ಶನಿವಾರ, ಮೇ 15, 2021
24 °C

ಪಾರಂಪರಿಕ ನಗರವಾಗಿ ಉಡುಪಿ: ಸಚಿವರ ಭರವಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: `ಉಡುಪಿಯ ಸಂಪ್ರದಾಯ, ಸಂಸ್ಕೃತಿ, ವೈಶಿಷ್ಟಗಳನ್ನು ಕ್ರೋಢಿಕರಿಸಿ ಉಡುಪಿ ನಗರವನ್ನು `ಹೆರಿಟೇಜ್ ಟೌನ್'(ಪಾರಂಪರಿಕ ನಗರ)ವಾಗಿ ಮಾಡುವುದರ ಜೊತೆಗೆ ಕೊಳಚೆ, ನಿರ್ವಸತಿ ರಹಿತ ನಗರವಾಗಿ ಮಾಡಲು ಯೋಜನೆ ರೂಪಿಸಲಾಗುವುದು' ಎಂದು ಸಚಿವ ವಿನಯ ಕುಮಾರ್ ಸೊರಕೆ ಹೇಳಿದರು.ಉಡುಪಿಯಲ್ಲಿ ಭಾನುವಾರ ನಡೆದ ಉಡುಪಿ ಕೋ-ಅಪರೇಟಿವ್ ಟೌನ್ ಬ್ಯಾಂಕ್‌ನ ಶತಮಾನೋತ್ಸವ ಸಂಭ್ರಮದ ಸಮಾರೋಪ ಸಮಾರಂಭದಲ್ಲಿ `ಶತಶ್ರೀ' ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.ಸಹಕಾರ ಸಂಘಗಳ ಮೂಲಕ ಸಮಾಜ ಬೆಳಗಿಸುವ ಕೆಲಸ ನಡೆಯುತ್ತಿದೆ. ಶತಮಾನೋತ್ಸವ ಆಚರಿಸಿದ ಉಡುಪಿ ಟೌನ್ ಬ್ಯಾಂಕ್ ಅಭಿವೃದ್ಧಿಯ ಜೊತೆಗೆ ಸಮಾಜದ ಅಭಿವೃದ್ಧಿ ಮಾಡಿದೆ. ಸಹಕಾರ ಸಂಘದ ಅಡಿಯಲ್ಲಿ ಸ್ಥಾಪನೆಯಾದ ಬ್ರಹ್ಮಾವರ ಸಕ್ಕರೆ ಕಾರ್ಖಾನೆಯನ್ನು ಪುನಶ್ಚೇತನ ಮಾಡಲು ಜಿಲ್ಲೆಯ ಶಾಸಕರು, ಸಂಸದರ ಜೊತೆ ಸಮಾಲೋಚಿಸಿ ಕ್ರಮ ಕೈಗೊಳ್ಳಲಾಗುವುದು. ಉಡುಪಿ ನಗರಕ್ಕೆ ವಾರಾಹಿಯಿಂದ ಕುಡಿಯುವ ನೀರಿನ ಯೋಜನೆ ಮತ್ತು ನಗರದ ಒಳಚರಂಡಿ ವ್ಯವಸ್ಥೆಯನ್ನು ವಿಸ್ತರಿಸಿ ಮೂಲಭೂತ ಸೌಲಭ್ಯ ಒದಗಿಸಲು ಪ್ರಯತ್ನಿಸಲಾಗುವುದು ಎಂದು ಅವರು ಹೇಳಿದರು.`ಅವಿಭಜಿತ ಜಿಲ್ಲೆಯ ಸಹಕಾರ ಸಂಘಗಳು ರಾಜ್ಯಕ್ಕೆ ಮಾದರಿಯಾಗಿದೆ, ಹಿಂದೆ ಆರ್ಥಿಕ ಕ್ರೋಢಿಕರಣಕ್ಕೆ ಸಹಕಾರಿ ಸಂಘಗಳಲ್ಲಿ ಸ್ಪರ್ಧೆ ಇತ್ತು. ಇಂದು ಸಂಪನ್ಮೂಲ ಜಾಸ್ತಿಯಾಗಿ ಸಾಲ ವಿತರಣೆಗೆ ಸ್ಪರ್ಧೆ ಏರ್ಪಟ್ಟಿದೆ. ಮೂಲ ಸಹಕಾರಿ ತತ್ವಕ್ಕೆ ದಕ್ಕೆಯಾಗದ ರೀತಿಯಲ್ಲಿ ಸಹಕಾರಿ  ಸಂಘಗಳು ಮುನ್ನಡೆಯಬೇಕು' ಎಂದು ಸಂಸದ ಜಯಪ್ರಕಾಶ್ ಹೆಗ್ಡೆ ಹೇಳಿದರು.ಶಾಸಕ ಪ್ರಮೋದ್ ಮಧ್ವರಾಜ್ ಅಧ್ಯಕ್ಷತೆವಹಿಸಿದ್ದರು. ರಾಜ್ಯ ಪಟ್ಟಣ ಸಹಕಾರ ಮಹಾಮಂಡಲದ ಮುಖ್ಯಾಧಿಕಾರಿ ಪುಂಡಲೀಕ, ಜಿಲ್ಲಾ ಕೇಂದ್ರ ಸಹಕಾರ ಯೂನಿಯನ್‌ನ ಅಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲು, ಉಡುಪಿ ಕೋ-ಅಪರೇಟಿವ್ ಟೌನ್ ಬ್ಯಾಂಕ್‌ನ ಉಪಾಧ್ಯಕ್ಷ ಯು.ಕೆ.ರಾಘವೇಂದ್ರ ರಾವ್ ಉಪಸ್ಥಿತರಿದ್ದರು.ಉಡುಪಿ ಕೋ-ಅಪರೇಟಿವ್ ಟೌನ್ ಬ್ಯಾಂಕ್‌ನ ಅಧ್ಯಕ್ಷ ಕೆ.ಕೃಷ್ಣರಾಜ ಸರಳಾಯ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಬಿ.ವಿ.ಲಕ್ಷ್ಮೀನಾರಾಯಣ  ಪ್ರಾಸ್ತಾವಿಕವಾಗಿ ಮಾತನಾಡಿದರು. ವೇಣುಗೋಪಾಲ ಮುಳ್ಳೇರಿಯಾ ಕಾರ್ಯಕ್ರಮ ನಿರೂಪಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.