ಭಾನುವಾರ, ಜನವರಿ 26, 2020
28 °C

ಪುರಸಭೆಯಿಂದ ಹೊರಬರಲು ಗ್ರಾಮಸ್ಥರ ನಿರ್ಧಾರ

ಪ್ರಜಾವಾಣಿ ವಾರ್ತೆ/ ಚಂದ್ರಕಾಂತ ಬಾರಕೇರ Updated:

ಅಕ್ಷರ ಗಾತ್ರ : | |

ಗಜೇಂದ್ರಗಡ: ಪುರಸಭೆ ಭಾಗ್ಯ ದೊರಕಿಸಿಕೊಟ್ಟ ಗ್ರಾಮಕ್ಕೀಗ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಸೇರಿಕೊಳ್ಳುವ ತವಕ!

ಗಜೇಂದ್ರಗಡ ಪುರಸಭೆಯ ಅಭಿವೃದ್ಧಿ ಮಲತಾಯಿ ಧೋರಣೆಗೆ ಬೇಸತ್ತ ಉಣಚಗೇರಿ ಗ್ರಾಮಸ್ಥರು ಪುರಸಭೆಯಿಂದ ಹೊರ ಬಂದು ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಸೇರಲು ತುದಿ­ಗಾಲಲ್ಲಿ ನಿಂತಿದ್ದಾರೆ. ಗ್ರಾಮಸ್ಥರ ಇಂತಹ ಮನಸ್ಥಿತಿ ಪುರಸಭೆ ಆಡಳಿತಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.1973ರಲ್ಲಿ ಗಜೇಂದ್ರಗಡದಲ್ಲಿ ಪುರಸಭೆ ಸ್ಥಾಪನೆಗೆ ಮುನ್ನುಡಿ ಬರೆದ ಗ್ರಾಮ ಎಂಬ ಹೆಗ್ಗಳಿಕೆ ಹೊಂದಿರುವ ಉಣಚಗೇರಿ ಗ್ರಾಮಕ್ಕೆ ಹಲವು ದಶಕಗಳಿಂದಲೂ ಪುರಸಭೆ ಆಡಳಿತ ಅಭಿವೃದ್ಧಿ ಕಾರ್ಯಗಳಲ್ಲಿ ಅನುಸರಿಸಿಕೊಂಡು ಬಂದಿರುವ ಮಲತಾಯಿ ಧೋರಣೆಯೇ ಇಂದು ಗ್ರಾಮಸ್ಥರು ಗ್ರಾಮವನ್ನು ಯಾವುದಾದ­ರೊಂದು ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಸೇರಿಸಿ­ಕೊಳ್ಳ­ಬೇಕು ಎಂಬ ದೃಢ ನಿರ್ಧಾರಕ್ಕೆ ಬಂದಿದ್ದಾರೆ. 1970 ರ ದಶಕದಲ್ಲಿ ಪುರಸಭೆ ಭಾಗ್ಯದಿಂದ ವಂಚಿತಗೊಂಡಿದ್ದ ಗಜೇಂದ್ರಗಡದ ಬೆಳವಣಿಗೆಯನ್ನು ಗಮನಿಸಿ ಸರ್ಕಾರ 1973 ರಲ್ಲಿ ಪುರಸಭೆ ಸ್ಥಾಪನೆಗೆ ಒಲವು ತೋರಿತು. ಆದರೆ ಗಜೇಂದ್ರಗಡದ ಜನಸಂಖ್ಯೆಯನ್ನಷ್ಟೇ ಗಣನೆಗೆ ತೆಗೆದುಕೊಂಡರೆ ಅಂದಿನ ಸರ್ಕಾರದ ನಿಯಮದ ಪ್ರಕಾರ ಗಜೇಂದ್ರಗಡಕ್ಕೆ ಪುರಸಭೆಯ ಯೋಗವಿರಲಿಲ್ಲ.ಹೀಗಾಗಿಯೇ ಕೂಗಳತೆ ದೂರದಲ್ಲಿನ ಉಣಚಗೇರಿ ಗ್ರಾಮವನ್ನು ಗಜೇಂದ್ರಗಡ ಪುರಸಭೆ ವ್ಯಾಪ್ತಿಗೆ ಸೇರಿಸಿಕೊಂಡರೆ ಮಾತ್ರ ಗಜೇಂದ್ರಗಡಕ್ಕೆ ಪುರಸಭೆಯ ಭಾಗ್ಯವಿತ್ತು, ಇದನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ ಸ್ಥಳೀಯ ಪ್ರಗತಿ ಪರ ಚಿಂತಕರು ಹಾಗೂ ನಾಗರಿಕರು ಉಣಚಗೇರಿ ಗ್ರಾಮವನ್ನು ಗಜೇಂದ್ರಗಡಕ್ಕೆ ಸೇರಿಸಿಕೊಳ್ಳುವ ಮೂಲಕ ಗಜೇಂದ್ರಗಡಕ್ಕೆ ಪುರಸಭೆಯ ಯೋಗ ದೊರಕುವಂತೆ ಮಾಡಿದರು. ಆದ್ದರಿಂದ ಗಜೇಂದ್ರಗಡಕ್ಕೆ ಪುರಸಭೆ ಭಾಗ್ಯ ಕರುಣಿಸಿದ ಗ್ರಾಮ ಎಂಬ ಹಿರಿಮೆ ಈ ಗ್ರಾಮಕ್ಕಿದೆ.‘ಬಹುತೇಕ ಕೃಷಿ ಹಾಗೂ ಕೃಷಿ ಕೂಲಿ ಕಾರ್ಮಿಕರುಗಳೇ ನೆಲೆಸಿರುವ ಉಣಚಗೇರಿ ಗ್ರಾಮದಲ್ಲಿ ಅಂದಿನ ದಿನಗಳಲ್ಲಿ ಅನಕ್ಷರಸ್ಥರ ಸಂಖ್ಯೆಯೇ ಹೆಚ್ಚು. ಇದನ್ನೇ ಬಂಡವಾಳವನ್ನಾಗಿಸಿಕೊಂಡ ಕೆಲವರು ಗ್ರಾಮಸ್ಥರಿಗೆ ಇಲ್ಲ–ಸಲ್ಲದ ಭರವಸೆಗಳನ್ನು ನೀಡಿ ಗ್ರಾಮವನ್ನು ಪುರಸಭೆ ವ್ಯಾಪ್ತಿಗೆ ಸೇರಿಸಿಕೊಳ್ಳಲು ಅಗತ್ಯವಿರುವ ಎಲ್ಲ ದಾಖಲಾತಿಗಳನ್ನು ಪಡೆದುಕೊಂಡು ಗ್ರಾಮವನ್ನು ಪುರಸಭೆಗೆ ಒಳಪಡಿಸಲಾಯಿತು’ ಎಂದು ವಿರೂಪಾಕ್ಷಪ್ಪ ಪಟ್ಟಣಶೆಟ್ಟಿ ದೂರಿದರು.

‘23 ಸದಸ್ಯರಲ್ಲಿ ಉಣಚಗೇರಿಗೆ ಕೇವಲ ಒಂದು ಸದಸ್ಯ ಸ್ಥಾನವಿದೆ. ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಎಂದೂ ಉಣಚಗೇರಿ ಸದಸ್ಯರಿಗೆ ಅಧ್ಯಕ್ಷ ಗಾದೆ ಏರುವ ಭಾಗ್ಯ ದೊರೆತಿಲ್ಲ. ಇದು ಕೂಡಾ ಗ್ರಾಮದ ಅಭಿವೃದ್ಧಿ ನಿರ್ಲಕ್ಷ್ಯಕ್ಕೆ ಪ್ರಮುಖ ಕಾರಣ ಎನ್ನುತ್ತಾರೆ’ ಸಂಗಪ್ಪ ಚಿಲ್‌ಝರಿ.‘ಪುರಸಭೆ ವ್ಯಾಪ್ತಿಗೆ ಒಳಪಟ್ಟ ದಿನಗಳಿಂದಲೂ ಕನಿಷ್ಠ ಅಭಿವೃದ್ಧಿ ಕಾಮಗಾರಿಗಳಿಂದ ದೂರ ಉಳಿದು ಕುಗ್ರಾಮದಂತೆ ಕಂಗೊಳಿಸುತ್ತಿದ್ದ ಉಣಚಗೇರಿ. ಮಣ್ಣಿನ ರಸ್ತೆ, ಅವೈಜ್ಞಾನಿಕ ಗಟಾರು, ಸಮುದಾಯ ಮಹಿಳಾ ಶೌಚಾಲಯ, ಅವೈಜ್ಞಾನಿಕ ವಿದ್ಯುತ್‌ ಸಂಪರ್ಕ ಗ್ರಾಮಕ್ಕೆ ಇನ್ನೂ ಶಾಪವಾಗಿಯೇ ಉಳಿದುಕೊಂಡಿವೆ.ತೆರಿಗೆಗಳನ್ನು ಕಡ್ಡಾಯವಾಗಿ ಪಾವತಿಸಿ­ಕೊಳ್ಳುವ ಪುರಸಭೆ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲು ಮೀನಾಮೇಷ ಎನಿಸುತ್ತಿದೆ. ಹೀಗಾಗಿ ಗ್ರಾಮಸ್ಥರೆಲ್ಲರ ಒಪ್ಪಿಗೆ ಪಡೆದು ಗ್ರಾಮ ಪಂಚಾಯ್ತಿಗೆ ಸೇರಲು ಅಗತ್ಯವಿರುವ ರೂಪ–ರೇಷಗಳನ್ನು ಸಿದ್ಧಗೊಳಿಸಲಾಗುವುದು ಎಂದು ಕರಿಯಪ್ಪ ಪಟ್ಟಣಶೆಟ್ಟಿ, ರಾಜಪ್ಪ ಗೌಡರ, ಶರಣಪ್ಪ ಸೂಡಿ, ಹನಮಂತಗೌಡ ಪಾಟೀಲ, ಶರಣಪ್ಪ ಹಿರೇಹಾಳ ವಿವರಿಸಿದರು.

ಪ್ರತಿಕ್ರಿಯಿಸಿ (+)