ಬುಧವಾರ, ಮೇ 18, 2022
23 °C

ಪ್ರಕಾಶರ ಪ್ರಜಾಸಕ್ತಿ ಶ್ಲಾಘನೀಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |ಬೆಂಗಳೂರು: ‘ಮಾಜಿ ಉಪ ಮುಖ್ಯಮಂತ್ರಿ ಎಂ.ಪಿ. ಪ್ರಕಾಶ್ ಅವರ ಆದರ್ಶಗಳನ್ನು ಯುವ ರಾಜಕಾರಣಿಗಳು ಜೀವಂತವಾಗಿ ಉಳಿಸುವ ಅಗತ್ಯವಿದೆ’ ಎಂದು ಸಾಹಿತಿ ಡಾ. ಯು.ಆರ್.ಅನಂತಮೂರ್ತಿ ತಿಳಿಸಿದರು.


‘ಮಾತ ಹೇಳದೇ ಹೋದೆ ಹಂಸಾ..’
‘ಹುಟ್ಟುತ್ತಾ ಹುಲ್ಲಾದೆ ಬೆಳೆಯುತ್ತಾ ಮರವಾದೆ

ಸಾಧೂರ ಕೈಯಲ್ಲಿ ಏಕತಾರಿ ಗಳುವಾದೆ

ಬಿದಿರು ನಾನಾರಿಗಲ್ಲಾದವಳು...’

‘ತನುವೀನೊಳಗನುದಿನವಿದ್ದೂ

ಎನ್ನ ಮನಕೊಂದು

ಮಾತ ಹೇಳದೇ ಹೋದೆ ಹಂಸಾ...’

ಹೀಗೆ ಹತ್ತಾರು ಹಾಡುಗಳ ಮೂಲಕ ಜಾನಪದ ಗಾಯಕರು ಎಂ.ಪಿ. ಪ್ರಕಾಶ್ ಅವರಿಗೆ ನಾದ ನಮನ ಸಲ್ಲಿಸಿದರು. ಗಾಯಕರಾದ ಡಾ.ಬಾನಂದೂರು ಕೆಂಪಯ್ಯ, ಅಪ್ಪಗೆರೆ ತಿಮ್ಮರಾಜು, ಡಾ. ವೇಮಗಲ್ ನಾರಾಯಣ ಸ್ವಾಮಿ, ಎಂ.ಕೆ.ಸಿದ್ದರಾಜು, ಜೋಗಿಲ ಸಿದ್ದರಾಜು, ಜನ್ನಿ, ಸಿ.ಎಂ.ನರಸಿಂಹಮೂರ್ತಿ, ಡಾ. ವೀರೇಶ್ ಬಳ್ಳಾರಿ, ಪಿ. ಸುಧಾಕರ್, ಸವಿತಾ ಜಿ. ಪ್ರಸಾದ್, ಶಾಂತಾ ಕುಲಕರ್ಣಿ ಮುಂತಾದವರು ರಂಗಗೀತೆ, ತತ್ವಪದಗಳ ಮೂಲಕ ಶ್ರದ್ಧಾಂಜಲಿ ಅರ್ಪಿಸಿದರು. ನಾಟ್ಯ ತರಂಗ ಸಂಸ್ಥೆಯ ಶುಭ ಧನಂಜಯ, ಭ್ರಮರಿ ತಂಡದ ಸ್ನೇಹಾ ನಂದಗೋಪಾಲ್ ಅವರು ನೃತ್ಯ ರೂಪಕಗಳ ಮೂಲಕ ನಮನ ಸಲ್ಲಿಸಿದರು.

ಸಂಭ್ರಮ ಬೆಂಗಳೂರು ಸಂಸ್ಥೆ  ನಗರದಲ್ಲಿ ಸೋಮವಾರ ಏರ್ಪಡಿಸಿದ್ದ ‘ಜನಪರ ಎಂ.ಪಿ.ಪ್ರಕಾಶ್ ಅವರಿಗೆ ಜನಪದರ ಶರಣು’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.‘ಲೋಹಿಯಾ, ಜಯಪ್ರಕಾಶ ನಾರಾಯಣ ಅವರ ಕುರಿತು ಆಳವಾದ ಜ್ಞಾನ ಹೊಂದಿದ್ದ ಪ್ರಕಾಶ್ ಅವರಿಗೆ ರಾಜಕಾರಣದ ಬಗ್ಗೆ ಕೊಂಚ ಮಟ್ಟಿಗೆ ಅನಾಸಕ್ತಿಯೂ ಇತ್ತು. ಆದ್ದರಿಂದಲೇ ಅವರು ಪ್ರಜಾಸಕ್ತಿ ಹೊಂದಲು ಸಾಧ್ಯವಾಯಿತು’ ಎಂದು ಅಭಿಪ್ರಾಯಪಟ್ಟರು.‘ಅಬ್ದುಲ್ ನಜೀರ್‌ಸಾಬ್ ಹಾಗೂ ಪ್ರಕಾಶ್ ಅವರಂತಹವರನ್ನು ಕೇವಲ ಒಂದು ಜಾತಿ ಅಥವಾ ಧರ್ಮಕ್ಕೆ ಸೀಮಿತಗೊಳಿಸುವುದು ಸಾಧ್ಯವಿಲ್ಲ. ಕರ್ನಾಟಕದ ಜನಪದರಲ್ಲಿ ಅವರು ಗುರುತಿಸಿಕೊಂಡಿದ್ದರು’ ಎಂದರು.‘ಪ್ರಸ್ತುತ ಲಜ್ಜೆಗೆಡದೇ ರಾಜಕಾರಣ ಮಾಡುವುದು ಸಾಧ್ಯವೇ ಇಲ್ಲ ಎಂಬಂಥ ಸ್ಥಿತಿ ಇದೆ. ಇಂಥ ಸಂದರ್ಭದಲ್ಲಿ ಪ್ರಾಮಾಣಿಕತೆ ಉಳ್ಳ ರಾಜಕಾರಣಿಗಳು ಚುನಾವಣೆಯಲ್ಲಿ ಸೋತರೂ ಎದೆಗುಂದದೇ ರಾಜಕಾರಣ ನಡೆಸಬೇಕಿದೆ. ಸದ್ಯದ ವಿಚಾರಗಳಲ್ಲಿ ನಂಬಿಕೆ ಹೊಂದದೇ ಶಾಶ್ವತವಾಗಿ ಆಗಬೇಕಾದ ಕಾರ್ಯಗಳ ಕಡೆ ಗಮನ ಹರಿಸಬೇಕಿದೆ’ ಎಂದರು.ಕಾಂಗ್ರೆಸ್ ಮುಖಂಡ ಬಿ.ಎಲ್. ಶಂಕರ್ ಮಾತನಾಡಿ ‘ರಾಜ್ಯದಲ್ಲಿ ಕಾಂಗ್ರೆಸ್ಸೇತರ ಅಧಿಕಾರವನ್ನು ತರುವ ಮಟ್ಟಕ್ಕೆ ಜೆ.ಪಿ. ಚಳವಳಿಯನ್ನು ಉತ್ತುಂಗಕ್ಕೆ ಕೊಂಡೊಯ್ದವರಲ್ಲಿ ಎಂ.ಪಿ ಪ್ರಕಾಶ್ ಅಗ್ರಗಣ್ಯರಾಗಿದ್ದರು. ಸಮಾಜವಾದಿ ಹಿನ್ನೆಲೆಯ ಪಾಂಡಿತ್ಯವನ್ನು ಅವರು ರಾಜಕಾರಣದಲ್ಲಿ ಸಂಪೂರ್ಣವಾಗಿ ಪ್ರಯೋಗಿಸಿದರು’ ಎಂದು ಹೇಳಿದರು.ಮಾಜಿ ಶಾಸಕ ಮಹಿಮಾ ಪಟೇಲ್ ಮಾತನಾಡಿ ‘ತಮ್ಮ ವಿರುದ್ಧ ಬಂದ ಟೀಕೆಗಳ ಹೊರತಾಗಿಯೂ ಪ್ರಕಾಶ್ ನೇರವಾಗಿ ನಡೆದರು. ಅಂತರಂಗದಲ್ಲಿ ಸೌಜನ್ಯದ ವ್ಯಕ್ತಿಯಾಗಿ ಅವರು ರೂಪುಗೊಂಡಿದ್ದರು’ ಎಂದರು.ರಂಗಕರ್ಮಿ ಹುಲಿಗೆಪ್ಪ ಕಟ್ಟಿಮನಿ ಮಾತನಾಡಿದರು. ರಂಗಕರ್ಮಿ ಶಶಿಧರ್ ಭಾರಿಘಟ್ ನಿರೂಪಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.