ಸೋಮವಾರ, ಮೇ 23, 2022
30 °C

ಪೇಸ್-ವಿಷ್ಣು, ಮಹೇಶ್-ರೋಹನ್ ಜೋಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಮಹೇಶ್ ಭೂಪತಿ ತಗಾದೆ ತೆಗೆದ ನಂತರ ಲಂಡನ್ ಒಲಿಂಪಿಕ್ಸ್‌ಗೆ ಪುರುಷರ ಡಬಲ್ಸ್ ಟೆನಿಸ್ ತಂಡ ರಚಿಸುವಲ್ಲಿ ಉಂಟಾಗಿದ್ದ ಸಮಸ್ಯೆಗೆ ಅಖಿಲ ಭಾರತ ಟೆನಿಸ್ ಸಂಸ್ಥೆ (ಎಐಟಿಎ) ಪರಿಹಾರ ಕಂಡುಕೊಂಡಿದ್ದು, ಎರಡು ಡಬಲ್ಸ್ ಜೋಡಿಯನ್ನು ಹೊಂದಿಕೆ ಮಾಡಿದೆ.ದೇಶದ ಅಗ್ರ ಕ್ರಮಾಂಕದ ಆಟಗಾರ ಲಿಯಾಂಡರ್ ಪೇಸ್‌ಗೆ ಯುವ ಟೆನಿಸ್ ತಾರೆ ವಿಷ್ಣುವರ್ಧನ್ ಅವರನ್ನು ಜೊತೆ ಮಾಡಲಾಗಿದೆ. ಮಹೇಶ್ ಭೂಪತಿ ಜೊತೆಗೆ ಆಡಲಿರುವುದು ರೋಹನ್ ಬೋಪಣ್ಣ ಎಂದು ಎಐಟಿಎ ಗುರುವಾರ ನಿರ್ಧಾರ ಪ್ರಕಟಿಸಿದೆ. ಇದಕ್ಕೆ ಯಾವುದೇ ಆಟಗಾರರಿಂದ ಆಕ್ಷೇಪ ಬರುವುದಿಲ್ಲ ಎನ್ನುವ ವಿಶ್ವಾಸವನ್ನೂ ಟೆನಿಸ್ ಸಂಸ್ಥೆ ಹೊಂದಿದೆ.ಭೂಪತಿ ಹಾಗೂ ಪೇಸ್ ನಡುವಣ ವೈಯಕ್ತಿಕ ಅಸಮಾಧಾನದ ಕಾರಣ ಪುರುಷರ ಡಬಲ್ಸ್ ತಂಡವನ್ನು ಎಐಟಿಎ ತಾನು ಬಯಸಿದಂತೆ ರಚಿಸಲು ಸಾಧ್ಯವಾಗಲಿಲ್ಲ. ಅಷ್ಟೇ ಅಲ್ಲ ರೋಹನ್ ಕೂಡ ಪೇಸ್ ಜೊತೆಗೆ ಆಡಲು ಒಪ್ಪದ ಕಾರಣ ಬೇರೆ ಮಾರ್ಗ ಹುಡುಕುವುದು ಅನಿವಾರ್ಯವಾಯಿತು.ಲಿಯಾಂಡರ್ ಆಕ್ಷೇಪದ ನಡುವೆಯೂ ಅವರಿಗೆ ವಿಶ್ವ ರ‌್ಯಾಂಕಿಂಗ್‌ನಲ್ಲಿ 207ನೇ ಸ್ಥಾನದಲ್ಲಿರುವ ವಿಷ್ಣುವರ್ಧನ್ ಅವರನ್ನು ಜೊತೆಗಾರನನ್ನಾಗಿ ಮಾಡಲಾಗಿದೆ. ಈ ಮೊದಲು ಕಿರಿಯ ಆಟಗಾರರೊಂದಿಗೆ ಆಡುವುದಿಲ್ಲ ಹಾಗೂ ಒಲಿಂಪಿಕ್‌ನಿಂದ ಹಿಂದೆ ಸರಿಯುತ್ತೇನೆಂದು ಬೆದರಿಕೆ ಹಾಕಿದ್ದ ಪೇಸ್ ಕೂಡ ಅಸಮಾಧಾನದೊಂದಿಗೇ ಎಐಟಿಎ ತೀರ್ಮಾನಕ್ಕೆ ಸಮ್ಮತಿ ಸೂಚಿಸಿದ್ದಾರೆ.ಭೂಪತಿ ಹಾಗೂ ಬೋಪಣ್ಣ ನಡೆದುಕೊಂಡ ರೀತಿಯ ಬಗ್ಗೆ ಬೇಸರಗೊಂಡಿರುವ ಟೆನಿಸ್ ಸಂಸ್ಥೆಯು ಶಿಸ್ತು ಕ್ರಮ ಕೈಗೊಳ್ಳುವ ಯೋಚನೆ ಮಾಡಿದೆ. ಅಷ್ಟೇ ಅಲ್ಲ `ದೇಶದ ಮೊದಲ ಕ್ರಮಾಂಕ ಹೊಂದಿದ ಆಟಗಾರ(ಲಿಯಾಂಡರ್)ನಿಗೆ ಅನ್ಯಾಯವಾಗಿದೆ~ ಎಂದು ಕೂಡ ಎಐಟಿಎ ಅಧ್ಯಕ್ಷ ಅನಿಲ್ ಖನ್ನಾ ಒಪ್ಪಿಕೊಂಡಿದ್ದಾರೆ.ಮೂರು ಪರಿಹಾರ ಮಾರ್ಗಗಳ ಬಗ್ಗೆ ಯೋಚನೆ ಮಾಡಿದ್ದ ಎಐಟಿಎ ಮೊದಲ ಎರಡು ಸೂಕ್ತ ಎನಿಸುವ ಹಾಗೂ ಪದಕ ಗೆಲ್ಲುವ ಸಾಧ್ಯತೆ ಹೆಚ್ಚಿಸುವಂಥವು ಎಂದುಕೊಂಡಿತ್ತು. ಆದರೆ ರೋಹನ್ ಕೂಡ ಪೇಸ್ ಜೊತೆಗೆ ಆಡಲು ಒಪ್ಪದ ಕಾರಣ ಕೊನೆಯಲ್ಲಿ ಮೂರನೇ ಮಾರ್ಗವನ್ನೇ ಆಯ್ಕೆ ಮಾಡಿಕೊಳ್ಳುವುದು ಅನಿವಾರ್ಯವಾಯಿತು. `ಇದನ್ನು ಎಲ್ಲರೂ ಒಪ್ಪುತ್ತಾರೆನ್ನುವ ವಿಶ್ವಾಸವಿದೆ~ ಎಂದು ಖನ್ನಾ ಅವರು ಇಲ್ಲಿ ನಡೆದ ತುರ್ತು ಸಭೆಯ ನಂತರ ಸುದ್ದಿಗಾರರಿಗೆ ತಿಳಿಸಿದರು.ಅಂತರರಾಷ್ಟ್ರೀಯ ಟೆನಿಸ್ ಫೆಡರೇಷನ್(ಐಟಿಎಫ್)ಗೆ ಪ್ರವೇಶಗಳನ್ನು ಕಳುಹಿಸಲು ಗುರುವಾರವೇ ಕೊನೆಯ ದಿನವಾಗಿದ್ದರಿಂದ ಅವಸರದಲ್ಲಿ ಅಂತಿಮ ನಿರ್ಧಾರವನ್ನು ಕೈಗೊಳ್ಳಲಾಯಿತು. ಅದಕ್ಕೂ ಮೊದಲೇ ಎಲ್ಲ ಆಟಗಾರರ ಜೊತೆಗೆ ಖನ್ನಾ ಖುದ್ದಾಗಿ ಮಾತನಾಡಿದ್ದರು. `ಇದೊಂದೇ ದಾರಿ~ ಎಂದು ಕೂಡ ಮನವರಿಕೆ ಮಾಡಿಕೊಟ್ಟಿದ್ದಾರೆ.ಪದಕ ಗೆಲ್ಲುವಂಥ ಒಂದು ಗಟ್ಟಿ ತಂಡವನ್ನು ಕಟ್ಟಿ ಕಳುಹಿಸುವ ಬದಲು ಹೆಚ್ಚು ಆಟಗಾರರು ಇರುವ ತಂಡ ರಚಿಸಲಾಗಿದೆ ಎನ್ನುವ ಬೇಸರ ಟೆನಿಸ್ ಸಂಸ್ಥೆಯನ್ನೂ ಕಾಡುತ್ತಿದೆ. ಆದರೂ ಅದು `ಈಗ ಹೊಂದಿಸಿರುವ ಡಬಲ್ಸ್ ಆಟಗಾರರಿಂದ ಪದಕ ಬರಬಹುದು~ ಎನ್ನುವ ಆಶಯವನ್ನಂತೂ ಹೊಂದಿದೆ.ಸೋಮದೇವ್ ದೇವವರ್ಮನ್ ತಾವು ದೈಹಿಕವಾಗಿ ಆಡಲು ಸಜ್ಜಾಗಿರುವುದಾಗಿ ಹೇಳಿದರೂ ಅವರನ್ನು ಪುರುಷರ ಡಬಲ್ಸ್‌ಗೆ ಎಐಟಿಎ ಪರಿಗಣಿಸಲಿಲ್ಲ. ಬದಲಿಗೆ ಈಗ ದೇಶದಲ್ಲಿ ಮಿಂಚಿನ ಸಂಚಲನ ಮೂಡಿಸಿರುವ ವಿಷ್ಣುಗೆ ಮಣೆ ಹಾಕಿದೆ.ಮಹಿಳೆಯರ ಸಿಂಗಲ್ಸ್‌ನಲ್ಲಿ ಸಾನಿಯಾ ಮಿರ್ಜಾಗೆ ವೈಲ್ಡ್ ಕಾರ್ಡ್ ಸಿಗಬಹುದು ಎನ್ನುವ ನಿರೀಕ್ಷೆ ಇದೆ. ಒಂದು ವೇಳೆ ಬಯಸಿದಂತೆ ಸಾನಿಯಾಗೆ ಅರ್ಹತೆ ಸಿಕ್ಕರೆ ಪೇಸ್ ಜೊತೆಗೆ ಮಿಶ್ರ ಡಬಲ್ಸ್‌ನಲ್ಲಿ ಜೋಡಿಯಾಗಿ ಆಡುತ್ತಾರೆಂದು ಎಐಟಿಎ ಈಗಾಗಲೇ ಸ್ಪಷ್ಟಪಡಿಸಿದೆ.ಆದರೂ ಮಿಶ್ರ ಡಬಲ್ಸ್‌ನಲ್ಲಿ ಮಹೇಶ್‌ಗೆ ಆಡುವ ಅವಕಾಶ ಸಿಗಬೇಕು ಎನ್ನುವುದು ಮಹೇಶ್ ತಂದೆ ಕೃಷ್ಣ ಭೂಪತಿ ಅಭಿಪ್ರಾಯ. ಅವರ ಈ ಹೇಳಿಕೆಗೆ ಎಐಟಿಎ ಯಾವುದೇ ರೀತಿಯಲ್ಲಿ ಪ್ರತಿಕ್ರಿಯೆ ನೀಡಿಲ್ಲ. ಸಾನಿಯಾ ಅಂತೂ ಯಾರ ಜೊತೆಗಾದರೂ ಮಿಶ್ರ ಡಬಲ್ಸ್‌ನಲ್ಲಿ ಆಡುವುದಕ್ಕೆ ಸಿದ್ಧ ಎಂದು ಈ ಮೊದಲೇ ಹೇಳಿರುವ ಕಾರಣ ಯೋಚನೆ ಮಾಡುವ ಅಗತ್ಯವಂತೂ ಇಲ್ಲವಾಗಿದೆ.

ಪ್ರತಿಕ್ರಿಯೆ...

ದೊಡ್ಡ ಕನಸೊಂದು ನನಸಾದ ಸಂತಸ. ಇಂಥದೊಂದು ಸಾಧ್ಯತೆಯ ಆಶಯ ಹೊಂದಿದ್ದೆ  -ವಿಷ್ಣುವರ್ಧನ್

ರೋಹನ್ ಬೋಪಣ್ಣ ಜೊತೆಗೆ ಆಡಲು ಉತ್ಸಾಹಿತನಾಗಿದ್ದೇನೆ. ನನಗೆ ಮಾತ್ರವಲ್ಲ ರೋಹನ್‌ಗೂ ಹೀಗೆ ಅನಿಸಿರುವುದು ಸಹಜ -ಮಹೇಶ್ ಭೂಪತಿ

ಇದೊಂದು ಸಮಾಧಾನಕರ ಪರಿಹಾರ ಮಾರ್ಗ. ಆದರೆ ಮಿಶ್ರ ಡಬಲ್ಸ್‌ನಲ್ಲಿ ಸಾನಿಯಾ ಜೊತೆಗೆ ಮಹೇಶ್ ಆಡುವುದು ಸೂಕ್ತ

 -ಕೃಷ್ಣ ಭೂಪತಿ (ಮಹೇಶ್ ತಂದೆ)

ಯಾರ ಜೊತೆಗಾದರೂ ಮಿಶ್ರ ಡಬಲ್ಸ್‌ನಲ್ಲಿ ಆಡುವುದಕ್ಕೆ ಸಿದ್ಧ. ಎಐಟಿಎ ಕೈಗೊಂಡ ನಿರ್ಣಯಕ್ಕೆ ಆಕ್ಷೇಪವಿಲ್ಲ -ಸಾನಿಯಾ ಮಿರ್ಜಾ

ಮೂರು ಪರಿಹಾರ ಮಾರ್ಗಗಳ ಬಗ್ಗೆ ಯೋಚನೆ ಮಾಡಿ. ಕೊನೆಯಲ್ಲಿ ಮೂರನೆಯದನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಇದನ್ನು ಎಲ್ಲರೂ ಒಪ್ಪುತ್ತಾರೆನ್ನುವ ವಿಶ್ವಾಸವಿದೆ -ಅನಿಲ್ ಖನ್ನಾ (ಎಐಟಿಎ ಅಧ್ಯಕ್ಷ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.