ಮಂಗಳವಾರ, ಮೇ 18, 2021
28 °C

ಪಾಂಡ್ಯ ಹತ್ಯೆ ಪ್ರಕರಣ: ಗೃಹ ಸಚಿವರಿಗೆ ವಿವರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಗುಜರಾತ್‌ನ ಮಾಜಿ ಸಚಿವ ಹರೇನ್ ಪಾಂಡ್ಯ ಹತ್ಯೆ ಪ್ರಕರಣದ ಆರೋಪಿಗಳನ್ನು ಖುಲಾಸೆ ಮಾಡಿರುವ ಗುಜರಾತ್ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ವಿಶೇಷ ಮೇಲ್ಮನವಿ ಸಲ್ಲಿಸಲು ಬಯಸಿರುವ ಸಿಬಿಐ, ಈ ಪ್ರಕರಣದ ವಿವರವನ್ನು ಕೇಂದ್ರ ಗೃಹ ಸಚಿವ ಪಿ. ಚಿದಂಬರಂ ಅವರಿಗೆ ಸೋಮವಾರ ಸಲ್ಲಿಸಿದೆ.ಈ ಪ್ರಕರಣಕ್ಕೆ ಸಂಬಂಧಿಸಿದ ಸಂಪೂರ್ಣ ವಿವರವನ್ನು ಗೃಹ ಸಚಿವರಿಗೆ ಮನವರಿಕೆ ಮಾಡಿಕೊಡಲಾಗಿದೆ. ಇದರಲ್ಲಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲು ಉದ್ದೇಶಿಸಿದ ವಿಶೇಷ ಮೇಲ್ಮನವಿ ಪ್ರಸ್ತಾವದ ವಿವರಗಳೂ ಇವೆ ಎಂದು ಸಿಬಿಐ ಮೂಲಗಳು ಹೇಳಿವೆ.ವಿಶೇಷ ಮೇಲ್ಮನವಿ ಪ್ರಸ್ತಾವದ ಬಗ್ಗೆ ಸಿಬಿಐನಲ್ಲಿ ಒಮ್ಮತವಿಲ್ಲ; ಭಿನ್ನಾಭಿಪ್ರಾಯವಿದೆ ಎಂದೂ ಮೂಲಗಳು ತಿಳಿಸಿವೆ.ಹರೇನ್ ಪಾಂಡ್ಯ ಅವರನ್ನು ಅಹಮದಾಬಾದ್‌ನ `ಲಾ ಗಾರ್ಡನ್~ ಪ್ರದೇಶದಲ್ಲಿ 2003ರ ಮಾ. 26ರಂದು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಸಿಬಿಐ ಈ ಪ್ರಕರಣದ ತನಿಖೆ ನಡೆಸಿದೆ.ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ಸಿಬಿಐ ಆರೋಪ ಪಟ್ಟಿ ಸಲ್ಲಿಸಿದ 12 ಮಂದಿಯನ್ನು ನಿರ್ದೋಷಿಗಳೆಂದು ತೀರ್ಪು ನೀಡಿತ್ತು. ಇದನ್ನು  ಗುಜರಾತ್ ಹೈಕೋರ್ಟ್ ಎತ್ತಿ ಹಿಡಿಯಿತು. ಹೈಕೋರ್ಟ್ ಊರ್ಜಿತಗೊಳಿಸಿದ ಈ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ವಿಶೇಷ ಮೇಲ್ಮನವಿ ಸಲ್ಲಿಸಲು ಬಯಸಿದ ಸಿಬಿಐ ಈ ಬಗ್ಗೆ ಕೇಂದ್ರ ಗೃಹ ಸಚಿವರಿಗೆ ವಿವರಣೆ ನೀಡಿದೆ.ಈ ಪ್ರಕರಣದ ಮರು ತನಿಖೆ ನಡೆಸಬೇಕು ಎಂದು ಹರೇನ್ ಪಾಂಡ್ಯ ಅವರ ಪತ್ನಿ ಜಾಗೃತಿ ಪಾಂಡ್ಯ ಒತ್ತಾಯಿಸಿದ್ದಾರೆ.`ಹರೇನ್ ಹತ್ಯೆಯಾಗಿ ಎಂಟು ವರ್ಷವಾಯಿತು. ನನಗೂ ಸಹಿಸಿ ಸಹಿಸಿ ಸಾಕಾಗಿದೆ. ನಿಜವಾದ ಕೊಲೆಗಡುಕರು ಮುಕ್ತವಾಗಿ ಓಡಾಡಿಕೊಂಡಿದ್ದಾರೆ ಎಂಬುದನ್ನು ಹೈಕೋರ್ಟ್ ತೀರ್ಪು  ಸಾಬೀತು ಮಾಡಿದೆ. ಬೇರೆ ಯಾರ ಮೇಲೆ ಆರೋಪ ಹೊರೆಸಿ ಸೆರೆಯಲ್ಲಿ ಹಾಕಲಾಗಿತ್ತು.ಅವರು ವಿನಾಕಾರಣ ಸೆರೆವಾಸ ಅನುಭವಿಸುವಂತಾಯಿತು~ ಎಂದು ಜಾಗೃತಿ ಪಾಂಡ್ಯ ಹೇಳಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.