ಮಂಗಳವಾರ, ಏಪ್ರಿಲ್ 13, 2021
30 °C

ಪಾಕ್‌ನಲ್ಲೇ ದಾವೂದ್ ವಾಸ: ಭಾರತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರೋಮ್ (ಪಿಟಿಐ): ಭಾರತದ ವಾಣಿಜ್ಯ ನಗರಿ ಮುಂಬೈನಲ್ಲಿ 1993ರಲ್ಲಿ ಸಂಭವಿಸಿದ ಬಾಂಬ್ ಸ್ಫೋಟದ ಪ್ರಮುಖ ಸಂಚುಕೋರ, ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸೇರಿದಂತೆ ಇತರ ಆರೋಪಿಗಳು ನೆರೆಯ ಪಾಕಿಸ್ತಾನದಲ್ಲಿಯೇ ಸುರಕ್ಷಿತವಾಗಿ ತಲೆಮರೆಸಿಕೊಂಡಿದ್ದಾರೆ ಎಂದು ಭಾರತ ಮಂಗಳವಾರ ಮತ್ತೊಮ್ಮೆ ಅಂತರರಾಷ್ಟ್ರೀಯ ವೇದಿಕೆಯಲ್ಲಿ ಬಲವಾಗಿ ಪ್ರತಿಪಾದಿಸಿದೆ.`257 ಅಮಾಯಕ ಜೀವಗಳನ್ನು ಬಲಿ ಪಡೆದ ಮುಂಬೈ ಸ್ಫೋಟದಲ್ಲಿ ದಾವೂದ್ ಹಾಗೂ ಇತರ ಆರೋಪಿಗಳ ಕೈವಾಡದ ಬಗ್ಗೆ ದೃಢವಾದ ಸಾಕ್ಷಿಗಳನ್ನು ಒದಗಿಸಿದರೂ ಇದುವರೆಗೂ ಪಾಕಿಸ್ತಾನ ಯಾವುದೇ ಕ್ರಮ ತೆಗೆದುಕೊಂಡಿಲ್ಲ~ ಎಂದು ಕೇಂದ್ರ ಗೃಹ ಸಚಿವ ಸುಶೀಲ್‌ಕುಮಾರ್ ಶಿಂಧೆ ಆರೋಪಿಸಿದ್ದಾರೆ.ಇಲ್ಲಿ ಇಂಟರ್‌ಪೋಲ್ ಮಹಾ ಅಧಿವೇಶನದಲ್ಲಿ ಮಾತನಾಡಿದ ಅವರು, ಇಂದಿಗೂ ಭಯೋತ್ಪಾದನೆಯ ನೆರಳಲ್ಲಿ ಬದುಕುತ್ತಿರುವ ಭಾರತ, ಗಡಿಯಾಚೆಯಿಂದ ಈ ಭೀತಿಯನ್ನು ಎದುರಿಸುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.ದಾವೂದ್ ಹಾಗೂ ಇತರ ಪಾತಕಿಗಳು ನೆರೆಯ ಪಾಕಿಸ್ತಾನದಲ್ಲಿರುವುದು ಇಡೀ ಜಗತ್ತಿಗೆ ತಿಳಿದಿರುವ ವಿಷಯ. ಭಾರತೀಯ ಸಂಜಾತ ಪಾತಕಿಗಳನ್ನು ಹಸ್ತಾಂತರಿಸುವಂತೆ 1993ರಲ್ಲಿ ಇಂಟರ್‌ಪೋಲ್ ರೆಡ್‌ಕಾರ್ನರ್ ನೋಟಿಸ್ ಹೊರಡಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಇಂಥ 670 ರೆಡ್‌ಕಾರ್ನರ್ ನೋಟಿಸ್ ಇನ್ನೂ ಇತ್ಯರ್ಥವಾಗದೆ ಉಳಿದಿವೆ ಎಂದರು.ಎಲ್ಲ ರೀತಿಯ ಭಯೋತ್ಪಾದನೆಯ ವಿರುದ್ಧ ಬದ್ಧತೆಯ ಹೋರಾಟ ನಡೆಸಿರುವ ಭಾರತಕ್ಕೆ ಅಗತ್ಯ ಸಹಕಾರ ನೀಡುವಂತೆ ಶಿಂಧೆ ಅಂತರರಾಷ್ಟ್ರೀಯ ಸಮುದಾಯಕ್ಕೆ ಮನವಿ ಮಾಡಿಕೊಂಡರು.  ಭಯೋತ್ಪಾದನೆಯ ಭೀತಿ ಎದುರಿಸುತ್ತಿರುವ ಜಗತ್ತಿನ ಎಲ್ಲ ರಾಷ್ಟ್ರಗಳ ತನಿಖಾ ಸಂಸ್ಥೆಗಳು ಪರಸ್ಪರ ಸಹಕಾರ ಮತ್ತು ಗುಪ್ತಚರ ಮಾಹಿತಿ ವಿನಿಮಯ ಮಾಡಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.ಭಯೋತ್ಪಾದನೆಯ ಪ್ರಕರಣಗಳ ತನಿಖೆ ಮತ್ತು ನ್ಯಾಯಾಂಗ ವಿಚಾರಣೆಗೆ ಸಂಬಂಧಿಸಿದಂತೆ ಇಂಟರ್‌ಪೋಲ್ ಕೆಲವು ನಿಯಮಾವಳಿಗಳನ್ನು ಸರಳಗೊಳಿಸುವಂತೆ ಅವರು ಮನವಿ ಮಾಡಿದರು.

 

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.