ಭಾನುವಾರ, ಏಪ್ರಿಲ್ 18, 2021
33 °C

ಪೊಲೀಸರ ಮೇಲೆ ನಕ್ಸಲರ ಗುಂಡು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು: ಶೃಂಗೇರಿ ತಾಲ್ಲೂಕಿನ ತಾರೊಳ್ಳಿಕೊಡಿಗೆ ಮತ್ತು ಬಿದಿರುಗೋಡು ನಡುವಿನ ಕಾಡಿನಲ್ಲಿ ಶನಿವಾರ ಸಂಜೆ ಕಾರ್ಯಾಚರಣೆ ನಡೆಸುತ್ತಿದ್ದ ನಕ್ಸಲ್ ನಿಗ್ರಹ ಪಡೆ ಪೊಲೀಸರ ಮೇಲೆ ನಕ್ಸಲರು ಗುಂಡು ಹಾರಿಸಿ ಪರಾರಿಯಾಗಿದ್ದಾರೆ.ನಕ್ಸಲರ ತಂಡದಲ್ಲಿ 8ರಿಂದ 9 ಮಂದಿ ಇದ್ದರು. ಪೊಲೀಸರು ಕೂದಲೆಳೆ ಅಂತರದಲ್ಲಿ ಪಾರಾದರು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಶಶಿಕುಮಾರ್ ತಿಳಿಸಿದ್ದಾರೆ.  ಕಾರ್ಯಾಚರಣೆ ಚುರುಕು     (ಶೃಂಗೇರಿ ವರದಿ):
ಕುದುರೆಮುಖ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಮರ್ಕಲ್ ಗ್ರಾಮ ಪಂಚಾಯಿತಿಯ ನರಸಿಂಹ ಪರ್ವತದ ಬಳಿಯ ಎತ್ತಿನಟ್ಟಿ ಗುಡ್ಡದ ದುರ್ಗಮ ಅರಣ್ಯ ಪ್ರದೇಶದಲ್ಲಿ ನಕ್ಸಲ್ ವ್ಯಾಸ್ತವ್ಯ ಹೂಡಿರುವ ಖಚಿತ ಮಾಹಿತಿ ಮೇರೆಗೆ ನಕ್ಸಲ್ ನಿಗ್ರಹ ದಳದ ಸಿಬ್ಬಂದಿ ಶನಿವಾರ ತೀವ್ರ ಕಾರ್ಯಾಚರಣೆ ನಡೆಸಿದರು.  ಬೇಗಾರಿನಿಂದ ದೇವಾಲೆಕೊಪ್ಪ, ತಲವಂತಿ ಕುಡಿಗೆ ಮಾರ್ಗವಾಗಿ ಹಾಗೂ ಕಿಗ್ಗದಿಂದ ತಾರೊಳ್ಳಿಕುಡಿಗೆ ಮಾರ್ಗವಾಗಿ ಪ್ರತ್ಯೇಕ ತಂಡದಲ್ಲಿ ಕಾರ್ಯಾಚರಣೆ ನಡೆಸಿದೆ ಎನ್ನಲಾಗಿದೆ.ನಕ್ಸಲ್ ನಿಗ್ರಹ ದಳ ಸುಮಾರು ಏಳು ಕಿ.ಮೀ. ನಡಿಗೆ ಮೂಲಕ ನಕ್ಸಲರು ತಂಗಿದ್ದ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ನಕ್ಸಲರು ವಾಸ್ತವ್ಯ ಹೂಡಿದ್ದ ಟೆಂಟ್, ಸುಮಾರು ಐದು ಬ್ಯಾಗ್‌ಗಳು, ಕರಪತ್ರಗಳು, ಮೊಬೈಲ್ ಹಾಗೂ ಮದ್ದು ಗುಂಡುಗಳು ಪತ್ತೆಯಾಗಿರುವುದಾಗಿ ತಿಳಿದುಬಂದಿದೆ.

ಕರಪತ್ರದಲ್ಲಿ ಪ್ರಮುಖವಾಗಿ ಹುಲಿ ಯೋಜನೆ ಹಾಗೂ ಪಶ್ಚಿಮ ಘಟ್ಟವನ್ನು ವಿಶ್ವಪರಂಪರೆ ಪಟ್ಟಿಗೆ ಸೇರಿಸಿರುವುದನ್ನು ವಿರೋಧಿಸಲಾಗಿದ್ದು, ಸರ್ಕಾರದ ಜನವಿರೋಧಿ ನಿಲುವುಗಳ ವಿರುದ್ಧದ ಹೋರಾಟಕ್ಕೆ ನಕ್ಸಲರ ಬೆಂಬಲ ಇರುವುದಾಗಿ ತಿಳಿಸಲಾಗಿದೆ.ನಕ್ಸಲರಿಗಾಗಿ ಸುತ್ತಮುತ್ತಲಿನ ಪ್ರದೇಶದಲ್ಲಿ ಕೂಂಬಿಂಗ್ ಚುರುಕುಗೊಳಿಸಲಾಗಿದೆ. ಸತತವಾಗಿ ಸುರಿಯುತ್ತಿರುವ ಮಳೆ ಹಾಗೂ ಈ ಪ್ರದೇಶ ದಟ್ಟ ಅರಣ್ಯವಾಗಿರುವುದರಿಂದ ನಕ್ಸಲರ ಶೋಧ ಕಾರ್ಯಾಚರಣೆಗೆ ತೊಡಕುಂಟಾಗಿದೆ. ಈ ಘಟನೆಯಿಂದ ಹಲವು ದಿನಗಳಿಂದ ಕಾಣೆಯಾಗಿದ್ದ ನಕ್ಸಲರ ಇರುವಿಕೆ ದೃಢಪಟ್ಟಿದ್ದು, ಸ್ಥಳೀಯರಿಂದ ನಕ್ಸಲರ ಚಲನವಲನದ ಕುರಿತು ಯಾವುದೇ ಮಾಹಿತಿ ದೊರೆತಿಲ್ಲ.

ಘಟನೆ ನಡೆದ ಸ್ಥಳಕ್ಕೆ ನಕ್ಸಲ್ ನಿಗ್ರಹ ದಳದ ಐಜಿ ಅಲೋಕ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಶಿಕುಮಾರ್, ಎ.ಎನ್.ಎಫ್. ವರಿಷ್ಠಾಧಿಕಾರಿ ವಾಸುದೇವ ಮೂರ್ತಿ, ಡಿವೈಎಸ್‌ಪಿ ರಾಮಚಂದ್ರ ನಾಯಕ್, ಸಿ.ಪಿ.ಐ. ಹಿರೇಮಠ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.