ಬುಧವಾರ, ಜನವರಿ 22, 2020
21 °C

ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೇವದುರ್ಗ: ಪಟ್ಟಣದ ಪುರಸಭೆಯ ನೂತನ ಅಧ್ಯಕ್ಷರಾಗಿ ತಾಯಮ್ಮ ಅಕ್ಕರಕಿ ಹಾಗೂ ಉಪಾಧ್ಯಕ್ಷರಾಗಿ ಲಕ್ಷ್ಮಣ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾಯಾಗಿದ್ದ ತಹಸೀಲ್ದಾರ ಬಸ್ಸಪ್ಪ ನಾಗೋಲಿ ತಿಳಿಸಿದ್ದಾರೆ.ಗುರುವಾರ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕಾಗಿ ಚುನಾವಣೆ ನಡೆಸಲು ದಿನಾಂಕ ನಿಗದಿ ಮಾಡಲಾಗಿತ್ತು. ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳೆರಡಕ್ಕೂ ತಲಾ ಒಂದು ನಾಮಪತ್ರ ಮಾತ್ರ ಸಲ್ಲಿಕೆಯಾದ ಹಿನ್ನಲೆಯಲ್ಲಿ ಚುನಾವಣೆ ನಡೆಸುವ ಪ್ರಸಂಗ ಎದುರಾಗದೆ ಅವಿರೋದ ಆಯ್ಕೆ ನಡೆಯಿತು. ಒಟ್ಟು 19 ಜನ ಸದಸ್ಯರಲ್ಲಿ 11ಜನ ಸದಸ್ಯರು ಸಭೆಯಲ್ಲಿ ಹಾಜರಿದ್ದರು.ಕಳೆದ ಕೆಲವು ದಿನಗಳ ಹಿಂದೆ ಕಾಂಗ್ರೆಸ್ ಪಕ್ಷದ ಸದಸ್ಯರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿ ಪಕ್ಷಾಂತರ ಕಾಯ್ದೆ ಅಡಿಯಲ್ಲಿ ಅನರ್ಹಗೊಂಡಿದ್ದರಿಂದ ನೂತನ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ ನಡೆಸುವಂತಾಯಿತು. ಪುರಸಭೆ ಅಧ್ಯಕ್ಷೆಯಾಗಿದ್ದ ಲೋಕಮ್ಮ ಅಮರಣ್ಣಗೌಡ ಗೌರಂಪೇಟ ಸೇರಿದಂತೆ ಒಟ್ಟು 4ಜನ ಸದಸ್ಯರು ಪಕ್ಷಾಂತರ ಮಾಡಿ ಅನರ್ಹಗೊಂಡಿದ್ದಾರೆ.ಕಾಂಗ್ರೆಸ್, ಜೆಡಿಎಸ್ ಮೈತ್ರಿ: ಇಂದು ನಡೆದ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷದ 7ಜನ ಹಾಗೂ ಜೆಡಿಎಸ್‌ನ 4ಜನ ಸದಸ್ಯರು ಕೂಡಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇದರಿಂದಾಗಿ ಬಿಜೆಪಿಗೆ ತೀವ್ರ ಮುಖಭಂಗವಾಗಿದ್ದು ಗುರುವಾರ ಪಟ್ಟಣದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರು ವಿಜಯೋತ್ಸವ ಆಚರಿಸುವ ಮೂಲಕ ಸಂಭ್ರಮಿಸಿದರು.ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಪ್ರಭುಗದ್ಗಿ, ಇಮಾಮ ಅಲಿ, ಶರಣಪ್ಪ ಬಳೆ, ತಬಸ್ಸುಮ್ ಉದ್ಧಾರ, ಗಾಯಿತ್ರಿದೇವಿ, ಮುಮತಾಜ್ ಬೇಗಂ, ಈರಣ್ಣ ರುದ್ರಾಕ್ಷಿ, ರಮೇಶ, ಬಸವರಾಜ ಬಂಡೇಗುಡ್ಡ ಹಾಗೂ ಪುರಸಭೆ ಮುಖ್ಯಾಧಿಕಾರಿ ಮೆಹಬೂಬಅಲಿ, ಚುನಾವಣಾಧಿಕಾರಿ ಹುಸೇನಪ್ಪ ಉಪಸ್ಥಿತರಿದ್ದರು.ತಾಲ್ಲೂಕಿನಲ್ಲಿ ಈಚೆಗೆ ನಡೆದ ಅನೇಕ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷ ಹೀನಾಯ ಸೋಲು ಕಾಣುವ ಮೂಲಕ ತನ್ನ ಅಸ್ತಿತ್ವವನ್ನೇ ಕಳೆದುಕೊಂಡಿದ್ದು. ಸತತ ಸೋಲುಗಳಿಂದ ಕಾರ್ಯಕರ್ತರೂ ಕಂಗೆಟ್ಟು ಮನೆ ಸೇರಿದ್ದರು.ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದವರೇ ಅಧ್ಯಕ್ಷ, ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವುದರಿಂದ ಆ ಪಕ್ಷದ ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ಮೂಡಿಬಂದಿದೆ.

ಪ್ರತಿಕ್ರಿಯಿಸಿ (+)