ಭಾನುವಾರ, ಮೇ 22, 2022
24 °C

ಪೆಟ್ಲ ಕೇವಲ ನೆನಪು ಮಾತ್ರ

ಮಾರುತಿ ಪೇಟಕರ Updated:

ಅಕ್ಷರ ಗಾತ್ರ : | |

ಬಿದಿರಿನಿಂದ ತಯಾರಿಸಿದ ಪೆಟ್ಲಂಗೋವಿ ಮಕ್ಕಳ ಆಟದ ಮನರಂಜನೆ ನಾಗರ ಪಂಚಮಿ ಹಬ್ಬದ ಸೊಬಗನ್ನು ಹೆಚ್ಚಿಸುತ್ತಿದ್ದ ಕಾಲವೀಗ ಬದಲಾಗಿ ಇಂದಿನ ಮಕ್ಕಳಿಗೆ ಪೆಟ್ಲು ಎಂಬ ಪದವೇ ಹೊಸದು ಎನ್ನಿಸುತ್ತಿದೆ.ನಾಗರ ಪಂಚಮಿಯ ಹಬ್ಬದ ದಿನಗಳಲ್ಲಿ ಮಲೆನಾಡಿನ ಹಾನಗಲ್ ಭಾಗದಲ್ಲಿ ಗ್ರಾಮೀಣ ಕ್ರೀಡೆಗಳು, ಮನರಂಜನೆಯ ಚಟುವಟಿಕೆಗಳು ಸದ್ದಿಲ್ಲದೇ ಗರಿಗೆದರುತ್ತವೆ. ಇವುಗಳಲ್ಲಿ ವಿಶೇಷವಾದ ಪೆಟ್ಲು ಎಂಬ ಆಟದ ಸಾಧನವು ಮಕ್ಕಳಿಗೆ ಇನ್ನಿಲ್ಲದ ಖುಷಿ ನೀಡುತ್ತಿತ್ತು. ಈಗ ಪೆಟ್ಲು ಕಣ್ಮರೆಯಾಗಿ ಎರಡ್ಮೂರು ದಶಕಗಳೇ ಕಳೆದಿವೆ.ನಾಗರ ಪಂಚಮಿ ಸಮೀಪಿಸುವ ಈ ಸಮಯದಲ್ಲಿ ಕಾಣಿಸಿಕೊಳ್ಳುತ್ತಿದ್ದ ಈ ಪೆಟ್ಲು ಮಕ್ಕಳಿಗಷ್ಟೆ ಅಲ್ಲದೆ, ಯುವಕ-ಯುವತಿಯರ ಮೋಜಿನ ಆಟವಾಗಿತ್ತು. ಒಂದು ರೀತಿಯಲ್ಲಿ ಬಂದೂಕಿನಂತೆ ತನ್ನ ಒಳಗಿಂದ ಶೇಖರಿಸಿಟ್ಟ ಶಿರಕಿ ಕಾಯಿಯನ್ನು ಚಿಮ್ಮಿಸುತ್ತಿದ್ದ ಈ ಪೆಟ್ಲು 25 ಪೈಸೆಯಿಂದ 1 ರೂಪಾಯಿ ವರೆಗಿನ ಬೆಲೆಯಲ್ಲಿ ದೊರಕುತ್ತಿತ್ತು. ಮಕ್ಕಳ ಕೈಯಲ್ಲಿ ಹಣವಿಲ್ಲದಿದ್ದರೂ ಚಿಂತೆಯಿಲ್ಲ, ಪಂಚಮಿಗೆ ಮನೆಯಲ್ಲಿ ತಯಾರಿಸಿದ ಎರಡು ಉಂಡೆಗಳನ್ನು ನೀಡಿದರೂ ಸಾಕಾಗಿತ್ತು. ಮಾರಾಟಗಾರ ಖುಷಿಯಿಂದಲೇ ಪೆಟ್ಲನ್ನು ಮಕ್ಕಳ ಕೈಗಿಡುತ್ತಿದ್ದ...!ಪಂಚಮಿಯ ವಾತಾವರಣ ನಿರ್ಮಾಣಗೊಂಡ ಈ ಸಮಯದಲ್ಲಿ ಇಂದಿನ 30-40 ರ ವಯಸ್ಸಿನವರು ಪೆಟ್ಲ ಆಟದ ಜೊತೆಗಿನ ತಮ್ಮ ಬಾಲ್ಯವನ್ನು ಮೆಲಕು ಹಾಕುತ್ತಾರೆ. ಆಟದ ಸಾಧನವಾದ ಪೆಟ್ಲು ಬಿದಿರಿನ ಕೊಳವೆಯಲ್ಲಿ ಮಾಡಿದ ಆಟಿಕೆ. ಇದರಲ್ಲಿ ಎರಡು ಭಾಗಗದ್ದು, ಒಂದು ಕೊಳವೆಯ ಭಾಗ, ಇನ್ನೊಂದು ಕೊಳವೆಯ ಒಳ ನುಗ್ಗುವ ಬಿದಿರಿನ ಕಡ್ಡಿಯ ಜೊತೆಗೆ ಹಿಡಿಕೆಯನ್ನು ಒಳಗೊಂಡಿರುತ್ತದೆ. ಈ ಕೊಳವೆಯಲ್ಲಿ ಈ ಭಾಗದ ಪೊದೆಗಳಲ್ಲಿ ಬೆಳೆಯುವ ಶಿರಕಿ ಗಿಡದ ಕಾಯಿಯನ್ನು ಹಾಕಿ ಕೊಳವೆಯ ಅಂತಿಮ ಭಾಗದವರೆಗೆ ತರಲಾಗುತ್ತದೆ. ನಂತರ ಕೊಳವೆಯ ಮುಂಭಾಗದಲ್ಲಿ ಮತ್ತೊಂದು ಶಿರಕಿ ಕಾಯಿಯನ್ನು ಇಟ್ಟು ಕೊಳವೆಯ ಹಿಡಿಕೆಯಿಂದ ಅದಮಲಾಗುತ್ತದೆ. ಇದರಿಂದ ಮೊದಲಿನ ಕಾಯಿಯು ರಭಸವಾಗಿ ಹೊರಚಿಮ್ಮಿ 50 ರಿಂದ 100 ಮೀಟರ್ ದೂರ ಹೋಗುತ್ತದೆ.

  ಒಂದು ವೇಳೆ ಈ ಶಿರಕಿಕಾಯಿ ಸಿಗದಿದ್ದಾಗ ನೆನೆಸಿದ ಕಾಗದವನ್ನು ಸುರಳಿ ಮಾಡಿ ಇದೇ ವಿಧಾನದಲ್ಲಿ ಪೆಟ್ಲದ ಆಟ ನಡೆಯುತ್ತಿತ್ತು. ಈ ಪೆಟ್ಲ ಆಟ ಮಳೆಗಾಲ ಆರಂಭದಿಂದ ಪಂಚಮಿ ವರೆಗಿನ ಸುಮಾರು ಒಂದು ತಿಂಗಳು ಮಕ್ಕಳ ನೆಚ್ಚಿನ ಆಟವಾಗುತ್ತಿತ್ತು. ಮಕ್ಕಳಲ್ಲಿ ಗುರಿಯ ಸ್ಪಷ್ಟತೆ ಮೂಡಿಸುತ್ತಿದ್ದ ಇಂತಹ ಆಟವೀಗ ಶಾಲಾ ಪಠ್ಯಕ್ಕೆ ಸೀಮಿತವಾಗಿದೆ.  ಪೆಟ್ಲ ಕಣ್ಮರೆಗೆ ಇದರ ತಯಾರಕರು ಇಲ್ಲದಿರುವುದು ಪ್ರಮುಖ ಕಾರಣವಾಗಿದೆ. ಕಾಡಿನಲ್ಲಿ ಅಲೆದು ಬಿದಿರುಗಳ ಪೊದೆಯಿಂದ ಪೆಟ್ಲಕ್ಕೆ ತಕ್ಕುದಾದ ಕೊಳವೆಗಳನ್ನು ಸಂಗ್ರಹಿಸಿ  ನೂರಾರು ಪೆಟ್ಲಗಳನ್ನು ತಯಾರಿಸುತ್ತಿದ್ದ ಗ್ರಾಮೀಣದ ಜನರು ಈಗ ಬೇರೆ ಉದ್ಯೋಗದಲ್ಲಿದ್ದಾರೆ. ಪಂಚಮಿಯ ಸಂದರ್ಭದಲ್ಲಿ ಮಲೆನಾಡು ಪ್ರದೇಶದಲ್ಲಿ ಮಾರಾಟ ಮಾಡುತ್ತಿದ್ದ ಈ ಪೆಟ್ಲ ಈಗ ಕೇವಲ ನೆನಪು ಮಾತ್ರ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.