ಶನಿವಾರ, ಜೂನ್ 19, 2021
26 °C
ಸಂಚಾರ ನಿಯಮ ಉಲ್ಲಂಘನೆ

ಪೊಲೀಸ್‌–ನಿರ್ವಾಹಕರಿಂದ ಪರಸ್ಪರ ಹಲ್ಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆಯ ವಿಷಯವಾಗಿ ಸಂಚಾರ ಪೊಲೀಸ್‌ ಕಾನ್‌ಸ್ಟೆಬಲ್‌ ಮತ್ತು ಕೆಎಸ್‌ಆರ್‌ಟಿಸಿ ಬಸ್‌ನ ನಿರ್ವಾಹಕರ ಮಧ್ಯೆ ಮಾತಿನ ಚಕಮಕಿ ನಡೆದು, ಪರಸ್ಪರ ಹಲ್ಲೆ ನಡೆಸಿರುವ ಘಟನೆ ಓಕುಳಿಪುರ ಜಂಕ್ಷನ್‌ನಲ್ಲಿ ಗುರುವಾರ ನಡೆದಿದೆ. ಘಟನೆಯಲ್ಲಿ ಗಾಯಗೊಂಡಿರುವ ಮಲ್ಲೇಶ್ವರ ಸಂಚಾರ ವಿಭಾಗದ ಕಾನ್‌­ಸ್ಟೆಬಲ್‌ ಹುಸೇನ್‌ ಬಾಷಾ (28) ಮತ್ತು ಕೆಎಸ್‌ಆರ್‌ಟಿಸಿ ಹೊಳೆನರಸೀ­ಪುರ ಡಿಪೊದ ನಿರ್ವಾಹಕ ಎ.ಎಸ್‌. ಪ್ರಸನ್ನ (34) ಕೆ.ಸಿ.ಜನರಲ್‌ ಆಸ್ಪತ್ರೆ­ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ತುಮಕೂರು ರಸ್ತೆಯಿಂದ ಕೆಂಪೇ­ಗೌಡ ಬಸ್‌ ನಿಲ್ದಾಣಕ್ಕೆ ಬರುವ ಕೆಎಸ್‌ಆರ್‌ಟಿಸಿ ಬಸ್‌ಗಳು ಡಾ.ರಾಜ್‌­ಕುಮಾರ್‌ ರಸ್ತೆಯಲ್ಲಿ ಬಂದು ನವರಂಗ್‌ ಬಳಿ ಎಡಕ್ಕೆ ತಿರುಗಿ ಮಲ್ಲೇಶ್ವರ ಮಾರ್ಗವಾಗಿ ಸಂಚರಿಸ­ಬೇಕು ಎಂದು ನಿಮಯವಿದೆ.ಆದರೆ, ಹೊಳೆನರಸೀಪುರದಿಂದ ನಗರಕ್ಕೆ ಬಂದ ಕೆಎಸ್‌ಆರ್‌ಟಿಸಿ ಬಸ್‌ ಬೆಳಿಗ್ಗೆ 10 ಗಂಟೆ ಸುಮಾರಿಗೆ ವಾಟಾಳ್‌ ನಾಗರಾಜ್‌ ರಸ್ತೆಯ ಮಾರ್ಗವಾಗಿ ಓಕುಳಿಪುರ ಜಂಕ್ಷನ್‌ಗೆ ಬಂದಿದೆ. ಹೀಗಾಗಿ ಓಕುಳಿಪುರ ಜಂಕ್ಷನ್‌ನಲ್ಲಿ ಹುಸೇನ್‌ ಬಾಷಾ ಮತ್ತು ಎಎಸ್‌ಐ ನಾಗರಾಜ್‌ ಅವರು ಬಸ್‌ ತಡೆದಿದ್ದಾರೆ.ಬಸ್‌ ತಡೆದು ನಿಯಮ ಉಲ್ಲಂಘ­ನೆಯ ಬಗ್ಗೆ ಪ್ರಶ್ನಿಸಿದ್ದಕ್ಕೆ ಕೋಪಗೊಂಡ ಪ್ರಸನ್ನ ಅವರು ಹುಸೇನ್‌ ಅವರ ಮೇಲೆ ಜಗಳ ತೆಗೆದು, ಅವರ ಬಟ್ಟೆ ಹರಿದು ಹಲ್ಲೆ ನಡೆಸಿದ್ದಾರೆ. ಈ ವೇಳೆ ಕೈಯಲ್ಲಿದ್ದ ಹೆಲ್ಮೆಟ್‌ನಿಂದ ಹುಸೇನ್‌, ಪ್ರಸನ್ನ ಅವರ ಹಣೆಗೆ ಹೊಡೆದಿದ್ದಾರೆ. ಆ ವೇಳೆಗಾಗಲೆ ಸ್ಥಳದಲ್ಲಿ ಗುಂಪುಗೂಡಿದ್ದ ಕೆಲ ಬಿಎಂಟಿಸಿ ಬಸ್‌ ನಿರ್ವಾಹಕರೂ ಹುಸೇನ್‌ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯಲ್ಲಿ ಗಾಯಗೊಂಡ ಇಬ್ಬರನ್ನೂ ಕೆ.ಸಿ.ಜನರಲ್‌ ಆಸ್ಪತ್ರೆಗೆ ದಾಖಲಿಸಲಾಯಿತು. ಹಲ್ಲೆ ನಡೆದ ಬಗ್ಗೆ ಇಬ್ಬರೂ ಪ್ರತ್ಯೇಕ ದೂರು ನೀಡಿದ್ದಾರೆ.

ಪ್ರಸನ್ನ ಅವರ ಹಣೆಯ ಭಾಗದಲ್ಲಿ ಗಾಯವಾಗಿದ್ದು, ವೈದ್ಯರು ನಾಲ್ಕು ಹೊಲಿಗೆ ಹಾಕಿದ್ದಾರೆ. ಹುಸೇನ್‌ ಅವರ ಎದೆ ಹಾಗೂ ಕಾಲಿಗೆ ಪೆಟ್ಟಾಗಿದೆ ಎಂದು ಶ್ರೀರಾಮಪುರ ಪೊಲೀಸರು ಮಾಹಿತಿ ನೀಡಿದ್ದಾರೆ. ಘಟನೆಯಿಂದಾಗಿ ವಾಟಾಳ್‌ ನಾಗರಾಜ್‌ ರಸ್ತೆ, ಖೋಡೆ ವೃತ್ತ ಸುತ್ತಮುತ್ತಲಿನ ರಸ್ತೆಗಳಲ್ಲಿ ಕೆಲಕಾಲ ವಾಹನ ದಟ್ಟಣೆ ಉಂಟಾಗಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.