ಶನಿವಾರ, ಮೇ 15, 2021
25 °C

ಪುರುಷ ಯಕ್ಷಿ

-ಮಂಜುನಾಥ ಹೆಬ್ಬಾರ್ Updated:

ಅಕ್ಷರ ಗಾತ್ರ : | |

ಹೆಸರಿಗೆ ಟೈಲರಿಂಗ್ ವೃತ್ತಿ. ಮನದೊಳಗೆ ಯಕ್ಷರಂಗದ್ದೇ ಗುಂಗು. ನಾನೂ ರಂಗದಲ್ಲಿ ಮೆರೆಯಬೇಕು ಎಂಬ ತುಡಿತ. ಹೆಣ್ಣೇ ನಾಚುವಂತಹ ಸ್ತ್ರೀವೇಷಧಾರಿಯಾಗಬೇಕು ಎಂಬ ಕನವರಿಕೆ. ಸಾಗಿದ್ದು ಕಲ್ಲುಮುಳ್ಳಿನ ಹಾದಿಯಲ್ಲಿ. ದಶಕದಲ್ಲೇ ಕನಸು ನನಸಾದ ಸಾರ್ಥಕ ಭಾವ. ಈಗ ಆತ `ಯಕ್ಷಚಂದ್ರಿಕೆ'!ಇದು ಯಕ್ಷಗಾನ ರಂಗದ ಸ್ತ್ರೀವೇಷಧಾರಿ ಶಶಿಕಾಂತ ಶೆಟ್ಟಿ ಕಾರ್ಕಳ ಅವರ ಪ್ರವರ. ಅವರು ನಾಲ್ಕು ಗೋಡೆಗಳೊಳಗೆ ಕಲಿತದ್ದು ಅಲ್ಪಸ್ವಲ್ಪ. 13 ವರ್ಷಗಳ ಹಿಂದೆ `ವಾಮನ'ನಂತೆ ರಂಗಕ್ಕೆ ಬಂದ ಯುವಕ ಈಗ ರಂಗದ ಮೇರು ಸ್ತ್ರೀವೇಷಧಾರಿ. ರಂಗದಲ್ಲಿ ಅವರು ಹೆಣ್ಣಿನ ಪ್ರತಿರೂಪ. ಹುಡುಗಿಯರೇ ಹೊಟ್ಟೆ ಕಿಚ್ಚು ಪಡುವಂತಹ ಲಜ್ಜೆ, ಒನಪು ವಯ್ಯಾರ, ಬೆಡಗು ಬಿನ್ನಾಣ. `ಅಂಬೆ', `ಚಂದ್ರಮತಿ', `ದ್ರೌಪದಿ', `ಸಾವಿತ್ರಿ' ಯಾದಾಗ ಪ್ರೇಕ್ಷಕರ ಸಾಲಿನಲ್ಲೂ ಕಣ್ಣೀರು!ಯಕ್ಷರಂಗದಲ್ಲಿ ಸ್ತ್ರೀವೇಷಕ್ಕೆ ಹೊಸ ಚೌಕಟ್ಟು ನೀಡಿದವರು ಕೆರೆಮನೆ ಗಜಾನನ ಹೆಗಡೆ, ಕೋಳ್ಯೂರು ರಾಮಚಂದ್ರ ರಾವ್, ಅರಾಟೆ ಮಂಜುನಾಥ, ರಾಮ ನಾಯರಿ ಬ್ರಹ್ಮಾವರ ಮತ್ತಿತರ ಕಲಾವಿದರು. ಈ ಎಲ್ಲ ಹಿರಿ ಕಲಾವಿದರ ಗುಣ ವಿಶೇಷಗಳನ್ನೆಲ್ಲ ಮೈಗೂಡಿಸಿಕೊಂಡು ಶಶಿ ಸಮಪಾಕ-ಸಮತೂಕದ ಕಲಾವಿದ.ಅಂಬೆ, ದಮಯಂತಿ, ಸೀತೆ, ದ್ರೌಪದಿ, ಚಂದ್ರಮತಿ, ಸಾವಿತ್ರಿ, ಭ್ರಮರಕುಂತಳೆ, ಕೈಕೆ, ಸುಭದ್ರೆ, ದಾಕ್ಷಾಯಿಣಿ ಅವರನ್ನೆಲ್ಲ ಒಂದೆಡೆ ನೋಡಲು ಸಾಧ್ಯವೆ? ಖಂಡಿತಾ ಸಾಧ್ಯವಿದೆ. ಅದಕ್ಕೆ ನೀವು ಕರಾವಳಿಗೆ ಬರಬೇಕು ಮತ್ತು ಶಶಿಕಾಂತ ಶೆಟ್ಟಿ ಅವರ ವೇಷವನ್ನು ಕಾಣಬೇಕು. ಶೆಟ್ಟಿ ಅಭಿನಯಿಸದ ಸ್ತ್ರೀ ಪಾತ್ರಗಳೇ ಇಲ್ಲ ಎನ್ನುವಷ್ಟು ಅವರು ಪ್ರಖ್ಯಾತಿ ಗಳಿಸಿದ್ದಾರೆ.  

ಶಶಿಕಾಂತ ಬಡಗುತಿಟ್ಟಿನ ಹೆಸರಾಂತ ಡೇರೆ ಮೇಳ ಎನಿಸಿದ ಸಾಲಿಗ್ರಾಮ ಮೇಳದಲ್ಲಿ 10 ವರ್ಷದಿಂದ ಪ್ರಧಾನ ಸ್ತ್ರೀವೇಷಧಾರಿ ಆಗಿದ್ದಾರೆ. ಈಗ ಅವರಿಗೆ 33ರ ಹರೆಯ. ಕೇವಲ ಪಾತ್ರವಾಗಿ ಅಭಿನಯ ಮಾಡುವುದಕ್ಕಿಂತ ಆ ವ್ಯಕ್ತಿಯನ್ನೇ ತಮ್ಮ ಮೇಲೆ ಆವಾಹಿಸಿಕೊಳ್ಳುವ ತನ್ಮಯತೆ ಅವರಿಗೆ ಯಕ್ಷರಂಗದಲ್ಲಿ ವಿಶೇಷ ಸ್ಥಾನ ಕಲ್ಪಿಸಿಕೊಟ್ಟಿದೆ. ಅಧ್ಯಯನಶೀಲತೆ, ರಂಗಶಿಸ್ತು, ಪ್ರಯೋಗಶೀಲತೆ ಮೂಲಕ ಯುವ ಕಲಾವಿದರಿಗೆ ಅವರು ಸ್ಫೂರ್ತಿ ಹಾಗೂ ಮಾದರಿಯಾಗಿದ್ದಾರೆ.

ಶಶಿಕಾಂತ ಹುಟ್ಟಿದ್ದು ಪಶ್ಚಿಮಘಟ್ಟದ ಸೆರಗಿನಲ್ಲಿರುವ ಕಾರ್ಕಳದಲ್ಲಿ; 1980ರ ಜನವರಿ 8ರಂದು. ಅಪ್ಪ ದಿ. ಧರ್ನಪ್ಪ ಶೆಟ್ಟಿ. ತಾಯಿ ಲಲಿತಾ. ಧರ್ನಪ್ಪ ಅವರ ಮೂರು ಮಕ್ಕಳಲ್ಲಿ ಶಶಿಕಾಂತ ಎರಡನೆಯವರು. ಬಡ ಕುಟುಂಬದಿಂದ ಬಂದ ಅವರು, 9ನೇ ತರಗತಿವರೆಗೆ ಕಷ್ಟಪಟ್ಟು ಶಾಲೆಗೆ ಹೋದರು. ಬಳಿಕ ಆರಿಸಿಕೊಂಡಿದ್ದು ಟೈಲರಿಂಗ್ ವೃತ್ತಿ. ಅದೇ ಹೊತ್ತಿಗೆ ಯಕ್ಷಗಾನದ `ಹುಚ್ಚು' ಹಿಡಿಯಿತು. `ನಾನೂ ಕಲಾವಿದನಾಗಬೇಕು' ಎಂಬ ಕನಸು ಅವರಲ್ಲಿ ಚಿಗುರಲು ಆರಂಭಿಸಿತು.ಆಗ ಹೆಜ್ಜೆ ಕಲಿಸಿ ದಾರಿ ತೋರಿದವರು ಸತೀಶ್ ಎಂ. ಕಾರ್ಕಳ ಅವರು. ಅವರಲ್ಲೇ ಉದ್ಯೋಗ ಮಾಡುತ್ತಾ ತೆಂಕುತಿಟ್ಟಿನ ಹೆಜ್ಜೆಗಳನ್ನು ಕರಗತ ಮಾಡಿಕೊಂಡರು. `2-3 ವರ್ಷ ಕಳೆಯುವಷ್ಟರಲ್ಲಿ ವೇಷ ಹಾಕಬಲ್ಲೆ ಎಂಬ ಧೈರ್ಯ ಮೂಡಿತು. `ಅತಿಥಿ' ಕಲಾವಿದನಾಗಿ ತೆಂಕುತಿಟ್ಟಿನ ಪ್ರಖ್ಯಾತ ಮೇಳಗಳಾದ ಸುರತ್ಕಲ್, ಬಪ್ಪನಾಡು, ಸಸಿಹಿತ್ಲು ಮೇಳಗಳಲ್ಲಿ ಬಣ್ಣ ಹಚ್ಚಲಾರಂಭಿಸಿದೆ. ಅಲ್ಲಿ ಹೆಸರಿಗೆ ಮಾತ್ರ ಅತಿಥಿ ಕಲಾವಿದ. ಹಾಕುತ್ತಿದ್ದ ವೇಷಗಳು ಬಾಲಗೋಪಾಲ ವೇಷ, ತುಳು ಅರಸರ ಪೀಠಿಕೆ ವೇಷಗಳು' ಎಂದು ನೆನೆಯುತ್ತಾರೆ ಶಶಿಕಾಂತ.`ಒಂದು ಕಡೆಯಲ್ಲಿ ಬಡಗುತಿಟ್ಟಿನ ಸೆಳೆತ ಹೆಚ್ಚಲಾರಂಭಿಸಿತು. ಅದೇ ಹೊತ್ತಿಗೆ ಹೊಸ ಪ್ರಸಂಗಗಳ ಭರಾಟೆಯೂ ಜೋರಾಗಿತ್ತು. ಆಗ ಬಡಗಿನಲ್ಲಿ ರಾಮ ನಾಯರಿ ಬ್ರಹ್ಮಾವರ, ಭಾಸ್ಕರ ಜೋಷಿ ಶಿರಳಗಿ ಉತ್ತುಂಗದ ಸ್ಥಾನದಲ್ಲಿದ್ದರು. ಅವರಂತೆ ನಾನು ಪ್ರಖ್ಯಾತ ಸ್ತ್ರೀವೇಷಧಾರಿ ಆಗಬೇಕು ಎಂಬ `ಹುಂಬತನ' ಮನಸ್ಸಲ್ಲಿ ಗಟ್ಟಿಯಾಗಿ ಅಚ್ಚೊತ್ತಿತ್ತು. ಅಲ್ಪಸ್ವಲ್ಪ ಸ್ತ್ರೀವೇಷದ ಹೆಜ್ಜೆ ಗೊತ್ತಿತ್ತು. ಬಡಗಿನ ಆಕರ್ಷಣೆ ಹೆಚ್ಚಲಾರಂಭಿಸಿತು' ಎಂದು ಹೆಜ್ಜೆ ಹಾಕಲು ಆರಂಭಿಸಿದ ದಿನಗಳನ್ನು ಮೆಲುಕು ಹಾಕುತ್ತಾರೆ ಅವರು.ಯಕ್ಷಗಾನ ಹರಕೆ ಹೊತ್ತವರ ಸಂಖ್ಯೆ ಹೆಚ್ಚಿದ್ದರಿಂದ 1999-2000ರಲ್ಲಿ ಮಂದಾರ್ತಿ ಮೇಳದವರು ಹೆಚ್ಚುವರಿ ಮೇಳ ಮಾಡಲು ಯೋಜಿಸಿದ್ದರು. ಶಶಿಕಾಂತ ಅವರನ್ನು ಮೂರನೇ ಮೇಳಕ್ಕೆ ನಾಲ್ಕನೇ ಸ್ತ್ರೀವೇಷಧಾರಿಯಾಗಿ ಆಯ್ಕೆ ಮಾಡಿಕೊಂಡರು. ಆರು ತಿಂಗಳ ತಿರುಗಾಟಕ್ಕೆ ಸಿಕ್ಕ ವೇತನ 14,000 ರೂಪಾಯಿ. ಯಕ್ಷರಂಗದಲ್ಲಿ ನಾಲ್ಕನೇ ಸ್ತ್ರೀವೇಷಧಾರಿ ಎಂದರೆ ಆಟಕ್ಕುಂಟು ಲೆಕ್ಕಕ್ಕಿಲ್ಲ. ಸಹ ಕಲಾವಿದರ ಕುಣಿತಗಳನ್ನು ನೋಡುತ್ತಲೇ ರಂಗದಲ್ಲಿ, ಚೌಕಿಯಲ್ಲಿ ಅವರು ಕಲಿಯಲು ಆರಂಭಿಸಿದರು.ಸ್ತ್ರೀವೇಷಧಾರಿಗಳಾದ ಬೇಳಂಜೆ ಸುಂದರ ನಾಯಕ್, ಉಪ್ಪುಂದ ಸುಧಾಕರ್ ಅವರಿಂದ ಮಾರ್ಗದರ್ಶನ ಸಿಕ್ಕಿತು. ಜೊತೆಗೆ ಹೆಸರಾಂತ ಕಲಾವಿದನಾಗಬೇಕು ಎಂಬ ಹಟವೂ ಶಶಿಕಾಂತ ಅವರಲ್ಲಿ ಇತ್ತು. ಪೀಠಿಕೆ ಸ್ತ್ರೀವೇಷ, ರಾಕ್ಷಸ ವೇಷ ಸೇರಿದಂತೆ ಚಿಕ್ಕಪುಟ್ಟ ವೇಷಗಳನ್ನು ಪ್ರೀತಿಯಿಂದಲೇ ಮಾಡಿದರು. ರಂಗ ಶ್ರದ್ಧೆಗೆ ಫಲ ದೊರಕಲಾರಂಭಿಸಿತು. ಮೇಳದೊಳಗೆ ರಾಜಕೀಯವೂ ಹೆಚ್ಚಾಗಿತ್ತು. ಅದೇ ವರ್ಷ ಸಾಲಿಗ್ರಾಮ ಮೇಳದಿಂದ ಕರೆ ಬಂತು. ಮೊದಲೇ ವರ್ಷವೇ ಮೇಳ ಬಿಡಲು ಅವರಿಗೆ ಮನಸ್ಸಾಗಲಿಲ್ಲ. ಮುಂದಿನ ವರ್ಷ ಎರಡನೇ ಸ್ತ್ರೀವೇಷಕ್ಕೆ ಬಡ್ತಿ ಸಿಕ್ಕಿತ್ತು.ಆ ವರ್ಷ ವೇಷಕ್ಕೆ ಪ್ರೇಕ್ಷಕರ ಚಪ್ಪಾಳೆ ಬೀಳಲಾರಂಭಿಸಿತು. ಹತ್ತೂರಲ್ಲಿ ಕೀರ್ತಿ ಹರಡಲಾರಂಭಿಸಿತು. ಆ ಸಮಯದಲ್ಲಿ ಹಿರಿಯ ಭಾಗವತ ಹೆರಂಜಾಲು ಗೋಪಾಲ ಗಾಣಿಗ ಮಂದಾರ್ತಿ ಮೇಳದಲ್ಲಿದ್ದರು. ಎರಡು ವರ್ಷ (2002-2003) ಕಳೆಯುವಷ್ಟರಲ್ಲಿ ಅವರು ಸಾಲಿಗ್ರಾಮ ಮೇಳದೊಂದಿಗೆ `ಒಪ್ಪಂದ' ಮಾಡಿಕೊಂಡರು. ಅವರ ಮಧ್ಯಸ್ಥಿಕೆಯಲ್ಲಿ ಶಶಿಕಾಂತ ಸಾಲಿಗ್ರಾಮ ಮೇಳದ ಪಾಲಾದರು. ಆ ವರ್ಷ ಮೇಳದ ಪ್ರಮುಖ ಪ್ರಸಂಗ `ಈಶ್ವರಿ-ಪರಮೇಶ್ವರಿ'.

ಅವರದ್ದು ಅತ್ತೆ ಪಾತ್ರ. ಯಲಗುಪ್ಪ ಸುಬ್ರಹ್ಮಣ್ಯ ಹೆಗಡೆ ಅವರದ್ದು ಸೊಸೆ ಪಾತ್ರ. ಆ ವರ್ಷ ಇದು ತಾರಾ ಜೋಡಿ. ಪ್ರದರ್ಶನ ವೀಕ್ಷಿಸಲು ಬಂದವರೆಲ್ಲ ಅತ್ತೆಗೆ ಹಿಡಿಶಾಪ ಹಾಕುವವರೇ. ಬೆಳಗಾಗುತ್ತಿದ್ದಂತೆ ಚೌಕಿಗೆ ಬಂದು ಮೆಚ್ಚುಗೆ ಸೂಚಿಸುತ್ತಿದ್ದವರು ನೂರಾರು ಮಂದಿ. ಅಷ್ಟರಮಟ್ಟಿಗೆ ಆ ಪಾತ್ರ ಹೆಸರು ತಂದುಕೊಟ್ಟಿತು. ಮತ್ತೆ ಶಶಿಕಾಂತ ಹಿಂತಿರುಗಿ ನೋಡಿದ್ದೇ ಇಲ್ಲ. ಯಶಸ್ಸು ಅವರನ್ನು ಅರಸಿಕೊಂಡು ಬಂತು. `ಅಜ್ಜ-ಅಜ್ಜಿಗೆ ಯಕ್ಷಪ್ರೀತಿ ಅಪಾರ. ಅಜ್ಜನ ಹೆಗಲಲ್ಲಿ ಕುಳಿತುಕೊಂಡು ಯಕ್ಷಗಾನ ವೀಕ್ಷಿಸುತ್ತಿದುದು ಈಗಲೂ ನೆನಪಿದೆ. ಶಾಲಾ ದಿನಗಳಲ್ಲಿ ನಾಟಕದಲ್ಲಿ ಪಾತ್ರ ಮಾಡುತ್ತಿದ್ದೆ. ಮನೆಯ ಸಮೀಪದ ಯುವಕ ಮಂಡಳಿಯ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದೆ. ಬುದ್ಧಿ ಬರುವ ಹೊತ್ತಿಗೆ ಕಾರ್ಕಳದಲ್ಲಿ ಯಕ್ಷಪ್ರೇಮವೂ ಕಡಿಮೆಯಾಗಿತ್ತು.

ಸಂಕಷ್ಟದ ಸಮಯದಲ್ಲಿ ಕೈ ಹಿಡಿದು ಮುನ್ನಡೆಸಿದವರು ಸತೀಶ್ ಕಾರ್ಕಳ ಅವರು. `ಹವ್ಯಾಸಿ' ವೇಷದ ಜೊತೆಗೆ ಚಿಕ್ಕಮೇಳದಲ್ಲೂ ಪಾತ್ರ ಮಾಡುತ್ತಿದೆ. 5-6 ಕಿ.ಮೀ. ದೂರ ನಡೆದುಕೊಂಡು ಹೋಗಿ ಮನೆಯಂಗಳದಲ್ಲಿ ಪಾತ್ರ ಮಾಡಬೇಕಿತ್ತು. ಅದು ಸಹ ಕಾಲಮಿತಿ ಪಾತ್ರ. ಜನರ ನಾಡಿಮಿಡಿತ ಅರಿತುಕೊಳ್ಳಲು ಚಿಕ್ಕಮೇಳವೂ ನೆರವು ನೀಡಿತು' ಎಂದು ಅವರು ಸ್ಮರಿಸುತ್ತಾರೆ.`ಮಂದಾರ್ತಿ ಮೇಳದಲ್ಲಿ ಇದ್ದಾಗ ಇಟಗಿ ಮಹಾಬಲೇಶ್ವರ ಭಟ್ ನನಗೆ ಉತ್ತಮ ಒಡನಾಡಿ. ಆ ದಿನದ ಯಕ್ಷಗಾನ ಪ್ರಸಂಗದ ಪುಸ್ತಕವನ್ನು ಎತ್ತಿಟ್ಟುಕೊಂಡು ಮಧ್ಯಾಹ್ನದವರೆಗೂ ಚರ್ಚೆ ನಡೆಸುತ್ತಿದ್ದೆವು. ಇದರಿಂದ ಮುಂದಿನ ಬಾರಿ ವೇಷ ಹಾಕುವಾಗ ಅನುಕೂಲ ಆಗುತ್ತಿತ್ತು. ಯಕ್ಷಗಾನದ ಆಕರ ಗ್ರಂಥಗಳನ್ನು ಹುಡುಕಿ ಓದಿದಿದೆ. ನನ್ನ ಅಭಿರುಚಿ ನೋಡಿ ಹುಬ್ಬಳ್ಳಿಯ ಆರ್.ಜಿ. ಭಟ್ ಹಾಗೂ ಎಂ.ಎನ್. ದಿನಕರ ಭಟ್ ಯಕ್ಷಗಾನಕ್ಕೆ ಸಂಬಂಧಿಸಿದ ಕೃತಿಗಳನ್ನು ಒದಗಿಸಿದರು' ಎಂದು ಕೃತಜ್ಞತೆ ವ್ಯಕ್ತಪಡಿಸುತ್ತಾರೆ.ಹೊಸ ಪ್ರಸಂಗಗಳಿಗೆ ಹೆಚ್ಚಿನ ಅಧ್ಯಯನ ಬೇಕಿಲ್ಲ. ಪೌರಾಣಿಕ ಪ್ರಸಂಗದ ಪ್ರತಿ ವೇಷವೂ ಕಲಾವಿದನಿಗೆ ಸವಾಲು. ಆ ವೇಷಕ್ಕೆ ಸಿದ್ಧತೆ ಮಾಡಿಕೊಳ್ಳದಿದ್ದರೆ ಪ್ರೇಕ್ಷಕರಿಗೆ ಅನ್ಯಾಯ ಮಾಡಿದಂತೆ. ಶಶಿಕಾಂತ ಯಕ್ಷ ಕೃತಿಗಳನ್ನು ಓದುವುದರ ಜೊತೆಗೆ ಮೇರು ಸ್ತ್ರೀವೇಷಧಾರಿಗಳ ಪಾತ್ರಗಳನ್ನು ಸೂಕ್ಷ್ಮವಾಗಿ ಗಮನಿಸಲಾರಂಭಿಸಿದರು. ತೆಂಕುತಿಟ್ಟಿನಲ್ಲಿ ಸ್ತ್ರೀಪಾತ್ರಗಳಿಗೆ ಹೊಸ ಸ್ಪರ್ಶ ನೀಡಿದ ಕೋಳ್ಯೂರು ರಾಮಚಂದ್ರ ರಾವ್ ಅವರ ಪ್ರಭಾವಿತ ಶಿಷ್ಯನಾಗಿದ್ದರು ಅವರು.`ದಾಕ್ಷಾಯಿಣಿ, ಚಂದ್ರಮತಿ, ಸೀತೆ, ದ್ರೌಪದಿ ಮತ್ತಿತರ ಪಾತ್ರಗಳಿಗೆ ರಾಮಚಂದ್ರರಾವ್ ಅವರಿಂದ ಸಲಹೆ ಪಡೆದೆ. ಮನೆಯಲ್ಲಿದ್ದಾಗ ಅಧ್ಯಯನಕ್ಕೆ ಹೆಚ್ಚಿನ ಅವಧಿ ಮೀಸಲು. ನಿದ್ದೆಗೆಟ್ಟು ಬಸ್‌ನಲ್ಲಿ ಹೋಗುವಾಗಲೂ ಅಧಿಕ ಸಮಯ ಮೀಸಲಾಗಿಡುವುದು ಓದಿಗೇ. ಆ ಓದು ಜಾಸ್ತಿ ಅವಧಿ ನೆನಪಿನಲ್ಲಿ ಇರುತ್ತದೆ. ತಾಳಮದ್ದಲೆ ರಂಗಭೂಮಿ ನನ್ನ ಮಾತನ್ನು ತಿದ್ದಿ ತೀಡಿತು' ಎನ್ನುತ್ತಾರೆ ಅವರು.`ನನಗೆ ಅಪಾರ ಹೆಸರು ತಂದುಕೊಟ್ಟಿರುವ ಪಾತ್ರ ಭೀಷ್ಮ ವಿಜಯ ಪ್ರಸಂಗದ `ಅಂಬೆ' ಪಾತ್ರ. ಬಡಗುತಿಟ್ಟಿನಲ್ಲಿ ಕೆರೆಮನೆ ಗಜಾನನ ಹೆಗಡೆ ಅವರ `ಅಂಬೆ'ಗೆ ಸರಿಸಾಟಿಯಾದ `ಅಂಬೆ' ಇಲ್ಲ ಎಂಬ ಮಾತಿದೆ. ಅವರ ಪಾತ್ರಗಳನ್ನು ನೋಡುವ ಅದೃಷ್ಟ ನನಗೆ ಸಿಕ್ಕಿರಲಿಲ್ಲ. ಅಂಬೆ ಕರುಣಾರಸದ ಪಾತ್ರ. ನಾವು ಪಾತ್ರವನ್ನು ಆವಾಹಿಸಿಕೊಳ್ಳಬೇಕು. ಹೊಸ ರೀತಿಯಲ್ಲಿ ಈ ಪಾತ್ರ ಚಿತ್ರಣ ಮಾಡಬೇಕು ಎಂದು ಪ್ರಯತ್ನ ಮಾಡಿದೆ.

ಕೆಲವು ಸಮಯದಲ್ಲಿ ಶಿರಸಿಯಲ್ಲಿ ಅಂಬೆ ಪಾತ್ರವನ್ನು ನೋಡಿದ ಅಭಿಮಾನಿಗಳು `ನಿಮ್ಮ ಅಂಬೆ ಪಾತ್ರ ಗಜಾನನ ಹೆಗಡೆ ಅವರ ಅಂಬೆಯನ್ನು ಮೀರಿಸಿದೆ' ಎಂದು ಶ್ಲಾಘಿಸಿದರು. ನನ್ನ `ಅಂಬೆ' ಪಾತ್ರವನ್ನು ಯೂಟ್ಯೂಬ್‌ನಲ್ಲಿ 5,000ಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ' ಎಂದು ಹೇಳುವಾಗ ಶಶಿಕಾಂತ ಕಣ್ಣುಗಳು ಹೊಳೆಯುತ್ತವೆ.ಶಶಿಕಾಂತ ಅವರ ಬದುಕಿಗೆ ಮಹತ್ವದ ತಿರುವು ನೀಡಿದ್ದು ಸಾಲಿಗ್ರಾಮ ಮೇಳ. ಮೂರೇ ವರ್ಷಗಳಲ್ಲಿ ಅವರು ಪ್ರಧಾನ ಸ್ತ್ರೀವೇಷಧಾರಿಯಾದರು. ಅಲ್ಲಿಂದ ಅವಕಾಶಗಳ ಹೆಬ್ಬಾಗಿಲು ತೆರೆಯಿತು. ಸಾಲಿಗ್ರಾಮ ಮೇಳದಲ್ಲಿ ಪೌರಾಣಿಕ ಹಾಗೂ ಹೊಸ ಪ್ರಸಂಗಗಳಿಗೆ ಸಮಾನ ಅವಕಾಶ ಇದೆ. ಉತ್ತರ ಕನ್ನಡ ಜಿಲ್ಲೆ ಹಾಗೂ ಕುಂದಾಪುರದ ಸುತ್ತಮುತ್ತಲಿನ ಭಾಗದ ಜನರು ಪೌರಾಣಿಕ ಪ್ರಸಂಗಪ್ರಿಯರು.

ಶಶಿಕಾಂತ ಪೌರಾಣಿಕ ಸ್ತ್ರೀಪಾತ್ರಗಳನ್ನು ವಿಭಿನ್ನವಾಗಿ ಮಾಡಲಾರಂಭಿಸಿದರು. ಬಹುಬೇಗ ಜನಪ್ರಿಯರಾದರು.`ಬಡಗುತಿಟ್ಟಿನಲ್ಲಿ ನನ್ನ ನರ್ತನವನ್ನು ತಿದ್ದಿದವರು ಮಹಾಗುರು ಬನ್ನಂಜೆ ಸಂಜೀವ ಸುವರ್ಣ ಅವರು. ಯುವ ಯಕ್ಷ ಕಲಾವಿದರಿಗೆ ರಾಜ್ಯ ಯಕ್ಷಗಾನ ಅಕಾಡೆಮಿ ಉಜಿರೆ ಹಾಗೂ ಹೊರನಾಡಿನಲ್ಲಿ ಆಯೋಜಿಸಿದ್ದ ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಂಡಿದ್ದು ರಂಗ ಸೂಕ್ಷ್ಮತೆಗಳನ್ನು ಅರಿತುಕೊಳ್ಳಲು ನೆರವಾಯಿತು.

ಇದರಿಂದಾಗಿ ಪಾತ್ರಗಳಿಗೂ ಹೊಸ ಆಯಾಮ ನೀಡಲು ಸಾಧ್ಯವಾಯಿತು. ಶಿಬಿರದಲ್ಲಿ ಪಾಲ್ಗೊಂಡ ಬಳಿಕ ನಿನ್ನ ಖದರೇ ಬೇರೆ ರೀತಿ ಆಗಿದೆ ಎಂದು ಹಿರಿಯ ಕಲಾವಿದ ಕೃಷ್ಣಯಾಜಿ ಬಳ್ಕೂರು ಆಗಾಗ ಮೆಚ್ಚುಗೆ ಸೂಚಿಸುವುದು ಉಂಟು' ಎಂದು ಶಶಿಕಾಂತ ಹೆಮ್ಮೆಯಿಂದ ಹೇಳುತ್ತಾರೆ.

 

ಮದುವೆ ಟರ್ನಿಂಗ್ ಪಾಯಿಂಟ್

`ಮದುವೆಯಾದ ಬಳಿಕ ಹೆಣ್ಣಿನ ತುಮುಲ, ಕಳವಳ, ಸೂಕ್ಷ್ಮ ಸಂಬಂಧದ ವಿಶ್ವರೂಪ ದರ್ಶನ ಆಯಿತು. ಇದರಿಂದಾಗಿ ಹೆಣ್ಣಿನ ಪಾತ್ರಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ರೂಪಿಸಲು ಸಾಧ್ಯವಾಗಿದೆ. ಕಲಾವಿದರಿಗೆ ಮಾತು ಹಾಗೂ ನಾಟ್ಯವನ್ನು ಗುರುಗಳು ಹೇಳಿಕೊಡಬಹುದು. ಮನುಷ್ಯನ ಕಷ್ಟ, ಕಾರ್ಪಣ್ಯಗಳು ಅನುಭವದಿಂದಲೇ ಬರಬೇಕು. ಜೀವನಾನುಭವವೇ ನನ್ನನ್ನು ತಿದ್ದಿ ತೀಡಿದೆ' ಎಂದು ಶಶಿಕಾಂತ ಶೆಟ್ಟಿ ಹೇಳುತ್ತಾರೆ.`ಕಲಾವಿದನಿಗೆ ಕಲೆಯ ಮೇಲೆ ಶ್ರದ್ಧೆ, ಆಸಕ್ತಿ, ಗೌರವ, ಪ್ರೀತಿ ಇರಬೇಕು. ಪಾತ್ರಕ್ಕೆ ನ್ಯಾಯ ಒದಗಿಸಬೇಕು. ಇಲ್ಲದಿದ್ದರೆ ಅಭಿಮಾನಿಗಳಿಗೆ ಅನ್ಯಾಯ ಮಾಡಿದಂತೆ ಆಗುತ್ತದೆ. ಉದ್ಯೋಗದಲ್ಲಿ ಬಡ್ತಿ ಪಡೆಯುವ ಹಾಗೆಯೇ ರಂಗದಲ್ಲಿ ಬಡ್ತಿ ಪಡೆಯಲು ನಾವು ಶ್ರಮಿಸಬೇಕು. ನಾವು ಮಾಡುವ ಉದ್ಯೋಗದಲ್ಲಿ ಬಡ್ತಿ ಸಿಗದಿದ್ದರೆ ಆ ಉದ್ಯೋಗವನ್ನು ಬಿಡುವುದು ಉತ್ತಮ ಅಲ್ಲವೇ ಎಂದು ಅವರು ಪ್ರಶ್ನಿಸುತ್ತಾರೆ.

ಪುರುಷ ಪಾತ್ರದತ್ತ...

ಪೌರಾಣಿಕ ಪ್ರಸಂಗದ ಪುರುಷ ಪಾತ್ರಗಳನ್ನು ಮಾಡಬೇಕು ಎಂದು ಬಯಸುವ ಶಶಿಕಾಂತ ಅವರ ಅಭಿಮಾನಿಗಳ ಸಂಖ್ಯೆ ಹೆಚ್ಚುತ್ತಿದೆ. `ಶ್ರೀಕೃಷ್ಣ ಪರಂಧಾಮ' ಹಾಗೂ `ಶ್ರೀರಾಮ ನಿರ್ಯಾಣ' ಪ್ರಸಂಗಗಳಿಗೆ ಯಕ್ಷ ರಂಗದಲ್ಲಿ ವಿಶೇಷ ಘನತೆ ಇದೆ. ಬಡಗುತಿಟ್ಟಿನಲ್ಲಿ `ಶ್ರೀಕೃಷ್ಣ ಪರಂಧಾಮ' ಪ್ರಸಂಗದಲ್ಲಿ ಸಿದ್ಧಕಟ್ಟೆ ವಿಶ್ವನಾಥ ಶೆಟ್ಟಿ ಅವರ `ಶ್ರೀಕೃಷ್ಣ' ಶ್ರೇಷ್ಠ ಪಾತ್ರ.

ಅವರು ಮಾತಿನ ಮೂಲಕವೇ ಇಡೀ ಪಾತ್ರ ಚಿತ್ರಣ ಮಾಡುತ್ತಿದ್ದರು. ಅವರು ಕೃಷ್ಣನ ಪಾತ್ರ ಮಾಡುತ್ತಿದ್ದಾಗ ಶಶಿಕಾಂತ ಯಶೋದೆಯ ಪಾತ್ರ ಮಾಡುತ್ತಿದ್ದರು. ಸಾಲಿಗ್ರಾಮ ಮೇಳ ಬೆಂಗಳೂರಿಗೆ ತಿರುಗಾಟಕ್ಕೆ ಹೋದಾಗ ಅವರು ಬರುತ್ತಿರಲಿಲ್ಲ. ಆಗ ಕೃಷ್ಣನ ಪಾತ್ರವನ್ನು ಶಶಿಕಾಂತ ಅವರೇ ಮಾಡುತ್ತಿದ್ದರು. ಈ ಪಾತ್ರವನ್ನು ತಮ್ಮದೇ ಶೈಲಿಯಿಂದ ಮಾಡಬೇಕು ಎಂದು ಅನಿಸಿದಾಗ ಅವರು `ಕೃಷ್ಣಾವತಾರದ ಕೊನೆಯ ದಿನಗಳು' ಪುಸ್ತಕವನ್ನು ಓದಿದರು.

ಆ ಓದಿನಿಂದ ಹೊಸ ಹೊಳಹುಗಳು ಸಿಕ್ಕವು. ಇದರೊಂದಿಗೆ ಕೃಷ್ಣ ಸಂಧಾನದ `ಕೃಷ್ಣ', ಕೀಚಕ ವಧೆಯ `ಭೀಮ', `ಕರ್ಣಾರ್ಜುನ' ಪ್ರಸಂಗದ `ಶಲ್ಯ' ಪಾತ್ರಗಳು ಹೆಸರು ತಂದುಕೊಟ್ಟವು ಎಂದು ಅವರು ಅಭಿಮಾನದಿಂದ ಹೇಳುತ್ತಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.