ಮಂಗಳವಾರ, ಮೇ 17, 2022
28 °C

ಪಿಯುಸಿ ಉತ್ತರ ಪತ್ರಿಕೆ: ಪ್ರಕಟಗೊಳ್ಳದ ಮರು ಮೌಲ್ಯಮಾಪನ ಫಲಿತಾಂಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು:  ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಅನ್ಯಾಯವಾಗಿದೆ ಎಂದು ವಿದ್ಯಾರ್ಥಿಯೊಬ್ಬ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದರೆ, ಆತನ ಉತ್ತರ ಪತ್ರಿಕೆ ಮೌಲ್ಯಮಾಪನವನ್ನೂ ಮಾಡದೆ, ಫಲಿತಾಂಶವನ್ನೂ ಪ್ರಕಟಿಸದೆ ಅಲೆದಾಡಿಸುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.

ನಗರದ ಸಿದ್ದಗಂಗಾ ಪಿಯು ಕಾಲೇಜು ವಿದ್ಯಾರ್ಥಿ ಕೆ.ಮಹೇಶ್ (ರಿ. ನಂ. 861672) ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆ ಬರೆದಿದ್ದರು. ಎಲ್ಲ ವಿಷಯದಲ್ಲಿ ಪ್ರಥಮ ದರ್ಜೆ ಅಂಕ ಗಳಿಸಿದ್ದು (ಒಟ್ಟು 352), ಅರ್ಥಶಾಸ್ತ್ರದಲ್ಲಿ ಕೇವಲ 10 ಅಂಕ ಬಂದಿವೆ. ಇದರಿಂದ ಅನುಮಾನಗೊಂಡ ವಿದ್ಯಾರ್ಥಿ ಉತ್ತರ ಪತ್ರಿಕೆಯ ನಕಲು ಪ್ರತಿ ಪಡೆದಿದ್ದಾರೆ. ಶಿಕ್ಷಣ ಇಲಾಖೆ ನೀಡಿರುವ ಕೀ ಉತ್ತರಗಳ ಅನುಸಾರ ತನಗೆ 60ಕ್ಕೂ ಹೆಚ್ಚು ಅಂಕ ಬರಬೇಕೆಂಬುದು ವಿದ್ಯಾರ್ಥಿಯ ವಾದ. ಈ ನಿಟ್ಟಿನಲ್ಲಿ ತಮ್ಮ ಕಾಲೇಜಿನ ಉಪನ್ಯಾಸಕರಿಂದ ನಕಲು ಪ್ರತಿಯನ್ನು ಮೌಲ್ಯಮಾಪನ ಮಾಡಿಸಿ ದೃಢಪಡಿಸಿಕೊಂಡಿದ್ದಾರೆ.

ಮರು ಮೌಲ್ಯಮಾಪನದ ಫಲಿತಾಂಶ ಪ್ರಕಟವಾಗಿದ್ದರೂ, ಮಹೇಶ್ ಫಲಿತಾಂಶವನ್ನು ಮಾತ್ರ ಪ್ರಕಟಿಸಿಲ್ಲ. ಈ ಬಗ್ಗೆ ಪದವಿ ಪೂರ್ವ ಶಿಕ್ಷಣ ಪರೀಕ್ಷಾ ಮಂಡಳಿಗೆ ಮನವಿ ಸಲ್ಲಿಸಿದ್ದಾರೆ. ನಾಲ್ಕಾರು ಬಾರಿ ಕಚೇರಿಗೆ ಸುತ್ತಾಡಿಸಿದ ನಂತರ ಕೊನೆಗೆ `ನಿಮ್ಮ ಉತ್ತರ ಪತ್ರಿಕೆಯೇ ಮಂಡಳಿಯಲ್ಲಿ ಇಲ್ಲ~ ಎಂದು ಅಧಿಕಾರಿಗಳು ವಿದ್ಯಾರ್ಥಿಯನ್ನು ವಾಪಸ್ ಕಳುಹಿಸಿದ್ದಾರೆ.

ಪರೀಕ್ಷಾ ಮಂಡಳಿಯೇ ಉತ್ತರ ಪತ್ರಿಕೆಯ ಛಾಯಾ ಪ್ರತಿಯನ್ನು ನೀಡಿದ್ದು, ಈಗ ಉತ್ತರ ಪತ್ರಿಕೆಯೇ ಇಲ್ಲ ಎಂದು ವಾಪಸ್ ಕಳುಹಿಸಿರುವುದನ್ನು ಗಮನಿಸಿದರೆ ಹಲವು ಅನುಮಾನಗಳನ್ನು ಹುಟ್ಟುಹಾಕುತ್ತದೆ. ಮಂಡಳಿಯ ಉತ್ತರದಿಂದಾಗಿ ವಿದ್ಯಾರ್ಥಿ ಮುಂದೆ ಏನು ಮಾಡಬೇಕು, ಯಾರನ್ನು ಸಂಪರ್ಕಿಸಬೇಕು ಎಂದು ದಿಕ್ಕು ತೋಚದೆ ಕಂಗಾಲಾಗಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.