ಗುರುವಾರ , ಮೇ 13, 2021
34 °C

ಪೊಲೀಸ್ ವಸತಿಗೃಹಕ್ಕೆ ಕಾಯಕಲ್ಪ ಎಂದು?

ಪ್ರಜಾವಾಣಿ ವಾರ್ತೆ/ಶ.ಗ.ನಯನತಾರಾ Updated:

ಅಕ್ಷರ ಗಾತ್ರ : | |

ಶನಿವಾರಸಂತೆ: ಕೊಡಗು ಜಿಲ್ಲೆಯ ಗಡಿಭಾಗದಲ್ಲಿರುವ ಕೊಡ್ಲಿಪೇಟೆ ಯಲ್ಲಿರುವ ಪೊಲೀಸ್ ವಸತಿಗೃಹಗಳು ಹಲವು ವರ್ಷಗಳಿಂದ ದುರಸ್ತಿ ಕಾಣದೇ ಪಾಳು ಬಿದ್ದಿವೆ.ಕೊಡ್ಲಿಪೇಟೆ ಕೊಡಗು ಜಿಲ್ಲೆಯ ಗಡಿಭಾಗವಾಗಿದ್ದು ಪೊಲೀಸ್ ಉಪಠಾಣೆ ಹೊಂದಿದೆ. ಈ ಠಾಣೆಯ ಪೊಲೀಸ್ ವಸತಿಗೃಹಗಳು ಯಾರಿಗೂ ಪ್ರಯೋಜನವಾಗುತ್ತಿಲ್ಲ. ಇವು ದುರಸ್ತಿ ಕಾಣದೇ ಹಲವಾರು ವರ್ಷಗಳೇ ಉರುಳಿವೆ.ಈಗ ಇವು ಸೋಮಾರಿಗಳು, ಮದ್ಯಪಾನಿಗಳು ಹಾಗೂ ಕಿಡಿಗೇಡಿಗಳಿಗೆ ಸಮಯ ತಳ್ಳುವ ತಾಣವಾಗಿ ಮಾರ್ಪಟ್ಟಿದೆ.ಠಾಣೆಯ ಎಎಸ್‌ಐ ಅವರ ವಸತಿಗೃಹ ಪ್ರತ್ಯೇಕವಾಗಿದ್ದು ವಾಸಯೋಗ್ಯವಾಗಿಲ್ಲ. ಸ್ಥಳೀಯ ಪ್ರಾಥಮಿಕ ಶಾಲೆಗೆ ಹೊಂದಿಕೊಂಡಿರುವ ವಸತಿಗೃಹದ ಹೆಂಚುಗಳು ಹಾರಿಹೋಗಿವೆ. ವಿದ್ಯುತ್ ಸಂಪರ್ಕವಿಲ್ಲ. ಮುಂಭಾಗದಲ್ಲಿ ವಿದ್ಯುತ್ ಕಂಬಗಳಿದ್ದರೂ ವಿದ್ಯುತ್ ದೀಪಗಳಿಲ್ಲ. ಸುಣ್ಣಬಣ್ಣ ಕಾಣದೇ ವರುಷಗಳೇ ಉರುಳಿವೆ.ಕಿಟಕಿ ಮತ್ತು ಬಾಗಿಲುಗಳು ಮುರಿದಿವೆ. ಹಿಂಭಾಗದ ತಡೆಗೋಡೆ ಬಿರುಕು ಬಿಟ್ಟಿದೆ. ವಸತಿಗೃಹಗಳು ಇಂದೋ ನಾಳೆಯೋ ಬಿದ್ದು ಹೋಗುವ ಸ್ಥಿತಿ ತಲುಪಿವೆ. ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸ್ ಸಿಬ್ಬಂದಿ ಠಾಣೆಯಿಂದ 11 ಕಿ.ಮೀ. ದೂರದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ.ಪಾಳು ಬಿದ್ದಿರುವ ವಸತಿಗೃಹ ನಿರ್ವಹಣೆಯನ್ನು ಹಾಸನ ಮೂಲದ ವ್ಯಕ್ತಿಯೊಬ್ಬರಿಗೆ ನೀಡಲಾಗಿದೆ. ವರ್ಷಗಳ ಹಿಂದೆ ಕೊಡ್ಲಿಪೇಟೆಗೆ ಭೇಟಿ ನೀಡಿದ್ದ ದಕ್ಷಿಣ ವಲಯ ಪೊಲೀಸ್ ಮಹಾನಿರ್ದೇಶಕರು ಕೊಡ್ಲಿಪೇಟೆ ಪೊಲೀಸ್ ಉಪಠಾಣೆಯನ್ನು ಮೇಲ್ದರ್ಜೆಗೇರಿಸುವ ಹಾಗೂ ಮೂಲ ಸೌಕರ್ಯಗಳನ್ನು ಒದಗಿಸುವ ಆಶ್ವಾಸನೆ ನೀಡಿದ್ದರು. ಈ ಆಶ್ವಾಸನೆ ಇಂದಿಗೂ ಭರವಸೆಯಾಗಷ್ಟೇ ಉಳಿದಿದೆ ಎನ್ನುತ್ತಾರೆ ಕೆಲ ನಾಗರಿಕರು.

ಪೊಲೀಸ್ ಇಲಾಖೆ ಇನ್ನಾದರೂ ಎಚ್ಚೆತ್ತು ಕೊಡ್ಲಿಪೇಟೆ ಪೊಲೀಸ್ ವಸತಿಗೃಹಗಳಿಗೆ ಕಾಯಕಲ್ಪ ನೀಡಿ ವಾಸಯೋಗ್ಯ ಮಾಡಲಿ ಎಂದು ಸ್ಥಳೀಯರು ಆಶಿಸಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.