ಸೋಮವಾರ, ಏಪ್ರಿಲ್ 12, 2021
28 °C

ಪಾಮೇನಹಳ್ಳಿ ಎಂಬ ಅಂಗವಿಕಲರ ಊರು!

ಆದಿತ್ಯ ಕೆ.ಎ. Updated:

ಅಕ್ಷರ ಗಾತ್ರ : | |

ದಾವಣಗೆರೆ: ತಾಲ್ಲೂಕಿನ ಪಾಮೇನಹಳ್ಳಿ ಸುಮಾರು 200 ಮನೆಗಳು ಇರುವ ಪುಟ್ಟ ಗ್ರಾಮ. ನಗರದಿಂದ 6 ಕಿ.ಮೀ. ದೂರದಲ್ಲಿ ಇರುವ ಊರಲ್ಲಿ ಅಂಗವಿಕಲರ ಸಂಖ್ಯೆಯೇ ಹೆಚ್ಚು! ಈ ಗ್ರಾಮದಲ್ಲಿ ಪ್ರತಿಯೊಂದು ಮನೆಯದು ಒಂದೊಂದು ರೀತಿಯ ಕಥೆ. ಹಳ್ಳಿಯ ಬಹುತೇಕ ಮನೆಗಳಲ್ಲಿ ಅಂಧರು, ಮೂಕರು, ಕಿವುಡುತನ, ಬಾಯಿ ತೊದಲುವಿಕೆ, ಬುದ್ಧಿಮಾಂದ್ಯತೆ ಉಳ್ಳವರೇ ಇದ್ದಾರೆ. ಈ ಊರಿಗೆ ಹತ್ತಾರು ವರ್ಷಗಳಿಂದಲೂ ಅಂಗವಿಕಲತೆ ಶಾಪವಾಗಿ ಪರಿಣಮಿಸಿದೆ. 

ಹಳೆ ತಲೆಮಾರಿನಿಂದ ಹಿಡಿದು ಈಗಿನ ಮಕ್ಕಳೂ ಕೂಡ ಅಂಗವಿಕಲರೆ. ವಯಸ್ಸಾದವರು, ಮಧ್ಯ ವಯಸ್ಕರು, ಪುಟ್ಟ ಮಕ್ಕಳು ಕೂಡಾ ಅದಕ್ಕೆ ಹೊರತಾಗಿಲ್ಲ. ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಲಿಯುತ್ತಿರುವ ಸುಮಾರು 150 ಮಕ್ಕಳಲ್ಲಿ 8ಕ್ಕೂ ಹೆಚ್ಚು ಮಂದಿಗೆ ವಿವಿಧ ನ್ಯೂನತೆಗಳಿವೆ. ಭೋವಿ, ನಾಯಕ ಹಾಗೂ ಲಿಂಗಾಯತ ಸಮುದಾಯ ಇರುವ ಗ್ರಾಮದಲ್ಲಿ ಬಿಡದೇ ಕಾಡುತ್ತಿದೆ ಅಂಗವಿಕಲತೆ. ಇದರಿಂದ ಗ್ರಾಮಕ್ಕೆ ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಇನ್ನೂ ಪ್ರಗತಿ ಸಾಧಿಸಲು ಸಾಧ್ಯವಾಗಿಲ್ಲ. 

 ಸಿದ್ದಪ್ಪನವರ 7 ಮಕ್ಕಳಲ್ಲಿ ಮೂವರಿಗೆ ಅಂಗವಿಕಲತೆಯಿದೆ. ಮಂಜಮ್ಮ (28 ವರ್ಷ), ಅಣ್ಣೇಶ್ (22 ವರ್ಷ) ಅವರು ಮೂಕರಾದರೆ, ನೇತ್ರಮ್ಮ (23 ವರ್ಷ) ಅವರಿಗೆ ಬೆನ್ನು ಗೂನಾಗಿದೆ. ಮಂಜಮ್ಮ ಮೂಕರಾದರೂ ಮನೆಯಲ್ಲಿ ಟೈಲರಿಂಗ್ ಕೆಲಸ ಮಾಡುವ ಮೂಲಕ ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದಾರೆ. ಅಂಗವಿಕಲ ಮಾಸಾಶನ ಬಿಟ್ಟರೆ ಸರ್ಕಾರ ಬೇರೇನೂ ಸೌಲಭ್ಯ ನೀಡಿಲ್ಲ ಎಂದು ‘ಪ್ರಜಾವಾಣಿ’ ಗ್ರಾಮಕ್ಕೆ ಭೇಟಿ ನೀಡಿದಾಗ ಕೈಸನ್ನೆ ಮಾಡಿ ತೋರಿಸಿದರು. ‘ಹುಟ್ಟಿನಿಂದಲೇ ಮೂವರಿಗೂ ಅಂಗವಿಕಲತೆ ಇತ್ತು. ದಾವಣಗೆರೆ, ಹುಬ್ಬಳ್ಳಿ ಹಾಗೂ ಬೆಂಗಳೂರು ಸೇರಿದಂತೆ ಹಲವು ಕಡೆ ಆಸ್ಪತ್ರೆಗೆ ತೋರಿಸಿ ಚಿಕಿತ್ಸೆ ಕೊಡಿಸಲಾಯಿತು. ವೈದ್ಯರು ಕೂಡ ನಿಖರವಾದ ಕಾರಣ ಹೇಳಲಿಲ್ಲ. ಕೂಲಿ ಕೆಲಸ ಮಾಡಿ ಜೀವನ ನಡೆಸಬೇಕು. ಇನ್ನೂ ಉತ್ತಮ ಚಿಕಿತ್ಸೆ ಕೊಡಿಸುವುದು ನಮ್ಮಿಂದ ಅಸಾಧ್ಯವಾಯಿತು’ ಎಂದು ಮಂಜಮ್ಮ ಅವರ ಸಹೋದರ ಅಂಜನಪ್ಪ ಅಳಲು ತೋಡಿಕೊಂಡರು.ಇನ್ನೂ ನಿಂಗಪ್ಪ ಅವರ ಕುಟುಂಬದಲ್ಲೂ ಅವರ ಮಗಳು ನಡೆದಾಡುವ ಸ್ಥಿತಿಯಲ್ಲಿ ಇಲ್ಲ. ಆಕೆ ಕುಬ್ಜರು. ಅದೇ ಮನೆಯಲ್ಲಿ 70 ವರ್ಷದ ಅಜ್ಜಿಗೆ ಎರಡೂ ಕಣ್ಣುಗಳು ಕಾಣಿಸುವುದಿಲ್ಲ. ಹುಟ್ಟಿನಿಂದಲೂ ಅವರು ಬೆಳಕು ಕಂಡಿಲ್ಲ. ಅದೇರೀತಿ ಗ್ರಾಮದ ಮಸಿಯಪ್ಪ, ರಾಜಪ್ಪ, ಹನುಮಂತಪ್ಪ ಹಾಗೂ ಪರಸಪ್ಪ ಸಹ ಅಂಗವಿಕಲರು. ಕುಬೇಂದ್ರ ಹಾಗೂ ಪಲ್ಲವಿ ಎಂಬ ಗ್ರಾಮದ ಶಾಲೆಯ ವಿದ್ಯಾರ್ಥಿಗಳಿಗೆ ದೃಷ್ಟಿದೋಷವಿದೆ. 2ನೇ ತರಗತಿಯಲ್ಲಿ ಕಲಿಯುತ್ತಿರುವ ಪಲ್ಲವಿ ಬುದ್ಧಿವಂತ ವಿದ್ಯಾರ್ಥಿನಿ. ಹಲವು ಸ್ಪರ್ಧೆಗಳಲ್ಲಿ ಪಾಲ್ಗೊಂಡು ಜಯ ಗಳಿಸಿದ್ದಾರೆ. ಇದೇ ಶಾಲೆಯ ಸಂತೋಷ್, ಸತೀಶ್, ಚಂದನ್, ಉಮಾ, ಕಲ್ಪನಾ ಎಂಬ ವಿದ್ಯಾರ್ಥಿಗಳಿಗೂ ಅಂಗವಿಕಲತೆ ಇದೆ ಎಂದು ಶಾಲೆಯ ಶಿಕ್ಷಕರು ಮಾಹಿತಿ ನೀಡುತ್ತಾರೆ.‘ಅಂಗವಿಕಲ ಮಕ್ಕಳಿಗೆ ಕಿಟ್, ಕಲಿಕಾ ಉಪಕರಣ ನೀಡಲಾಗಿದೆ. ಶಿಕ್ಷಣ ಇಲಾಖೆ ವತಿಯಿಂದ ಪ್ರತಿವರ್ಷ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗುವುದು. ಇಂತಹ ಸಮಸ್ಯೆ ಇರುವ ಗ್ರಾಮದ 8ರಿಂದ 10 ಮಕ್ಕಳು ಪ್ರತಿ ವರ್ಷ ಶಾಲೆಗೆ ಸೇರುತ್ತಾರೆ’ ಎಂದು ಶಿಕ್ಷಕ ವಾಸುದೇವಾಚಾರ್ ಹೇಳುತ್ತಾರೆ. ‘ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವಿಲ್ಲ. ತೊಳಹುಣಸೆ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಪಾಮೇನಹಳ್ಳಿ ಒಳಪಡುತ್ತದೆ. ಶಿಕ್ಷಕರು ಗ್ರಾಮದ ಮಕ್ಕಳ ತೂಕ ಹಾಗೂ ಎತ್ತರ ಪರೀಕ್ಷಿಸುತ್ತಾರೆ.ಆದರೆ ಮೂರು ವರ್ಷದಿಂದ ಚಿಕಿತ್ಸೆ ನೀಡಲು ಯಾವ ವೈದ್ಯರೂ ಇತ್ತ ಸುಳಿದಿಲ್ಲ’ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.