ಶುಕ್ರವಾರ, ಮೇ 14, 2021
31 °C

ಪುಸ್ತಕಗಳ ವಿಮರ್ಶೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎಲ್ಲಾ ಕಾಲದ ಬೆಳಕು

ಪ್ರಧಾನ ಸಂಪಾದಕ: ಭೀಮನಗೌಡ ಇಟಗಿ; ಸಂಪಾದಕ: ಡಾ.ದಸ್ತಗೀರಸಾಬ್ ದಿನ್ನಿ

ಪು: 220; ಬೆ: ರೂ. 100; ಪ್ರ: ಕನಸು ಪ್ರಕಾಶನ, ನಂ.4-4-578/1, ಜಹೀರಾಬಾದ್, ರಾಯಚೂರು.

ಆಧುನಿಕ ಭಾರತವನ್ನು ಪ್ರಭಾವಿಸಿದ ಮಹಾನ್ ಚೇತನಗಳಲ್ಲಿ ರಾಮ ಮನೋಹರ ಲೋಹಿಯಾ ಒಬ್ಬರು. ಲೋಹಿಯಾ ತಮ್ಮ ಬಾಲ್ಯದ ದಿನಗಳಲ್ಲಿ ಕೊಳಲು ನುಡಿಸುತ್ತ ಮೈಮರೆಯುತ್ತಿದ್ದರಂತೆ. ಅವರ ವಿಚಾರದ ಮುರಲಿ ನಾದ ಕನ್ನಡದ ಅನೇಕ ಮನಸ್ಸುಗಳ ಮೇಲೂ ಪ್ರಭಾವ ಬೀರಿದೆ. ಅದು ಬೆಳಕನ್ನು ತೋರುವ, ವಿಚಾರದ ಆನಂದವನ್ನು ಕಾಣಿಸುವ ನಾದ. `ಲೋಹಿಯಾ ವಾದಿ~ಗಳು ಎಂದು ಗುರ್ತಿಸಿಕೊಳ್ಳುವ ಹಿರಿಯರ ಒಂದು ಪಡೆಯೇ ನಮ್ಮಲ್ಲಿದೆ.ಲೋಹಿಯಾ ವಿಚಾರಗಳನ್ನು ಪ್ರಚುರಪಡಿಸಲು ಶ್ರಮಿಸುತ್ತಿರುವ ಭೀಮನಗೌಡ ಇಟಗಿ ಮತ್ತು ಡಾ.ದಸ್ತಗೀರಸಾಬ್ ದಿನ್ನಿ ಅವರು ಸಂಪಾದಿಸಿರುವ `ಎಲ್ಲಾ ಕಾಲದ ಬೆಳಕು~ ಲೋಹಿಯಾ ಅವರ ವಿವಿಧ ಮುಖಗಳನ್ನು ಪರಿಚಯಿಸುವ ಅಪೂರ್ವ ಪುಸ್ತಕ. ಇಲ್ಲಿನ ಬಹುತೇಕ ಬರಹಗಳನ್ನು ಪುಸ್ತಕಕ್ಕಾಗಿಯೇ ಬರೆಸಿರುವುದು ಸಂಪಾದಕರ ಶ್ರಮ, ಬದ್ಧತೆಗೆ ಕುರುಹಾಗಿದೆ.ಹಿರಿಯರಾದ ಯು.ಆರ್.ಅನಂತಮೂರ್ತಿ ಅವರಿಂದ ಹಿಡಿದು ಹೊಸ ತಲೆಮಾರಿನ ಮಹಾಂತೇಶ ನವಲಕಲ್‌ವರೆಗೆ ಇಪ್ಪತ್ತೆಂಟು ಬರಹಗಾರರು ಲೋಹಿಯಾ ಅವರ ಚಿಂತನೆಗಳನ್ನು ಹೊಸಗಾಲದ ಬೆಳಕಿನಲ್ಲಿ ಕಾಣಲು ಪ್ರಯತ್ನಿಸಿದ್ದಾರೆ.ಕನಸುಗಾರನಂತೆ, ಬಂಡಾಯಗಾರನಂತೆ, ಜೀವನ ಪ್ರೀತಿಯ ಹರಿಕಾರನಂತೆ, ಸಾಂಸ್ಕೃತಿಕ ವಿಶ್ಲೇಷಕನಂತೆ, ಸಮಾಜವಾದಿಯಂತೆ- ಹೀಗೆ, ಲೋಹಿಯಾ ಬಹುರೂಪಿಯಾಗಿ ಇಲ್ಲಿನ ಲೇಖನಗಳಲ್ಲಿ ಓದುಗರಿಗೆ ಮುಖಾಮುಖಿಯಾಗುತ್ತಾರೆ.

 

`ಗಾಂಧಿ, ಲೋಹಿಯಾ ಹಾಗೂ ಆಧುನಿಕ ನಾಗರಿಕತೆ~ (ಕಿಷನ್ ಪಟ್ನಾಯಕ್), ಲೋಹಿಯಾ ಮೂಲಕ ಗಾಂಧಿ ಮತ್ತು ಗಾಂಧೀವಾದ~ (ನಟರಾಜ್ ಹುಳಿಯಾರ್), `ಮಹಿಳೆಯ ಹಿತ ಲೋಹಿಯಾ ತತ್ತ್ವ~ (ತಾರಿಣಿ ಶುಭದಾಯಿನಿ), `ಜಾಗತಿಕ ಹಳ್ಳಿಯಲ್ಲಿ ಲೋಹಿಯಾ ಈ ಹೊತ್ತು~ ಬಗೆಯ ಕುತೂಹಲಕರ ಲೇಖನಗಳಿವೆ.

 

ಇವುಗಳ ಜೊತೆಗೆ ಬಸವಣ್ಣ ಮತ್ತು ಲೋಹಿಯಾ ಅವರನ್ನು ಒಟ್ಟಿಗೆ ನೋಡುವ ಬರಹಗಳೂ (ಲಿಂಗಣ್ಣ ಗಾಣದಾಳ, ದಸ್ತಗೀರಸಾಬ್ ದಿನ್ನಿ) ಇವೆ. ತರುಣ ಪೀಳಿಗೆಯ ಓದುಗರಿಗೆ `ಎಲ್ಲಾ ಕಾಲದ ಬೆಳಕು~ -ಲೋಹಿಯಾ- ಪ್ರವೇಶಕ್ಕೆ ಈ ಕೃತಿ ಉಪಯುಕ್ತ.* * *ನಗುವ ಹನಿ

ಲೇ: ಮಂಜುನಾಥ್ ಪಾಂಡವಪುರ

ಪು: 52; ಬೆ: ರೂ. 30; ಪ್ರ: ಅಂಕ ಪ್ರಕಾಶನ, ನಂ.955, ಕಾಳಿದಾಸ ನಗರ, 4ನೇ ಮುಖ್ಯರಸ್ತೆ, ಹೊಸಕೆರೆಹಳ್ಳಿ, ಬನಶಂಕರಿ 3ನೇ ಹಂತ, ಬೆಂಗಳೂರು- 560 0085.ಸಾಹಿತ್ಯ, ಕಿರುತೆರೆ, ಸಿನಿಮಾ ಎಂದು ಓಡಾಡುವ ಮಂಜುನಾಥ್ ಪಾಂಡವಪುರ ಅವರ ಚೊಚ್ಚಿಲ ಹನಿಗವನ ಸಂಕಲನ `ನಗುವ ಹನಿ~. ಓದುಗರನ್ನು ನಗಿಸಲಿಕ್ಕೆಂದೇ ಯತ್ನಿಸುವ ಇಲ್ಲಿನ ಅನೇಕ ಹನಿಗಳ ನಡುವಿನ ಒಂದು ಹನಿ- `ನಾ ಕವಿಗೋಷ್ಠಿಯಲ್ಲಿ / ಎಷ್ಟೇ ಚೆನ್ನಾಗಿ / ಓದಿದರೂ / ಹನಿಗವನ; / ಕೆಲವು ಪ್ರೇಕ್ಷಕರು / ಹರಿಸುವುದೇ ಇಲ್ಲ / ನನ್ನ ಕಡೆ / ಗಮನ!~.ಪ್ರಾಸಕೆ ಪ್ರಾಸ ಜೋಡಿಸುವ ಮಂಜುನಾಥ್, ಪದ ಚಮತ್ಕಾರದ ಮೂಲಕವೇ ಓದುಗರ ಗಮನಸೆಳೆಯುವ ಪ್ರಯತ್ನ ಮಾಡಿದ್ದಾರೆ. ಕಿರಿದರಲ್ಲಿ ಹಿರಿದನ್ನು ಹಿಡಿಯುವ ಪ್ರಯತ್ನ, ಅನಿರೀಕ್ಷಿತ ಅರ್ಥಸ್ಫೋಟದ ಮಹತ್ವಾಕಾಂಕ್ಷೆ ಇಲ್ಲಿನ ರಚನೆಗಳಲ್ಲಿಲ್ಲ. ಹನಿಗವಿಗಳಿಗೆ ಅಕ್ಷಯಪಾತ್ರೆಯಂತಿರುವ ಪ್ರೇಮ, ಪ್ರೇಯಸಿ ಇಲ್ಲೂ ದ್ರವ್ಯ.ಕವಿತೆ ಎನ್ನುವುದನ್ನು ಸಂಚಾರಿ ಭಾವವನ್ನಾಗಿ ಸ್ವೀಕರಿಸುವ ಬದಲು ಧ್ಯಾನವಾಗಿ ಪರಿಗಣಿಸಿದರೆ ಕಾಡುವ ಹನಿಗಳ ಸಂಚಯ ಮಂಜುನಾಥ್‌ರಿಗೆ ಸಾಧ್ಯವಾಗಬಹುದು. `ಮುತ್ತು - ರತ್ನ / ತಂದು ಕೊಡು / ಎಂದು ಕೇಳುತ್ತಲೇ / ಇರುತ್ತಾಳೆ ನನ್ನ / ಮುದ್ದು ರತ್ನ!~ ಎನ್ನುವುದು ಒಂದು ಹನಿ. ಓದುಗರು ಬಯಸುವುದು `ಕಾವ್ಯ ರತ್ನ~ವನ್ನು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.