ಬುಧವಾರ, ಮೇ 25, 2022
31 °C

ಪ್ರಕಾಶಮಾನ ಯಾನ ಯುಗಾದಿಯಿಂದ ಸಾವಿತ್ರಿವರೆಗೆ...

-ಡಿ.ಎಂ.ಕುರ್ಕೆ ಪ್ರಶಾಂತ . Updated:

ಅಕ್ಷರ ಗಾತ್ರ : | |

ಜೀ ಕನ್ನಡ ವಾಹಿನಿಯ `ಚಿ.ಸೌ. ಸಾವಿತ್ರಿ' ಧಾರಾವಾಹಿಯಲ್ಲಿ ನಾಯಕ ಸತ್ಯನಿಗೆ ಸಮಾನಾಂತರವಾಗಿ ಸಾಗುತ್ತಿರುವ ಪಾತ್ರದ ಹೆಸರು ಪ್ರತಾಪ್. ಈ ಪಾತ್ರ ವೀಕ್ಷಕರ ಮನದಲ್ಲಿ ವಿಸ್ತಾರವಾಗುತ್ತಾ ಸಾಗಿದಂತೆ ಆ ಪಾತ್ರಧಾರಿ ಪ್ರಕಾಶ್ ಶೆಟ್ಟಿ ಕಿರುತೆರೆಯಲ್ಲಿ ತಮ್ಮ ಇಮೇಜನ್ನು ಹೆಚ್ಚಿಸಿಕೊಂಡಿದ್ದಾರೆ. ಪ್ರಕಾಶ್ ಶೆಟ್ಟಿಗೆ ತಮ್ಮ ವೃತ್ತಿಯಾನದಲ್ಲಿ ಅತ್ಯಂತ ವೇಗದ ತಿರುವು ನೀಡಿದ್ದು ಸಾವಿತ್ರಿಯೇ.ರಾಜೇಂದ್ರ ಸಿಂಗ್‌ರ `ಬದುಕು' ಧಾರಾವಾಹಿಯ ಮೂಲಕ ಕಿರುತೆರೆಯಲ್ಲಿ ಯಾನ ಆರಂಭಿಸಿದ ಪ್ರಕಾಶ್, `ಆಂತರ್ಯ', `ಕಲ್ಯಾಣ ರೇಖೆ', `ರಾಘವೇಂದ್ರ ವೈಭವ', `ರಾಘವೇಂದ್ರ ಮಹಿಮೆ', `ಅರುಂಧತಿ', `ಯುಗಾದಿ' ಧಾರಾವಾಹಿಗಳ ಮೂಲಕ ವೀಕ್ಷಕರ ಮನದಲ್ಲಿದ್ದಾರೆ.

ಸಣ್ಣಪುಟ್ಟ ಪಾತ್ರಗಳಿಗೆ ಬಣ್ಣ ಹಚ್ಚುತ್ತಿದ್ದ ಪ್ರಕಾಶ್‌ಗೆ ವೃತ್ತಿ ದೆಸೆ ತಿರುಗಿದ್ದು `ಯುಗಾದಿ'ಯಿಂದ. `ಯುಗಾದಿ' ಧಾರಾವಾಹಿಯ ರಾಹುಲ್‌ನನ್ನು ಪ್ರೇಕ್ಷಕರು ಅಪಾರವಾಗಿ ಮೆಚ್ಚಿಕೊಂಡಿದ್ದೇ ಪ್ರಮುಖ ತಿರುವು. ಬ್ಯಾಂಕ್ ಉದ್ಯೋಗದ ಜತೆ ಜತೆಯಲ್ಲಿಯೇ ನಟನೆಯಲ್ಲೂ ತೊಡಗಿದ್ದ ಅವರು ಉದ್ಯೋಗಕ್ಕೆ ರಾಜೀನಾಮೆ ನೀಡಿ ಪೂರ್ಣವಾಗಿ ನಟನೆಯ ಕಾಯಕದಲ್ಲಿ ತೊಡಗಿದ್ದು `ಯುಗಾದಿ'ಯಲ್ಲಿ ಸಿಕ್ಕ ಸಿಹಿಯಿಂದ.ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್. ಪುರ ತಾಲ್ಲೂಕಿನ ಜೋಗಿಮಕ್ಕಿ ಗ್ರಾಮದ ಪ್ರಕಾಶ್ ಶೆಟ್ಟಿಗೆ ನಟನೆಯ ಮೊದಲ ಪಾಠಶಾಲೆ ಅಜ್ಜನ ಮನೆ. ಅಜ್ಜ ಯಕ್ಷಗಾನಕ್ಕೆ ಗೆಜ್ಜೆಕಟ್ಟುತ್ತಿದ್ದರು. ಮನೆಯಲ್ಲಿ ಸಂಜೆಯ ವೇಳೆ ನಡೆಯುತ್ತಿದ್ದ ಭಜನೆ ಕಾರ್ಯಕ್ರಮಗಳು ಅವರ ಸಾಂಸ್ಕೃತಿಕ ಜೀವನವನ್ನು ಗಟ್ಟಿಗೊಳಿಸಿತು. ತಮ್ಮೂರಿನ `ದೀನ ಬಂಧು ಯುವಕ ಸಂಘ' ಪ್ರತಿ ವರ್ಷ ಆಯೋಜಿಸುವ ತುಳು ಮತ್ತು ಕನ್ನಡ ನಾಟಕಗಳಿಗೆ ಪ್ರಕಾಶ್ ಬಣ್ಣ ಹಚ್ಚಿದ್ದರು.ಕಾಲೇಜು ದಿನಗಳಲ್ಲಿ ಕ್ರಿಕೆಟ್‌ಪಟು ವಾಗುವ ಯತ್ನ ನಡೆಸಿದ್ದ ಪ್ರಕಾಶ್, ಆ ಕನಸು ಕೈಗೂಡದಿದ್ದಾಗ ಸೇರಿದ್ದು ಕಾಲೇಜಿನ ಕಲಾತಂಡವನ್ನು. ನಟನೆಯ ಸೆಳೆತ ಹೆಚ್ಚಾಗಿದ್ದು ಶಿವಮೊಗ್ಗದಲ್ಲಿ ಬಿ.ಕಾಂ. ಓದುವಾಗ. ಅಂತರ ವಿಶ್ವವಿದ್ಯಾಲಯ ನಾಟಕ ಸ್ಪರ್ಧೆಯಲ್ಲಿ ಸತತ ಮೂರು ವರ್ಷ ಬಹುಮಾನ ಪಡೆದು ತಮ್ಮ ನಟನೆಯ ಬಗ್ಗೆ ವಿಶ್ವಾಸ ಮೂಡಿಸಿಕೊಂಡರು. `ಮೋಡಣ್ಣನ ತಮ್ಮ', `ಕುರುಕ್ಷೇತ್ರ', `ಕೃಷ್ಣ ಸಂಧಾನ'- ಹೀಗೆ ಸಾಮಾಜಿಕ ಮತ್ತು ಪೌರಾಣಿಕ ನಾಟಕಗಳಲ್ಲಿ ಎಲ್ಲ ಪಾತ್ರಗಳಲ್ಲೂ ಅಭಿನಯಿಸುವ ಕಲೆ ಕರಗತ ಮಾಡಿಕೊಂಡರು.ಬಿ. ಜಯಶ್ರೀ ಅವರ `ಸ್ಪಂದನ' ರಂಗತಂಡದಲ್ಲಿ ಎರಡು ವರ್ಷ ಪಳಗಿದಾಗಲೇ ನಟನೆಯ ಒಳಸುಳಿಗಳು ಅವರಿಗೆ ತಿಳಿದದ್ದು. ರಂಗ ಚಟುವಟಿಕೆಗಳಲ್ಲಿ ಹಿಡಿತ ಸಿಕ್ಕ ನಂತರ ಹೊರಳಿದ್ದು ಕಿರುತೆರೆಗೆ. ಹಿಂದೂಸ್ತಾನಿ ಸಂಗೀತದಲ್ಲೂ ಅವರಿಗೆ ಆಸಕ್ತಿಯಿದೆ.ಚಿ.ಸೌ. ಸಾವಿತ್ರಿ ಧಾರಾವಾಹಿಯಲ್ಲಿ ಆರಂಭದಲ್ಲಿ ಸಿಕ್ಕಿದ್ದು ಸಣ್ಣಪಾತ್ರ. ಆ ಪಾತ್ರ ವಿಸ್ತಾರವಾಗುತ್ತಾ ಸಾಗಿದಂತೆ ನಟನೆಯ ಬಗ್ಗೆ ಅವರ ವಿಶ್ವಾಸ ಇಮ್ಮಡಿಯಾಗಿದೆ. `ಜನರು ನನ್ನನ್ನು ಗುರುತಿಸುತ್ತಿರುವುದು ಪ್ರತಾಪ್ ಮೂಲಕ' ಎನ್ನುವ ಅವರಿಗೆ, ನಕಾರಾತ್ಮಕ ಪಾತ್ರಗಳೆಂದರೆ ಹೆಚ್ಚು ಇಷ್ಟ. ಆ ಪಾತ್ರಗಳು ಜನರ ಮನದಲ್ಲಿ ಹೆಚ್ಚು ಕಾಲ ನೆಲೆ ನಿಲ್ಲುತ್ತವೆ. ಅಲ್ಲದೆ ನಟನಿಗೂ ಪ್ರಬಲ ಐಡೆಂಟಿಟಿ ನೀಡುತ್ತವೆ' ಎನ್ನುವ ಅನಿಸಿಕೆ ಅವರದ್ದು.ತಮ್ಮ ಆಯ್ಕೆಯ ಎಡವಟ್ಟುಗಳಿಂದ ಕಲಾವಿದ ಹಿನ್ನಡೆ ಅನುಭವಿಸಬೇಕಾಗುತ್ತದೆ ಎನ್ನುವ ಪ್ರಕಾಶ್‌ಗೆ `ಬಣ್ಣದ ಬುಗುರಿ' ಆ ಅನುಭವ ನೀಡಿದೆಯಂತೆ. `ಬಣ್ಣದ ಬುಗುರಿ' ಜನರ ಮನಸ್ಸಿಗೆ ಗುನ್ನಾ ಹೊಡೆಯಲೇ ಇಲ್ಲ. ಅಂದಿನಿಂದ ಪಾತ್ರಗಳ ಬಗ್ಗೆ ಎಚ್ಚರಿಕೆಯ ಹೆಜ್ಜೆ ಇಡುತ್ತಿದ್ದೇನೆ ಎನ್ನುವ ಅವರಿಗೆ, ಸಿನಿಮಾದಲ್ಲಿ ಗುರ್ತಿಸಿಕೊಳ್ಳುವ ಕನಸೂ ಇದೆ.

-ಡಿ.ಎಂ.ಕುರ್ಕೆ ಪ್ರಶಾಂತ .

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.