ಪಾತರಾಮಗೊಳು ಅರಣ್ಯ: ಮೇಕೆ ನುಂಗಿದ ಹೆಬ್ಬಾವು
ಬಂಗಾರಪೇಟೆ: ತಾಲ್ಲೂಕಿನ ಬೂದಿಕೋಟೆ ಸಮೀಪದ ಪಾತರಾಮಗೊಳು ಅರಣ್ಯದಲ್ಲಿ ಮೇಕೆ ನುಂಗಿದ್ದ ಹೆಬ್ಬಾವು ಶುಕ್ರವಾರ ಕಂಡು ಬಂದಿದೆ. 15 ಅಡಿಗೂ ಹೆಚ್ಚು ಉದ್ದವಿರುವ ಹೆಬ್ಬಾವು ಮೇಕೆ ನುಂಗಿ ಒಂದೇ ಕಡೆ ಮಲಗಿದ್ದು, ನೋಡುಗರಿಗೆ ಭಯ ಹುಟ್ಟಿಸುವುಂತಿದೆ.
ಬೂದಿಕೋಟೆಯಿಂದ 6 ಕಿಲೋ ಮೀಟರ್ ದೂರದ ಪಾತರಾಮಗೊಳು ಗ್ರಾಮದಿಂದ ಸ್ವಲ್ಪ ದೂರದಲ್ಲಿರುವ ಅರಣ್ಯ ಪ್ರದೇಶ 300 ಎಕರೆಗೂ ಹೆಚ್ಚು ವ್ಯಾಪ್ತಿ ಹೊಂದಿದೆ. ತಮಿಳುನಾಡು-ಕರ್ನಾಟಕ ಗಡಿಭಾಗಕ್ಕೆ ಈ ಅರಣ್ಯ ಪ್ರದೇಶ ಹೊಂದಿಕೊಂಡಿದೆ. ಗುರುವಾರ ಈ ಭಾಗದ ಹಳ್ಳಿಗಳ ದನಗಾಯಿಗಳು ಕುರಿ-ಮೇಕೆ ಮೇಯಿಸಲು ಅರಣ್ಯದೊಳಗೆ ಹೋಗಿದ್ದಾಗ ಹೆಬ್ಬಾವು ಮೇಕೆ ನುಂಗಿದೆ.
ಶುಕ್ರವಾರ ಬೆಳಗ್ಗೆ ತಮ್ಮ ಗುಂಪಿನ ಮೇಕೆ ಕಡಿಮೆಯಾಗಿರುವುದನ್ನು ಕಂಡ ದನಗಾಯಿಗಳು ಹುಡುಕಿಕೊಂಡು ಹೋದಾಗ ಹೆಬ್ಬಾವು ಮೇಕೆಯನ್ನು ಮುಕ್ಕಾಲು ನುಂಗಿದ್ದನ್ನು ಕಂಡು ದೌಡಾಯಿಸಿ ಪಾತರಾಮಗೊಳು ಗ್ರಾಮದಲ್ಲಿ ಗ್ರಾಮಸ್ಥರಿಗೆ ತಿಳಿಸಿದ್ದಾರೆ.
ಹೆಬ್ಬಾವು ಮೇಕೆ ನುಂಗಿರುವ ವಿಚಾರ ಬೂದಿಕೋಟೆ ಹೋಬಳಿ ಸುತ್ತಮುತ್ತ ಗ್ರಾಮಗಳಿಗೆ ಜನರಿಗೆ ತಿಳಿದು ನೋಡಲು ತಂಡೋಪತಂಡವಾಗಿ ತೆರಳಿ ವೀಕ್ಷಿಸಿದರು. ವಿಷಯ ತಿಳಿಯುತ್ತಿದ್ದಂತೆ ಮಾಲೂರು ವಲಯ ಅರಣ್ಯಾಧಿಕಾರಿಗಳು ಸ್ಥಳಕ್ಕಾಗಮಿಸಿ ಹೆಬ್ಬಾವಿಗೆ ಜನರಿಂದ ಯಾವುದೇ ತೊಂದರೆಯಾಗದಂತೆ ಮುಂಜಾಗ್ರತಾ ಕ್ರಮವಾಗಿ ಅರಣ್ಯ ಕಾವಲು ಸಿಬ್ಬಂದಿ ನೇಮಿಸಲಾಗಿತ್ತು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.