ಮಂಗಳವಾರ, ಮಾರ್ಚ್ 2, 2021
28 °C

ಪುರುಷ ಮಾದರಿ ಕಳಚಿಕೊಂಡ ಮಹಿಳಾ ಸಾಹಿತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪುರುಷ ಮಾದರಿ ಕಳಚಿಕೊಂಡ ಮಹಿಳಾ ಸಾಹಿತ್ಯ

ಧಾರವಾಡ: `ಗಂಡಿನ ಭಾಷೆಯಿಂದ ಹೆಣ್ಣಿಗೆ ಸಹಜವಾದ ಭಾಷೆಯ ಕಡೆಗೆ ಪ್ರಯಾಣಿಸಿದ್ದು ಮಹಿಳಾ ಸಾಹಿತ್ಯ. ಜೊತೆಗೆ ಪುರುಷರಿಂದ ದತ್ತವಾದ ಮಾದರಿಗಳಿಗೆ ಹೊಂದಿಕೊಳ್ಳುವ ಮತ್ತು ಅವುಗಳಿಂದ ಬಿಡಿಸಿಕೊಳ್ಳುವ ಪ್ರಯಾಣವೂ ಮಹಿಳಾ ಸಾಹಿತ್ಯದ್ದು~ ಎಂದು ಹಿರಿಯ ವಿಮರ್ಶಕ ಡಾ.ಎಚ್.ಎಸ್. ರಾಘವೇಂದ್ರ ರಾವ್ ಅಭಿಪ್ರಾಯಪಟ್ಟರು.ಕರ್ನಾಟಕ ಸಾಹಿತ್ಯ ಅಕಾಡೆಮಿ ಹಾಗೂ ಉತ್ತರ ಕರ್ನಾಟಕ ಲೇಖಕಿಯರ ಸಂಘದ ಆಶ್ರಯದಲ್ಲಿ ನಗರದ ಆಲೂರ ವೆಂಕಟರಾವ್ ಭವನದಲ್ಲಿ ಶುಕ್ರವಾರ ಏರ್ಪಡಿಸಿದ `ಆಧುನಿಕ ಕನ್ನಡ ಕಥೆಗಾರ್ತಿಯರು~ ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.`ಮಹಿಳಾ ಸಾಹಿತ್ಯವನ್ನು ಕನ್ನಡ ಸಾಹಿತ್ಯದ ಇತರ ಚಳವಳಿಗಳ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದು ಸರಿಯಲ್ಲ. ಏಕೆಂದರೆ ಪ್ರತಿ ಚಳವಳಿಯಲ್ಲಿ ಲೇಖಕಿಯರು, ಅದೇ ಚಳವಳಿಯ ಲೇಖಕರೊಂದಿಗೆ ಸಂಘರ್ಷದ ಸಂಬಂಧಗಳನ್ನು ಹೊಂದಿದ್ದಾರೆ~ ಎಂದರು.`20ನೇ ಶತಮಾನದ ಆಧುನಿಕ ಮಹಿಳಾ ಸಾಹಿತ್ಯದಲ್ಲಿ ಕೆಳವರ್ಗದ ಹೆಣ್ಣುಮಕ್ಕಳ ಬದುಕು, ಬರವಣಿಗೆಯ ಪರಿಧಿಯಿಂದ ಹೊರಗೇ ಉಳಿದಿದೆ. ಕಳೆದ 10 ವರ್ಷಗಳಲ್ಲಿ ಆ ಪರಿಸ್ಥಿತಿಯು ನಿಧಾನವಾಗಿ ಬದಲಾಗುತ್ತಿದೆ~ ಎಂದರು.`ಸಣ್ಣಕಥೆ, ಕವಿತೆಗಳು ಲೇಖಕಿಯರ ಆಯ್ಕೆಯ ಪ್ರಕಾರಗಳಾದಾಗ ಬರುವ ಬರವಣಿಗೆಯು ಕಾದಂಬರಿಗಳಿಗೂ ವ್ಯತ್ಯಾಸವಿದೆ. ಜನಪ್ರಿಯ ಎಂದು ಕರೆಯಬಹುದಾದ ಕಾದಂಬರಿಗಳನ್ನು ಹೇಗೆ ನೋಡಬೇಕು ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಅನುಭವದ ಅಗಲ ಮತ್ತು ವೈವಿಧ್ಯಗಳಿಗಿಂತ ಸಂವೇದನೆಯ ಸೂಕ್ಷ್ಮತೆ ಮತ್ತು ಆಳಗಳು ಮುಖ್ಯವಾದವು~ ಎಂದರು.ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪ್ರೊ. ಎಂ.ಎಚ್. ಕೃಷ್ಣಯ್ಯ, `ಸ್ತ್ರೀ ಸಂವೇದನೆ , ಮುಸ್ಲಿಂ ಸಂವೇದನೆ ಎನ್ನುವ ವಿಂಗಡನೆಯೇ ಇರಬಾರದು~ ಎಂದು ಅವರು ಸಲಹೆ ನೀಡಿದರು.`ಈಚಿನ ಕೃತಿಗಳಲ್ಲಿ ವಿದ್ಯಾವಂತ ಮಹಿಳೆಯರನ್ನು ಪರೋಕ್ಷವಾಗಿ ಟೀಕಿಸುವ ಕೃತಿಗಳು ಬರುತ್ತಿವೆ. ಎಲ್ಲ ವಿದ್ಯಾವಂತ ಮಹಿಳೆಯರು ಹಾಗಿರುವುದಿಲ್ಲ. ಈ ಬಗೆಯ ಕೃತಿಗಳು ಪ್ರಕಟವಾದಾಗ ಲೇಖಕಿಯರು ಪ್ರತಿಭಟಿಸುವುದೂ ಇಲ್ಲ. ಇಂಥ ಹೊಸ ಹೊಸ ಸವಾಲುಗಳನ್ನು ಲೇಖಕಿಯರು ಎದುರಿಸಬೇಕಿದೆ~ ಎಂದು ಅವರು ಹೇಳಿದರು.ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಶಿವಾನಂದ ಕೆಳಗಿನಮನಿ ಸ್ವಾಗತಿಸಿದರು. ಪ್ರೊ.ಎಚ್.ಎಂ. ಬೀಳಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಜ್ಞಾ ಮತ್ತಿಹಳ್ಳಿ ನಿರೂಪಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.