ಸೋಮವಾರ, ಮಾರ್ಚ್ 1, 2021
30 °C
‘ಪ್ರಜಾವಾಣಿ’ ವಿಶೇಷ ವರದಿಗೆ ಸ್ಪಂದಿಸಿದ ಜಲಸಂಪನ್ಮೂಲ ಸಚಿವ ಪಾಟೀಲ

ಪಾಲಿಕೆ ಅಧಿಕಾರಿಗಳ ಸಭೆ ನಾಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಾಲಿಕೆ ಅಧಿಕಾರಿಗಳ ಸಭೆ ನಾಳೆ

ವಿಜಯಪುರ: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೈಗೊಳ್ಳಬೇಕಿರುವ ಅಭಿವೃದ್ಧಿ ಕಾಮಗಾರಿ, ಸ್ವಚ್ಛತಾ ಕ್ರಮ, ಡೆಂಗಿ ಮತ್ತಿತರ ಮಾರಕ ರೋಗಗಳ ಹತೋಟಿಗೆ ಸೂಕ್ತ ಕ್ರಮ ತೆಗೆದುಕೊಳ್ಳಲಿಕ್ಕಾಗಿಯೇ ಇದೇ 11ರ ಗುರುವಾರ ನಗರದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಮಧ್ಯಾಹ್ನ 3ಕ್ಕೆ ವಿಶೇಷ ಸಭೆ ಆಯೋಜಿಸಲಾಗಿದೆ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ತಿಳಿಸಿದರು.‘ಪ್ರಜಾವಾಣಿ’ಯ ಇದೇ 8, 9ರ ಸಂಚಿಕೆಯಲ್ಲಿ ನಗರದ ಸಮಸ್ಯೆಗಳ ಕುರಿತು ಪ್ರಕಟಗೊಂಡ ವಿಶೇಷ ವರದಿಗಳನ್ನು ಗಮನಿಸಿದ್ದು, ನಗರದ ಜನತೆಯನ್ನು ಬಾಧಿಸುತ್ತಿರುವ ತೀವ್ರ ಸ್ವರೂಪದ ಸಮಸ್ಯೆಗಳಿಗೆ ಇತಿಶ್ರೀ ಹಾಕಲು ಸಭೆ ನಡೆಸಲಾಗುವುದು ಎಂದು ಮಂಗಳವಾರ ಹೇಳಿದರು.ಈ ಸಭೆಯಲ್ಲಿ ಸಂಸದೀಯ ಕಾರ್ಯದರ್ಶಿಗಳು, ವಿಜಯಪುರ ನಗರ ವ್ಯಾಪ್ತಿಯಲ್ಲಿ ತಮ್ಮ ವಿಧಾನಸಭಾ ಕ್ಷೇತ್ರ ಹೊಂದಿರುವ ಶಾಸಕರಾದ ಡಾ.ಮಕ್ಬೂಲ್‌ ಬಾಗವಾನ, ಪ್ರೊ.ರಾಜು ಆಲಗೂರ, ಮೇಯರ್‌–ಉಪ ಮೇಯರ್‌, ಸದಸ್ಯರು, ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ, ಸದಸ್ಯರು, ಪಾಲಿಕೆ, ವಿಡಿಎ ಆಯುಕ್ತರು, ಅಧಿಕಾರಿಗಳು ಸೇರಿದಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿರುವಂತೆ ಸೂಚನೆ ನೀಡಲಾಗಿದೆ.ಗುರುವಾರ ನಡೆಯುವ ಸಭೆಯಲ್ಲಿ ನಗರದಲ್ಲಿ ಅನುಸರಿಸಬೇಕಾದ ಸ್ವಚ್ಛತಾ ಕ್ರಮ, ವಿವಿಧ ಪ್ರದೇಶಗಳಲ್ಲಿ ಅನೈರ್ಮಲ್ಯದಿಂದ ಉಲ್ಬಣಗೊಳ್ಳುತ್ತಿರುವ ರೋಗಗಳ ನಿಯಂತ್ರಣಕ್ಕೆ ಅನುಸರಿಸಬೇಕಾದ ಕ್ರಮ, ನಗರದ ಸ್ವಚ್ಛತೆ ದೃಷ್ಟಿಯಿಂದ ಕೈಗೊಳ್ಳಬೇಕಾದ ವಿವಿಧ ಕ್ರಮಗಳ ಕುರಿತು ಚರ್ಚೆ ನಡೆಸುವ ಜತೆಗೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುವುದು.ಈ ಕುರಿತು ಈಗಾಗಲೇ ಜಿಲ್ಲಾಧಿಕಾರಿ, ಪಾಲಿಕೆ ಆಯುಕ್ತರು ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳಿಗೆ ದೂರವಾಣಿ ಮೂಲಕವೇ ಸೂಚನೆ ರವಾನಿಸಲಾಗಿದೆ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.ಚಾಲನೆ: ಅವಿಭಜಿತ ಜಿಲ್ಲೆಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಬಿಎಲ್‌ಡಿಇ ಮುಂಭಾಗ, ಜಲಸಂಪನ್ಮೂಲ ಸಚಿವರ ಕಚೇರಿ ಮುಂಭಾಗದ ಸೊಲ್ಲಾಪುರ ರಸ್ತೆಯೇ ಹೊಂಡಮಯವಾಗಿದ್ದ ಕುರಿತು ‘ಪ್ರಜಾವಾಣಿ’ ಇದೇ 8ರ ನಗರ ಸಂಚಾರ ಅಂಕಣದಲ್ಲಿ ‘ಪಾಲಿಕೆ ಅವಾಂತರ: ಸಂಚಾರಕ್ಕೆ ಸಂಚಕಾರ’ ಎಂಬ ವಿಶೇಷ ವರದಿ ಪ್ರಕಟಿಸಿತ್ತು.ಈ ವರದಿ ಗಮನಿಸಿದ ಸಚಿವರ ಕಚೇರಿ ಸಿಬ್ಬಂದಿ ಪಾಲಿಕೆ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಳ್ಳು ತ್ತಿದ್ದಂತೆ ಹೊಂಡಗಳನ್ನು ಮುಚ್ಚಿ, ದುರಸ್ತಿಗೊಳಿಸುವ ಕಾಮಗಾರಿಗೆ ಪಾಲಿಕೆ ಆಡಳಿತ ಚಾಲನೆ ನೀಡಿರುವ ದೃಶ್ಯಾವಳಿ ಮಂಗಳವಾರ ಸೊಲ್ಲಾಪುರ ರಸ್ತೆಯಲ್ಲಿ ಗೋಚರಿಸಿತು.ಇದೇ 9ರ ಸಂಚಿಕೆಯಲ್ಲಿ ಪ್ರಕಟಗೊಂಡಿದ್ದ ‘ಅನೈರ್ಮಲ್ಯ ತಾಂಡವ: ಡೆಂಗಿ ಉಲ್ಬಣ’ ವಿಶೇಷ ವರದಿ ಗಮನಿಸಿದ ಜಲಸಂಪನ್ಮೂಲ ಸಚಿವರು ಬೆಂಗಳೂರಿನಿಂದಲೇ ಸಂಬಂಧಿಸಿದ ಅಧಿಕಾರಿಗಳನ್ನು ಮೊಬೈಲ್‌ ಮೂಲಕವೇ ತರಾಟೆಗೆ ತೆಗೆದುಕೊಂಡು ಸೂಚನೆ ನೀಡುವ ಜತೆಗೆ, ಇದೇ 11ರ ಗುರುವಾರ ವಿಶೇಷ ಸಭೆ ಆಯೋಜಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.