗಳವರೆಗೆ) ಹೆಚ್ಚಾಗಿ ಕಾಣಿಸುತ್ತದೆ. ಶ್ರಾವಣ ಮಾಸದಲ್ಲಿ ಮಾತ್ರ ಕಂಡ ಕಂಡಲ್ಲೆಲ್ಲ ಬೆಳೆದಿರುತ್ತದೆ ಎನ್ನುತ್ತಾರೆ, ರೈತ ಮಹಿಳೆ ಶಾಂತಮ್ಮ.

ತೆಳುಹಸಿರು ಎಲೆಗಳ ಈ ಬಳ್ಳಿ `ಕೆರಟಿಯಾ ಆರಿಕುಲೇಟಾ~ ಪ್ರಬೇಧ ಹಾಗೂ ವಿಟೇಸಿಯೇ ಕುಟುಂಬಕ್ಕೆ ಸೇರಿದ್ದು. ಎಲೆಗಳು ಅಂಗೈ ಆಕಾರದಲ್ಲಿರುತ್ತವೆ. ಸಸ್ಯ ಒಣ ಪ್ರದೇಶದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಎಲೆ ಹಾಗೂ ಎಳೆಯ ದಂಟುಗಳನ್ನು ಅಡುಗೆಗೆ ಬಳಸುತ್ತಾರೆ ಎನ್ನುತ್ತಾರೆ ಉಡುಪಿಯ ಸಸ್ಯ ವಿಜ್ಞಾನಿ ಡಾ. ಕೆ.ಜಿ.ಭಟ್.ಕೊಂಚಾವರಂ ಬೆಟ್ಟದ ಗೊಟ್ಟಂಗೊಟ್ಟದಲ್ಲಿ ಗಂಗಾಧರ ಬಕ್ಕಪ್ರಭುಗಳ ಗದ್ದುಗೆ ಇದೆ. ಶ್ರಾವಣ ಮಾಸದಲ್ಲಿ ನಿತ್ಯ ಪೂಜೆ ಸಲ್ಲಿಸುವಾಗ ಈ ಸೊಪ್ಪನ್ನು ಗದ್ದುಗೆಗೆ ಅರ್ಪಿಸುವ ಸಂಪ್ರದಾಯವಿದೆ. ಪೂಜೆಯಲ್ಲಿ ಅರ್ಪಿಸಲಾದ ಸೊಪ್ಪನ್ನು ಭಕ್ತರು ಮನೆಗೆ ಒಯ್ದು ಅಡುಗೆ ಮಾಡುತ್ತಾರೆ. 

 

`ಮೊದಲೆಲ್ಲ ಇಲ್ಲೇ ಸಿಗುತ್ತಿತ್ತು. ಈಗ ಎರಡು- ಮೂರು ಕಿಲೋಮೀಟರ್ ದೂರ ಕಾಡಿನೊಳಗೆ ಹೋಗಿ ತರಬೇಕು. ಒಮ್ಮಮ್ಮೆ ಹುಡುಕಾಡಿದರೂ ಸಿಗದಂಥ ಸ್ಥಿತಿ ಬರುತ್ತದೆ; ಹಾಗೆಂದು ಬಿಟ್ಟು ಬಿಡುವಂತಿಲ್ಲ. ಗದ್ದುಗೆಯ ಪೂಜೆಗಾಗಿ ಅರ್ಪಿಸಲು ಎಲ್ಲಾದರೂ ಹುಡುಕಿ ತರಲೇಬೇಕು~ ಎಂದು ಸ್ಥಳೀಯ ನಿವಾಸಿ  ಮಡಿವಾಳಯ್ಯ ಹೇಳುತ್ತಾರೆ.ಕುತೂಹಲದ ವಿಷಯವೆಂದರೆ, ತರಹೇವಾರಿ ತರಕಾರಿ- ಸೊಪ್ಪು ಬೆಳೆಯುವ ಗುಲ್ಬರ್ಗ ಸುತ್ತಲಿನ ಎಷ್ಟೋ ರೈತರಿಗೆ ಈ ಸೊಪ್ಪಿನ ಖಚಿತ ಹೆಸರು ಗೊತ್ತೇ ಇಲ್ಲ. ಅದನ್ನು ಬೆಳೆಯಲು ಸಹ ಪ್ರಯತ್ನಿಸಿಲ್ಲ. `ಓ ಅದಾ..? ಅದು ಪಾಂಡವರ ಪುಂಡಿಪಲ್ಯ. ಗೊಟ್ಟಂಗೊಟ್ಟ ಜಂಗಲ್‌ದಾಗ ಮಾತ್ರ ಬೆಳಿಯೂವಂಥಾದು. ಅದು ಬ್ಯಾರೆ ಕಡೆ ಬೆಳೆಯಂಗಿಲ್ರಿ~ ಎನ್ನುತ್ತಾರೆ!

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.