ಭಾನುವಾರ, ಜನವರಿ 19, 2020
21 °C
ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಿಂದ ಬೇಡಿಕೆ

ಪೊಲೀಸರಿಗೆ ತಲೆನೋವಾದ `ಮುಂಗೆರ್' ಪಿಸ್ತೂಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಬಿಹಾರದ ಮುಂಗೆರ್ ಪಟ್ಟಣದಲ್ಲಿ ಅಕ್ರಮವಾಗಿ ತಯಾರಾಗುವ ಪಿಸ್ತೂಲುಗಳು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿವೆ. ಬಾಂಗ್ಲಾದೇಶ ಸೇರಿದಂತೆ ಭಾರತದ ಬಹುತೇಕ ಎಲ್ಲ ರಾಜ್ಯಗಳಲ್ಲಿ ಸಂಭವಿಸುತ್ತಿರುವ ವಿಧ್ವಂಸಕ ಕೃತ್ಯಗಳಿಗೆ ಈ ಪಿಸ್ತೂಲುಗಳು ಬಳಕೆಯಾಗುತ್ತಿವೆ.ಕಡಿಮೆ ದರ ಹಾಗೂ ಸುಲಭ ಲಭ್ಯತೆ- ಇವು ಮುಂಗೆರ್ ಪಿಸ್ತೂಲು ಮಾರಾಟ ಹೆಚ್ಚಳದ ಹಿಂದಿರುವ ಕಾರಣಗಳು. ಅದರಲ್ಲೂ ಸಗಟು ಖರೀದಿಯಲ್ಲಿ ಅಧಿಕ ರಿಯಾಯಿತಿ ಕೊಡುತ್ತಿರುವುದರಿಂದ ಈ ಪಿಸ್ತೂಲು ಮಾರಾಟ ಹೆಚ್ಚುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ರೂ.15,000ರಿಂದ 20,000 ದರದಲ್ಲಿ ಮಾರಾಟವಾಗುವ ಈ ಪಿಸ್ತೂಲುಗಳಿಗೆ ಕರ್ನಾಟಕ, ಮಹಾರಾಷ್ಟ್ರ, ಉತ್ತರ ಪ್ರದೇಶ, ಮಧ್ಯ ಪ್ರದೇಶ, ದೆಹಲಿ ಹಾಗೂ ಬಾಂಗ್ಲಾದೇಶದಲ್ಲಿ ಬೇಡಿಕೆಯಿದೆ.ಪುಣೆಯಲ್ಲಿ ಆಗಸ್ಟ್ 1ರಂದು ಸಂಭವಿಸಿದ ಸ್ಫೋಟದ ತನಿಖೆ ನಡೆಸಿದ ಪೊಲೀಸರು, ನಾಲ್ವರನ್ನು ಬಂಧಿಸಿದಾಗ ಅವರ ಬಳಿ ಮುಂಗೆರ್ ಪಿಸ್ತೂಲು ಪತ್ತೆಯಾದವು. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಆಯುಕ್ತ ನೀರಜ್ ಕುಮಾರ್, ಈ ಆಯುಧಗಳ ಪೂರೈಕೆ ಬಗ್ಗೆ ಮಾಹಿತಿ ಪಡೆಯಲು ವಿಶೇಷ ಆಯುಕ್ತರಾದ (ವಿಶೇಷ ಘಟಕ) ಎಸ್.ಎನ್.ಶ್ರೀವಾಸ್ತವ್ ಅವರಿಗೆ ಸೂಚಿಸಿದರು. ಆಗ ಮುಂಗೆರ್ ಪಿಸ್ತೂಲು ಮಾರಾಟ ಬೆಳಕಿಗೆ ಬಂತು.ಮುಚ್ಚಲು ಆದೇಶ: ಮುಂಗೆರ್‌ದಲ್ಲಿರುವ ಪಿಸ್ತೂಲು ತಯಾರಿಕಾ ಘಟಕ ಮುಚ್ಚಲು ಬಿಹಾರ ಸರ್ಕಾರ ಈಗಾಗಲೇ ಆದೇಶಿಸಿದೆ. ಆದರೆ ತಯಾರಕರಿಗೆ ಪುನರ್ವಸತಿ ಕಲ್ಪಿಸಲು ವಿಫಲವಾಗಿದೆ. 2005ರಿಂದಲೂ ಪಿಸ್ತೂಲು ತಯಾರಿಸಿ, ಮಾರುವ ಅಬ್ದುಲ್ಲಾ ಎಂಬಾತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ತನ್ನ ಜೀವನೋಪಾಯಕ್ಕೆ ಈ ಉದ್ಯೋಗ ಬಿಟ್ಟರೆ ಬೇರೇನೂ ಗೊತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.ವಕೀಲರ ವೇಷದಲ್ಲಿ: ವಕೀಲರ ರೀತಿ ವೇಷ ಧರಿಸಿ ಅನೇಕ ದಲ್ಲಾಳಿಗಳು ಬಾಂಗ್ಲಾದೇಶಕ್ಕೆ ಪಿಸ್ತೂಲು ಸಾಗಿಸಿದ ಘಟನೆಗಳು ಸಾಕಷ್ಟಿದ್ದು, ಮಾರ್ಗ ಮಧ್ಯೆ ಬಂಧನಕ್ಕೆ ಒಳಗಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮುಂಗೆರ್ ಪಟ್ಟಣದ ಹೊರವಲಯದಲ್ಲಿ ಸ್ಥಾಪಿಸಲಾದ ವಿಶೇಷ ಲೇಥ್ ಮಷೀನ್‌ಗಳಲ್ಲಿ ಪಿಸ್ತೂಲಿನ ಭಾಗಗಳು ತಯಾರಾಗುತ್ತವೆ. ನಂತರ ಇವುಗಳನ್ನು ಜೋಡಿಸಿ ಮಾರಾಟಕ್ಕೆ ಕಳಿಸಲಾಗುತ್ತದೆ.

ಪ್ರತಿಕ್ರಿಯಿಸಿ (+)