ಶನಿವಾರ, ಜೂಲೈ 11, 2020
29 °C

ಪಾಶ್ಚಾತ್ಯದ ಅಬ್ಬರದಲ್ಲಿ ದೇಸಿ ಕಲೆಗೆ ಧಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಥಣಿ: ಹಿಂಸೆ, ಲೈಂಗಿಕತೆಯನ್ನು ಪ್ರಚೋದಿಸುವ ಪಾಶ್ಚಿಮಾತ್ಯ ಸಂಗೀತದ ಆರ್ಭಟದಿಂದ ದೇಸಿ ಸಂಗೀತ ಕಲೆ ಅವನತಿಯತ್ತ ಸಾಗುತ್ತಿದೆ ಎಂದು ಸಂಗೀತ ನಿರ್ದೇಶಕ ಹಂಸಲೇಖ ಕಳವಳ ವ್ಯಕ್ತ ಪಡಿಸಿದರು.ಚನ್ನಬಸವ ಶಿವಯೋಗಿಗಳ ಸ್ಮರಣೋತ್ಸವದ ಅಂಗವಾಗಿ ಮೋಟಗಿ ಮಠದ ವತಿಯಿಂದ ಕೊಡ ಮಾಡುವ ಬಸವ ಭೂಷಣ ಪ್ರಶಸ್ತಿಯನ್ನು ಮಂಗಳವಾರ ಸ್ವೀಕರಿಸಿ ಮಾತನಾಡಿದರು.ದೇಸಿ ಸಂಗೀತ ಕಲೆಗೆ ಸುಶ್ರಾವ್ಯ ಶ್ರುತಿ ನೀಡಿ ಪಾಶ್ಚಿಮಾತ್ಯ ಸಂಗೀತದ ವಿರುದ್ಧ ಆಂದೋಲನ ನಡೆಸುವ ಜೊತೆಗೆ ಹಾದಿ ತಪ್ಪುತ್ತಿರುವ ಇಂದಿನ ಯುವ ಜನಾಂಗಕ್ಕೆ ಉತ್ತಮ ಮಾರ್ಗದರ್ಶನ ನೀಡುವ ಸುಸಂದರ್ಭ ಇದಾಗಿದೆ ಎಂದು ನುಡಿದರು.ವೈವಿಧ್ಯತೆಯಲ್ಲಿ ಏಕತೆಯನ್ನು ಕಾಣುವ ಭಾರತೀಯ ಪರಂಪರೆಯಲ್ಲಿ ಸಂಗೀತ ಕಲೆಗೆ ಒಂದು ವಿಶಿಷ್ಟವಾದ ಸ್ಥಾನವಿದೆ. ನೊಂದವರ ಕಣ್ಣೀರು ಒರೆಸುವ ಸಾಧನವಾಗುವ ಜೊತೆಗೆ ಸಮಾಜದಲ್ಲಿ ಬೇರು ಬಿಟ್ಟಿರುವ ಅಸಮಾನತೆ ನಿವಾರಿಸಲು ಕಾಣಿಕೆ ನೀಡುತ್ತಿದೆ ಎಂದರು.ಅಥಣಿ ತಾಲ್ಲೂಕು ಗಡಿನಾಡಿನ ಕಟ್ಟ ಕಡೆಯ ಪ್ರದೇಶ ಅಲ್ಲ. ರಾಜ್ಯದ ಹೆಬ್ಬಾಗಿಲು ಎಂದು ನುಡಿದರು.ತಮ್ಮ ಸಂಸ್ಥೆಯ ಸಂಗೀತ ಶಾಲೆಯ ಮೂಲಕ ಈ ಭಾಗದ ಪ್ರತಿಭೆಗಳಿಗೆ ಉತ್ತಮ ಶಿಕ್ಷಣ ನೀಡುವ ಜೊತೆಗೆ ಭವಿಷ್ಯಕ್ಕೆ ಭದ್ರತೆ ಒದಗಿಸಿಕೊಡುವ ಕಾರ್ಯ ಮಾಡಲಾಗುತ್ತಿದ್ದು, ಈ ಗಡಿ ಭಾಗದ ಪ್ರತಿಭೆಗಳಿಗೂ ಕೂಡ ಅವಕಾಶ ಒದಗಿಸುವುದಾಗಿ ಭರವಸೆ ನೀಡಿದರು.ಹಂಸಲೇಖ ದಂಪತಿ ಈ ಸಂದರ್ಭದಲ್ಲಿ ‘ಅಥಣೀಶ’ ಪುಸ್ತಕವನ್ನು ಬಿಡುಗಡೆ ಮಾಡಿದರು. ಧಾರವಾಡದ ವಿಶ್ವಜ್ಞ ಸಹೋದರರು, ಬೆಳಗಾವಿಯ ಉದ್ಯಮಿ ಸಂಜಯ ಟೆಂಗಿನಕಾಯಿ, ಸರಸ್ವತಿ ಮುದ್ರಣಾಲಯದ ಜಗದೀಶ ಘಾಣೇಕರ, ಶಿವರುದ್ರಯ್ಯ ಗೌಡಗಾಂವ ಅವರನ್ನು  ಸತ್ಕರಿಸಲಾಯಿತು. ಜನರ ಕೋರಿಕೆಯ ಮೇರೆಗೆ ಹಂಸಲೇಖ ‘ಹುಟ್ಟಿದರೆ ಕನ್ನಡ ನಾಡಲಿ ಹುಟ್ಟಬೇಕು’ ಹಾಡನ್ನು ಹಾಡಿ ಪ್ರೇಕ್ಷಕರನ್ನು ರಂಜಿಸಿದರು.ಮೋಟಗಿ ಮಠಾಧೀಶ ಪ್ರಭು ಚನ್ನಬಸವ ಸ್ವಾಮೀಜಿ ಆಶೀರ್ವಚನ ನೀಡಿದರು. ಗಜಾನನ ಮಂಗಸೂಳಿ, ಅನೀಲ ಸುಣಧೋಳಿ, ಅಶೋಕ ಬುರ್ಲಿ, ಬಿ.ಎಲ್. ಪಾಟೀಲ, ಪ್ರಕಾಶ ಮಹಾಜನ, ಧರ್ಮಗೌಡ ಪಾಟೀಲ ಮತ್ತಿತರರು ಪಾಲ್ಗೊಂಡಿದ್ದರು. ರಮೇಶ ಪಾಟೀಲ ಸ್ವಾಗತಿಸಿದರು, ವಾಮನ ಕುಲಕರ್ಣಿ ನಿರ್ವಹಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.