ಗುರುವಾರ , ಮೇ 13, 2021
39 °C

ಪೂರ್ಣಗೊಳ್ಳದ ಘಟಪ್ರಭಾ ಬಲದಂಡೆ ಕಾಲುವೆ

ಪ್ರಜಾವಾಣಿ ವಾರ್ತೆ/ ಬಸವರಾಜ್ ಸಂಪಳ್ಳಿ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: ಜಿಲ್ಲೆಯ ಲಕ್ಷಾಂತರ ಎಕರೆ ಭೂಮಿಗೆ ನೀರು ಪೂರೈಕೆ ಮಾಡುವ ಘಟಪ್ರಭಾ ಬಲದಂಡೆ ಕಾಲುವೆ ನಿರ್ಮಾಣ ಕಾಮಗಾರಿ ಸರ್ಕಾರದ ನಿರ್ಲಕ್ಷ್ಯದಿಂದ ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳದೇ ಕಾಲುವೆಯಲ್ಲಿ ನೀರು ಹರಿಯುವುದು ಕನಸಾಗಿ ಉಳಿದಿದೆ.2005ರಲ್ಲಿ ಆರಂಭಗೊಂಡು 2011 ಮಾರ್ಚ್‌ಗೆ ಪೂರ್ಣಗೊಳ್ಳಬೇಕಾಗಿದ್ದ ರೂ. 1450 ಕೋಟಿ ವೆಚ್ಚದ ಬಲದಂಡೆ ಕಾಲುವೆ ನಿರ್ಮಾಣ ಇನ್ನೂ ಮುಗಿದಿಲ್ಲದಿರುವುದು ಜಿಲ್ಲೆಯನ್ನು ಹಸಿರಾಗಿಸುವ ಮಹತ್ವದ ಯೋಜನೆ ನಿರ್ಲಕ್ಷ್ಯಕ್ಕೆ ಒಳಗಾಗಿದೆ.ಈಗಾಗಲೇ ನಿರ್ಮಿಸಲಾಗಿರುವ ಮುಖ್ಯ ಕಾಲುವೆ  ಕಳಪೆಯಾಗಿದೆ, ನಿರ್ವಹಣೆ ಕೊರತೆ ಮತ್ತು ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳ ನಿರ್ಲಕ್ಷ್ಯದಿಂದ ನೀರು ಹರಿಯುವ ಬದಲು ಗಿಡಗಂಟೆಗಳಿಂದ ತುಂಬಿಕೊಂಡು ಹಾಳುಬಿದ್ದಿದೆ.ಮುಧೋಳ ತಾಲ್ಲೂಕಿನ ಕೆಲ ಪ್ರದೇಶಕ್ಕೆ ಮಾತ್ರ ಕಾಲುವೆಯಲ್ಲಿ ನೀರು ಹರಿಯುತ್ತಿದೆ, ಆದರೆ ಬಾದಾಮಿ, ಬಾಗಲಕೋಟೆ ಮತ್ತು ಹುನಗುಂದ ತಾಲ್ಲೂಕಿನ ರೈತರು ಕಾಲುವೆಯಲ್ಲಿ ನೀರು ಹರಿಯದ ಕಾರಣ ಇನ್ನೂ ಮಳೆನಂಬಿಕೊಂಡು ಕೃಷಿ ಮಾಡುವುದರಲ್ಲೇ ನಿರತಾಗಿದ್ದಾರೆ.ಘಟಪ್ರಭಾ ಬಲದಂಡೆ ಕಾಲುವೆ ಕಿ.ಮೀ. 108ರಿಂದ 199ರಲ್ಲಿ ಇದುವರೆಗೆ ಶಿರೂರ ವರೆಗೆ ಅಂದರೆ ಕಿ.ಮೀ.192ರ ವರೆಗೆ ಪ್ರಾಯೋಗಿಕವಾಗಿ ಮಾತ್ರ ನೀರು ಹರಿಸಲಾಗಿದೆ. ಉಳಿದ ಕಾಲುವೆ ನಿರ್ಮಾಣಕ್ಕೆ 704 ಎಕರೆ ಭೂಮಿ ಸ್ವಾಧೀನ ಪಡಿಸಿಕೊಳ್ಳುವಲ್ಲಿ ವಿಳಂಬ ಉಂಟಾಗಿರುವುದು ಸಮಸ್ಯೆಗೆ ಕಾಣವಾಗಿದೆ.150 ಕಿ.ಮೀ.ಯ ಕಲಾದಗಿ ವರೆಗೆ ಮಾತ್ರ ಕಾಲುವೆಯಲ್ಲಿ ನೀರು ಪೂರೈಕೆಯಾಗುತ್ತಿದ್ದು, ಜಿಲ್ಲೆಯ ಅನವಾಲ, ಜಲಗೇರಿ, ಹೂಲಗೇರಿ, ಬಂದಕೇರಿ, ಸೂಳಿಕೇರಿ, ನೇರಲಕೇರಿ, ಕಟಗೇರಿ, ಕಗಲಗೊಂಬ, ಸೀಗೀಕೇರಿ, ಶಿರೂರ, ಬೆನಕಟ್ಟಿ ಸೇರಿದಂತೆ ಆಸುಪಾಸಿನ ಒಟ್ಟು 55 ಸಾವಿರ ಹೆಕ್ಟರ್ ಭೂಮಿ ಈ ಯೋಜನೆಯಡಿ ನೀರಾವರಿ ಸೌಲಭ್ಯ ಪಡೆಯಬೇಕಾಗಿದೆ.ಇದುವರೆಗೆ 20 ಸಾವಿರ ಹೆಕ್ಟೇರ್ ಭೂಮಿಯಲ್ಲಿ ಕೃಷಿಗೆ ಬಳಸಲಾಗುತ್ತಿದೆ. ಇನ್ನೂ 35 ಸಾವಿರ ಹೆಕ್ಟೇರ್ ಭೂಮಿಗೆ ನೀರು ಪೂರೈಕೆಗೆ ಬಾಕಿ ಉಳಿದಿದೆ.ಈ ಕುರಿತು `ಪ್ರಜಾವಾಣಿ~ಯೊಂದಿಗೆ ಮಾತನಾಡಿದ ಜಿಲ್ಲಾ ಕೃಷಿಕ ಸಮಾಜದ ಉಪಾಧ್ಯಕ್ಷ ಟಿ.ಬಿ. ತುಪ್ಪದ,  ಜಿಲ್ಲೆಯ ರೈತರ ಬಹುದಿನದ ಕನಸಾದ ಘಟಪ್ರಭಾ ಬಲದಂಡೆ ಕಾಲುವೆ ಸರ್ಕಾರದ ನಿರ್ಲಕ್ಷ್ಯದಿಂದ ನೆನೆಗುದಿಗೆ ಬಿದ್ದಿದೆ. ಕಾಲುವೆ ನಿರ್ಮಾಣ ಕಳಪೆಯಾಗಿದೆ. ಇದರಲ್ಲಿ ಅಧಿಕಾರಿಗಳ ಪಾತ್ರ ಮುಖ್ಯವಾಗಿದೆ ಈ ಬಗ್ಗೆ ತನಿಖೆಯಾಗಬೇಕು ಎಂದು ಆಗ್ರಹಿಸಿದರು.ರೈತರ ಹೊಲಕ್ಕೆ ನೀರು ತಲುಪದೇ ವ್ಯರ್ಥವಾಗಿ ಪೋಲಾಗುತ್ತಿದೆ. ಮಳೆಗಾಲದಲ್ಲಿ ನದಿಗೆ ಬಿಡುವ ನೀರನ್ನು ಕಾಲುವೆಗೆ ಹರಿಸಿದ್ದರೆ ಈ ಭಾಗದ ಸಾವಿರಾರು ಎಕರೆ ಭೂಮಿ ಕೃಷಿ ಯೋಗ್ಯವಾಗುತ್ತಿತ್ತು ಎಂದು ಹೇಳಿದರು.ಕರ್ನಾಟಕ ನೀರಾವರಿ ನಿಗಮದ ಎಂಬಿಸಿ ವಿಭಾಗ ಸಂಖ್ಯೆ 1ರ ಕಾರ್ಯಪಾಲಕ ಎಂಜಿನಿಯರ್ ಬಿ.ಸಿ. ಕರಿಸೈಯಪ್ಪನವರ  ಮಾತನಾಡಿ, ಕಾಲುವೆ ನಿರ್ಮಾಣಕ್ಕೆ ಅಗತ್ಯವಿರುವ ಭೂಸ್ವಾಧೀನ ಮಾಡಿಕೊಳ್ಳುವಲ್ಲಿ ಆಗುತ್ತಿರುವ ತೊಂದರೆಯಿಂದ ಯೋಜನೆ ಅನುಷ್ಠಾನ ವಿಳಂಬವಾಗಿದೆ ಎಂದು ಹೇಳಿದರು.ಮುಖ್ಯ ಕಾಲುವೆ ನಿರ್ಮಾಣ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ, ಶೇ. 10 ರಷ್ಟು ಮುಖ್ಯ ಕಾಲುವೆ ನಿರ್ಮಾಣ ಆಗಬೇಕಿದೆ. ಅಲ್ಲದೇ ವಿತರಣಾ ಕಾಲುವೆ, ಹೊಲಗಾಲುವೆ ನಿರ್ಮಾಣಕ್ಕೆ ಇದೀಗ ಟೆಂಡರ್ ಕರೆಯಲಾಗಿದೆ. ಮುಂದಿನ ವರ್ಷ ಕಾಮಗಾರಿ ಪೂರ್ಣಗೊಳ್ಳುವ ಸಾಧ್ಯತೆ ಇದೆ ಎಂದರು.ಈ ಮೊದಲು ಬಾಗಲಕೋಟೆಯಲ್ಲಿದ್ದ ವಿಶೇಷ ಭೂ ಸ್ವಾಧೀನ ಮತ್ತು ಪುನರ್ವಸತಿ ಕಚೇರಿ ಧಾರವಾಡಕ್ಕೆ ಸ್ಥಳಾಂತರವಾಗಿರುವುದರಿಂದ ಹಾಗೂ ಕಚೇರಿಯು ಸಿಬ್ಬಂದಿ ಕೊರತೆ ಅನುಭವಿಸುತ್ತಿರುವುದರಿಂದ ಘಟಪ್ರಭಾ ಬಲದಂಡೆ ಕಾಲುವೆ ನಿರ್ಮಾಣ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ ಎಂದು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.