ಭಾನುವಾರ, ಆಗಸ್ಟ್ 1, 2021
23 °C

ಪೈಲಟ್‌ಗಳಿಗೆ ಹೈಕೋರ್ಟ್ ತಾಕೀತು- ಮುಷ್ಕರ ನಿಲ್ಲಿಸಿ; ಕೆಲಸಕ್ಕೆ ಹಾಜರಾಗಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಮುಷ್ಕರ ನಿಲ್ಲಿಸಿ ಕೆಲಸಕ್ಕೆ ಹಿಂದಿರುಗುವಂತೆ ಸೋಮವಾರ ಮುಷ್ಕರ ನಿರತ ಪೈಲಟ್‌ಗಳಿಗೆ ಸೂಚಿಸಿರುವ ದೆಹಲಿಯ ಹೈಕೋರ್ಟ್, ಬೇಡಿಕೆಗಳನ್ನು ಪರಿಗಣಿಸುವಂತೆ ಆಡಳಿತ ಮಂಡಳಿಗೆ ನಿರ್ದೇಶಿಸುವುದಾಗಿ ಹೇಳಿದೆ.



ಏರ್ ಇಂಡಿಯಾ ಆಡಳಿತ ಮಂಡಳಿ ಪೈಲಟ್‌ಗಳ ವಿರುದ್ಧ ಸಲ್ಲಿಸಿದ  ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಸೋಮವಾರ ಮಧ್ಯಾಹ್ನವೇ ಕೆಲಸಕ್ಕೆ ಹಾಜರಾಗುವಂತೆ ಸೂಚಿಸಿದೆ.‘ಈ ಮುಷ್ಕರ ನಾಳೆಗೆ ಮುಂದುವರಿಯಬಾರದು’ ಎಂದು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಬಿ.ಡಿ. ಅಹ್ಮದ್ ಮತ್ತು ಬೀನಾ  ಅವರಿದ್ದ  ಹೈಕೋರ್ಟ್ ವಿಭಾಗೀಯ ಪೀಠ ಸೂಚನೆ ನೀಡಿದೆ.



ಮಧ್ಯಾಹ್ನ 2.15ಕ್ಕೆ ಅರ್ಜಿಯ ವಿಚಾರಣೆ ಮುಗಿಯುವುದರ ಒಳಗಾಗಿ ಒಳಗಾಗಿ ಮುಷ್ಕರ ಸ್ಥಗಿತಗೊಳಿಸಿ ಕೆಲಸಕ್ಕೆ ಹಾಜರಾಗಬೇಕು. ಈ ಕುರಿತ ಪೈಲಟ್‌ಗಳ ನಿರ್ಧಾರವನ್ನು ತಮಗೆ ತಿಳಿಸುವಂತೆ ನ್ಯಾಯಮೂರ್ತಿಗಳು ಪೈಲಟ್‌ಗಳ ಪರ ವಕೀಲರಿಗೆ ತಿಳಿಸಿದರು. 



ಕಳೆದ ಬುಧವಾರ ಅರ್ಜಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್ ನ್ಯಾಯಮೂರ್ತಿ ಮಿತ್ತಲ್ ಅವರು, ಸಾರ್ವಜನಿಕರು ಮತ್ತು ಪ್ರಯಾಣಿಕರ ಹಿತದೃಷ್ಟಿಯನ್ನು ಗಮನದಲಿಟ್ಟುಕೊಂಡು ಕೆಲಸಕ್ಕೆ ಹಾಜರಾಗುವಂತೆ ಮುಷ್ಕರನಿರತ ಪೈಲಟ್‌ಗಳಿಗೆ ಸೂಚನೆ ನೀಡಿದ್ದರು. ಆದರೆ, ಪೈಲಟ್‌ಗಳು ಆದೇಶ ಪಾಲಿಸಲು ನಿರಾಕರಿಸಿದ ಹಿನ್ನೆಲೆಯಲ್ಲಿ ಮಿತ್ತಲ್ ಅವರು ಅರ್ಜಿಯನ್ನು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ವರ್ಗಾಯಿಸಿದ್ದರು.



ಆದೇಶ ಪಾಲಿಸದ ಪೈಲಟ್‌ಗಳ ವರ್ತನೆಯನ್ನು ನ್ಯಾಯಾಂಗ ನಿಂದನೆ ಎಂದು ಅವರು ತರಾಟೆಗೆ ತೆಗೆದುಕೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.