ಭಾನುವಾರ, ಮೇ 22, 2022
24 °C

ಪಾಕ್ ಗಾಯಕನ ವಿರುದ್ಧ ಫೆಮಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಘೋಷಣೆ ಮಾಡದೆ ಭಾರಿ ಮೊತ್ತದ ವಿದೇಶಿ ಹಣವನ್ನು ಹೊಂದಿದ್ದ ಆರೋಪ ಹೊತ್ತಿರುವ ಪಾಕಿಸ್ತಾನದ ಖ್ಯಾತ ಗಾಯಕ ರಹತ್ ಫತೆ ಅಲಿ ಖಾನ್ ಅವರ ವಿರುದ್ಧ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) ಮತ್ತು ಸೀಮಾಸುಂಕ ಕಾಯ್ದೆ ಉಲ್ಲಂಘನೆ ಆರೋಪವನ್ನು ಹೊರಿಸಿ, ಮೊಕದ್ದಮೆ ದಾಖಲಿಸಲಾಗಿದೆ.ಖಾನ್ ಮತ್ತು ಅವರ ವ್ಯವಸ್ಥಾಪಕ ಮಾರೂಫ್ ಅವರನ್ನು ವಿಚಾರಣೆಗೆ ಒಳಪಡಿಸಿರುವ ಕಂದಾಯ ಗುಪ್ತದಳ ನಿರ್ದೇಶನಾಲಯದ ಅಧಿಕಾರಿಗಳು ವಿಚಾರಣೆ ಪೂರ್ಣಗೊಳಿಸಿದ್ದು, ಅವರ ವಿರುದ್ಧ ಸೀಮಾ ಸುಂಕದ ಆಯುಕ್ತರಿಗೆ ವರದಿ ಸಲ್ಲಿಸಿದ್ದಾರೆ. ಖಾನ್ ಮತ್ತು ಮಾರೂಫ್ ಅವರನ್ನು ಫೆ.13ರಂದು ನವದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರೂ 60 ಲಕ್ಷ ಮೊತ್ತದ ವಿವರ ನೀಡದ ಹಣ ಹೊಂದಿದ್ದ ಆರೋಪದ ಮೇಲೆ ಕಂದಾಯ ಗುಪ್ತದಳ ನಿರ್ದೇಶನಾಲಯ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದರು. ವಿಚಾರಣೆ ನಂತರ ಅವರನ್ನು ದೇಶ ಬಿಟ್ಟು ಹೋಗದಂತೆ ನಿರ್ಬಂಧ ವಿಧಿಸಿ ಬಿಡುಗಡೆ ಮಾಡಲಾಗಿತ್ತು.ಸೀಮಾ ಸುಂಕ ಆಯುಕ್ತರು ಖಾನ್ ಮತ್ತು ಅವರ ವ್ಯವಸ್ಥಾಪಕರಿಗೆ ಭಾರಿ ದಂಡ ವಿಧಿಸಬಹುದಾಗಿದೆ. ಹಾಗೆಯೇ ಖಾನ್‌ಗೆ ಕಾರ್ಯಕ್ರಮ ನಿಗದಿ ಮಾಡುತ್ತಿದ್ದ ವ್ಯವಸ್ಥಾಪಕ ಚಿತ್ರೇಶ್ ಶ್ರೀವಾಸ್ತವ ಮತ್ತು ಮುಂಬೈನ ಇಬ್ಬರು ವಿದೇಶಿ ಹಣ ವಿನಿಮಯ ಏಜೆಂಟ್‌ಗಳು ಇನ್ನೂ ನಿರ್ದೇಶನಾಲಯದ ಅಧಿಕಾರಿಗಳ ವಶದಲ್ಲಿಯೇ ಇದ್ದು, ಅವರ ವಿಚಾರಣೆಯನ್ನು ಮುಂದುವರೆಸಿದ್ದಾರೆ. ಗಾಯಕ ಖಾನ್ ಮತ್ತು ಅವರ ವ್ಯವಸ್ಥಾಪಕರ ಬಳಿ ಯಾವ ಮೂಲದಿಂದ ಹಣ ಬಂದಿದೆ ಎನ್ನುವ ಕುರಿತು ಅಧಿಕಾರಿಗಳು ವಿಸ್ತೃತವಾಗಿ ಪ್ರಶ್ನೆ ಮಾಡಿದ್ದಾರೆ. ಗಾಯಕ ಮತ್ತು ತಂಡದವರು ನೀಡುತ್ತಿದ್ದ ಸಂಗೀತ ಕಾರ್ಯಕ್ರಮದಿಂದ ಬಂದ ಹಣ ಮತ್ತು ಅದನ್ನು ಹೇಗೆ ವರ್ಗಾವಣೆ ಮಾಡಲಾಗುತ್ತಿತ್ತು ಎನ್ನುವುದನ್ನು ಪ್ರಶ್ನಿಸಿದೆ. ಅವರಿಗೆ ಬಂದ ಡಾಲರ್‌ಗಳನ್ನು ತಂಡವು ಕಾನೂನು ಬಾಹಿರವಾಗಿ ರೂಪಾಯಿಗೆ ಪರಿವರ್ತಿಸಿಕೊಳ್ಳುತ್ತಿದ್ದರು ಎನ್ನಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.