ಬುಧವಾರ, ಏಪ್ರಿಲ್ 14, 2021
31 °C

ಪೂಜಾ ಪಟ್ಟುಗಳು

ನೀನಾ ಸಿ. ಜಾರ್ಜ್ Updated:

ಅಕ್ಷರ ಗಾತ್ರ : | |

ಪೂಜಾ ಪಟ್ಟುಗಳು

ಪೂಜಾ ಗಾಂಧಿ ಈಗ ನೃತ್ಯ ಹಾಗೂ ಜಿಮ್ ಎರಡರ ಕಡೆಗೂ ಒಲವು ಮೂಡಿಸಿಕೊಂಡಿದ್ದಾರೆ. `ಡೈರೆಕ್ಟರ್ಸ್‌ ಸ್ಪೆಷಲ್~ ಚಿತ್ರಕ್ಕೊಂದು ಐಟಂ ನೃತ್ಯ ಮಾಡಿರುವ ಅವರಿಗೆ ಬೆಲ್ಲಿ ಡಾನ್ಸ್ ಮೋಹ ಬಂದಿದೆ.

 

ಅದಕ್ಕೆ ಕಾರಣ ರಾಣಿ ಮುಖರ್ಜಿ. `ಅಯ್ಯಾ~ ಚಿತ್ರದಲ್ಲಿ ರಾಣಿ ನರ್ತನದ ಪರಿ ಕಂಡು ತಾವೂ ಯಾಕೆ ಉದರದಲ್ಲಿ ಪದರ ಮೂಡಿಸುತ್ತಾ ನೃತ್ಯ ಮಾಡಬಾರದು ಎಂದು ಪೂಜಾ ಅವರಿಗೆ ಅನ್ನಿಸಿದೆ. ಅದಕ್ಕೇ ತಮ್ಮ ಮನೆಗೇ ಸೂಕ್ತ ನೃತ್ಯ ತರಬೇತುದಾರರನ್ನು ಕರೆಸಿಕೊಂಡು `ಬೆಲ್ಲಿ ಡಾನ್ಸ್~ ಕಲಿಯುವುದು ಅವರ ಆದ್ಯತೆ.ಐಟಂ ಹಾಡು ಈ ದಿನಮಾನದಲ್ಲಿ ಮಾಮೂಲಾಗಿರುವುದರಿಂದ ಪೂಜಾ ಅವರಿಗೂ ಅದು ಅಪಥ್ಯವೇನಲ್ಲ. `ಮಿಲನ~ ಚಿತ್ರದಲ್ಲಿ ಒಂದು ಹಾಡಿನಲ್ಲಿ ಕಾಣಿಸಿಕೊಂಡಿದ್ದ ಅವರು ಚಿತ್ರ ದೊಡ್ಡದಾದರೇನು, ಚಿಕ್ಕದಾದರೇನು ಎನ್ನುವವರ ಪೈಕಿ. `ಐಟಂ ಹಾಡಿಗೆ ಹೆಜ್ಜೆ ಹಾಕುವುದು ತಪ್ಪೇನಲ್ಲ. ನಾನು ಚೂಸಿ ಅಲ್ಲ.

 

ಬರುವ ಪಾತ್ರಗಳಲ್ಲಿ ಒಂದು ಮಟ್ಟಕ್ಕೆ ಸೋಸಿ ಒಪ್ಪಿಕೊಳ್ಳುವುದು ನನ್ನ ಜಾಯಮಾನ. ವಿವಿಧ ಪಾತ್ರಗಳಿಗೆ ತೆರೆದುಕೊಳ್ಳುತ್ತಾ ನಮ್ಮನ್ನು ನಾವು ಪ್ರಯೋಗದ ನಿಕಷಕ್ಕೆ ಒಡ್ಡಿಕೊಳ್ಳಬೇಕು. ಅದಕ್ಕೆ ಇದು ಸಕಾಲ~ ಎನ್ನುವ ಪೂಜಾ ತಮ್ಮ ನಿರ್ಧಾರಕ್ಕೆ ಬಾಲಿವುಡ್ ತಾರೆಯರ ನಿದರ್ಶನಗಳನ್ನು ಪುಂಖಾನುಪುಂಖವಾಗಿ ಕೊಡುತ್ತಾರೆ.ವಿದ್ಯಾ ಬಾಲನ್ `ದಿ ಡರ್ಟಿ ಪಿಕ್ಚರ್~ನಲ್ಲಿ ಮಾಡಿದ ಪಾತ್ರದಿಂದ ಬಾಲಿವುಡ್‌ನಲ್ಲಿ ನಟಿಯರ ಸ್ಥಾನಮಾನ ಮೇಲೇರಿತು ಎಂಬರ್ಥದಲ್ಲಿ ಮಾತನಾಡುವ ಪೂಜಾ ತಾವೂ ಅದೇ ರೀತಿ ಹೆಚ್ಚು ಪ್ರಯೋಗಾತ್ಮಕ ನಟಿಯಾಗುವ ಬಯಕೆ ಹೊಂದಿದ್ದಾರೆ.`ಸುಭದ್ರ~ ಎಂಬ ಮಹಿಳಾ ಪ್ರಧಾನ ಚಿತ್ರೀಕರಣಕ್ಕೆ ದಿನಗಣನೆ ಶುರುವಾಗಿದ್ದು, ಅದು ತುಂಬಾ ಗಟ್ಟಿ ಮಹಿಳೆಯ ಪಾತ್ರವಂತೆ. ಅದಲ್ಲದೆ ಪೊಲೀಸ್ ಅಧಿಕಾರಿಣಿ ಪಾತ್ರವೊಂದೂ ಅವರಿಗೆ ಸಿಕಿದ್ದು, ಅದಕ್ಕಾಗಿ ದೇಹತೂಕ ಇಳಿಸಿಕೊಳ್ಳಬೇಕಿದೆ. ಹಾಗಾಗಿ ಕಸರತ್ತು ಅವರಿಗೀಗ ಅನಿವಾರ್ಯ. ಹಿಂದೆಯೂ ಅವರು ಎರಡು ಮೂರು ಬಾರಿ ತಮ್ಮ ತೂಕ ಇಳಿಸಿಕೊಂಡಿದ್ದುಂಟು.`ರಾಣಿ ಮುಖರ್ಜಿ ನಾನು ಮೊದಲಿನಿಂದ ಇಷ್ಟಪಟ್ಟ ನಟಿ. ಅಯ್ಯಾ ಹಿಂದಿ ಚಿತ್ರದಲ್ಲಿ ಅವರ ನೃತ್ಯ ಲಾಲಿತ್ಯ ಕಂಡು ಬೆರಗಾದೆ. ಅಷ್ಟು ಶ್ರದ್ಧೆಯಿಂದ ಅವರು ನೃತ್ಯ ಕಲಿತಿದ್ದಾರೆ. ನನಗೂ ಅಂಥ ನೃತ್ಯ ಕಲಿಯುವ ಬಯಕೆಯಾಗಿದೆ~ ಎನ್ನುವ ಪೂಜಾ ಸದ್ಯಕ್ಕೆ ವೈವಿಧ್ಯಮಯ ಪಾತ್ರಗಳನ್ನು ಬಯಸುತ್ತಿದ್ದಾರೆ.`ದಂಡುಪಾಳ್ಯ~ ಚಿತ್ರ ಹಚ್ಚಿದ ಹಣೆಪಟ್ಟಿಯನ್ನು ಕಳಚುವುದು ಅವರ ಉದ್ದೇಶ. ಹಾಗಾಗಿ ಅದೇ ಧಾಟಿಯ ಕೆಲವು ಚಿತ್ರಗಳನ್ನು ಅವರು ನಿರಾಕರಿಸಿದ್ದಾರೆ. ಒಂದು ಕಾಲನ್ನು ರಾಜಕೀಯದಲ್ಲಿ, ಇನ್ನೊಂದು ಕಾಲನ್ನು ನಟನೆಯಲ್ಲಿ ಇಟ್ಟುಕೊಂಡಿರುವ ಅವರ ಪಟ್ಟುಗಳನ್ನು ಗಮನಿಸಿದರೆ `ಬಹುಮುಖ ಪ್ರತಿಭೆ~ ಎನ್ನಲಡ್ಡಿಯಿಲ್ಲ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.