ಗುರುವಾರ , ಏಪ್ರಿಲ್ 22, 2021
29 °C

ಪೋಸ್ಟರ್ ಪ್ರೀತಿಯ ರಾಯರು

ಅಮಿತ್ ಎಂ.ಎಸ್. Updated:

ಅಕ್ಷರ ಗಾತ್ರ : | |

ಸಣಕಲು ದೇಹದ ಈ ವ್ಯಕ್ತಿ ಭಾರವಾದ ಮೂರ್ನಾಲ್ಕು ಚೀಲಗಳನ್ನು ತನ್ನ ಹೆಗಲು, ಕೈಗಳಿಗೆ ತಗುಲಿಸಿಕೊಂಡು ಊನಗೊಂಡ ಅಂಗಾಂಗಗಳ ನೆರವಿನಿಂದ ಹೊರಟರೆಂದರೆ ಹತ್ತು ಹನ್ನೆರಡು ದಿನ ನಿದ್ದೆಯಿಲ್ಲದ ಕೆಲಸವೆಂದೇ ಅರ್ಥ.

ಇವರದು ಚಿತ್ರರಂಗಕ್ಕೆ ಸುಮಾರು 25 ವರ್ಷದ ನಿರರ್ಥಕ ಸೇವೆ. ಕರ್ನಾಟಕ ಮತ್ತು ತಮಿಳುನಾಡಿನ ಉದ್ದಗಲವೂ ಇವರಿಗೆ ಸುಪರಿಚಿತ. ಒಮ್ಮಮ್ಮೆ ಕೈತುಂಬಾ ಕೆಲಸ. ಇಲ್ಲವಾದರೆ ತಿಂಗಳುಗಟ್ಟಲೆ ನಿರುದ್ಯೋಗ. ಹೆಸರು ಸಾಯಿ ರಾವ್. ಸಿನಿಮಾ ಸ್ಟಿಕ್ಕರ್ ಅಂಟಿಸುವುದು ಇವರ ಉದ್ಯೋಗ.

ಹುಟ್ಟುವಾಗಲೇ ಸಾಯಿ ಅವರ ಕೈಕಾಲುಗಳು ಊನಗೊಂಡಿದ್ದವು. ಓದಿದ್ದು ನಾಲ್ಕನೇ ತರಗತಿ. ಅವರನ್ನು ನೋಡಿದ ನಟ ಶಂಕರ್‌ನಾಗ್ `ಈ ಬಂಧ ಅನುಬಂಧ~ ಚಿತ್ರದಲ್ಲಿ ಸ್ಟಿಕ್ಕರ್ ಅಂಟಿಸುವ ಕೆಲಸ ನೀಡಿದರು. ಅವರ ಕೊನೆಯ ಚಿತ್ರದವರೆಗೂ ಎಲ್ಲಾ ಸಿನಿಮಾಗಳ ಸ್ಟಿಕ್ಕರ್ ಅಂಟಿಸುವ ಜವಾಬ್ದಾರಿ ಸಾಯಿ ಅವರದೇ ಆಗಿತ್ತು. ಸಾಯಿ ತಮ್ಮ `ಯಜಮಾನ್ರು~ ನೆನಪಿಗಾಗಿ ಶಂಕರ್‌ನಾಗ್ ಹೆಸರು ಮತ್ತು ಅವರು ನಿಧನರಾದ ದಿನಾಂಕವನ್ನು ತಮ್ಮ ಕೈ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾರೆ. 49ರ ಹರೆಯದ ಅವರು ಇದುವರೆಗೆ ಕೆಲಸ ಮಾಡಿರುವ ಚಿತ್ರಗಳ ಸಂಖ್ಯೆ ಸುಮಾರು 485. ಅಂಟಿಸಿದ ಸ್ಟಿಕ್ಕರ್‌ಗಳ ಸಂಖ್ಯೆ ಲೆಕ್ಕ ಹಾಕಲು ಸಾಧ್ಯವೇ ಇಲ್ಲ.

ಕೆಲಸ ಆರಂಭಿಸಿದ ಕಾಲದಲ್ಲಿ ನೂರು ಸ್ಟಿಕ್ಕರ್ ಅಂಟಿಸಿದರೆ ಸಿಗುತ್ತಿದ್ದದ್ದು ಐದು ಪೈಸೆ. ಈಗ 40 ರೂಪಾಯಿ. ರೈಲು ಮತ್ತು ಬಸ್ ಪಾಸುಗಳು ಸದಾ ಜೊತೆಯಲ್ಲಿರುತ್ತವೆ. ಸ್ಟಿಕ್ಕರ್‌ಗಳನ್ನು ಚೀಲಗಳಿಗೆ ತುಂಬಿಕೊಂಡು ಊರಿಂದೂರಿಗೆ ಪ್ರಯಾಣ ಬೆಳೆಸುತ್ತಾರೆ. ಕೆಲಸವಿದ್ದ ದಿನಗಳಲ್ಲಿ ಅವರು ನಿದ್ದೆ ಮಾಡುವುದಿಲ್ಲ. ಸ್ಟಿಕ್ಕರ್‌ಗಳನ್ನು ಹೊರಗೆ ಮಾರಿ ದುಡ್ಡು ಮಾಡಬಹುದು. ಆದರೆ ನನ್ನ ವೃತ್ತಿಗೆ ಬದ್ಧ ಎನ್ನುತ್ತಾರೆ ಅವರು.

ರಜನೀಕಾಂತ್ ಮನೆಯಲ್ಲಿ..: ನಟ ರಜನೀಕಾಂತ್‌ರಿಗೆ ಸಾಯಿ ಅವರನ್ನು ಕಂಡರೆ ಬಲು ಪ್ರೀತಿ, ವಿಶ್ವಾಸ. ಅವರ ಸುಮಾರು 42 ಚಿತ್ರಗಳಲ್ಲಿ ಸ್ಟಿಕ್ಕರ್ ಅಂಟಿಸುವ ಕಾರ್ಯ ನಿರ್ವಹಿಸಿದ್ದಾರೆ. ರಜನೀಕಾಂತ್‌ರ ಹುಟ್ಟುಹಬ್ಬದಂದು ಸಾಯಿ ತಪ್ಪದೇ ಅವರ ಮನೆಗೆ ಹೋಗಿ ಶುಭಾಶಯ ಹೇಳುತ್ತಾರೆ. ರಜನೀಕಾಂತ್ ಮನೆ ವಾತಾವರಣವನ್ನು ಅವರು ಬಣ್ಣಿಸುವುದು ಹೀಗೆ.

`ರಜನೀಕಾಂತ್ ಮನೆಯೊಳಗೆ ನನಗೆ ಮುಕ್ತ ಪ್ರವೇಶ. ಗೇಟಿನ ಮುಂಭಾಗದಲ್ಲಿ ಎಲೆಕ್ಟ್ರಾನಿಕ್ಸ್ ಬೋರ್ಡ್ ಇದೆ. ಅದರಲ್ಲಿ ರಜನೀಕಾಂತ್ ವಿದೇಶಕ್ಕೆ ಹೋಗಿದ್ದಾರೆ ಎಂದು ಹಾಕಿರುತ್ತಾರೆ. ಬೇಕಾದವರು ಬಂದಾಗ ಒಂದು ಜಾಗದಲ್ಲಿ ನಿಲ್ಲಲು ಹೇಳುತ್ತಾರೆ. ಹಾಗೆ ಮಾಡಿದರೆ ರಜನೀಕಾಂತ್ ಮನೆಯೊಳಗೆ ಇದ್ದಾರೆಂದು ಅರ್ಥ. ಹುಟ್ಟುಹಬ್ಬದ ಸಂದರ್ಭದಲ್ಲಿ ರಜನೀಕಾಂತ್ ಕಾಣಿಸಿಕೊಳ್ಳುವುದು ಹೆಚ್ಚೆಂದರೆ ಎರಡು ಗಂಟೆ ಮಾತ್ರ. ಅಲ್ಲಿಯವರೆಗೆ ವೇಟಿಂಗ್ ರೂಂನಲ್ಲಿ ರಜನೀಕಾಂತ್‌ರ ಪೊಲೀಸ್ ವೇಷದ ದೊಡ್ಡ ಚಿತ್ರವೊಂದನ್ನು ನೋಡುತ್ತಾ ಕೂರಬೇಕು. ಏಕೆಂದರೆ ಆ ಕೋಣೆಯಲ್ಲಿ ನೋಡಲು, ಮುಟ್ಟಲು ಇರುವುದು ಅದೊಂದೇ!~

ತಮ್ಮ 60ನೇ ಜನ್ಮದಿನದಂದು ರಜನೀಕಾಂತ್ ಪ್ರೀತಿಯಿಂದ ಎಂಟು ಗ್ರಾಂನ ಚಿನ್ನದ ಸರವನ್ನು ಕಾಣಿಕೆಯಾಗಿ ಸಾಯಿ ಅವರಿಗೆ ಕೊಟ್ಟಿದ್ದರಂತೆ. ಮೂಲತಃ ಮರಾಠಿಗರಾದ ಸಾಯಿ ರಜನೀಕಾಂತ್ ಬಳಿ ಅದನ್ನು ಹೇಳಿಕೊಂಡಿಲ್ಲವಂತೆ. ಏಕೆಂದರೆ ತಮ್ಮದೇ ಜಾತಿಯವನು ಎಂದು ಗೊತ್ತಾದರೆ ಅವರು ಮತ್ತೆ ಹತ್ತಿರ ಸೇರಿಸುವುದಿಲ್ಲ ಎಂಬ ಭಯ!

ಕೆಲಸಕ್ಕೆ ಹೋದಾಗಲೂ ರಜನೀಕಾಂತ್ ಸಹಾಯಕರು ಅವರನ್ನು ಚೆನ್ನಾಗಿ ನೋಡಿಕೊಳ್ಳುತ್ತಾರಂತೆ. ಸ್ಟಿಕ್ಕರ್‌ಗಳನ್ನು ಅವರ ಕೈಗೆ ಒಪ್ಪಿಸಿದ ಬಳಿಕ ಓಡಾಟದ ಖರ್ಚು, ಸಂಭಾವನೆ ಕೊಟ್ಟು ರೈಲ್ವೇ ನಿಲ್ದಾಣದವರೆಗೂ ಬಿಡುತ್ತಾರೆ.

ಅವರು ಅತಿ ಹೆಚ್ಚು ಸ್ಟಿಕ್ಕರ್‌ಗಳನ್ನು ಅಂಟಿಸಿದ ಚಿತ್ರ `ಪ್ರೀತಿ ಏಕೆ ಭೂಮಿ ಮೇಲಿದೆ~. ಕರ್ನಾಟಕದಾದ್ಯಂತ 85 ಸಾವಿರ ಸ್ಟಿಕ್ಕರ್‌ಗಳನ್ನು ಅಂಟಿಸಿದ್ದ ಅವರು ಆಗ 36 ಸಾವಿರ ರೂ ಸಂಪಾದಿಸಿದ್ದರು. 485 ಚಿತ್ರಗಳ ಪೈಕಿ ಸುಮಾರು 200 ಚಿತ್ರಗಳಲ್ಲಿ ಅವರಿಗೆ ಸಂಭಾವನೆಯೇ ಸಿಕ್ಕಿಲ್ಲ. ಸಿಲ್ಕ್ ಸ್ಮಿತಾ ಮತ್ತು ಅನುರಾಧಾ ಅವರಿಗೆ ಸಹಾಯಕರಾಗಿಯೂ ಕೆಲಸ ಮಾಡಿದ್ದ ಸಾಯಿ ಅನೇಕ ವರ್ಷ ಅವರ ಚೀಲಗಳನ್ನು ಕೊಂಡೊಯ್ಯುತ್ತಿದ್ದರಲ್ಲದೆ ಅವರಿಗೆ ಮೇಕಪ್ ಹಚ್ಚುವ ಕೆಲಸವನ್ನೂ ಮಾಡಿದ್ದರು. ಬೆಳಿಗ್ಗೆ 10 ಗಂಟೆಗೆ ಕೆಲಸ ಶುರು ಮಾಡಿದರೆ ಸಂಜೆ 4ರವೇಳೆಗೆ ಒಂದು ಸಾವಿರ ಸ್ಟಿಕ್ಕರ್‌ಗಳನ್ನು ಅಂಟಿಸಬಲ್ಲೆ ಎನ್ನುತ್ತಾರೆ ಸಾಯಿ.

ಚಹಾ ಕುಡಿಯುವುದೊಂದೇ ನನ್ನ ದೌರ್ಬಲ್ಯ ಎನ್ನುವ ಸಾಯಿ ದಿನಕ್ಕೆ 30-40 ಬಾರಿ ಚಹಾ ಕುಡಿಯುತ್ತಾರೆ. ಒಮ್ಮಮ್ಮೆ ತುಂಬಾ ಕೆಲಸ. ಕೆಲವೊಮ್ಮೆ ಆರೇಳು ತಿಂಗಳು ಕೆಲಸವಿಲ್ಲದ್ದೂ ಇದೆ ಎನ್ನುವ ಸಾಯಿ ಅವಿವಾಹಿತ. ತಮ್ಮ, ಆತನ ಪತ್ನಿ ಮತ್ತು ಅವರ ಮಕ್ಕಳೊಟ್ಟಿಗೆ ಸಾಯಿರಾವ್ ಅವರ ಬದುಕು. ರವಿಚಂದ್ರನ್, ಸಾ.ರಾ.ಗೋವಿಂದು, ಸಿನಿಮಾ ಸಾರ್ವಜನಿಕ ಸಂಪರ್ಕಾಧಿಕಾರಿ ನಾಗೇಂದ್ರ ಮುಂತಾದವರು ಅವರ ಬದುಕಿಗೆ ನೆರವಾಗಿದ್ದಾರೆ.

ಇಷ್ಟು ವರ್ಷ ಸ್ಟಿಕ್ಕರ್ ಅಂಟಿಸುವ ಕೆಲಸ ಮಾಡಿದ್ದೀರಲ್ಲಾ, ಏನಾದರೂ ಗುರಿಗಳಿವೆಯೇ? ಎಂದು ಪ್ರಶ್ನಿಸಿದರೆ, ಭಾವನೆಗಳು ಬತ್ತಿ ಹೋದಂತಹ ಮುಖವನ್ನು ಮೆಲ್ಲನೆ ಅರಳಿಸುತ್ತಾ ನಿಸ್ತೇಜ ಕಣ್ಣುಗಳನ್ನು ಅಗಲಿಸಿ ಅವರು ನುಡಿಯುವುದು `ಸಿನಿಮಾ ಸ್ಟಿಕ್ಕರ್ ಅಂಟಿಸುತ್ತೇನೆ~!

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.